ಗುಜರಾತ್‌ನ ಶಾಲೆಯೊಂದರಲ್ಲಿ 10ನೇ ತರಗತಿ ಪರೀಕ್ಷೆ ಬರೆಯುತ್ತಿದ್ದ ಅನೇಕ ವಿದ್ಯಾರ್ಥಿನಿಯರಿಗೆ ಹಿಜಾಬ್ ತೆಗೆದು ಹಾಕುವಂತೆ ಆದೇಶಿಸಿದ್ದ ಮಂಡಳಿ ಪರೀಕ್ಷಾ ಕೇಂದ್ರ ಆಡಳಿತಗಾರನನ್ನು ರಾಜ್ಯ ಶಿಕ್ಷಣ ಇಲಾಖೆ ಗುರುವಾರ ಕೆಲಸದಿಂದ ವಜಾಗೊಳಿಸಿದೆ.
ಗುಜರಾತ್ ರಾಜ್ಯದ ಸುರತ್ ಜಿಲ್ಲೆಯ ಅಂಕಲೇಶ್ವರ ಪಟ್ಟಣದ ಲಯನ್ಸ್ ಸ್ಕೂಲ್‌ನಲ್ಲಿ ಈ ಘಟನೆ ನಡೆದಿದ್ದು, ಶಾಲಾ ನಿರ್ವಾಹಕನ ಕ್ರಮವು ತಾರತಮ್ಯದಿಂದ ಕೂಡಿದೆ ಎಂದು ಆರೋಪಿಸಿ ವಿದ್ಯಾರ್ಥಿನಿಯರ ಪೋಷಕರು ಪ್ರತಿಭಟನೆ ನಡೆಸಿದ್ದರು. ಶಾಲಾ ಆಡಳಿತ ಮಂಡಳಿ, ಶಿಕ್ಷಣ ಇಲಾಖೆ, ಜಿಲ್ಲಾಧಿಕಾರಿ ಮತ್ತು ಪೊಲೀಸರನ್ನು ಪೋಷಕರು ಸಂಪರ್ಕಿಸಿ, ಈ ಸಂಬಂಧ ಜಿಲ್ಲಾ ಶಿಕ್ಷಣ ಅಧಿಕಾರಿಗೆ (ಡಿಇಒ) ದೂರು ಸಲ್ಲಿಸಿದ್ದರು.
ನಾನು ಸಿಸಿಟಿವಿ ಕ್ಯಾಮೆರಾದ ವಿಡಿಯೋ ಪರಿಶೀಲಿಸಿದ್ದೇನೆ. ಈ ಸಂಬಂಧ ಪೋಷಕರು ಕೂಡ ಅರ್ಜಿ ಸಲ್ಲಿಸಿದ್ದಾರೆ. ಘಟನೆ ಕುರಿತು ನಾನು ತನಿಖೆಗೆ ಆದೇಶ ನೀಡಿದ್ದೇನೆ. ದೂರಿನಲ್ಲಿ ಸತ್ಯಾಂಶ ಇರುವುದು ಕಂಡುಬಂದ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರದ ನಿರ್ವಾಹಕರನ್ನು ಬದಲಿಸುವ ಪ್ರಕ್ರಿಯೆ ಆರಂಭಿಸಿದ್ದೇನೆ. ಶಾಲೆಯ ಪ್ರಾಂಶುಪಾಲೆ ಕೂಡ ಅಗಿರುವ ನಿರ್ವಾಹಕಿ ಇಳಾ ಸುರತಿಯಾ ಅವರನ್ನು ವಜಾಗೊಳಿಸಿದ್ದೇವೆ. ಪರೀಕ್ಷೆ ಸಂದರ್ಭದಲ್ಲಿ ಯಾವ ರೀತಿಯ ಉಡುಗೆ ಧರಿಸಬೇಕು ಎಂದು ಮಂಡಳಿಯಿಂದ ಯಾವುದೇ ನಿರ್ದಿಷ್ಟ ಸೂಚನೆ ಅಥವಾ ಮಾರ್ಗಸೂಚಿ ನೀಡಿಲ್ಲ” ಎಂದು ಡಿಇಒ ಸ್ವಾತಿ ರಾವೊಲ್ ತಿಳಿಸಿದ್ದಾರೆ.
ಪರೀಕ್ಷಾರ್ಥಿಗಳು ತೊಡುವ ಉಡುಪಿನ ಕುರಿತಂತೆ ಯಾವುದೇ ನಿರ್ದಿಷ್ಟ ನಿಯಮ ಇಲ್ಲ ಎಂದು ಗುಜರಾತ್ ಪ್ರೌಢ ಶಿಕ್ಷಣ ಮಂಡಳಿ ತಿಳಿಸಿದೆ. ವಿದ್ಯಾರ್ಥಿಗಳು ಪರೀಕ್ಷೆಗೆ ಯಾವುದೇ ‘ಸಭ್ಯ’ ಉಡುಗೆಯೊಂದಿಗೆ ಹಾಜರಾಗಬಹುದು ಎಂದು ಹೇಳಿದೆ.