ಬ್ರೇಕಿಂಗ್ | ಮಾರ್ಚ್ 21 ಒಳಗೆ ಎಲ್ಲಾ ಚುನಾವಣಾ ಬಾಂಡ್ ಡೇಟಾವನ್ನು ಬಹಿರಂಗಪಡಿಸಿ; ಎಸ್‌ಬಿಐಗೆ ಸುಪ್ರೀಂ ಕೋರ್ಟ್ ನಿರ್ದೇಶನ

Most read

ಮಾರ್ಚ್ 21 ರಂದು ಸಂಜೆ 5 ಗಂಟೆಯೊಳಗೆ ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಬಹಿರಂಗಪಡಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಆದೇಶಿಸಿದೆ.

ಪ್ರತಿ ಬಾಂಡ್‌ಗೆ ಅನುಗುಣವಾದ ಆಲ್ಫಾನ್ಯೂಮರಿಕ್ ಸಂಖ್ಯೆ ಸೇರಿದಂತೆ ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ ಲಭ್ಯವಿರುವ ಎಲ್ಲಾ ವಿವರಗಳನ್ನು ಬಹಿರಂಗಪಡಿಸುವಂತೆ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವನ್ನು ಪ್ರತಿನಿಧಿಸುವ ಹಿರಿಯ ವಕೀಲ ಹರೀಶ್ ಸಾಳ್ವೆ ಅವರಿಗೆ ಹೇಳಿದ್ದಾರೆ.

“SBI ಏನು ಬಹಿರಂಗಪಡಿಸಬೇಕೆಂದು ನೀವು ನಮಗೆ ತಿಳಿಸಿ, ನಾವು ಬಹಿರಂಗಪಡಿಸುತ್ತೇವೆ ಎನ್ನುವ ಧೋರಣೆಯು ನಮಗೆ ನ್ಯಾಯಯುತವಲ್ಲ. ನಾವು ಎಲ್ಲಾ ವಿವರಗಳನ್ನು ಬಹಿರಂಪಡಿಸುವಂತೆ ಆದೇಶಿಸಿರುವಾಗ ಎಲ್ಲಾ ಸಂಭಾವ್ಯ ದಾಖಲೆಗಳನ್ನೂ ಇದು ಒಳಗೊಂಡಿರುತ್ತದೆ. SBI ತಮ್ಮಲ್ಲಿ ಲಭ್ಯವಿರುವ ಎಲ್ಲಾ ವಿವರಗಳನ್ನು ಒದಗಿಸುವ ಅಗತ್ಯವಿದೆ. ಖರೀದಿಸಿದ ಚುನಾವಣಾ ಬಾಂಡ್‌ಗಳ ‘ಕ್ರಮ ಸಂಖ್ಯೆ’ಯನ್ನೂ ಬಹಿರಂಗಪಡಿಸುವಂತೆ ಹೇಳಿದೆ.

ಭವಿಷ್ಯದಲ್ಲಿ ಯಾವುದೇ ವಿವಾದ ಉದ್ಭವಿಸದೇ ಇರಲು ಬ್ಯಾಂಕ್‌ನ ಅಧ್ಯಕ್ಷರು ಗುರುವಾರ ಸಂಜೆ 5 ಗಂಟೆಯೊಳಗೆ ತನ್ನ ವಶದಲ್ಲಿರುವ ಎಲ್ಲಾ ವಿವರಗಳನ್ನು ಬಹಿರಂಗಪಡಿದ್ದೇವೆ. ಯಾವುದೇ ವಿವರಗಳನ್ನು ಮುಚ್ಚಿಟ್ಟಿಲ್ಲ ಎಂದು ಅಫಿಡವಿಟ್ ಸಲ್ಲಿಸಬೇಕು ಎಂದು ಕೋರ್ಟ್‌ ಆದೇಶಿಸಿದೆ.

ಚುನಾವಣಾ ಆಯೋಗವು ಬ್ಯಾಂಕ್‌ನಿಂದ ” ದಾಖಲೆಗಳನ್ನು ಸ್ವೀಕರಿಸಿದ ತಕ್ಷಣ” ವಿವರಗಳನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ ಎಂದು ನ್ಯಾಯಾಲಯ ಚುನಾವಣಾ ಆಯೋಗಕ್ಕೂ ಸೂಚಿಸಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಚುನಾವಣಾ ಬಾಂಡ್‌ಗಳ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸುವಾಗ ತಮ್ಮ ಇಚ್ಚೆಯಂತೆ ಆಯ್ಕೆ ಮಾಡುವಂತಿಲ್ಲ. ಎಲ್ಲಾ ದಾಖಲೆಗಳನ್ನು ಸಂಪೂರ್ಣವಾಗಿ ಬಹಿರಂಗಪಡಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯ ಪ್ರಾಮುಖ್ಯತೆಯನ್ನು ನ್ಯಾಯಾಲಯವು ಒತ್ತಿ ಹೇಳಿದ್ದು, ಏಪ್ರಿಲ್ 2019 ರಿಂದ ಇಲ್ಲಿಯವರೆಗಿನ ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಒದಗಿಸುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಗೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.

ಕೇಂದ್ರದ ಆಡಳಿತಾರೂಢ ಭಾರತೀಯ ಜನತಾ ಪಕ್ಷವು (ಬಿಜೆಪಿ) ಈ ಬಾಂಡ್‌ಗಳ ಮೂಲಕ 2018 ರಲ್ಲಿ ಪರಿಚಯಿಸಿದಾಗಿನಿಂದ ಗರಿಷ್ಠ ₹ 6,986.5 ಕೋಟಿ ಹಣವನ್ನು ಸ್ವೀಕರಿಸಿದೆ, ನಂತರ ಪಶ್ಚಿಮ ಬಂಗಾಳದ ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್ ( ₹ 1,397 ಕೋಟಿ), ಕಾಂಗ್ರೆಸ್ ( ₹ 1,334 ಕೋಟಿ) ಮತ್ತು ಭಾರತ್ ರಾಷ್ಟ್ರ ಸಮಿತಿ ( ₹ 1,322 ಕೋಟಿ) ಹಣ ಪಡೆದಿದ್ದಾರೆ ಎಂದು ಇಸಿ ಹಂಚಿಕೊಂಡಿರುವ ಮಾಹಿತಿಯಲ್ಲಿ ತಿಳಿದುಬಂದಿದೆ.

More articles

Latest article