ಹೊಸದಿಲ್ಲಿ: ಚುನಾವಣಾ ಬಾಂಡ್ ಹಗರಣದ ಒಂದೊಂದೇ ವಿವರಗಳು ಬಯಲಾಗುತ್ತಿದ್ದು ಬಿಜೆಪಿ ಸರ್ಕಾರ ತಾನೇ ರೂಪಿಸಿದ್ದ ನಿಯಮಾವಳಿಗಳನ್ನು ಮುರಿದು, ಅವಧಿ ಮುಗಿದ ಬಾಂಡ್ ಗಳನ್ನೂ ನಗದೀಕರಣ ಮಾಡಿಕೊಂಡಿರುವ ಘಟನೆ ಬಯಲಾಗಿದೆ.
ಈ ಕುರಿತು The Reporters’ Collective ವಿಸ್ತ್ರತ ವರದಿ ಪ್ರಕಟಿಸಿದ್ದು, 2018 ಕರ್ನಾಟಕ ಚುನಾವಣೆಗೆ ಮುನ್ನ ಅವಧಿ ಮುಗಿದಿದ್ದ ಚುನಾವಣಾ ಬಾಂಡ್ ಗಳನ್ನು ಭಾರತೀಯ ಜನತಾ ಪಕ್ಷ ಮಿಂಚಿನ ವೇಗದಲ್ಲಿ ನಗದೀಕರಣಗೊಳಿಸಿಕೊಂಡಿರುವುದನ್ನು ದಾಖಲೆ ಸಮೇತ ವಿವರಿಸಿದೆ.
2018ರಲ್ಲಿ ಹಣಕಾಸು ಸಚಿವರಾಗಿದ್ದ ಅರುಣ್ ಜೇಟ್ಲಿ ಮತ್ತು ಅವರ ಇಲಾಖೆ ಸ್ಟೇಟ್ ಬ್ಯಾಂಕ್ ಇಂಡಿಯಾ ಮೇಲೆ ಒತ್ತಡ ಹೇರಿ ಅವಧಿ ಮೀರಿದ್ದ ಹತ್ತು ಕೋಟಿ ರುಪಾಯಿ ಮೌಲ್ಯದ ಚುನಾವಣಾ ಬಾಂಡ್ ನಗದೀಕರಣಗೊಳಿಸಿ, ಬಿಜೆಪಿ ಪಕ್ಷಕ್ಕೆ ವರ್ಗಾವಣೆ ಮಾಡಿದ್ದಾರೆ ಎಂಬುದು ಚುನಾವಣಾ ಆಯೋಗ ಪ್ರಕಟಿಸಿರುವ ಬಾಂಡ್ ಕುರಿತಾದ ಮಾಹಿತಿಗಳಿಂದಾಗಿ ಬಹಿರಂಗಗೊಂಡಿದೆ.
2019ರದಲ್ಲಿ ಅವಧಿ ಮೀರಿದ್ದ ಬಾಂಡ್ ನಗದೀಕರಣದ ಸುಳಿವು ಬೆನ್ನೆತ್ತಿದ್ದ ದಿ ರಿಪೋರ್ಟರ್ಸ್ ಕಲೆಕ್ಟಿವ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ರಾಜಕೀಯ ಪಕ್ಷವೊಂದಕ್ಕೆ ಹತ್ತು ಕೋಟಿ ರೂ.ಮೌಲ್ಯದ ಬಾಂಡ್ ಹಣ ವರ್ಗಾವಣೆ ಮಾಡಿರುವ ಕುರಿತು ಮಾಹಿತಿ ಪಡದಿತ್ತು. ಬಿಜೆಪಿ ಸರ್ಕಾರವೇ ರೂಪಿಸಿದ್ದ ಚುನಾವಣಾ ಬಾಂಡ್ ನಿಯಮಾವಳಿ ಪ್ರಕಾರ ಬಾಂಡ್ ಖರೀದಿಯ ನಂತರ ಹದಿನೈದು ದಿನಗಳ ಒಳಗೆ ಯಾರಿಗೆ ಆ ಬಾಂಡ್ ನೀಡಲಾಗಿದೆಯೋ ಆ ರಾಜಕೀಯ ಪಕ್ಷ ನಗದೀಕರಣ ಮಾಡಿಕೊಳ್ಳಬೇಕು. ಒಂದು ವೇಳೆ ನಗದೀಕರಣವಾಗದೇ ಹೋದಲ್ಲಿ ಆ ಹಣ ಪ್ರಧಾನಮಂತ್ರಿಗಳ ಪರಿಹಾರ ನಿಧಿಗೆ ವರ್ಗಾವಣೆಯಾಗುತ್ತದೆ.
ಆದರೆ ಹದಿನೈದು ದಿನಗಳ ಅವಧಿ ಮುಗಿದು, ಹದಿನೇಳು ದಿನ ಕಳೆದ ಮೇಲೆ ನಿಯಮಾವಳಿ ಉಲ್ಲಂಘಿಸಿ ಬಿಜೆಪಿಗೆ ಹಣ ವರ್ಗಾವಣೆ ಮಾಡಲಾಗಿತ್ತು. ಈ ಮಾಹಿತಿಯನ್ನು 2019ರಲ್ಲೇ ದಿ ರಿಪೋರ್ಟರ್ಸ್ ಕಲೆಕ್ಟಿವ್ ವರದಿ ಮಾಡಿತ್ತಾದರೂ ಯಾವ ರಾಜಕೀಯ ಪಕ್ಷ ಹಣ ಪಡೆದಿದೆ ಎಂಬುದು ಆಗ ತಿಳಿದಿರಲಿಲ್ಲ. ದೆಹಲಿಯ ಎಸ್ ಬಿಐ ಶಾಖೆಯೊಂದರಲ್ಲಿ 2018ರ ಮೇ 23ರಂದು ಅವಧಿ ಮುಗಿದ ಬಾಂಡ್ಗಳನ್ನು ರಾಜಕೀಯ ಪಕ್ಷವೊಂದು ನಗದೀಕರಣ ಮಾಡಿಕೊಂಡಿದೆ, ಅವಧಿ ಮುಗಿದಿದ್ದರೂ ಹಣ ಪಡೆಯಲು ಹಣಕಾಸು ಸಚಿವಾಲಯ ತನ್ನ ಪ್ರಭಾವ ಬೀರಿದೆ ಎಂದು ಆಗ ವರದಿ ಮಾಡಲಾಗಿತ್ತು.
ಇದೀಗ ಭಾರತೀಯ ಜನತಾ ಪಕ್ಷ ಚುನಾವಣಾ ಆಯೋಗದ ಮೂಲಕ ಬಹಿರಂಗಪಡಿಸಿರುವ ಮಾಹಿತಿ ಪ್ರಕಾರ ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯದ ಮಧ್ಯಪ್ರವೇಶದಿಂದಾಗಿ ಅಕ್ರಮವಾಗಿ ಅವಧಿ ಮುಗಿದ ಬಾಂಡ್ ನಗದೀಕರಣ ನಡೆದಿರುವುದು ಸ್ಪಷ್ಟವಾಗಿದೆ.
ಎಸ್ ಬಿಐ ಹಣಕಾಸು ಸಚಿವಾಲಯಕ್ಕೆ ನೀಡಿರುವ ವರದಿಯ ಪ್ರಕಾರ ನಡೆದ ಘಟನಾವಳಿಗಳು ಹೀಗಿವೆ.
2018ರ ಮೇ 23ರಂದು ಚುನಾವಣಾ ಬಾಂಡ್ ಹೊಂದಿರುವ ವ್ಯಕ್ತಿಗಳು 20 ಕೋಟಿ ರುಪಾಯಿಯ ಬಾಂಡ್ ಗಳನ್ನು ಹೊಸದಿಲ್ಲಿಯ ಎಸ್ ಬಿಐ ಮುಖ್ಯ ಶಾಖೆಗೆ ತಂದರು. ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ತಮ್ಮ ಬಳಿ ಇರುವ ಚುನಾವಣಾ ಬಾಂಡ್ ಮೂಲ ದಾಖಲೆಯನ್ನು ತಂದರಷ್ಟೇ ಅದರ ಮುಖಬೆಲೆಯ ಹಣವನ್ನು ರಾಜಕೀಯ ಪಕ್ಷದ ಖಾತೆಗೆ ವರ್ಗಾವಣೆ ಮಾಡಲು ಸಾಧ್ಯ. ಯಾರು ಚುನಾವಣಾ ಬಾಂಡ್ ಖರೀದಿಸಿರುತ್ತಾರೋ ಅವರು ಅದರ ದಾಖಲೆಯನ್ನು ರಾಜಕೀಯ ಪಕ್ಷದ ಪ್ರತಿನಿಧಿಗಳಿಗೆ ನೀಡಿರುತ್ತಾರೆ.
20 ಕೋಟಿ ಮುಖಬೆಲೆಯಲ್ಲಿ ಬಾಂಡ್ ಗಳ ಪೈಕಿ ಹತ್ತು ಕೋಟಿಯ ಬಾಂಡ್ 2018ರ ಮೇ 3ರಂದು ಖರೀದಿಸಲಾಗಿತ್ತು. ಉಳಿದ ಹತ್ತು ಕೋಟಿಯ ಬಾಂಡ್ ಅನ್ನು ಮೇ.5ರಂದು ಖರೀದಿಸಲಾಗಿತ್ತು. ಎಸ್ ಬಿಐ ಪ್ರಕಾರ ಎರಡೂ ಬಾಂಡ್ ಗಳ ಅವಧಿ ಮುಗಿದು ಅವುಗಳ ನಗದೀಕರಣ ಅಸಾಧ್ಯವಾಗಿತ್ತು.
ಬಾಂಡ್ ಹೊಂದಿದ್ದ ರಾಜಕೀಯ ಪಕ್ಷದ (ಬಿಜೆಪಿ) ಪ್ರತಿನಿಧಿಗಳು ಹದಿನೈದು ದಿನಗಳ ಅವಧಿಯ ನಿಯಮವನ್ನು ಸಡಿಲಿಸಿ, ಹದಿನೈದು ಕೆಲಸದ ದಿನಗಳೆಂದು ಪರಿಗಣಿಸಿ ಬಾಂಡ್ ಹಣ ವರ್ಗಾವಣೆ ಮಾಡಿಕೊಡುವಂತೆ ವಿನಂತಿಸಿದ್ದರು. ಈ ವಿನಂತಿಯ ಕುರಿತು ಎಸ್ ಬಿಐ ಶಾಖೆ ತನ್ನ ಮುಂಬೈನ ಕಾರ್ಪೊರೇಟ್ ಪ್ರಧಾನ ಕಚೇರಿಯನ್ನು ಸಂಪರ್ಕಿಸಿತು. ಮರುದಿನ 2018ರ ಮೇ 24ರಂದು ಎಸ್ ಬಿಐ ಡೆಪ್ಯುಟಿ ಮ್ಯಾನೇಜಿಂಗ್ ಡೈರೆಕ್ಟರ್ ಮೃತ್ಯುಂಜಯ ಮಹಾಪಾತ್ರ, ಎಸ್ ಬಿಐ ಅಧ್ಯಕ್ಷ ರಜನೀಶ್ ಕುಮಾರ್ ಪರವಾಗಿ ಹಣಕಾಸು ಸಚಿವಾಲಯಕ್ಕೆ ಪತ್ರ ಬರೆದು, ಬಾಂಡ್ ಹಣ ವರ್ಗಾವಣೆ ಮಾಡಬಹುದೇ ಎಂದು ಕೇಳಿದರು.
ಹಣಕಾಸು ಸಚಿವಾಲಯ ತ್ವರಿತಗತಿಯಲ್ಲಿ ಸ್ಪಂದಿಸಿತು. ಅದೇ ದಿನ ಹಣಕಾಸು ಸಚಿವಾಲಯದ ಉಪ ನಿರ್ದೇಶಕ ವಿಜಯ ಕುಮಾರ್, ಹದಿನೈದು ದಿನಗಳ ಅವಧಿ ಎಂದರೆ ಕೆಲಸದ ದಿನಗಳಲ್ಲದ ದಿನಗಳನ್ನೂ ಸೇರಿಸಬೇಕಾಗುತ್ತದೆ. ಹೀಗಾಗಿ ಬಾಂಡ್ ಅವಧಿ ಮುಗಿದಿರುವುದು ಖಚಿತ. ಆದರೆ ಬಾಂಡ್ ವಿಷಯದಲ್ಲಿ ಸ್ಪಷ್ಟ ತಿಳಿವಳಿಕೆ ಇಲ್ಲದಿರುವುದರಿಂದ ಹೀಗಾಗಿರಬಹುದು. ಹೀಗಾಗಿ ಎಸ್ ಬಿಐ ಬಾಂಡ್ ಹಣ ರಾಜಕೀಯ ಪಕ್ಷಕ್ಕೆ ವರ್ಗಾಯಿಸಬಹುದು ಎಂದು ಹೇಳಿದರು! ಪತ್ರವನ್ನು ಅದೇ ದಿನ ಮಿಂಚಿನ ವೇಗದಲ್ಲಿ ಹಣಕಾಸು ಇಲಾಖೆಯ ಕಾರ್ಯದರ್ಶಿ ಎಸ್.ಸಿ.ಗಾರ್ಗ್ ಅನುಮೋದಿಸಿದರು. ಇದಾದ ನಂತರ ಮೇ.5ರಂದು ಖರೀದಿಸಲಾದ ಬಾಂಡ್ ಗಳ ಹಣ ವರ್ಗಾವಣೆ ಮಾಡುವಂತೆ ಎಸ್ ಬಿಐ ಪ್ರಧಾನ ಕಚೇರಿ ತನ್ನ ಹೊಸದಿಲ್ಲಿಯ ಮುಖ್ಯ ಶಾಖೆಗೆ ಆದೇಶಿಸಿತು. ಇಪ್ಪತ್ತು ಕೋಟಿಯ ಬಾಂಡ್ ಗಳ ಪೈಕಿ ಹತ್ತು ಕೋಟಿಯ ಇನ್ನೊಂದು ಬಾಂಡ್ ಅನ್ನು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ವರ್ಗಾಯಿಸಲಾಯಿತು.
ಎಲೆಕ್ಟರೋಲ್ ಬಾಂಡ್ ಗಳ ಕರ್ಮಕಾಂಡಗಳು ಒಂದೊಂದಾಗಿ ಬಹಿರಂಗಗೊಳ್ಳುತ್ತಿದ್ದು ಈ ಪ್ರಕರಣದ ಮೂಲಕ ಅಧಿಕಾರಾರೂಢ ಭಾರತೀಯ ಜನತಾ ಪಕ್ಷ ತಾನೇ ರೂಪಿಸಿದ್ದ ಕಾನೂನನ್ನು ಮುರಿದು ಹಣ ಪಡೆದಿರುವುದು ಸ್ಪಷ್ಟವಾಗುತ್ತದೆ.