ಮಂಡ್ಯ: ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಟಿಕೆಟ್ ನಿರಾಕರಿಸಿದ ಕಾರಣದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ತಮ್ಮದು ‘ಸ್ವಾಭಿಮಾನ’ದ ಹೋರಾಟ ಎಂದು ಬಿಂಬಿಸಿ ಗೆಲುವು ಸಾಧಿಸಿದ್ದ ಸುಮಲತಾ ಈ ಬಾರಿ ಏನು ಮಾಡಲಿದ್ದಾರೆ ಎಂಬುದು ಇಂದು ತೀರ್ಮಾನವಾಗಲಿದೆ.
ಮುಂದಿನ ನಡೆ ಬಗ್ಗೆ ಚರ್ಚೆ ಮಾಡಲು ಸುಮಲತಾ ಬೆಂಗಳೂರಿನ ತಮ್ಮ ನಿವಾಸದಲ್ಲಿ ತಮ್ಮ ಬೆಂಬಲಿಗರ ಸಭೆ ಕರೆದಿರುವ ಸಂಸದೆ ತಮ್ಮ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.
ಜೆಡಿಎಸ್-ಬಿಜೆಪಿ ಮೈತ್ರಿಗೆ ಶರಣಾಗಿ ತಾವು ಸದಾ ವಿರೋಧಿಸಿಕೊಂಡು ಬಂದಿದ್ದ ಎಚ್.ಡಿ.ಕುಮಾರಸ್ವಾಮಿಯವರನ್ನು ಬೆಂಬಲಿಸಬೇಕೋ ಅಥವಾ ಕಳೆದ ಬಾರಿಯಂತೆಯೇ ಪಕ್ಷೇತರ ಅಭ್ಯರ್ಥಿಯಾಗಿ ಸ್ವಾಭಿಮಾನದ ಹೋರಾಟ ನಡೆಸಬೇಕೋ ಎಂದು ಅವರು ಇಂದು ಬೆಂಬಲಿಗರ ಜತೆ ಚರ್ಚಿಸಿ ನಿರ್ಧರಿಸಲಿದ್ದಾರೆ.
ಮಂಡ್ಯ ಹೊರತಾಗಿ ಬೇರೆ ಕ್ಷೇತ್ರಗಳಲ್ಲಿ ಟಿಕೆಟ್ ನೀಡಲು ಬಿಜೆಪಿ ಮುಂದಾಗಿತ್ತಾದರೂ ಮಂಡ್ಯ ನನ್ನ ಕರ್ಮಭೂಮಿ, ಬೇರೆಡೆ ಸ್ಪರ್ಧಿಸುವ ಮಾತೇ ಇಲ್ಲ ಎಂದು ಸುಮಲತಾ ಸ್ಪಷ್ಟಪಡಿಸಿದ್ದರು. ಜೆಡಿಎಸ್ ಮೈತ್ರಿ ಹಿನ್ನೆಲೆಯಲ್ಲಿ ಮಂಡ್ಯ ಕ್ಷೇತ್ರವನ್ನು ಆ ಪಕ್ಷಕ್ಕೆ ಬಿಟ್ಟುಕೊಡಬೇಕಾದ ಅನಿವಾರ್ಯತೆಗೆ ಸಿಲುಕಿದ ಬಿಜೆಪಿ ನಾಯಕರು, ಸುಮಲತಾ ಅವರಿಗೆ ಮಂಡ್ಯದಲ್ಲಿ ಟಿಕೆಟ್ ನೀಡಲು ಸಾಧ್ಯವಾಗಲಿಲ್ಲ.
ನಿನ್ನೆ ಮಂಡ್ಯದಲ್ಲಿ ನಡೆದ ಜೆಡಿಎಸ್ – ಬಿಜೆಪಿ ಸಮನ್ವಯ ಸಮಿತಿಗೆ ನಿನ್ನೆ ಸುಮಲತಾ ಗೈರು ಹಾಜರಾಗಿದ್ದರು. ಆದರೆ ಬಿಜೆಪಿ ರಾಜ್ಯಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಭೇಟಿಯಾಗಿದ್ದರು. ಭೇಟಿ ನಂತರ ತಣ್ಣಗಾದಂತೆ ಕಂಡುಬಂದಿದ್ದ ಅವರು, ಬಹುತೇಕ ಬಿಜೆಪಿ ಜೊತೆ ರಾಜಿಯಾಗುವ ಸಾಧ್ಯತೆಯೇ ಹೆಚ್ಚು.