ನವದೆಹಲಿ, ನ.25 : ದೆಹಲಿಯ 22 ವರ್ಷದ ಯುವತಿಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರು ಮತ್ತು ಓರ್ವ ಪುರುಷನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಪೂರ್ವ ದೆಹಲಿಯ ಪ್ರೀತ್ ವಿಹಾರ್ನಲ್ಲಿರುವ ಕೆಫೆಯೊಂದರಲ್ಲಿ ಮಂಗಳವಾರ ಮುಂಜಾನೆ ಈ ಘಟನೆ ನಡೆದಿದೆ ಎಂದು ಯುವತಿ ದೂರು ನೀಡಿದ್ದಾರೆ.
ಪೊಲೀಸರ ಪ್ರಕಾರ, ಸಂತ್ರಸ್ತ ಯುವತಿ, ಆಕೆಯ ಸ್ನೇಹಿತರು ಹಾಗೂ ಆರೋಪಿಗಳು ಎರಡು ಬೇರೆ ಬೇರೆ ಕೆಫೆಗಳಲ್ಲಿ ಕೆಲಸ ಮಾಡುತ್ತಿದ್ದರು. ಸೋಮವಾರ ರಾತ್ರಿ 11.30ಕ್ಕೆ ಕೆಫೆ ಮುಚ್ಚಿದ ಬಳಿಕ ಅಲ್ಲಿಯೇ ಪಾರ್ಟಿ ಮಾಡಲು ಗುಂಪು ನಿರ್ಧರಿಸಿತ್ತು. ಈ ಪೈಕಿ ಒಬ್ಬರ ಬಳಿ ಕೆಫೆಯ ಕೀಲಿ ಇದ್ದ ಕಾರಣ ಒಳಗೆ ಸೇರಿದ್ದರು ಎನ್ನಲಾಗಿದೆ.
ಆರಂಭದಲ್ಲಿ ಮೂವರು ಮಹಿಳೆಯರು ಮತ್ತು ನಾಲ್ವರು ಪುರುಷರು ಸೇರಿದಂತೆ ಒಟ್ಟು ಏಳು ಮಂದಿ ಕೆಫೆಯಲ್ಲಿದ್ದರು. ಬಳಿಕ ಎಲ್ಲರೂ ಮಂಡಾವಳಿಗೆ ತೆರಳಿ, ಮುಂಜಾನೆ ಸುಮಾರು 3 ಗಂಟೆಗೆ ಪ್ರೀತ್ ವಿಹಾರ್ನಲ್ಲಿರುವ ಮತ್ತೊಂದು ಕೆಫೆಗೆ ಹೋಗಿದ್ದರು. ಈ ಕೆಫೆಯಲ್ಲಿ ಆರೋಪಿಗಳ ಪೈಕಿ ಒಬ್ಬರು ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಯುವತಿ ನೀಡಿರುವ ದೂರಿನ ಪ್ರಕಾರ, ಮುಂಜಾನೆ ಸುಮಾರು 3.30ರ ವೇಳೆಗೆ ಇಬ್ಬರು ಪುರುಷರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಉಳಿದವರು ಕೃತ್ಯಕ್ಕೆ ಸಹಕರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಗುಂಪಿನಲ್ಲಿದ್ದ ಎಲ್ಲರೂ ಮದ್ಯ ಸೇವಿಸಿದ್ದರು. ಈ ನಡುವೆ ಯುವತಿ ತನ್ನ ತಾಯಿಗೆ ಕರೆ ಮಾಡಿ ಮನೆಗೆ ಬರುವುದು ತಡವಾಗುತ್ತದೆ ಎಂದು ತಿಳಿಸಿದ್ದರು ಎನ್ನಲಾಗಿದೆ.
ಘಟನೆ ಬಳಿಕ ಎಲ್ಲರೂ ತಮ್ಮ ಮನೆಗಳಿಗೆ ತೆರಳಿದ್ದರು. ಮುಂಜಾನೆ ಸುಮಾರು 5.30ಕ್ಕೆ ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಪೂರ್ವ ವಿಭಾಗದ ಡಿಸಿಪಿ ರಾಜೀವ್ ಕುಮಾರ್, ಇಬ್ಬರು ಮಹಿಳೆಯರು ಮತ್ತು ಓರ್ವ ಪುರುಷನನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಆರೋಪಿಗಳ ಬಂಧನಕ್ಕೂ ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

