ಕೇಜ್ರಿವಾಲ್‌ ಬಂಧನ, ಕಾಂಗ್ರೆಸ್‌ ಬ್ಯಾಂಕ್‌ ಖಾತೆ ಸ್ಥಗಿತ: ವಿಶ್ವಸಂಸ್ಥೆ ಕಳವಳ

Most read

ಹೊಸದಿಲ್ಲಿ: ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಬಂಧನದ ಹಿನ್ನೆಲೆಯಲ್ಲಿ ಅಮೆರಿಕ ಮತ್ತು ಜರ್ಮನಿ ಟೀಕೆಯ ನಂತರ ಇದೀಗ ವಿಶ್ವಸಂಸ್ಥೆ ಕೂಡ ಭಾರತದಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ಆಡಳಿತ ಸರ್ಕಾರ ವಿರೋಧಪಕ್ಷಗಳ ದಮನಕ್ಕೆ ನಡೆಸುತ್ತಿರುವ ಪ್ರಯತ್ನಗಳ ಕುರಿತು ಆತಂಕ ವ್ಯಕ್ತಪಡಿಸಿದೆ.

ಚುನಾವಣೆಗಳ ಸಂದರ್ಭದಲ್ಲಿ ಭಾರತದ ಜನತೆಯ ರಾಜಕೀಯ ಹಾಗು ನಾಗರಿಕ ಹಕ್ಕುಗಳು ರಕ್ಷಿಸಲ್ಪಡಬೇಕು ಮತ್ತು ಪ್ರತಿಯೊಬ್ಬರು ಮುಕ್ತ ಮತ್ತು ನ್ಯಾಯಯುತ ವಾತಾವರಣದಲ್ಲಿ ತಮ್ಮ ಮತದಾನದ ಹಕ್ಕುಗಳನ್ನು ಚಲಾಯಿಸುವಂತಾಗಬೇಕು ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರರ್ಸ್ ಅವರ ವಕ್ತಾರರಾದ ಸ್ಟೀಫನ್ ಡುಜಾರಿಕ್ ಹೇಳಿದ್ದಾರೆ.

ಅರವಿಂದ ಕೇಜ್ರಿವಾಲ್‌ ಬಂಧನ ಮತ್ತು ಭಾರತ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷದ ಬ್ಯಾಂಕ್‌ ಖಾತೆಗಳನ್ನು ಸ್ಥಗಿತಗೊಳಿಸಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಉಂಟಾಗಿರುವ ರಾಜಕೀಯ ಅಶಾಂತಿಯ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಭಾರತದ ಮೇಲೆ ಬಹಳ ವಿಶ್ವಾಸವಿಟ್ಟಿದ್ದೇವೆ. ಅಲ್ಲಿ ಜನರ ಹಕ್ಕುಗಳು ರಕ್ಷಣೆಯಾಗಬೇಕು, ಜನತೆಯ ರಾಜಕೀಯ ಹಾಗು ನಾಗರಿಕ ಹಕ್ಕುಗಳು ರಕ್ಷಿಸಲ್ಪಡಬೇಕು ಮತ್ತು ಪ್ರತಿಯೊಬ್ಬರು ಮುಕ್ತ ಮತ್ತು ನ್ಯಾಯಯುತ ವಾತಾವರಣದಲ್ಲಿ ತಮ್ಮ ಮತದಾನದ ಹಕ್ಕುಗಳನ್ನು ಚಲಾಯಿಸುವಂತಾಗಬೇಕು ಎಂದು ಅವರು ಹೇಳಿದರು.

ಅಮೆರಿಕ ರಾಯಭಾರಿ ಕಚೇರಿಯ ರಾಜತಾಂತ್ರಿಕ ಅಧಿಕಾರಿಯೋರ್ವರು ಕೇಜ್ರಿವಾಲ್‌ ಬಂಧನ ಕುರಿತಂತೆ ಆತಂಕ ವ್ಯಕ್ತಪಡಿಸಿದ ಬೆನ್ನಲ್ಲೇ ಭಾರತ ಸರ್ಕಾರ ಸಮನ್ಸ್‌ ನೀಡಿ ಅವರನ್ನು ಕರೆಸಿ ಹೇಳಿಕೆ ವಿರುದ್ಧ ಪ್ರತಿಭಟಿಸಿತ್ತು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅಮೆರಿಕ ಸರ್ಕಾರ, ತಾನು ಭಾರತದಲ್ಲಿ ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳು ಕಾನೂನು ಬದ್ಧವಾಗಿ ನಡೆಯಬೇಕು ಎಂದು ಹೇಳಿತ್ತು.

ಅಮೆರಿಕ ರಾಜತಾಂತ್ರಿಕರಿಗೆ ಸಮನ್ಸ್‌ ನೀಡಿ ಭಾರತ ಸರ್ಕಾರ ತೋರಿದ ಪ್ರತಿರೋಧದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ್ದ ಅಮೆರಿಕ ಸರ್ಕಾರದ ರಾಜ್ಯ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲ್ಲರ್‌, ನಾನು ಯಾವುದೇ ಖಾಸತಿ ರಾಜತಾಂತ್ರಿಕ ಸಮಾಲೋಚನೆಯ ಕುರಿತು ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ. ಆದರೆ ನಾವು ಮುಕ್ತ, ನ್ಯಾಯಯುತ, ಕಾನೂನುಬದ್ಧ ಚುನಾವಣಾ ಪ್ರಕ್ರಿಯೆಗಳನ್ನು ಬೆಂಬಲಿಸುತ್ತೇವೆ. ಅದನ್ನು ಯಾರೂ ಕೂಡ ವಿರೋಧಿಸಬಾರದು, ಇದನ್ನು ಖಾಸಗಿ ಸಮಾಲೋಚನೆಯ ಸಂದರ್ಭದಲ್ಲೂ ಹೇಳುತ್ತೇವೆ ಎಂದರು.

ಭಾರತದ ವಿದೇಶಾಂಗ ಇಲಾಖೆ ಅಧಿಕಾರಿಗಳು, ಭಾರತ ದೂತವಾಸದ ರಾಜತಾಂತ್ರಿಕರಾದ ಗ್ಲೋರಿಯಾ ಬರ್ಬೇನಾ ಅವರನ್ನು ದಿಲ್ಲಿಯ ಸೌತ್‌ ಬ್ಲಾಕ್‌ ಕಚೇರಿಗೆ ಕರೆಯಿಸಿ, ಮೂವತ್ತು ನಿಮಿಷಕ್ಕೂ ಹೆಚ್ಚು ಕಾಲ ಮಾತುಕತೆ ನಡೆಸಿ, ಅರವಿಂದ ಕೇಜ್ರಿವಾಲ್‌ ಬಂಧನ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಕ್ಕಾಗಿ ಪ್ರತಿರೋಧ ತೋರಿತ್ತು.

More articles

Latest article