ಕಾಂಗ್ರೆಸ್ ಸೇರಲು ತಂದೆ ಒಪ್ಪಿಗೆ ಕೊಟ್ಟಿದ್ದಾರೆ: ನಿಶಾ ಯೋಗೇಶ್ವರ್

Most read

ಬೆಂಗಳೂರು: ನಾನು ಕಾಂಗ್ರೆಸ್ ಸೇರಲು ನನ್ನ ತಂದೆ ಸಹಮತ ಇದೆ. ನನಗೆ ಇಷ್ಟವಾದ ಪಕ್ಷ ಸೇರುವ ಸ್ವಾತಂತ್ರ್ಯವನ್ನು ತಂದೆ ನನಗೆ ಕೊಟ್ಟಿದ್ದಾರೆ ಎಂದು ಬಿಜೆಪಿ ಮುಖಂಡ, ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಪುತ್ರಿ, ಚಿತ್ರನಟಿ ನಿಶಾ ಯೋಗೇಶ್ವರ್ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷ ಸೇರ್ಪಡೆಗೆ ಸಿದ್ದಳಿದ್ದೇನೆ, ದಿನಾಂಕ ಇನ್ನೂ ನಿಗದಿ ಆಗಿಲ್ಲ. ನನ್ನ ಪಕ್ಷ ಸೇರ್ಪಡೆಯಿಂದ ಲಾಭ ಯಾರಿಗೆ ಅನ್ನುವುದ್ದೆಲ್ಲ ನನಗೆ ಗೊತ್ತಿಲ್ಲ ಎಂದು ನಿಶಾ ಖಾಸಗಿ ಟಿವಿ ವಾಹಿನಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸಿ.ಪಿ.ಯೋಗೇಶ್ವರ್ ಪುತ್ರಿ ನಿಶಾ ಕಾಂಗ್ರೆಸ್ ಸೇರ್ಪಡೆ ಕುರಿತಂತೆ ಕನ್ನಡ ಪ್ಲಾನೆಟ್ exclusive ಸುದ್ದಿ ಪ್ರಕಟಿಸಿತ್ತು. ಈಗ ಸ್ವತಃ ನಿಶಾ ಅವರೇ ತಮ್ಮ ರಾಜಕೀಯ ಪ್ರವೇಶವನ್ನು ಖಚಿತಪಡಿಸಿದ್ದಾರೆ.

ಬಹುತೇಕ ಏಪ್ರಿಲ್ ಮೊದಲ ವಾರದಲ್ಲೇ ನಿಶಾ ಕಾಂಗ್ರೆಸ್ ಸೇರ್ಪಡೆ ನಿಶ್ಚಿತ ಎಂದು ಕಾಂಗ್ರೆಸ್ ಮೂಲಗಳು #ಕನ್ನಡಪ್ಲಾನೆಟ್ ಗೆ ತಿಳಿಸಿವೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಈಗ ಡಿ.ಕೆ.ಸುರೇಶ್ ಮತ್ತು ಸಿ.ಎನ್. ಮಂಜುನಾಥ್ ಸ್ಪರ್ಧೆಯ ನಡುವೆ ಯೋಗೇಶ್ವರ್ ನಡೆ ಕುತೂಹಲ ಮೂಡಿಸಿತ್ತು. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರನ್ನು ಭೇಟಿ ಮಾಡಿದ್ದ ಯೋಗೇಶ್ವರ್ ಈ ಬಾರಿ ಸುರೇಶ್ ಅವರನ್ನು ಸೋಲಿಸುತ್ತೇವೆ ಎಂದು ಬಹಿರಂಗವಾಗಿ ಗುಟುರು ಹಾಕುತ್ತಿದ್ದಾರೆ. ಆದರೆ ಮತ್ತೊಂದು ಬೆಳವಣಿಗೆಯಲ್ಲಿ ಅವರ ಪುತ್ರಿ ನಿಶಾ ಕಾಂಗ್ರೆಸ್ ಕಡೆ ಮುಖ ಮಾಡಿದ್ದಾರೆ.

ಈಗಾಗಲೇ ನಿಶಾ ಯೋಗೇಶ್ವರ್, ಡಿ.ಕೆ.ಸೋದರರ ಸಂಪರ್ಕದಲ್ಲಿದ್ದು ಕಾಂಗ್ರೆಸ್ ಸೇರುವ ಒಲವು ತೋರಿದ್ದಾರೆ ಎಂದು ತಿಳಿದುಬಂದಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಏಪ್ರಿಲ್ ಮೊದಲ ವಾರದಲ್ಲೇ ಅವರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ.

ಈ ಬಾರಿ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಮಂಜುನಾಥ್ ಸ್ಪರ್ಧೆಯಿಂದ ಮಹತ್ವ ಪಡೆದುಕೊಂಡಿದೆ. ಸಂಸದ ಡಿಕೆ ಸುರೇಶ್ ವಿರುದ್ಧ ಕುಮಾರಸ್ವಾಮಿ, ಯೋಗೇಶ್ವರ್,‌ ಮುನಿರತ್ನ ಒಂದಾಗಿ ಹೋರಾಟ ಮಾಡುತ್ತಿದ್ದಾರೆ.

ಚನ್ನಪಟ್ಟಣದಲ್ಲಿ ಮೊದಲು ಕುಮಾರಸ್ವಾಮಿ, ಯೋಗೇಶ್ವರ್ ಸಾಂಪ್ರದಾಯಿಕ ಎದುರಾಳಿಗಳಾಗಿದ್ದರೂ ಈ ಬಾರಿ ಒಂದಾಗಿ ಹೋಗುವ ಅನಿವಾರ್ಯತೆ ಸೃಷ್ಟಿಯಾಗಿದೆ. ಈ ಸಂದರ್ಭದಲ್ಲಿ ನಿಶಾ ಸೇರ್ಪಡೆಯಿಂದ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಗೆ ಆಗಬಹುದಾದ ಲಾಭದ ಲೆಕ್ಕಾಚಾರ ನಡೆಯುತ್ತಿದೆ. ಚನ್ನಪಟ್ಟಣದಲ್ಲಿ ನಿಶಾ ಯೋಗೇಶ್ವರ್ ಮೂಲಕ ಕಾಂಗ್ರೆಸ್ ಕೆಲಸ ಮಾಡಿಸಿದರೆ ಅದರ ಸಣ್ಣ ಅನುಕೂಲ ಚುನಾವಣೆಯಲ್ಲಿ ಆಗಬಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್ ಪಾಳಯದಲ್ಲಿದೆ.

More articles

Latest article