ರಾಹುಲ್‌ ಗಾಂಧಿ ವಿರುದ್ಧ ಕೇರಳ ಘಟಕದ ಬಿಜೆಪಿ ಅಧ್ಯಕ್ಷ ಸುರೇಂದ್ರನ್‌ ಸ್ಪರ್ಧೆ

Most read

ಹೊಸದಿಲ್ಲಿ: ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶವನ್ನು ವಿರೋಧಿಸಿ ಅನೇಕ ಪ್ರತಿಭಟನೆಗಳನ್ನು ನಡೆಸಿದ್ದ ಕೇರಳ ಬಿಜೆಪಿ ಘಟಕದ ಅಧ್ಯಕ್ಷ ಕೆ.ಸುರೇಂದ್ರನ್‌ ಅವರನ್ನು ಕಾಂಗ್ರೆಸ್‌ ಮುಖಂಡ ರಾಹುಲ್ ಗಾಂಧಿ ವಿರುದ್ಧ ವಯನಾಡ್‌ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಇಳಿಸಲಾಗಿದೆ.

ಕೇರಳದಲ್ಲಿ ರಾಜಕೀಯ ಅಸ್ತಿತ್ವವನ್ನು ಸಾಧಿಸಲು ಹೆಣಗಾಡುತ್ತಿರುವ ಭಾರತೀಯ ಜನತಾ ಪಕ್ಷ ನಿನ್ನೆ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ವಯನಾಡ್‌ ಕ್ಷೇತ್ರದಿಂದ ಸುರೇಂದ್ರನ್‌ ಅವರನ್ನು ಹೆಸರಿಸಿದೆ.

2009ರಿಂದಲೂ ಕಾಂಗ್ರೆಸ್‌ ಪಕ್ಷದ ಭದ್ರಕೋಟೆಯಾಗಿರುವ ವಯನಾಡ್‌ ನಲ್ಲಿ 2019ರ ಚುನಾವಣೆಯಲ್ಲಿ ರಾಹುಲ್‌ ಗಾಂಧಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಇದೇ ಸಂದರ್ಭದಲ್ಲಿ ಅವರು ಅಮೇಥಿ ಕ್ಷೇತ್ರದಲ್ಲಿ ಸ್ಮೃತಿ ಇರಾನಿ ವಿರುದ್ಧ ಸೋಲನ್ನಪ್ಪಿದ್ದರು.

ಕೇರಳದಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳ ಪ್ರಾಬಲ್ಯವಿದ್ದು, ಎರಡೂ ಮೈತ್ರಿಕೂಟಗಳ ನಡುವೆ ಬಿಜೆಪಿ ತನ್ನ ಅಸ್ತಿತ್ವ ತೋರಿಸಲು ಪ್ರಯತ್ನಿಸುತ್ತಿದೆ. ದೇಶಮಟ್ಟದಲ್ಲಿ ಕಾಂಗ್ರೆಸ್‌ ಮತ್ತು ಎಡ ಮೈತ್ರಿಕೂಟಗಳು ಒಂದಾಗಿ ಸೆಣೆಸುತ್ತಿದ್ದರೂ ಕೇರಳದಲ್ಲಿ ಮಾತ್ರ ಪರಸ್ಪರ ಎದುರಾಳಿಗಳಾಗಿವೆ.

ಕೆ.ಸುರೇಂದ್ರನ್‌ ಹಲವು ಬಾರಿ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದರೂ ಒಮ್ಮೆಯೂ ಗೆಲ್ಲಲು ಸಾಧ್ಯವಾಗಿಲ್ಲ. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ಪಥನಂಥಿಟ್ಟ ಕ್ಷೇತ್ರದಲ್ಲಿ ಸ್ಪರ್ಧಿಸಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು. ಇದಕ್ಕೂ ಮುನ್ನ ಮಂಜೇಶ್ವರಂನಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನ್ನಪ್ಪಿದ್ದರು.

2020ರಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಕೋಜಿಕೋಡೆಯ ಸುರೇಂದ್ರನ್‌ ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿರೋಧಿಸಿ ಅನೇಕ ಸ್ತ್ರೀ ವಿರೋಧಿ ಹೇಳಿಕೆಗಳನ್ನು ನೀಡಿದ್ದರು.

More articles

Latest article