ನಾವು ಜಾತಿ ಗಣತಿ ನಡೆಸುತ್ತೇವೆ, ಭಾರತದ ಬಡ ಮಹಿಳೆಯರಿಗೆ ವರ್ಷಕ್ಕೆ ಒಂದು ಲಕ್ಷ ರುಪಾಯಿ ಕೊಡುತ್ತೇವೆ, ಯುವಜನರಿಗೆ 30 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ” – ರಾಹುಲ್ ಗಾಂಧಿ
ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ ಯಾತ್ರೆ ಮಹಾರಾಷ್ಟ್ರದಲ್ಲಿ ಮುಂದುವರಿದಿದೆ.
ಇಂದಿನ (14.03.2024) ಕಾರ್ಯಕ್ರಮಗಳು ಹೀಗಿದ್ದವು. 9.00 ಗಂಟೆಗೆ ಮಹಾರಾಷ್ಟ್ರ ನಾಶಿಕ್ ನ ಚಂದವಾಡದಲ್ಲಿ ಕಿಸಾನ್ ಮಹಾಪಂಚಾಯತ್. ಪಿಂಪಲಾಗಾಂವ್ ಬಸವಂತದ ಮೂಲಕ ಯಾತ್ರೆ ಪುನರಾರಂಭ. ಪಿಂಪಲಾಗಾಂವ್ ವಾಣಿ ಚೌಕದಲ್ಲಿ ಸ್ವಾಗತ ಕಾರ್ಯಕ್ರಮ. ನಾಶಿಕ್ ಓಜಾರ್ ನಲ್ಲಿ ಸ್ವಾಗತ ಕಾರ್ಯಕ್ರಮ. ಮಧ‍್ಯಾಹ್ನ 2.30 ಕ್ಕೆ ನಾಶಿಕ್ ದ್ವಾರಕಾ ವೃತ್ತದಿಂದ ಯಾತ್ರೆ ಪುನರಾರಂಭ. ನಾಶಿಕ್ ಇಂದಿರಾಗಾಂಧಿ ಪ್ರತಿಮೆ, ಶಾಲಿಮಾರ್ ನಲ್ಲಿ ಸಾರ್ವಜನಿಕ ಭಾಷಣ. ತ್ರಯಂಬಕೇಶ್ವರ ಶಿವ ದೇಗುಲದಲ್ಲಿ ದೇವರ ದರ್ಶನ. ಸಂಜೆಯ ವಿರಾಮ. ರಾತ್ರಿ ವಾಸ್ತವ್ಯ ಮಹಾರಾಷ್ಟ್ರ ಪಾಲಗಾರ್ ಮೊಖಾಡಾದ ಮೊರಚೊಂಡಿಯಲ್ಲಿ.
ಯಾತ್ರೆಯ ಹಾದಿಯಲ್ಲಿ ರಾಹುಲ್ ಗಾಂಧಿಯವರು ತ್ರಯಂಬಕೇಶ್ವರ ಮಂದಿರದಲ್ಲಿ ದೇವರ ದರ್ಶನ ಪಡೆದರು.
ನಾಶಿಕ್ ನಲ್ಲಿ ನಡೆದ ಕಿಸಾನ್ ಮಹಾ ಪಂಚಾಯತ್ ನಲ್ಲಿ ಎನ್ ಸಿ ಪಿ ಮುಖ್ಯಸ್ಥ ಶರದ್ ಪವಾರ್, ಶಿವಸೇನೆಯ ಸಂಜಯ್ ರಾವತ್ ಜತೆಯಲ್ಲಿ ರಾಹುಲ್ ಗಾಂಧಿಯವರು ಭಾಗವಹಿಸಿದರು. ಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, “ಇಂದು ದೇಶದ ಬಹುಮುಖ್ಯ ವಿಷಯಗಳು ರೈತರು, ಅಗ್ನಿವೀರ, ನಿರುದ್ಯೋಗ, ಬೆಲೆ ಏರಿಕೆ ಮತ್ತು ಭಾಗೀದಾರಿಕೆಯೊಂದಿಗೆ ಸಂಬಂಧ ಹೊಂದಿವೆ. ಆದರೆ ಈ ವಿಷಯಗಳು ಮಾಧ್ಯಮಗಳಲ್ಲಿ ಚರ್ಚೆಯಾಗುವುದಿಲ್ಲ. ಅಲ್ಲಿ ಕೇವಲ ಮೋದಿಜಿ, ಬಾಲಿವುಡ್, ಪಾಕಿಸ್ತಾನದ ಚರ್ಚೆಯಾಗುತ್ತದೆ. ಇಂದು ಮೀಡಿಯ ಜನರ ಗಮನ ಬೇರೆಡೆ ತಿರುಗಿಸುವುದರಲ್ಲಿ ವ್ಯಸ್ತವಾಗಿದೆ.
ಮೋದಿ ಸರಕಾರ ಕಳೆದ ಹತ್ತು ವರ್ಷಗಳಲ್ಲಿ ರೈತರ ಒಂದು ಪೈಸೆ ಸಾಲ ಮನ್ನಾ ಮಾಡಿಲ್ಲ. ಆದರೆ, ಕೆಲವೇ ಉದ್ಯಮಿಗಳ ಲಕ್ಷ ಕೋಟಿ ಸಾಲ ಮನ್ನಾ ಮಾಡಿದೆ. ಆದರೆ ಕಾಂಗ್ರೆಸ್ ಸರಕಾರ ರೈತರ 70 ಕೋಟಿ ಸಾಲ ಮನ್ನಾ ಮಾಡಿತ್ತು. ದೇಶದಲ್ಲಿ ರೈತರನ್ನ ನಾಲ್ಕೂ ಕಡೆಯಿಂದ ಮುತ್ತಿಗೆ ಹಾಕಲಾಗಿದೆ. ರೈತರಿಗೆ ತಮ್ಮ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಬೆಳೆ ಹಾನಿಯಾದಾಗ ವಿಮಾ ಪರಿಹಾರ ಸಿಗುತ್ತಿಲ್ಲ. ಅಲ್ಲದೆ ಅವರ ಮೇಲೆ ಜಿ ಎಸ್ ಟಿ ಯ ಹೊರೆ ಹೊರಿಸಲಾಗಿದೆ. ಆದ್ದರಿಂದ ಸಾಲ ಮನ್ನಾ, ಬೆಳೆಗೆ ತಕ್ಕ ಬೆಲೆ, ಎಂ ಎಸ್ ಪಿ ಗ್ಯಾರಂಟಿ ಮತ್ತು ಬೆಳೆ ವಿಮೆ ಮತ್ತು ಜಿ ಎಸ್ ಟಿ ಯನ್ನು ಸರಿಯಾದ ರೀತಿಯಲ್ಲಿ ಜಾರಿಗೊಳಿಸುವುದು ಇದು ಸಮಸ್ಯೆಯ ಪರಿಹಾರಕ್ಕೆ ಸರಿಯಾದ ಔಷಧಿಯಾಗಿದೆ.
ರೈತರ ಮೇಲೆ ಬೇರೆ ಬೇರೆ ರೀತಿಯ ತೆರಿಗೆ ಹಾಕಲಾಗಿದೆ. ಕಾಂಗ್ರೆಸ್ ಈ ಜಿ ಎಸ್ ಟಿ ಯನ್ನು ಅಧ್ಯಯನ ಮಾಡಲಿದೆ. ಒಂದು ತೆರಿಗೆಯ ವ್ಯವಸ್ಥೆ ಮಾಡಲಿದೆ. ರೈತರು ಜಿ ಎಸ್ ಟಿ ಯಿಂದ ಹೊರಗೆ ಇರುವಂತೆ ಮಾಡಲು ನಮ್ಮ ಪೂರ್ಣ ಪ್ರಯತ್ನ ಇರಲಿದೆ. ಎಲ್ಲಿ ವರೆಗೆ ರೈತರ ನೋವನ್ನು ಅರಿಯುವುದಿಲ್ಲವೋ ಅವರ ಶ್ರಮವನ್ನು ಗೌರವಿಸುವುದಿಲ್ಲವೋ ಅಲ್ಲಿಯವರೆಗೆ ರೈತರಿಗೆ ಸಹಾಯ ಮಾಡುವುದು ಸಾಧ್ಯವಿಲ್ಲ. ರೈತರಿಗೆ ಕಾಂಗ್ರೆಸ್ ನ ಬಾಗಿಲು ಸದಾ ತೆರೆದಿರುತ್ತದೆ. ದಿಲ್ಲಿಯಲ್ಲಿ ರೈತರ ಅಳಲು ಆಲಿಸುವ ಸರಕಾರ ಬರಲಿದೆ” ಎಂದರು.
ಯಾತ್ರೆಯ ಸಮಯದಲ್ಲಿ ಬೀದಿ ಬದಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ರಾಹುಲ್ ಗಾಂಧಿ, “ ಅಗ್ನಿವೀರ, ಪಬ್ಲಿಕ್ ಸೆಕ್ಟರ್ ಗಳ ಖಾಸಗೀ ಕರಣ ಇತ್ಯಾದಿಗಳಿಂದ ದೇಶದ 90 ಜನತೆಯ ಪಾಲಿಗೆ ಎಲ್ಲ ದಾರಿಗಳೂ ಬಂದ್ ಆಗಿವೆ. ನಾವು ಜಾತಿ ಗಣತಿ ನಡೆಸುತ್ತೇವೆ, ಭಾರತದ ಬಡ ಮಹಿಳೆಯರಿಗೆ ವರ್ಷಕ್ಕೆ ಒಂದು ಲಕ್ಷ ರುಪಾಯಿ ಕೊಡುತ್ತೇವೆ, ಯುವಜನರಿಗೆ 30 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ” ಎಂದರು.
ನಾಳೆಯೂ ಮಹಾರಾಷ್ಟ್ರದಲ್ಲಿ ಯಾತ್ರೆ ಮುಂದುವರಿಯಲಿದೆ.
ಶ್ರೀನಿವಾಸ ಕಾರ್ಕಳ