ಬೆಂಗಳೂರು: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಜೈಲುವಾಸ ಅನುಭವಿಸುತ್ತಿರುವ ಖೈದಿಗಳನ್ನು ಭಯೋತ್ಪಾದನೆಗೆ ಸೆಳೆಯುವ ಸಂಚಿನ ಸಂಬಂಧ ಏಳು ರಾಜ್ಯದ ವಿವಿಧ ಭಾಗಗಳಲ್ಲಿ ರಾಷ್ಟ್ರೀಯ ಭದ್ರತಾ ಸಂಸ್ಥೆ (NIA) ಏಕಕಾಲಕ್ಕೆ ದಾಳಿ ನಡೆಸಿ ಹಲವರನ್ನು ವಶಕ್ಕೆ ಪಡೆದಿದೆ.
ಕರ್ನಾಟಕ, ತಮಿಳುನಾಡು ಸೇರಿದಂತೆ ಒಟ್ಟು ಏಳು ರಾಜ್ಯಗಳಲ್ಲಿ ಈ ದಾಳಿ ನಡೆದಿದ್ದು, ಖೈದಿಗಳನ್ನು ಮನವೊಲಿಸಿ ಅವರನ್ನು ಭಯೋತ್ಪಾದನೆ ಚಟುವಟಿಕೆಗೆ ಬಳಸಿಕೊಳ್ಳುವ ಲಷ್ಕರ್ –ಇ- ತೊಯ್ಬಾ ಸಂಚಿನ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಲಷ್ಕರ್ –ಇ-ತೊಯ್ಬಾ ಉಗ್ರನೊಬ್ಬ ಖೈದಿಗಳ ಜೊತೆ ಸಂಪರ್ಕ ಸಾಧಿಸಿ ಅವರನ್ನು ಭಯೋತ್ಪಾದಕ ಚಟುವಟಿಕೆಗೆ ಬಳಸಿಕೊಳ್ಳುತ್ತಿರುವ ಕುರಿತು ಕಳೆದ ವರ್ಷ ಬೆಂಗಳೂರು ನಗರ ಪೊಲೀಸರು ಪ್ರಕರಣವೊಂದನ್ನು ದಾಖಲಿಸಿಕೊಂಡು, ಏಳು ಪಿಸ್ತೂಲ್, ನಾಲ್ಕು ಹ್ಯಾಂಡ್ ಗ್ರೇನೇಡ್, ನಾಲ್ಕು ವಾಕಿಟಾಕಿಗಳು ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದರು.
ಪ್ರಕರಣದ ಬೆನ್ನು ಹತ್ತಿದ NIA ಇಂದು ದೇಶಾದ್ಯಂತ ದಾಳಿಗಳನ್ನು ಸಂಘಟಿಸಿದ್ದು ಒಟ್ಟು ಆರು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಪ್ರಕರಣದ ತನಿಖೆಯನ್ನು NIA ಆರಂಭಿಸಿತ್ತು.
ಲಷ್ಕರ್ – ಇ-ತೊಯ್ಬಾ ಭಯೋತ್ಪಾದಕ ಟಿ. ನಾಸಿರ್ ಬೆಂಗಳೂರಿನ ಕೇಂದ್ರ ಕಾರಾಗ್ರಹದಲ್ಲಿ ಐವರನ್ನು ಭಯೋತ್ಪಾದನಾ ಚಟುವಟಿಕೆಗಳಿಗೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದ. 2013ರಿಂದ ನಾಸಿರ್ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದು ಅಲ್ಲಿ ಸಾಮಾನ್ಯ ಖೈದಿಗಳಾಗಿದ್ದ ಮಹಮದ್ ಉಮರ್, ಮಹಮದ್ ಫೈಸಲ್ ರಬ್ಬಾನಿ, ತನ್ವೀರ್ ಅಹ್ಮದ್, ಮಹಮದ್ ಫಾರೂಕ್ ಮತ್ತು ಜುನೈದ್ ಅಹ್ಮದ್ ರನ್ನು ಭಯೋತ್ಪಾದನೆಗೆ ಸೆಳೆಯಲು ಯಶಸ್ವಿಯಾಗಿದ್ದ.