ಸಂಸದ ಅನಂತಕುಮಾರ್ ಹೆಗಡೆ ಮೊನ್ನೆ ಉತ್ತರ ಕನ್ನಡ ಜಿಲ್ಲೆಯ ಹಲಗೇರಿಯಲ್ಲಿ ತಮ್ಮ ಕಾರ್ಯಕರ್ತರನ್ನು ಉದ್ದೇಶಿಸಿ ಮಾತಾಡುತ್ತಾ ‘ಸಂವಿಧಾನ ತಿದ್ದುಪಡಿಗೆ ಸಂಸತ್ತಿನಲ್ಲಿ 400ಕ್ಕೂ ಹೆಚ್ಚು ಸೀಟುಗಳು ಬೇಕು, ಕನಿಷ್ಟ 20 ರಾಜ್ಯದಲ್ಲಾದರೂ ನಾವು ಅಧಿಕಾರ ಪಡೆಯಬೇಕಿದೆ, ಸಂಪೂರ್ಣ ಬಹುಮತ ಸಿಕ್ಕಿದ ಮೇಲೆ ಇರೋದು ಮಾರಿಹಬ್ಬ’ ಎಂದು ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ಸಂಸದನ ಈ ಮಾತುಗಳ ಕುರಿತು ಬಹಳ ಟೀಕೆಗಳು, ಖಂಡನೆಗಳು ವ್ಯಕ್ತವಾಗುತ್ತಿವೆ. ಬಿಜೆಪಿಯ ಮತ್ತೊಬ್ಬ ಮುಖಂಡ ಸಿ.ಟಿ. ರವಿ ಅನಂತಕುಮಾರ್ ಹೆಗ್ಡೆಯ ಮಾತುಗಳನ್ನು ಅನುಮೋದಿಸಿ ‘ಅವರು ಹೇಳಿದ್ದರಲ್ಲಿ ತಪ್ಪೇನಿದೆ? ಸಂವಿಧಾನದಲ್ಲಿ 106 ತಿದ್ದುಪಡಿಗಳಾಗಿವೆ. ಅವುಗಳಲ್ಲಿ 95ಬಾರಿ ತಿದ್ದುಪಡಿ ಮಾಡಿರುವುದು ಕಾಂಗ್ರೆಸ್. ಸಂವಿಧಾನ ತಿದ್ದುಪಡಿಗೆ ಸಂವಿಧಾನದಲ್ಲೇ ಅವಕಾಶವಿದೆ’ ಎಂದು ಹೇಳಿರುವುದು ವರದಿಯಾಗಿದೆ. ಈ ಬಿಜೆಪಿ ಮುಖಂಡರ ಮಾತುಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವರಾದ ಶಿವರಾಜ ತಂಗಡಗಿ, ಪ್ರಿಯಾಂಕ್ ಖರ್ಗೆ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಲೋಕಸಭಾ ಚುನಾವಣೆಯ ಘೋಷಣೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ಇಂತಹ ಹೇಳಿಕೆಗಳ ಮೂಲಕ ಅನಂತಕುಮಾರ್ ಹೆಗ್ಡೆ ಸುದ್ದಿಯಾಗುತ್ತಿರುವುದರ ಹಿಂದಿನ ಮರ್ಮವೇನು? ಹಿಂದೆ 2014ರಲ್ಲಿ ನರೇಂದ್ರ ಮೋದಿ ಮೊದಲ ಬಾರಿಗೆ ಪ್ರಧಾನಿಯಾಗಿದ್ದ ಅವಧಿಯಲ್ಲಿ ಈ ಅನಂತಕುಮಾರ್ ಹೆಗ್ಡೆ ಕೇಂದ್ರ ಮಂತ್ರಿಯಾಗಿದ್ದರು. ನಂತರ ‘ನಾವು ಬಂದಿರುವುದೇ ಸಂವಿಧಾನವನ್ನು ಬದಲಿಸಲು’ ಎಂದು ಈ ವ್ಯಕ್ತಿ ಆಡಿದ್ದ ಮಾತಿಗೆ ರಾಷ್ಟ್ರಮಟ್ಟದಲ್ಲಿ ಖಂಡನೆ ವ್ಯಕ್ತವಾಗಿ ತೀವ್ರ ಮುಜುಗರ ಅನುಭವಿಸಿದ ಬಿಜೆಪಿ ನಂತರದ ಅವಧಿಯಲ್ಲಿ ಈತನನ್ನು ಮಂತ್ರಿ ಮಾಡಲಿಲ್ಲ.
ನಾಲ್ಕು ವರ್ಷಗಳ ಕಾಲ ಸಂಸತ್ತಿನಲ್ಲಿ ಒಂದೇ ಒಂದು ಮಾತನಾಡದ, ತನ್ನನ್ನು ಆರಿಸಿದ ಕ್ಷೇತ್ರದಲ್ಲೂ ಯಾವುದೇ ಘನಕಾರ್ಯ ಮಾಡದ ಸಂಸದ ಅನಂತಕುಮಾರ್ ಹೆಗ್ಡೆಯಾಗಲೀ, ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಹೀನಾಯವಾಗಿ ಸೋತು ನಿರುದ್ಯೋಗಿಯಾಗಿರುವ ಸಿ.ಟಿ. ರವಿಯಾಗಲೀ ಸಂಪೂರ್ಣವಾಗಿ ಮಾನಸಿಕ ಸ್ಥಿಮಿತತೆಯನ್ನು ಕಳೆದುಕೊಂಡು ಅಸ್ವಸ್ಥರಾಗಿರುವಂತೆ ಕಾಣುತ್ತಿದೆ. ಇವರ ಇಂತಹ ಅತಿರೇಕದ ಹೇಳಿಕೆಗಳು ಬಿಜೆಪಿಗೆ ಒಳ್ಳೆಯದು ಮಾಡುವ ಬದಲು ಸಾಕಷ್ಟು ಡ್ಯಾಮೇಜ್ ಉಂಟುಮಾಡುವುದಂತೂ ಖಚಿತ. ಮತ್ತೊಂದು ಕಡೆ ಮಾತನಾಡುತ್ತಾ ಇದೇ ಅನಂತಕುಮಾರ್ ಹೆಗಡೆ ಮಾಧ್ಯಮಗಳ ಮೇಲೆ ಹರಿಹಾಯ್ದು ಮಾಧ್ಯಮಗಳು ಬೊಗಳುವ ನಾಯಿಗಳು, ಇವುಗಳು ಏನು ಹೇಳುತ್ತವೆ ಎನ್ನುವುದರ ಬಗ್ಗೆ ತಲೆಕೆಡಿಸಿಕೊಳ್ಳಬಾರದು ಎಂದು ತನ್ನ ಕಾರ್ಯಕರ್ತರಿಗೆ ಬೋಧಿಸಿದ್ದಾನೆ. ಈತ ಹೀಗೆ ಹೇಳುವಾಗ ತಾನೊಬ್ಬ ಜವಾಬ್ದಾರಿ ಇರುವ ಸಂಸದನಾಗಿ, ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವೆನಿಸಿಕೊಂಡ ಮಾಧ್ಯಮದ ಕುರಿತು ಏನು ಮಾತಾಡಬೇಕು ಏನು ಮಾತಾಡಬಾರದು ಎಂಬ ಕನಿಷ್ಟ ಪ್ರಜ್ಞೆ ಇಟ್ಟುಕೊಂಡಿಲ್ಲ ಎಂಬುದು ಮೇಲ್ನೋಟಕ್ಕೆ ಕಾಣುತ್ತದೆ. ಇವೆಲ್ಲವೂ ಇವರ ಬೌದ್ಧಿಕ ಅಧಃಪತನ ಮತ್ತು ನೈತಿಕ ಭ್ರಷ್ಟತೆಯ ಮಟ್ಟವನ್ನು ಬಯಲು ಮಾಡಿವೆ.
ಒಮ್ಮೆ ದೊಡ್ಡ ಮಟ್ಟದಲ್ಲಿ ಛೀಮಾರಿ ಹಾಕಿಸಿಕೊಂಡ ಮೇಲೂ, ತನ್ನ ಸಚಿವ ಸ್ಥಾನವನ್ನೇ ಕಳೆದುಕೊಂಡ ಮೇಲೂ ಸಂವಿಧಾನದ ಆಮೂಲಾಗ್ರ ತಿದ್ದುಪಡಿಯ ಕುರಿತು ಅನಂತಕುಮಾರ್ ಹೆಗಡೆ ಆಡಿರುವ ಮಾತುಗಳ ಹಿಂದೆ ಅಡಗಿರುವ ಅಜೆಂಡಾ ಏನು ಎಂಬುದನ್ನು ದೇಶದ ಹಾಗೂ ನಾಡಿನ ಜನರು ಅರಿಯಬೇಕಿದೆ. ಯಾರೋ ಒಬ್ಬ ಮಾನಸಿಕ ಅಸ್ವಸ್ಥನ ಮಾತುಗಳು ಇವು ಎಂದು ಉದಾಸೀನ ಮಾಡಿಬಿಡುವ ಕಾಲಘಟ್ಟದಲ್ಲಿ ನಾವಿಲ್ಲ. ಅನಂತ್ ಕುಮಾರ್ ಹೆಗ್ಡೆ ಹಿಂದೆ ಮಾತಾಡಿದ್ದಾಗಲೀ, ಈಗ ಮಾತಾಡಿದ್ದಾಗಲೀ ಬಿಜೆಪಿ- ಆರೆಸ್ಸೆಸ್ ಸಂಘಪರಿವಾರದ ಅಂತರಂಗದ ಮಾತುಗಳೇ ಆಗಿವೆ. ಇಂತಹ ಮಾತುಗಳನ್ನು ಬಹಿರಂಗವಾಗಿ ಆಡಿ ಪಕ್ಷವನ್ನು ಮುಜುಗರಕ್ಕೆ ಒಳಪಡಿಸುವ ಕುರಿತು ಬಿಜೆಪಿ ನಾಯಕರು ಅಸಮಧಾನಗೊಳ್ಳಬಹುದೇ ವಿನಃ ಅವರಾಡಿರುವ ಮಾತುಗಳ ಬಗ್ಗೆ ಅವರಿಗೇನೂ ತಕರಾರಿರಲು ಸಾಧ್ಯವಿಲ್ಲ. ಏಕೆಂದರೆ ಆರೆಸ್ಸೆಸ್ ತನ್ನ ಕಾರ್ಯಕರ್ತರಿಗೆ ನೀಡುವ ಪ್ರಾಥಮಿಕ ಶಿಕ್ಷಣದಲ್ಲೇ ನಮ್ಮ ಸಂವಿಧಾನದ ಬಗೆಗಿನ ಅಸಹನೆ ಅಡಗಿರುತ್ತದೆ. ‘ಕಾಂಗ್ರೆಸ್ ನವರು ಸಂವಿಧಾನ ತಿದ್ದುಪಡಿ ಮಾಡಿಕೊಂಡಿದ್ದಾರೆ, ತಮಗೆ ಬೇಕಾದುದನ್ನು ಸೇರಿಸಿದ್ದಾರೆ, ಇದನ್ನು ಬದಲಿಸಲು ದೊಡ್ಡ ಬಹುಮತ ಬೇಕು’ ಎಂದು ತಮ್ಮ ಆಕ್ರೋಶ ಕಾಂಗ್ರೆಸ್ ಮೇಲೆಯೇ ಇದೆ ಎನ್ನುವಂತೆ ಮಾತಾಡುವುದು ಒಂದು ತಂತ್ರವಷ್ಟೆ. ಇವರ ಅಸಲಿ ಸಹನೆ ಇರುವುದು ನಮ್ಮ ಸಂವಿಧಾನದ ಮೇಲೆಯೇ. ಇದಕ್ಕೆ ಹಲವಾರು ಸಾಕ್ಷಿಗಳಿವೆ. 1949ರಲ್ಲಿ ಅಂದರೆ ಭಾರತದ ಸಂವಿಧಾನ ಬಾಬಾಸಾಹೇಬ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚನೆಗೊಂಡು ಅಂಗೀಕಾರವಾದ ಸಂದರ್ಭದಲ್ಲಿ ಸಂಘಪರಿವಾರದ ಮಾತೃಸಂಸ್ಥೆಯಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖವಾಣಿ ಆರ್ಗನೈಜರ್ ಪತ್ರಿಕೆಯಲ್ಲಿ, ‘ಡಾ.ಬಿ.ಆರ್. ಅಂಬೇಡ್ಕರ್ ಅವರು ಕರಡು ಸಮಿತಿಯ ಅಧ್ಯಕ್ಷರಾಗಿ ರಚಿಸಿರುವ ಸಂವಿಧಾನದಲ್ಲಿ ಭಾರತೀಯತೆ ಇಲ್ಲವಾಗಿದೆ. ಈ ದೇಶದ ನೆಲದ ಕಾನೂನಾದ ಮನುಸ್ಮೃತಿಯಿಂದ ಏನೂ ಪಡೆದಿಲ್ಲ. ಹೀಗಾಗಿ ಈ ಸಂವಿಧಾನ ನಮಗೆ ಒಪ್ಪಿತವಲ್ಲ’ ಎಂದು ಬರೆದುಕೊಂಡಿದ್ದರು. ಇದಕ್ಕೆ ಮೊದಲು ಸಂಘದಲ್ಲಿ ಗುರೂಜಿ ಎಂದೇ ಕರೆಯಲಾಗುವ ಅದರ ಎರಡನೇ ಸರಸಂಘಚಾಲಕ ಎಂ ಎಸ್ ಗೋಲ್ವಾಲ್ಕರ್ ಅಭಿಪ್ರಾಯದಲ್ಲಿ, ‘ಪ್ರಜಾಪ್ರಭುತ್ವ ತತ್ವಗಳು ಹೊರಗಿನವು, ಇಡೀ ಮನುಕುಲದ ಅತಿಶ್ರೇಷ್ಟ ಮತ್ತು ಮಹಾನ್ ಕಾನೂನು ರಚನೆಕಾರ ಮನು”. ಇನ್ನು ಸಂಘಪರಿವಾರದವರ ಪಾಲಿನ ಮಹಾನ್ ನಾಯಕ, ವೀರ ಎಂದು ತನಗೆ ತಾನೇ ಹೆಸರಿಟ್ಟುಕೊಂಡಿದ್ದ ಸಾವರ್ಕರ್ ಅಂತೂ, ‘ವೇದಗಳ ನಂತರ ಅತ್ಯಂತ ಪೂಜನೀಯ ಗ್ರಂಥವೆಂದರೆ ಮನುಸ್ಮೃತಿ ಹಾಗೂ ದೇಶವನ್ನು ಅದರ ಆಧಾರದಲ್ಲಿ ನಡೆಸಬೇಕು’ ಎಂದಿದ್ದ. 25,ಜನವರಿ 1950ರಂದು ಅಂದರೆ ಭಾರತವು ಗಣರಾಜ್ಯವಾಗುವ ಒಂದು ದಿನ ಮೊದಲು ಆರೆಸ್ಸೆಸ್ ಪತ್ರಿಕೆ ಆರ್ಗನೈಸರ್ ನಲ್ಲಿ ನಿವೃತ್ತ ನ್ಯಾಯಾಧೀಶರಾಗಿದ್ದ ಸುಬ್ಬಾ ಐಯರ್ ಎಂಬುವವರು “ಮನು ನಮ್ಮ ಹೃದಯವನ್ನಾಳುತ್ತಾನೆ” ಎಂಬ ಶೀರ್ಷಿಕೆಯಲ್ಲಿ ಬರೆದ ಲೇಖನ ಪ್ರಕಟವಾಗಿತ್ತು. ಅದರಲ್ಲಿ, “ಮನುಸ್ಮೃತಿಯನ್ನೇ ದೇಶದ ಸಂವಿಧಾನವಾಗಿ ಜಾರಿ ಮಾಡಬೇಕು” ಎಂದು ಬರೆದಿದ್ದರು. ಇಷ್ಟು ಸಾಲದೇ ಬಿಜೆಪಿ-ಆರೆಸ್ಸೆಸ್ ಸಂಘಪರಿವಾರದ ಅಂತರಂಗವೇನೆಂದು ಅರ್ಥವಾಗಲು?
ಮೇಲೆ ನೀಡಿದ ಉಲ್ಲೇಖಗಳು, ಭಾರತದ ಸಂವಿಧಾನದ ಕುರಿತು ಸಂಘಪರಿವಾರ ಹೊಂದಿರುವ ಅಸಮಾಧಾನ, ಅಸಹನೆಯನ್ನು ಸೂಚಿಸುತ್ತವೆ. ಅವರ ಧ್ಯೇಯವೊಂದೇ. ಅದು ಮನುಸ್ಮೃತಿಯನ್ನೇ ಸಂವಿಧಾನವಾಗಿ ಜಾರಿಗೊಳಿಸುವುದು. ಆದರೆ ಭಾರತದ ಸಂವಿಧಾನ ರಚನಾ ಸಭೆ ಅಂಬೇಡ್ಕರ್ ಅವರಿಗೆ ದೊಡ್ಡ ಜವಾಬ್ದಾರಿ ವಹಿಸಿ ರೂಪಿಸಿದ ನಮ್ಮ ಇಂದಿನ ಸಂವಿಧಾನವು ಮನುಸ್ಮೃತಿ ಪ್ರತಿಪಾದಿಸುವ ಅಸಮಾನತೆ, ಅನ್ಯಾಯ, ಗುಲಾಮಗಿರಿ ಮತ್ತು ಬ್ರಾಹ್ಮಣರ ದಬ್ಬಾಳಿಕೆಯ ಸಾಮಾಜಿಕ ಶ್ರೇಣೀಕರದ ನೀತಿಗಳಿಗೆ ವಿರುದ್ಧವಾಗಿ ಸಮಾನತೆ, ನ್ಯಾಯ, ಸ್ವಾತಂತ್ರ್ಯ, ಬಂಧುತ್ವ, ವ್ಯಕ್ತಿ ಗೌರವ ಪ್ರಜಾಪ್ರಭುತ್ವಗಳನ್ನು ಪ್ರತಿಪಾದಿಸಿದೆ. ಇದುವೇ ಆರೆಸ್ಸೆಸ್ ಜನರ ಅಸಹನೆಯ ಮೂಲವಾಗಿದೆ. ಆದರೆ ಇಡೀ ದೇಶದ ಜನರು ಇಂದಿನ ನಮ್ಮ ಸಂವಿಧಾನವನ್ನು ಪ್ರೀತಿಯಿಂದ ಅಪ್ಪಿಕೊಂಡಿರುವುದರಿಂದ ತಮ್ಮ ಬೇಗುದಿಯನ್ನು ಬಹಿರಂಗವಾಗಿ ಆರೆಸ್ಸೆಸ್ಸಿನವರು ಹೊರಹಾಕಲು ಹಿಂಜರಿಯುತ್ತಾರೆ. ಆದರೆ ಎಲ್ಲೋ ಒಬ್ಬ ಅನಂತಕುಮಾರ್ ಹೆಗಡೆಯಂತಹ ಅಸ್ಪಸ್ಥರ ಮೂಲಕ ಅದು ಹೊರಗೆ ಬರುತ್ತದೆ. ಸಿ.ಟಿ.ರವಿಯಂತಹ ಅಗ್ರಹಾರದ ಗೇಟ್ ಕೀಪರ್ ಶೂದ್ರರು ತಾವು ಏನು ಹೇಳುತ್ತಿದ್ದೇವೆ ಎಂಬುದರ ಅರಿವೂ ಇಲ್ಲದೆ ತಮ್ಮ ಮೇಲವರು ಹೇಳಿಕೊಟ್ಟದ್ದನ್ನು ಬಡಬಡಿಸುತ್ತಾರೆ.
ಭಾರತದ ಸಂವಿಧಾನದಲ್ಲಿ ತಿದ್ದುಪಡಿಗೆ ಅವಕಾಶವಿದೆ. ತಿದ್ದುಪಡಿಗೆ ಅವಕಾಶವಿರದ ಸಂವಿಧಾನ ಬಹುಬೇಗನೇ ಔಟ್ ಡೇಟೆಡ್ ಆಗುತ್ತದೆ ಎಂಬ ಅರಿವು, ದೂರದೃಷ್ಟಿ ನಮ್ಮ ಸಂವಿಧಾನ ನಿರ್ಮಾತೃಗಳಿಗೆ ಇತ್ತು. ಸಂವಿಧಾನದ ಮೂಲರಚನೆಯ ಅಂಶಗಳೆಂದು ಸುಪ್ರೀಂ ಕೋರ್ಟ್ ಯಾವುದನ್ನು ಹೇಳಿದೆಯೋ ಅದನ್ನು ಹೊರತುಪಡಿಸಿ ಸಂವಿಧಾನದ ಯಾವುದೇ ಭಾಗವನ್ನು ತಿದ್ದುಪಡಿ ಮಾಡಬಹುದಾಗಿದೆ. ಕೆಲವು ಅಂಶಗಳನ್ನು ಸಂಸತ್ತಿನ ಸರಳ ಬಹುಮತದಿಂದ ತಿದ್ದುಪಡಿ ಮಾಡಬಹುದಾಗಿದ್ದರೆ ಕೆಲವನ್ನು ಸಂಸತ್ತಿನ ವಿಶೇಷ ಬಹುಮತ ಮತ್ತು ರಾಜ್ಯಗಳ ವಿಧಾನ ಸಭೆಗಳ ವಿಶೇಷ ಬಹುಮತದಿಂದ ಮಾತ್ರ ತಿದ್ದುಪಡಿ ಮಾಡಲು ಸಾಧ್ಯವಿದೆ. ಆದರೆ, ಸಂವಿಧಾನದ ಪೀಠಿಕೆಯಲ್ಲಿ ಹೇಳಿರುವ ಮೂಲ ತತ್ವಗಳನ್ನು ಬದಲಿಸುವಂತಿಲ್ಲ. ಅವುಗಳನ್ನು ಬದಲಿಸಿದರೆ ಇಡೀ ಸಂವಿಧಾನವೇ ಅರ್ಥ ಕಳೆದುಕೊಳ್ಳುತ್ತದೆ. ಇದನ್ನು ಮನಗಂಡೇ 1973ರಲ್ಲಿ ಕೇಶವಾನಂದ ಭಾರತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿ ಸಂವಿಧಾನದ ಮೂಲರಚನೆಯ ತಿದ್ದುಪಡಿಗೆ ಅವಕಾಶವಿಲ್ಲ ಎಂದಿತು. ಮನುಧರ್ಮದ ಪ್ರವರ್ತಕರಾದ ಸಂಘಪರಿವಾರದವರಿಗೆ ಸಮಸ್ಯೆಯಾಗಿರುವುದೇ ಇದು. ಹೀಗಾಗಿಯೇ ಸಂವಿಧಾನಕ್ಕೆ ಯಾವ ಬೆಲೆಯನ್ನೂ ಇವರು ಕೊಡುವುದಿಲ್ಲ. 2019ರಲ್ಲಿ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸುವ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಸಂವಿಧಾನದ ಯಾವುದೇ ರೀತಿನೀತಿಯನ್ನು ಪಾಲಿಸದೇ ಜಮ್ಮು ಕಾಶ್ಮೀರದ, ಶಾಸನ ಸಭೆಯನ್ನೇ ಲೆಕ್ಕಕ್ಕೆ ತೆಗೆದುಕೊಳ್ಳದೇ ರಾಜ್ಯವನ್ನೇ ರದ್ದುಪಡಿಸಿ ಅದನ್ನು ಕೇಂದ್ರಾಡಳಿತ ಪ್ರದೇಶವಾಗಿ ಮಾಡಿಕೊಂಡಿದ್ದನ್ನು ದೇಶ ಕಂಡಿದೆ. ಇದೇ ಗತಿ ಮುಂದೆ ದೇಶದ ಯಾವುದೇ ರಾಜ್ಯಕ್ಕೂ ಬರಬಹುದು. ಬಿಜೆಪಿ ಅದನ್ನು ಮಾಡುತ್ತದೆ ಕೂಡಾ.
ಕಳೆದ ವರ್ಷದ ಆಗಸ್ಟ್ ತಿಂಗಳಿನಲ್ಲಿ ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷ ಬಿಬೇಕ್ ದೇಬ್ರಾಯ್ ಅವರು ಲೈವ್ ಮಿಂಟ್ ಎಂಬ ಜಾಲತಾಣಕ್ಕೆ ಬರೆದಿದ್ದ ಲೇಖನವೊಂದರಲ್ಲಿ ಭಾರತೀಯರು ಹೊಸದೇ ಆದಂತಹ ಸಂವಿಧಾನವನ್ನು ರಚಿಸಿಕೊಳ್ಳುವ ಕಾಲ ಬಂದಿದೆ ಎಂದು ಹೇಳುತ್ತಾ, ಸಂವಿಧಾನದ ನ್ಯಾಯ, ಸಮಾನತೆ, ಸ್ವಾತಂತ್ರ್ಯ ಇವೆಲ್ಲಾ ಅರ್ಥ ಕಳೆದುಕೊಂಡಿವೆ ಎಂದು ಬರೆದುಕೊಂಡಿದ್ದರು. ಈ ವ್ಯಕ್ತಿ ಸಂಘಪರಿವಾರದ ಬೆಂಬಲಿಗ ಹಾಗೂ ಒಬ್ಬ ಸನಾತನವಾದಿ. ಹೀಗೆ ದೇಶದ ಸಂವಿಧಾನವನ್ನೇ ಬದಲಿಸಬೇಕು ಎನ್ನುವ ಮನುವಾದಿಗಳು, ಸನಾತನವಾದಿಗಳು ಬಿಜೆಪಿ ಸರ್ಕಾರದ ದೊಡ್ಡ ದೊಡ್ಡ ಹುದ್ದೆಗಳನ್ನು ಅಲಂಕರಿಸಿಕೊಂಡು ದೇಶದ ಆರ್ಥಿಕ, ರಾಜಕೀಯ ನೀತಿಗಳನ್ನೂ ರೂಪಿಸುತ್ತಾ ಬರುತ್ತಿದ್ದಾರೆ.
ಬಿಜೆಪಿ-ಆರೆಸ್ಸೆಸ್ ನಾಯಕರ ಹೃದಯಗಳನ್ನು ಆಳುವುದು ಮನುಧರ್ಮಶಾಸ್ತ್ರ. ಅವರ ಮನಸ್ಸಿನಲ್ಲಿ ದೇಶದ ಬಹುಸಂಖ್ಯಾತ ಶೂದ್ರವರ್ಗಗಳಿಗೆ, ದಲಿತ, ಆದಿವಾಸಿ ಮತ್ತು ಮಹಿಳೆಯರಿಗೆ ಆತ್ಮಗೌರವವನ್ನು, ಹಕ್ಕುಗಳನ್ನು, ಸಮತೆ ನ್ಯಾಯಗಳನ್ನು ದಯಪಾಲಿಸಿರುವ ಬಾಬಾಸಾಹೇಬರ ಸಂವಿಧಾನ ಎಷ್ಟು ಬೇಗ ಬದಲಾದರೆ ಅಷ್ಟು ಒಳ್ಳೆಯದು. ಈ ಕುರಿತು ಅವರಿಗೆ ಯಾವುದೇ ಗೊಂದಲವಾಗಲೀ, ಹಿಂಜರಿಕೆಯಾಗಲೀ ಇಲ್ಲ. ತಮಗೆ ಪರಮಾಧಿಕಾರ ದೊರೆತರೆ ಒಂದಲ್ಲಾ ಒಂದು ದಿನ ಅದನ್ನು ಮಾಡಿಯೇ ತೀರುತ್ತಾರೆ.
ಈಗ ಪ್ರಶ್ನೆ ಇರುವುದು, ಬಾಬಾಸಾಹೇಬ್ ಅಂಬೇಡ್ಕರ್ ಅವರು ಕರಡು ಸಮಿತಿಯ ಅಧ್ಯಕ್ಷರಾಗಿ ರಚಿಸಿದ ಇಂದಿನ ನಮ್ಮ ಸಂವಿಧಾನದಿಂದ ಕಳೆದ 70 ವರ್ಷಗಳಲ್ಲಿ ಕಣ್ಣು ಬಿಟ್ಟವರು, ಅವಕಾಶಗಳನ್ನು ಪಡೆದವರು, ಮೀಸಲಾತಿ ಪ್ರಾತಿನಿಧ್ಯ ಪಡೆದವರು, ವಿದ್ಯೆ, ಭೂಮಿ, ಉದ್ಯೋಗ, ಅಧಿಕಾರ ಪಡೆದುಕೊಂಡವರು, ಒಂದು ಗೌರವಯುತ ಜೀವನವನ್ನು ಕಟ್ಟಿಕೊಳ್ಳುವ ಅವಕಾಶ ಮತ್ತು ಕಸುವು ಪಡೆದುಕೊಂಡ ದೇಶದ ಬಹುಜನರು ಈ ನಿರ್ಣಾಯಕ ಸಂದರ್ಭದಲ್ಲಿ ಏನು ಮಾಡುತ್ತಾರೆ ಎಂಬುದು. ಯಾಕೆಂದರೆ ಇದುವರೆಗೆ ಬಿಜೆಪಿಯನ್ನು ಅನೇಕ ರಾಜ್ಯಗಳಲ್ಲಿ ಮತ್ತು ಕೇಂದ್ರದಲ್ಲಿ ಗೆಲ್ಲಿಸಿಕೊಂಡು ಬಂದವರೇ ಈ ಶೂದ್ರ ವರ್ಗಗಳು. ಕೆಲವೊಮ್ಮೆ ಕಾಂಗ್ರೆಸ್ ಮೇಲಿನ ಸಿಟ್ಟಿನಿಂದ, ಆಡಳಿತ ವಿರೋಧಿ ಅಲೆಯಿಂದ, ಹಿಂದುತ್ವ ರಾಜಕಾರಣದ ಸಮೂಹಸನ್ನಿಯಿಂದ, ಮುಸ್ಲಿಂ ಕ್ರೈಸ್ತ ದ್ವೇಷದಿಂದ, ಬಿಜೆಪಿ ‘ಅಭಿವೃದ್ಧಿ’ ಮಾಡುತ್ತದೆ ಎಂಬ ಭ್ರಮೆಯಿಂದ ಹೀಗೆ ನಾನಾ ಕಾರಣಗಳಿಂದ ಗೆಲ್ಲಿಸಿದ್ದಾರೆ. ಮೋದಿಯನ್ನು ಎರಡು ಬಾರಿ ಪ್ರಧಾನಿಯಾಗಿಸಿದ್ದಾರೆ.
ಈಗ ಮತ್ತೊಮ್ಮೆ ಮೋಸ ಹೋದರೆ ಪ್ರಾಯಶಃ ಮುಂದಿನ ಕೆಲವೇ ವರ್ಷಗಳಲ್ಲಿ ಭಾರತೀಯರಾದ ನಾವು ರಚಿಸಿಕೊಂಡ ಸಂವಿಧಾನವೂ ಇರುವುದಿಲ್ಲ, ಇಷ್ಟು ವರ್ಷಗಳ ಕಾಲ ಕಟ್ಟಿಕೊಂಡಿರುವ ಪ್ರಜಾಪ್ರಭುತ್ವವೂ ಇರುವುದಿಲ್ಲ. ದೇಶದ ಸನಾತನವಾದಿಗಳ ಹೃದಯದೊಳಗಿರುವ ಮನುವು ವಿರಾಜಮಾನನಾಗಿ ದೇಶದ ಬಹುಸಂಖ್ಯಾತರನ್ನು ಶತಮಾನಗಳ ಹಿಂದಿನ ಗುಲಾಮಗಿರಿಗೆ, ಬ್ರಾಹ್ಮಣ ಧರ್ಮದ ಪುನರುತ್ಥಾನಕ್ಕೆ ಕೊಂಡೊಯ್ಯಲು ದಾಪುಗಾಲಿಡಲಿದ್ದಾನೆ. ದಲಿತರು, ಶೂದ್ರರು ಸಂವಿಧಾನ ನೀಡಿರುವ ಎಲ್ಲಾ ಹಕ್ಕುಗಳನ್ನು ಕಳೆದುಕೊಂಡು ಎರಡನೆಯ ದರ್ಜೆಯ ಪ್ರಜೆಗಳಾಗಿ, ಗುಲಾಮರಾಗಿ ಬದುಕುವ ದಿನಗಳು ಬರಲಿವೆ.