ನವದೆಹಲಿ/ಪ್ಯಾರಿಸ್: ಫ್ರಾನ್ಸ್ನಲ್ಲಿ ಸರ್ಕಾರ ವಿರೋಧಿ ಪ್ರತಿಭಟನೆಗಳು ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿದ್ದು, ಹಲವು ನಗರಗಳಲ್ಲಿ ಘರ್ಷಣೆಗಳು ಮತ್ತು ಕರ್ಫ್ಯೂ ಮುಂದುವರಿದಿವೆ. ಈ ಹಿನ್ನೆಲೆಯಲ್ಲಿ ಫ್ರಾನ್ಸ್ನಲ್ಲಿ ನೆಲೆಸಿರುವ ಭಾರತೀಯರು ಹಾಗೂ ಅಲ್ಲಿಗೆ ಪ್ರಯಾಣ ಬೆಳೆಸುವವರು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಭಾರತ ಸರ್ಕಾರ ಸಲಹೆ ನೀಡಿದೆ.
ಬುಧವಾರ ಈ ಸಂಬಂಧ ಪ್ರಕಟಣೆ ಹೊರಡಿಸಿರುವ ಫ್ರಾನ್ಸ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ, ಪ್ರತಿಭಟನೆ ನಡೆಯುತ್ತಿರುವ ಪ್ರದೇಶಗಳು, ಜನಸಂದಣಿ ಹೆಚ್ಚಿರುವ ಸ್ಥಳಗಳು ಹಾಗೂ ಬೃಹತ್ ಸಭೆಗಳಿಂದ ದೂರವಿರುವಂತೆ ಭಾರತೀಯ ನಾಗರಿಕರಿಗೆ ಸೂಚಿಸಿದೆ. ಸ್ಥಳೀಯ ಆಡಳಿತ ಮತ್ತು ಭದ್ರತಾ ಅಧಿಕಾರಿಗಳು ನೀಡುವ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸುವಂತೆಯೂ ತಿಳಿಸಿದೆ.
ಭಾರತೀಯರಿಗೆ ರಾಯಭಾರ ಕಚೇರಿಯ ಮಹತ್ವದ ಸೂಚನೆ

ಫ್ರಾನ್ಸ್ನಲ್ಲಿನ ಇತ್ತೀಚಿನ ಬೆಳವಣಿಗೆಗಳು ಮತ್ತು ಕೆಲವು ಪ್ರದೇಶಗಳಲ್ಲಿ ಜಾರಿಗೊಳಿಸಿರುವ ಕರ್ಫ್ಯೂ ಹಿನ್ನೆಲೆಯಲ್ಲಿ ಭಾರತೀಯ ನಾಗರಿಕರು ಜಾಗರೂಕರಾಗಿರಬೇಕು ಹಾಗೂ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರಾಯಭಾರ ಕಚೇರಿ ತಿಳಿಸಿದೆ.
ಸ್ಥಳೀಯ ಸುದ್ದಿ ಮಾಧ್ಯಮಗಳು ಮತ್ತು ಫ್ರಾನ್ಸ್ ಸರ್ಕಾರದ ಅಧಿಕೃತ ವೆಬ್ಸೈಟ್ gouvernement.fr ಮೂಲಕ ಪರಿಸ್ಥಿತಿಯ ಬಗ್ಗೆ ನಿರಂತರ ಮಾಹಿತಿ ಪಡೆಯುವಂತೆ ಸೂಚಿಸಲಾಗಿದೆ.
ಪ್ಯಾರಿಸ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾರ್ವಜನಿಕ ಸಾರಿಗೆ ಸೇವೆಗಳಿಗೆ ಅಡಚಣೆಯಾಗುವ ಸಾಧ್ಯತೆಯಿರುವುದರಿಂದ ಪ್ರಯಾಣಕ್ಕೂ ಮುನ್ನ RATP ವೆಬ್ಸೈಟ್ ಮೂಲಕ ಬಸ್, ಮೆಟ್ರೋ ಹಾಗೂ ಇತರ ಸಾರಿಗೆ ಸೇವೆಗಳ ಮಾಹಿತಿ ಪರಿಶೀಲಿಸುವಂತೆ ಸಲಹೆ ನೀಡಲಾಗಿದೆ.
ತುರ್ತು ಸಂದರ್ಭಗಳಲ್ಲಿ ಪ್ಯಾರಿಸ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಥವಾ ಮಾರ್ಸೇಯಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಕಚೇರಿಯನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.
ವಿದ್ಯಾರ್ಥಿಗಳ ಪ್ರತಿಭಟನೆ ದೇಶವ್ಯಾಪಿ ಆಕ್ರೋಶವಾಗಿ ಪರಿವರ್ತನೆ
ಫ್ರಾನ್ಸ್ನಲ್ಲಿ ಸೆಪ್ಟೆಂಬರ್ ಅಂತ್ಯದಲ್ಲಿ ಶಾಲೆಗಳಲ್ಲಿನ ಮೂಲಸೌಕರ್ಯ ಕೊರತೆ, ಅನುದಾನದ ಅಭಾವ ಮತ್ತು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಸೌಲಭ್ಯಗಳಿಲ್ಲದಿರುವುದನ್ನು ವಿರೋಧಿಸಿ ಪ್ರತಿಭಟನೆಗಳು ಆರಂಭವಾಗಿದ್ದವು.
ಆರಂಭದಲ್ಲಿ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಬೇಡಿಕೆಗಳಿಗೆ ಸೀಮಿತವಾಗಿದ್ದ ಹೋರಾಟ ಕ್ರಮೇಣ ದೇಶವ್ಯಾಪಿ ಸರ್ಕಾರ ವಿರೋಧಿ ಚಳವಳಿಯಾಗಿ ರೂಪುಗೊಂಡಿದೆ.
ಹಣದುಬ್ಬರ, ಆಹಾರ ಪದಾರ್ಥಗಳು ಹಾಗೂ ಇಂಧನ ಬೆಲೆ ಏರಿಕೆ, ಜೀವನ ನಿರ್ವಹಣಾ ವೆಚ್ಚ ಹೆಚ್ಚಳ ಮತ್ತು ಸಾರ್ವಜನಿಕ ಸೇವೆಗಳ ಗುಣಮಟ್ಟ ಕುಸಿತದ ವಿರುದ್ಧವೂ ಜನರು ಬೀದಿಗಿಳಿದಿದ್ದಾರೆ.
ಹಿಂಸಾಚಾರದಲ್ಲಿ 2,400ಕ್ಕೂ ಹೆಚ್ಚು ಮಂದಿ ಬಂಧನ
ಅಕ್ಟೋಬರ್ 17ರಂದು ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ಹಲವು ಕಡೆ ಹಿಂಸಾಚಾರ ಭುಗಿಲೆದ್ದಿದೆ. ಅಂಗಡಿಗಳ ಲೂಟಿ, ವಾಹನಗಳು ಮತ್ತು ಕಟ್ಟಡಗಳಿಗೆ ಬೆಂಕಿ ಹಚ್ಚುವುದು ಹಾಗೂ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದಿರುವ ಘಟನೆಗಳು ವರದಿಯಾಗಿವೆ.
ಮಾಧ್ಯಮ ವರದಿಗಳ ಪ್ರಕಾರ, ವಾರಾಂತ್ಯದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 2,400ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ಇದೇ ವೇಳೆ ಸುಮಾರು 1,000 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಪರಿಸ್ಥಿತಿ ನಿಯಂತ್ರಿಸಲು ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದ್ದು, ಹಿಂಸಾಚಾರ ಮರುಕಳಿಸದಂತೆ ಕ್ರಮ ಕೈಗೊಳ್ಳಲಾಗುತ್ತಿದೆ.
ಪ್ಯಾರಿಸ್, ಲಿಯಾನ್ ಸೇರಿದಂತೆ ಹಲವು ನಗರಗಳಲ್ಲಿ ಕರ್ಫ್ಯೂ
ಹಿಂಸಾಚಾರ ತೀವ್ರಗೊಂಡ ಹಿನ್ನೆಲೆಯಲ್ಲಿ ಫ್ರಾನ್ಸ್ ಆಡಳಿತವು ರಾಜಧಾನಿ ಪ್ಯಾರಿಸ್ನ ಕೆಲವು ಪ್ರದೇಶಗಳ ಜೊತೆಗೆ ಲಿಲ್ಲೆ, ಲಿಯಾನ್ ಮತ್ತು ನೀಸ್ ನಗರಗಳಲ್ಲಿ ಸ್ಥಳೀಯ ಮಟ್ಟದಲ್ಲಿ ಕರ್ಫ್ಯೂ ಜಾರಿಗೊಳಿಸಿದೆ. ಮಾರ್ಸೇ ನಗರದಲ್ಲಿಯೂ ಸಾರ್ವಜನಿಕ ಸಭೆಗಳು ಮತ್ತು ಪ್ರತಿಭಟನೆಗಳ ಮೇಲೆ ನಿರ್ಬಂಧಗಳನ್ನು ವಿಧಿಸಲಾಗಿದೆ. ಸಾರ್ವಜನಿಕ ಆಸ್ತಿಪಾಸ್ತಿಗಳ ರಕ್ಷಣೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತೆ ಪ್ರತಿಭಟನೆಗೆ ಕರೆ; ನವೆಂಬರ್ 5ರಂದು ಮುಷ್ಕರ
ದೇಶದಲ್ಲಿ ಹಿಂಸಾಚಾರ ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಭರವಸೆ ನೀಡಿದ್ದಾರೆ. ಆದರೆ ಪ್ರತಿಭಟನಾ ಸಂಘಟನೆಗಳು ತಮ್ಮ ಹೋರಾಟ ಮುಂದುವರಿಸಲು ನಿರ್ಧರಿಸಿವೆ.
ಫ್ರಾನ್ಸ್ನ ಪ್ರಮುಖ ವಿದ್ಯಾರ್ಥಿ ಸಂಘಟನೆ ಮತ್ತು 2018–19ರಲ್ಲಿ ಇಂಧನ ಬೆಲೆ ಏರಿಕೆ ವಿರುದ್ಧ ಬೃಹತ್ ಹೋರಾಟ ನಡೆಸಿದ್ದ ‘ಯೆಲ್ಲೋ ವೆಸ್ಟ್’ ಚಳವಳಿಯ ಸಂಘಟಕರು ಶನಿವಾರ ಮತ್ತೊಂದು ಸುತ್ತಿನ ಪ್ರತಿಭಟನಾ ರ್ಯಾಲಿಗಳಿಗೆ ಕರೆ ನೀಡಿದ್ದಾರೆ.
ಇದರ ಜೊತೆಗೆ ಜೀವನ ನಿರ್ವಹಣಾ ವೆಚ್ಚ ಹೆಚ್ಚಳ ಹಾಗೂ ಸಾರ್ವಜನಿಕ ಸೇವೆಗಳಿಗೆ ಅನುದಾನ ಕಡಿತವನ್ನು ವಿರೋಧಿಸಿ ಕಾರ್ಮಿಕ ಸಂಘಟನೆಗಳು ನವೆಂಬರ್ 5ರಂದು ಮುಷ್ಕರ ನಡೆಸುವುದಾಗಿ ಘೋಷಿಸಿವೆ.

