ಬಾಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅಧ್ಯಕ್ಷರಾಗಿ ಜಯ್ ಶಾ ಅವರು ಎರಡನೇ ಅವಧಿಗೆ ಅವಿರೋಧವಾಗಿ ಮರು ಆಯ್ಕೆಯಾಗಿದ್ದಾರೆ. ಸೋಮವಾರ ಬಾಲಿಯಲ್ಲಿ ನಡೆದ ಐಸಿಸಿ ಆಡಳಿತ ಮಂಡಳಿಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಜಯ್ ಶಾ ಅವರ ನಾಯಕತ್ವದ ಮೇಲಿನ ಮಂಡಳಿಯ ವಿಶ್ವಾಸವನ್ನು ಈ ಮರು ಆಯ್ಕೆ ಪ್ರತಿಬಿಂಬಿಸುತ್ತದೆ. ಜಾಗತಿಕ ಮಟ್ಟದಲ್ಲಿ ಕ್ರಿಕೆಟ್ ವಿಸ್ತರಣೆ, ಅಭಿಮಾನಿಗಳ ಸಂಖ್ಯೆಯಲ್ಲಿ ಹೆಚ್ಚಳ ಹಾಗೂ ವಾಣಿಜ್ಯ ಅಭಿವೃದ್ಧಿಗೆ ಆದ್ಯತೆ ನೀಡುವ ಮಹತ್ವದ ಸಂದರ್ಭದಲ್ಲಿ ಅವರ ಮುಂದುವರಿಕೆ ಕ್ರೀಡೆಯಲ್ಲಿ ಸ್ಥಿರತೆಗೆ ಸಹಕಾರಿಯಾಗಲಿದೆ ಎಂದು ಐಸಿಸಿ ತಿಳಿಸಿದೆ.
ಮರು ಆಯ್ಕೆಯ ಬಳಿಕ ಮಾತನಾಡಿದ ಜಯ್ ಶಾ, “ಐಸಿಸಿ ಆಡಳಿತ ಮಂಡಳಿ ನನ್ನ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ನಾನು ಆಭಾರಿಯಾಗಿದ್ದೇನೆ. ನಿರಂತರ ಬೆಂಬಲ ಮತ್ತು ಸಹಕಾರ ನೀಡುತ್ತಿರುವ ಪ್ರತಿಯೊಬ್ಬ ನಿರ್ದೇಶಕರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಐಸಿಸಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವುದು ಗೌರವದ ಜೊತೆಗೆ ಮಹತ್ತರ ಜವಾಬ್ದಾರಿಯೂ ಆಗಿದೆ. ವಿಶ್ವದಾದ್ಯಂತ ಕ್ರಿಕೆಟ್ನ ಹಿತಾಸಕ್ತಿಗಳನ್ನು ಉತ್ತೇಜಿಸಲು ಸದಸ್ಯ ರಾಷ್ಟ್ರಗಳೊಂದಿಗೆ ಒಟ್ಟಾಗಿ ಕೆಲಸ ಮಾಡುವ ಬದ್ಧತೆ ಹೊಂದಿದ್ದೇನೆ” ಎಂದರು.
ಒಲಿಂಪಿಕ್ಸ್ನಲ್ಲಿ ಕ್ರಿಕೆಟ್ಗೆ ಹೊಸ ಅವಕಾಶ
“ಕ್ರಿಕೆಟ್ ಇತಿಹಾಸದ ಅತ್ಯಂತ ಮಹತ್ವದ ಹಾಗೂ ರೋಚಕ ಘಟ್ಟವನ್ನು ನಾವು ಪ್ರವೇಶಿಸುತ್ತಿದ್ದೇವೆ. 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ನಲ್ಲಿ ಕ್ರಿಕೆಟ್ ಮತ್ತೆ ಸೇರ್ಪಡೆಯಾಗುತ್ತಿರುವುದು ನಮ್ಮ ಕ್ರೀಡೆಯನ್ನು ಹೊಸ ಪ್ರೇಕ್ಷಕರಿಗೆ ಪರಿಚಯಿಸಲು ಮತ್ತು ಹೊಸ ತಲೆಮಾರಿನ ಆಟಗಾರರು ಹಾಗೂ ಅಭಿಮಾನಿಗಳನ್ನು ಆಕರ್ಷಿಸಲು ಅತ್ಯುತ್ತಮ ಅವಕಾಶವಾಗಿದೆ” ಎಂದು ಜಯ್ ಶಾ ಅಭಿಪ್ರಾಯಪಟ್ಟರು.
ಕ್ರೀಡಾಕೂಟಗಳನ್ನು ಯಶಸ್ವಿಯಾಗಿ ಆಯೋಜಿಸುವುದಷ್ಟೇ ನಮ್ಮ ಜವಾಬ್ದಾರಿಯಲ್ಲ. ಅಭಿಮಾನಿಗಳು, ಆಟಗಾರರು, ವಾಣಿಜ್ಯ ಪಾಲುದಾರರು ಹಾಗೂ ಇತರ ಪ್ರಮುಖ ಪಾಲುದಾರರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಕ್ರಿಕೆಟ್ಗೆ ಬಲಿಷ್ಠ ಮತ್ತು ಸುಸ್ಥಿರ ಭವಿಷ್ಯ ರೂಪಿಸುವುದು ನಮ್ಮ ಗುರಿಯಾಗಿದೆ ಎಂದು ಅವರು ಹೇಳಿದರು.
ಕ್ರಿಕೆಟ್ನ ಅತಿದೊಡ್ಡ ಶಕ್ತಿಯೇ ಜನರನ್ನು ಒಗ್ಗೂಡಿಸುವ ಸಾಮರ್ಥ್ಯ. ಐಸಿಸಿ ಆಡಳಿತ ಮಂಡಳಿ ಹಾಗೂ ಸದಸ್ಯ ರಾಷ್ಟ್ರಗಳ ಸಹಕಾರದೊಂದಿಗೆ ನಮ್ಮ ಗುರಿಗಳನ್ನು ಕಾರ್ಯರೂಪಕ್ಕೆ ತಂದು, ಮುಂದಿನ ಹಲವು ತಲೆಮಾರುಗಳಿಗೂ ನೆನಪಿನಲ್ಲಿ ಉಳಿಯುವಂತಹ ಪ್ರಗತಿ ಸಾಧಿಸುವುದು ನಮ್ಮ ಆಶಯವಾಗಿದೆ ಎಂದು ಜಯ್ ಶಾ ತಿಳಿಸಿದರು.

