ಆರ್.ಧ್ರುವನಾರಾಯಣ್ ಮಾದರಿ ಜನನಾಯಕರು : ಸಿ.ಎಂ.ಸಿದ್ದರಾಮಯ್ಯ

Most read

ಚಾಮರಾಜನಗರ ಮಾ 12: ಆರ್.ದ್ರುವನಾರಾಯಣ್ ಅವರು ಮಾದರಿ ಜನನಾಯಕರಾಗಿದ್ದರು. ಕಾಲಾನಂತರವೂ ಅವರ ಜನಪ್ರಿಯತೆ ಬೆಳೆಯುತ್ತಿದೆ ಎಂದು ಸಿ.ಎಂ. ಸಿದ್ದರಾಮಯ್ಯ ಅವರು ಸ್ಮರಿಸಿದರು.

ದಿವಂಗತ ಆರ್.ದ್ರುವನಾರಾಯಣ್ ಅವರ ಪುಣ್ಯಸ್ಮರಣೆ ಕಾರ್ಯಕ್ರಮಕ್ಕಾಗಿ ಚಾಮರಾಜನಗರಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಹೆಗ್ಗವಾಡಿಗೆ ತೆರಳಿ ದ್ರುವನಾರಾಯಣ್ ಅವರ ಸಮಾಧಿಗೆ ನಮನ ಸಲ್ಲಿಸಿದರು. ಬಳಿಕ ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ಕ್ಷೇತ್ರದ ಅಭಿವೃದ್ಧಿ ಮತ್ತು ಚಾಮರಾಜನಗರ ಜಿಲ್ಲೆಯ ಪ್ರಗತಿಗೆ ನಿರಂತರ ಪ್ರಯತ್ನ ಮಾಡಿದ್ದ ದ್ರುವನಾರಾಯಣ್ ಅವರು ಜನರ ಮಧ್ಯೆ ಓಡಾಡದ ದಿನವೇ ಇಲ್ಲ. ಇವರದ್ದು ಜನಪರ ರಾಜಕಾರಣಕ್ಕೆ ಮಾದರಿ ವ್ಯಕ್ತಿತ್ವ ಎಂದರು.

ಕಾಂಗ್ರೆಸ್ ಸಿದ್ಧಾಂತ ಮತ್ತು ಕಾಂಗ್ರೆಸ್ ಪಕ್ಷದ ಆಸ್ತಿಯಾಗಿದ್ದ ದ್ರುವನಾರಾಯಣ್ ಅವರು ವಿದ್ಯಾರ್ಥಿ ಕಾಂಗ್ರೆಸ್ ಅವಧಿಯಿಂದ ಪಕ್ಷದ ಕಾರ್ಯಾಧ್ಯಕ್ಷರಾಗುವವರೆಗೂ ಬೆಳೆದರು. ಶಾಸಕರಾಗಿ, ಸಂಸದರಾಗಿ ಕ್ಷೇತ್ರದ ಅಭಿವೃದ್ಧಿಗೆ ನಿರಂತರ ಶ್ರಮಿಸಿದವರು. ಹೀಗಾಗಿ ಇವರ ಅಗಲಿಕೆ ಕೇವಲ ಕಾಂಗ್ರೆಸ್ ಪಕ್ಷಕ್ಕೆ ಮಾತ್ರವಲ್ಲ, ಕನ್ನಡ ನಾಡಿಗೆ ತುಂಬಲಾರದ ನಷ್ಟ ಆಗಿದೆ ಎಂದರು.

ಅಜಾತಶತ್ರು ಆಗಿದ್ದು ದ್ರುವನಾರಾಯಣ್ ಅವರ ವ್ಯಕ್ತಿತ್ವವನ್ನೇ ಅವರ ಪುತ್ರ ಶಾಸಕ ದರ್ಶನ್ ದ್ರುವನಾರಾಯಣ್ ಅವರೂ ಹೊಂದಿದ್ದು ಜನಪರತೆ ಬೆಳೆಸಿಕೊಂಡಿದ್ದಾರೆ. ಇವರಿಗೆ ನಾನು ಸಂಪೂರ್ಣ, ಸಹಕಾರ, ಬೆಂಬಲ ನೀಡುತ್ತೇನೆ ಎಂದರು.

ರಾಜಕಾರಣಿಗೆ ಸೈದ್ಧಾಂತಿಕ ಸ್ಪಷ್ಟತೆ ಮತ್ತು ಬದ್ಧತೆ ಅತ್ಯಗತ್ಯ. ದ್ರುವನಾರಾಯಣ್ ಅವರಿಗೆ ಇವೆರಡೂ ಇತ್ತು. ಸಮಾಜದ ಅಸಮಾನತೆ ಅಳಿಸಲು, ದುರ್ಬಲರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ತುಂಬುವ ಕೆಲಸವನ್ನು ಅವರು ಮಾಡುತ್ತಿದ್ದರು.

ಅಂಬೇಡ್ಕರ್ ಅವರ ಸಂವಿಧಾನದ ಬಗ್ಗೆ ದ್ರುವನಾರಾಯಣ್ ಅಪಾರವಾದ ನಂಬಿಕೆ, ಗೌರವ ಹೊಂದಿದ್ದರು. ಈಗ ಈ ಸಂವಿಧಾನವನ್ನು ಬದಲಾಯಿಸುವ ಪ್ರಯತ್ನಗಳು ನಡೆಯುತ್ತಿವೆ. ಸಂವಿಧಾನ ಉಳಿದರೆ ಮಾತ್ರ ನಾವೂ ನೀವೂ ಉಳಿಯುತ್ತೇವೆ ಎಂದು ಎಚ್ಚರಿಸಿದರು.

ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ, ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್, ಶಾಸಕ ದರ್ಶನ್ ದ್ರುವನಾರಾಯಣ್, ಅನಿಲ್ ಚಿಕ್ಕಮಾದು, ರವಿಶಂಕರ್, ಮಾಜಿ ಶಾಸಕರಾದ ಯತೀಂದ್ರ ಸಿದ್ದರಾಮಯ್ಯ ಸೇರಿ ಮೈಸೂರು, ಚಾಮರಾಜನಗರ ಜಿಲ್ಲೆಯ ಶಾಸಕರುಗಳು, ಮುಖಂಡರು ಮತ್ತು ಜಿಲ್ಲಾ ಮುಖಂಡರುಗಳು ಉಪಸ್ಥಿತರಿದ್ದರು.

More articles

Latest article