ಬಿಜೆಪಿಗೆ 400 ಸ್ಥಾನ ಸಿಗುವುದು ಸಾಧ್ಯವೇ?

Most read

ಇನ್ನೇನು ಕೆಲವೇ ವಾರಗಳಲ್ಲಿ 2024 ರ ಲೋಕಸಭಾ ಚುನಾವಣೆ ಶುರುವಾಗಲಿದೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿಯವರು ‘ಈ ಬಾರಿ ನಾವು 400 ರ ಗಡಿಯನ್ನು ದಾಟುತ್ತೇವೆ’ ಎಂದು ಹೇಳುತ್ತ ತಿರುಗುತ್ತಿದ್ದಾರೆ. ‘ಅಬ್ ಕೀ ಬಾರ್ ಚಾರ್ ಸೌ ಪಾರ್’ ಎನ್ನುವುದು ಬಿಜೆಪಿಯ ಸ್ಲೋಗನ್ನೇ ಆಗಿಬಿಟ್ಟಿದೆ. ಇದನ್ನು ಅವರ ಅನುಯಾಯಿಗಳೂ ಪ್ರತಿಧ್ವನಿಸುತ್ತಿದ್ದಾರೆ.

ನಾನಾ ತಂತ್ರಗಳು

ಇದೇ ಹೊತ್ತಿನಲ್ಲಿ, ಬಿಜೆಪಿ ಚುನಾವಣೆ ಗೆಲ್ಲಲು ಅನೇಕ ತಂತ್ರಗಳನ್ನು ಹೂಡುತ್ತಿದೆ. ಇದರಲ್ಲಿ ಬೇರೆ ಪಕ್ಷಗಳೊಂದಿಗೆ ಮೈತ್ರಿ ನಡೆಸುವುದು (ಒಡಿಶಾದ ಬಿಜೆಡಿ, ಕರ್ನಾಟಕದ ಜೆಡಿಎಸ್, ಜನಾರ್ದನ ರೆಡ್ಡಿಯ ಕೆಆರ್ ಪಿ ಪಿ, ತಮಿಳುನಾಡಿನ ಕೆಲ ಸಣ್ಣ ಪಕ್ಷಗಳು, ಬಿಹಾರದ ಜೆಡಿಯು, ಲೋಕ ಜನ ಶಕ್ತಿ, ಉತ್ತರಪ್ರದೇಶದ ರಾಷ್ಟ್ರೀಯ ಲೋಕದಳ, ಮಹಾರಾಷ್ಟ್ರದ ಶಿಂದೆಯ ಶಿವಸೇನೆ, ಅಜಿತ್ ಪವಾರ್ ರ ಎನ್ ಸಿ ಪಿ, ರಾಜಠಾಕ್ರೆಯ ಎಂ ಎನ್ ಎಸ್ ಇತ್ಯಾದಿ), ವಿಪಕ್ಷಗಳ ನಾಯಕರನ್ನು ಸೆಳೆಯುವುದು (ಅಜಿತ್ ಪವಾರ್, ಅಶೋಕ ಚವ್ಹಾಣ್, ಮಿಲಿಂದ್ ದೇವರಾ, ನವೀನ್ ಜಿಂದಾಲ್), ವಿಪಕ್ಷಗಳ ನಾಯಕರನ್ನು ಜೈಲಿಗೆ ತಳ್ಳುವುದು (ಜೆ ಎಂ ಎಂ ಮುಖಂಡ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ ಸೊರೇನ್, ಆಪ್ ನಾಯಕ ದಿಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್, ಬಿ ಅರ್ ಎಸ್ ನ ಕವಿತಾ), ತನ್ನ ಗೆಲುವಿಗೆ ಅಡ್ಡಿಯಾಗಿರುವ ಪಕ್ಷದ ಬ್ಯಾಂಕ್ ಖಾತೆ ಖಾಲಿ ಮಾಡುವುದು (ಕಾಂಗ್ರೆಸ್ ನ ಬ್ಯಾಂಕ್ ಖಾತೆಗಳನ್ನು ಸ್ತಂಭನಗೊಳಿಸಲಾಗಿದೆ, ಅಲ್ಲಿನ ಹಣವನ್ನು ಆದಾಯ ಕರ ಇಲಾಖೆ ವಶಪಡಿಸಿಕೊಂಡಿದೆ) ಇತ್ಯಾದಿ ಸೇರಿವೆ.

ಬರಿಯ ಘೋಷಣೆ

ಈಗ ಈ ಮೇಲಿನ ಎರಡು ಅಂಶಗಳನ್ನು ಹೊಂದಿಸಿ ನೋಡಿ. ನಿಮಗೆ ಒಂದು ಚಿತ್ರ ಸಿಗುತ್ತದೆ. ಅಂದರೆ 400 ಸೀಟು ಬಿಡಿ, ಈ ಹಿಂದಿನ ಬಾರಿ ಪಡೆದ 303 ಸೀಟುಗಳನ್ನೂ ಉಳಿಸಿಕೊಳ್ಳುವ ಆತ್ಮವಿಶ್ವಾಸ ಬಿಜೆಪಿ ಬಳಿಯಿಲ್ಲ. ಅವರು ‘ಚಾರ್ ಸೌ ಪಾರ್’ ಎಂದು ಘೋಷಣೆ ಕೂಗುವುದು, ಮೊದಲನೆಯದಾಗಿ ತಮಗೆ ತಾವೇ ಸಮಾಧಾನ ಪಡಿಸಿಕೊಳ್ಳುವ ತಂತ್ರ ಮತ್ತು ಎರಡನೆಯದಾಗಿ, ಎದುರಾಳಿಯ ವಿರುದ್ಧ ಮೈಂಡ್ ಗೇಮ್ ನ ಪ್ರಯೋಗ.

ಇದರ ವಿಶ್ಲೇಷಣೆ ತೀರಾ ಸರಳ. ಬಿಜೆಪಿಗೆ ಅತ್ಯಂತ ಅನುಕೂಲಕರ ಇರುವ ರಾಜ್ಯಗಳಲ್ಲಿ ಅದು ಈಗಾಗಲೇ ಗರಿಷ್ಠ ಸ್ಥಾನಗಳನ್ನು ಗಳಿಸಿಯಾಗಿದೆ. 400 ಸ್ಥಾನಗಳನ್ನು ಗಳಿಸಿಕೊಳ್ಳಬೇಕಾದರೆ ಮೊದಲು ತನ್ನ ಈ ಹಿಂದಿನ 303 ನ್ನು ಉಳಿಸಿಕೊಳ್ಳಬೇಕು. ಹೀಗೆ 303 ನ್ನು ಉಳಿಸಿಕೊಳ್ಳುವುದು ಒಂದು ಮಹಾ ಸವಾಲು. ಯಾಕೆಂದರೆ, ಹತ್ತು ವರ್ಷಗಳ ಆಡಳಿತ ಸಹಜವಾಗಿಯೇ ತರುವ ‘ಆಡಳಿತ ವಿರೋಧಿ ಅಲೆ’ ಈಗಾಗಲೇ ಕಾಲಿಟ್ಟಿದೆ. ಹಾಗಾಗಿ, 303 ರಲ್ಲಿ ಕೆಲವು ಸೀಟುಗಳನ್ನಾದರೂ ಕಳೆದುಕೊಳ್ಳುವುದು ನಿಶ್ಚಿತ. ಅಲ್ಲದೆ, ಈ ಹಿಂದೆ 303 ನ್ನು ಗೆಲ್ಲುವಾಗ ಬೇರೆ ಕೆಲವು ಬಲಿಷ್ಠ ಪಕ್ಷಗಳ ಮೈತ್ರಿಯ ನೆರವು ಇತ್ತು. ಮಹಾರಾಷ್ಟ್ರದಲ್ಲಿ ಬಲಿಷ್ಠ ಶಿವಸೇನೆಯ ಗೆಳೆತನ ಇತ್ತು (ಇದರಿಂದಾಗಿ ಅಲ್ಲಿನ 48 ಸ್ಥಾನಗಳಲ್ಲಿ ಬಿಜೆಪಿ 23, ಶಿವಸೇನೆ 18 ಗೆದ್ದಿದ್ದವು). ಆದರೆ ಅಲ್ಲಿ ಸಮೀಕರಣ ಬದಲಾಗಿ ಬಿಜೆಪಿ ಅನೇಕ ಸ್ಥಾನಗಳನ್ನು ಕಳೆದುಕೊಳ್ಳುವುದು ನಿಶ್ಚಿತ. ಬಿಹಾರದಲ್ಲಿ ಜೆಡಿಯು ಸ್ನೇಹದಿಂದ ಬಿಜೆಪಿಗೆ 17 ಸೀಟುಗಳು ಸಿಕ್ಕಿದ್ದವು (ಒಟ್ಟು ಸ್ಥಾನ 40, ಜೆಡಿಯು 16, ಎಲ್ ಜೆ ಪಿ 6, ಕಾಂಗ್ರೆಸ್ 1). ಆದರೆ ಅಲ್ಲಿ ಈಗ ನಿತೀಶ್ ರ ಜೆಡಿಯು ಜನಪ್ರೀತಿ ಕಳೆದುಕೊಂಡಿರುವುದು ಅಲ್ಲಿನ ಜೆಡಿಯು ಮಾತ್ರವಲ್ಲ, ಬಿಜೆಪಿಗೂ ಮುಳುವಾಗಲಿದೆ.

ಹಿಂದೆ ಪಂಜಾಬ್ ನಲ್ಲಿ ಅಕಾಲಿದಳದ ನೆರವು ಬಿಜೆಪಿಗೆ ವರದಾನವಾಗಿತ್ತು (13 ರಲ್ಲಿ ಬಿಜೆಪಿ 3). ಆದರೆ, ಅಲ್ಲಿ ಈಗ ಅವೆರಡು ಪಕ್ಷಗಳ ನಡುವೆ ಸ್ನೇಹ ಸಂಬಂಧ ಹಳಸಿದೆ. ಅಲ್ಲದೆ, ಪಂಜಾಬ್ ನಲ್ಲಿ ಆಪ್ ಸರಕಾರವೇ ಇರುವುದರಿಂದ ಬಿಜೆಪಿಗೆ ಹಿಂದಿನಷ್ಟು ಸ್ಥಾನಗಳು ಸಿಗುವುದು ತೀರಾ ಅಸಂಭವ. ದಿಲ್ಲಿಯಲ್ಲಿ ಆಪ್ ಬಲಿಷ್ಠವಾಗಿದೆ ಮಾತ್ರವಲ್ಲ, ಕಾಂಗ್ರೆಸ್ ನೊಂದಿಗೆ ಇಂಡಿಯಾ ಮೈತ್ರಿಕೂಟ ನಿರ್ಮಾಣವಾಗಿರುವುದರಿಂದ ಅಲ್ಲಿ ಒಂದೆರಡು ಸೀಟು ಕಳಕೊಂಡರೂ ಅದು ಬಿಜೆಪಿಗೆ ದೊಡ್ಡ ನಷ್ಟ. ಪಶ್ಚಿಮ ಬಂಗಾಳದಲ್ಲಿಯೂ ಈ ಬಾರಿ ಈ ಹಿಂದಿನ ಬಾರಿಯಷ್ಟು ಸೀಟುಗಳನ್ನು ಬಿಜೆಪಿ ಪಡೆದುಕೊಳ್ಳಲಾರದು (42 ಸ್ಥಾನಗಳಲ್ಲಿ 18). ಜಮ್ಮು ಕಾಶ್ಮೀರದಲ್ಲಿ 370 ನೇ ಪರಿಚ್ಛೇದ ರದ್ಧತಿಯ ಕಾರಣ ಜನರ ಸಿಟ್ಟು ಮಿತಿಮೀರಿದೆ. ಲಡಾಖ್ ನಲ್ಲಿ ಬಿಜೆಪಿ ತನ್ನ ಮಾತು ಉಳಿಸಿಕೊಳ್ಳದ ಕಾರಣ ಜನರಲ್ಲಿ ತೀವ್ರ ಅಸಮಾಧಾನವಿದೆ (ಸೋನಂ ವಾಂಗ್ ಚುಕ್ 20 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ದೊಡ್ಡ ಸಂಖ್ಯೆಯಲ್ಲಿ ಜನ ಅವರೊಂದಿಗೆ ನಿಂತಿದ್ದಾರೆ. ಬಿಜೆಪಿ ವಿರುದ್ಧ ಕೆಂಡಕಾರುತ್ತಿದ್ದಾರೆ). ಈಶಾನ್ಯ ಭಾರತದಲ್ಲಿ ಮಣಿಪುರ ಗಲಭೆಯನ್ನು ನಿಭಾಯಿಸುವಲ್ಲಿ ಮೋದಿ ಸರಕಾರದ ತಾತ್ಸಾರ ಮತ್ತು ನಿಷ್ಕ್ರಿಯತೆ (11 ತಿಂಗಳಲ್ಲಿ ಪ್ರಧಾನಿಯವರು ಒಮ್ಮೆಯೂ ಮಣಿಪುರಕ್ಕೆ ಹೋಗಿಲ್ಲ) ಬಿಜೆಪಿಗೆ ಹಿನ್ನಡೆ ಉಂಟು ಮಾಡಲಿದೆ.

ದಕ್ಷಿಣದ ಕತೆ

ದಕ್ಷಿಣದಲ್ಲಿ ಈ ಹಿಂದೆ ಬಿಜೆಪಿಗೆ ಕರ್ನಾಟಕದಲ್ಲಿ 25 ಸ್ಥಾನ ಸಿಕ್ಕಿತ್ತು (ಒಟ್ಟು ಸ್ಥಾನ 28). ಆಗ ಪೂರ್ಣ ಬಹುಮತದ ಕಾಂಗ್ರೆಸ್ ಸರಕಾರ ಇರಲಿಲ್ಲ. ಆದರೆ ಈಗ ಇಲ್ಲಿ ಬಲಿಷ್ಠ ಕಾಂಗ್ರೆಸ್ ಸರಕಾರವಿದೆ. ಕಾಂಗ್ರೆಸ್ ಕನಿಷ್ಠ 10 ಸ್ಥಾನ ಗಳಿಸಿದರೂ ಅದು ಬಿಜೆಪಿಗಾಗುವ ಬಲುದೊಡ್ಡ ನಷ್ಟ. ಇನ್ನು ತೆಲಂಗಾಣದಲ್ಲಿಯೂ ಕಾಂಗ್ರೆಸ್ ಸರಕಾರವಿದೆ. ಆದ್ದರಿಂದ ಅಲ್ಲಿಯೂ ಬಿಜೆಪಿಗೆ ಇರುವ ಸ್ಥಾನ ಉಳಿಸಿಕೊಳ್ಳುವ ಸವಾಲು ಇದೆ (17 ರಲ್ಲಿ 4). ಕೇರಳ, ತಮಿಳುನಾಡುಗಳಲ್ಲಿ ಅದಕ್ಕೆ ಒಂದು ಸೀಟು ಸಿಗುವ ಸಾಧ‍್ಯತೆಯೂ ಇಲ್ಲ.

ಶ್ರೀನಿವಾಸ ಕಾರ್ಕಳ

ಚಿಂತಕರು

More articles

Latest article