ಬೆಂಗಳೂರು /ಮೈಸೂರು, ನ.26 : “ನಿಮ್ಮ ಸಮಸ್ಯೆಗಳ ಬಗ್ಗೆ ನಮಗೆ ಅರಿವಿದೆ. ನಾವು ಅದಕ್ಕೆ ಸೂಕ್ತ ಪರಿಹಾರ ನೀಡುತ್ತೇವೆ. ಇಂದು ಸಂಜೆ ಆರ್ಥಿಕ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತೇನೆ. ನಮ್ಮ ಮೇಲೆ ನಂಬಿಕೆಯನ್ನಿಡಿ. ನಾಡಿನ ಮುಖ್ಯಮಂತ್ರಿಯಾಗಿ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ, ತಾಯಂದಿರಿಗೆ ನಮ್ರತೆಯಿಂದ ವಿನಂತಿಸುತ್ತೇನೆ. ನಿಮ್ಮ ಪ್ರತಿಭಟನೆ ಹಿಂತೆಗೆದುಕೊಳ್ಳಿ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಪ್ರತಿಭಟನಾನಿರತ ಆಶಾ ಕಾರ್ಯಕರ್ತೆಯರಿಗೆ ಮತ್ತೊಮ್ಮೆ ಮನವಿ ಮಾಡಿದರು.
ಬೆಂಗಳೂರಿನ ವಿಧಾನಸೌಧ, ಚನ್ನಪಟ್ಟಣ ಹಾಗೂ ಮೈಸೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಗುರುವಾರ ಪ್ರತಿಕ್ರಿಯಿಸಿದರು.
“ನಾವು ನಿಮ್ಮ ಪರವಾಗಿದ್ದೇವೆ. ಸರ್ಕಾರವನ್ನು ಹೆದರಿಸಬೇಡಿ. ಆಶಾ ಕಾರ್ಯಕರ್ತೆಯರು ಮೊದಲು ಪ್ರತಿಷ್ಠೆಯನ್ನು ಬಿಡಬೇಕು. ಬೇರೆಯವರು ನಿಮ್ಮನ್ನು ತಮ್ಮ ರಾಜಕಾರಣಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಅವರು ನಿಮಗೆ ಯಾವುದೇ ಸಹಾಯ ಮಾಡುವುದಿಲ್ಲ. ಇದರಲ್ಲಿ ಬಹಳ ಗಂಭೀರ ವಿಚಾರಗಳೂ ಇವೆ. ಆಶಾಕಾರ್ಯಕರ್ತರು ಒಬ್ಬರೆ ಅಲ್ಲ, ಈ ರೀತಿ ಪ್ರತಿಭಟನೆ ಮಾಡಲು ಹಲವು ಮಂದಿ ಸಿದ್ಧರಾಗುತ್ತಿದ್ದಾರೆ” ಎಂದರು.
ಬಿಜೆಪಿ ನಾಯಕರು ಕೇಂದ್ರದ ಮೇಲೆ ಒತ್ತಡ ಹೇರುತ್ತಿಲ್ಲ ಯಾಕೆ?
“ಕೇಂದ್ರ ಸರ್ಕಾರವನ್ನು ಏಕೆ ಈ ರೀತಿ ಒತ್ತಾಯ ಮಾಡುತ್ತಿಲ್ಲ? ಪ್ರತಿಭಟನೆ ಸ್ಥಳಕ್ಕೆ ಹೋಗಿ ಬಂದ ಬಿಜೆಪಿ ನಾಯಕರು ಕೇಂದ್ರ ಸರ್ಕಾರದ ಮೇಲೆ ಏಕೆ ಒತ್ತಡ ಹೇರುತ್ತಿಲ್ಲ? ಪ್ರತಿಭಟನೆ ಮಾಡುತ್ತಿರುವವರು ಕೇಂದ್ರ ಸರ್ಕಾರವನ್ನು ಏಕೆ ಪ್ರಶ್ನೆ ಮಾಡುತ್ತಿಲ್ಲ? ಇವರ ಬೇಡಿಕೆ ಈಡೇರಿಸುವುದರಲ್ಲಿ ಕೇಂದ್ರದ ಜವಾಬ್ದಾರಿ ಇಲ್ಲವೇ? ನಾವು ಪ್ರಣಾಳಿಕೆಯಲ್ಲಿ ಹೇಳಿದಂತೆ ಈಗಾಗಲೇ ಕೊಟ್ಟಿದ್ದೇವೆ. ಈಗಲೂ ಸಮಸ್ಯೆಗೆ ಪರಿಹಾರವನ್ನು ಕೊಡುತ್ತೇವೆ” ಎಂದು ಹೇಳಿದರು.
ನಾಲ್ಕು ಗ್ಯಾರಂಟಿಗಳು ನಿಮಗೆ ನೀಡಿದ್ದೇವೆ
“ಗ್ಯಾರಂಟಿಗಳು ಜಾರಿ ಮಾಡುವಾಗ, ನಿಮ್ಮ ಒಳಿತಿಗಾಗಿ ಚರ್ಚಿಸಿ ತಮಗೂ ಉಪಯೋಗವಾಗುವಂತೆ ಜಾರಿ ಮಾಡಿದ್ದೇವೆ. ಮನೆ ಯಜನಮಾನಿ ಅನುಕೂಲವಾಗುವಂತೆ ಉಚಿತ ವಿದ್ಯುತ್, 2 ಸಾವಿರ ರೂ ನೀಡುತ್ತಿದ್ದೇವೆ. ತಮಗೂ ಈ ಬಗ್ಗೆ ಅರಿವಿದೆ. ನಿಮ್ಮನ್ನು ಹಲವು ಸಲ ಭೇಟಿಯಾಗಿದ್ದೇನೆ. ನೆಲಮಂಗಲಕ್ಕೆ ಹೋಗಿ ಭೇಟಿ ಮಾಡಿ ಬಂದಿದ್ದೇನೆ. ಹೆಣ್ಣು ಎಂದರೆ ಕುಟುಂಬದ ಕಣ್ಣು. ಹೆಣ್ಣು ಮಕ್ಕಳ ಬಗ್ಗೆ ಕಾಳಜಿ, ನಿಮ್ಮ ಸಮಸ್ಯೆಗಳ ಬಗ್ಗೆ ನಮಗೆ ಅರಿವಿದೆ” ಎಂದರು.
ರಾಜ್ಯದ ಮುಖ್ಯಮಂತ್ರಿ ಮಾತು ನಂಬದಿದ್ದರೆ ಏನೂ ಮಾಡಲು ಆಗುವುದಿಲ್ಲ
“ಪ್ರತಿಭಟನಾ ನಿರತ ಆಶಾಕಾರ್ಯಕರ್ತೆಯರಿಗೆ ನಾನು ಲಿಖಿತವಾಗಿ ಬರೆದುಕೊಡಲು ಆಗುವುದಿಲ್ಲ. ಇದು ಒಪ್ಪಂದವಲ್ಲ. ಇಲ್ಲಿ ಯಾರ ಬಳಿ ಒಪ್ಪಂದ ಮಾಡಿಕೊಳ್ಳಬೇಕು? ಕೇಂದ್ರ ಸರ್ಕಾರದ ಮುಂದೆ ಲಿಖಿತ ಉತ್ತರ ಯಾಕೆ ಕೇಳುತ್ತಿಲ್ಲ? ಈ ರಾಜ್ಯದ ಮುಖ್ಯಮಂತ್ರಿಗಳ ಮಾತಿನ ಮೇಲೆ ನಂಬಿಕೆ ಇಲ್ಲ ಅಂದರೆ ನಾನೇನು ಮಾಡುವುದಕ್ಕೆ ಆಗುವುದಿಲ್ಲ. ಸರ್ಕಾರಕ್ಕೂ ಒಂದು ಮಿತಿ ಇದೆ” ಎಂದು ಸ್ಪಷ್ಟಪಡಿಸಿದರು.
ಸರ್ಕಾರವನ್ನು ಬ್ಲಾಕ್ ಮೇಲ್ ಮಾಡಲು ಆಗುವುದಿಲ್ಲ
“ಇಡೀ ದೇಶ ನಡೆಯುತ್ತಿರುವುದು ನಂಬಿಕೆಯ ಮೇಲೆ. ಇಲ್ಲಿ ವಿಶ್ವಾಸ ಇರಬೇಕು. 17ಇಲಾಖೆಯಲ್ಲಿ ಇದೇ ರೀತಿ ಬೇಡಿಕೆ ಇದೆ. ಅವರು ಸರ್ಕಾರವನ್ನು ಬ್ಲಾಕ್ ಮೇಲ್ ಮಾಡಿ ಯಶಸ್ವಿಯಾಗುತ್ತೇವೆ ಅಂದುಕೊಂಡಿದ್ದಾರೆ. ಯಾವುದೇ ಸರ್ಕಾರವನ್ನು ಬ್ಲಾಕ್ ಮೇಲ್ ಮಾಡಲು ಆಗುವುದಿಲ್ಲ. ಆಶಾ ಕಾರ್ಯಕರ್ತರು ಬೇಡಿಕೆ ತಪ್ಪಲ್ಲ. ಗೌರವಧನ ಹೆಚ್ಚಿಸಿ ಎಂದು ಕೇಳುತ್ತಿದ್ದಾರೆ. ಈಗಾಗಲೇ ಹೆಚ್ಚಿಸಿದ್ದೇವೆ. ಮತ್ತೊಮ್ಮೆ ಹೆಚ್ಚಿಸುವ ನಿರ್ಧಾರ ಮಾಡುತ್ತೇವೆ. ಈ ವಿಚಾರವನ್ನು ಅಧಿವೇಶನದಲ್ಲೂ ಚರ್ಚೆ ನಡೆಸುತ್ತೇವೆ. ನಮ್ಮ ತಾಯಂದಿರಿಗೆ ನಮ್ರತೆಯಿಂದ ಮನವಿ ಮಾಡುವೆ, ನೀವು ಪ್ರತಿಭಟನೆ ನಿಲ್ಲಿ ಕೆಲಸಕ್ಕೆ ಹೋಗಿ, ನಾವು ನಿಮ್ಮನ್ನು ಕರೆಸಿ ತೀರ್ಮಾನ ಮಾಡುತ್ತೇವೆ” ಎಂದು ಮನವಿ ಮಾಡಿದರು.
ಆಶಾ ಕಾರ್ಯಕರ್ತರು ಇಲ್ಲದೆ ಇದ್ದರು ನಡೆಯುತ್ತದೆ ಎಂಬ ಆರೋಗ್ಯ ಸಚಿವರ ಹೇಳಿಕೆಯ ಬಗ್ಗೆ ಕೇಳಿದಾಗ, “ಇಲ್ಲ ಅದೆಲ್ಲಾ ಸುಳ್ಳು. ನಮಗೆ ಎಲ್ಲರೂ ಬೇಕು. ನರೇಂದ್ರಸ್ವಾಮಿ ಅವರ ಹೇಳಿಕೆಯನ್ನು ತಿರುಚಿದ್ದಾರೆ” ಎಂದು ಹೇಳಿದರು.
ಸಂಸದ ಮಂಜುನಾಥ್ ಅವರು 1500 ರೂ. ಪ್ರೋತ್ಸಾಹ ಧನ ಹೆಚ್ಚಿಸುವ ಭರವಸೆ ನೀಡಿದ್ದು, ಈ ಬಗ್ಗೆ ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೀರಾ ಎಂದು ಕೇಳಿದಾಗ, “ಅವರು ಬಹಳ ದೊಡ್ಡವರು, ಅವರ ಬಗ್ಗೆ ನನಗೆ ಹೆಚ್ಚು ಗೊತ್ತಿಲ್ಲ” ಎಂದರು.

