ಬೆಂಗಳೂರು , ಅ.02 : ಮಹಾತ್ಮ ಗಾಂಧೀಜಿಯವರ ವಿಚಾರಗಳು ಭಾರತ ದೇಶಕ್ಕೆ ಮಾತ್ರವಲ್ಲ ,ಪ್ರಪಂಚ ಹಾಗೂ ಸಮಸ್ತ ಮನುಕುಲಕ್ಕೆ ಇಂದಿಗೂ ಪ್ರಸ್ತುತವಾಗಿವೆ. ಗಾಂಧೀಜಿಯವರ ವ್ಯಕ್ತಿತ್ವ ಮತ್ತು ಘನತೆಗೆ ಹೋಲಿಕೆಯಾಗಬಲ್ಲ ಮತ್ತೊಂದು ವ್ಯಕ್ತಿತ್ವವಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಸಹಯೋಗದಲ್ಲಿ ಇಂದು ಮಹಾತ್ಮ ಗಾಂಧೀಜಿಯವರ 157 ನೇ ಜಯಂತಿ ಅಂಗವಾಗಿ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಗಾಂಧಿ ಸೇವಾ ಪ್ರಶಸ್ತಿ-2026 ಪ್ರದಾನ ಹಾಗೂ ಕೊಪ್ಪಳ ಜಿಲ್ಲೆಯ 11 ವ್ಯಸನಮುಕ್ತ ಗ್ರಾಮಗಳಿಗೆ ಗಾಂಧಿ ಪುರಸ್ಕಾರ ನೀಡಿ ಅವರು ಮಾತನಾಡಿದರು.
ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಗಾಂಧೀಜಿ ಪ್ರತಿಮೆ ಸ್ಥಾಪಿಸಲಾಗಿದೆ. ವಿಶ್ವವಿದ್ಯಾಲಯಗಳಲ್ಲಿ ಗಂಭೀರ ಚರ್ಚೆಗಳು ನಡೆದಿವೆ. ವಿಶ್ವದ ಎಲ್ಲ ನಾಯಕರು ಗಾಂಧೀಜಿಯನ್ನು ಮಾದರಿಯಾಗಿ ಸ್ವೀಕರಿಸಿದ್ದಾರೆ. ನಾವು ಈ ದೇಶದಲ್ಲಿ ಹುಟ್ಟಿ ಬದುಕುತ್ತಿರುವುದೇ ನಮ್ಮೆಲ್ಲರ ಭಾಗ್ಯ ಎಂದರು.
ಗಾಂಧೀಜಿಯವರು ಮೃತಪಟ್ಟಾಗ ವಿಶ್ವ ಸಂಸ್ಥೆಯ ಬಹುತೇಕ ಎಲ್ಲ ಸದಸ್ಯ ರಾಷ್ಟ್ರಗಳು ಧ್ವಜವನ್ನು ಅರ್ಧಕ್ಕೆ ಇಳಿಸಿ ಗೌರವ ನೀಡಿದ್ದವು. ಆದರೆ ಕೇಂದ್ರ ಸರ್ಕಾರವು ಉದ್ಯೋಗ ಖಾತ್ರಿ ಯೋಜನೆಯಿಂದ ಗಾಂಧೀಜಿಯ ಹೆಸರನ್ನು ಏಕೆ ತೆಗೆಯಿತು ಎಂದು ಇನ್ನೂ ಅರ್ಥವಾಗಿಲ್ಲ ಎಂದು ವಿಷಾದಿಸಿದರು.
ಯೋಜನೆಯಲ್ಲಿ ಗಾಂಧೀಜಿಯ ಹೆಸರಿದ್ದರೆ ಏನು ತೊಂದರೆ ಆಗುತ್ತಿತ್ತು? ದೇಶವನ್ನು ಆಳುತ್ತಿರುವ ನಾಯಕರಿಗೆ ಅವರ ಹೆಸರು ತೆಗೆಯಬೇಕು ಎಂದು ಏಕೆ ಅನ್ನಿಸಿತು. ಈಗ ಯೋಜನೆಗೆ ವಿಬಿಜಿ ರಾಮ್ ಜಿ ಹೆಸರು ಬಂದಿದೆ. ಈ ಬಗ್ಗೆ ವಿಸ್ತೃತ ಚರ್ಚೆ ಆಗುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಗಾಂಧೀಜಿಯವರ ಅಹಿಂಸಾ ತತ್ವಕ್ಕೆ ಪರ್ಯಾಯವೇ ಇಲ್ಲ ಎಂದು ಪ್ರತಿಪಾದಿಸಿದ ಮುಖ್ಯಮಂತ್ರಿಗಳು ಮುಂಬರುವ ಒಂದು ವರ್ಷದೊಳಗೆ ರಾಜ್ಯದಲ್ಲಿ ಮಹಾತ್ಮ ಗಾಂಧೀಜಿಯವರು ಭೇಟಿ ನೀಡಿದ್ದ 87 ಸ್ಥಳಗಳಲ್ಲಿ ಗಾಂಧಿ ಸ್ಮಾರಕ ಸ್ತಂಭ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಅವರು ಇದೇ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿ ಡಿಜಿಟಲ್ ಮ್ಯೂಸಿಯಂ ಮತ್ತು ಗಾಂಧಿ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಶಾಸಕ ಹಾಗೂ ಗಾಂಧೀ ಭಾರತ ಶತಮಾನೋತ್ಸವ ಸಮಿತಿ ಅಧ್ಯಕ್ಷರಾದ ಎಚ್.ಕೆ.ಪಾಟೀಲ ಮಾತನಾಡಿ, ಕೊಪ್ಪಳ ಜಿಲ್ಲೆಯಲ್ಲಿ ಸ್ವಯಂಪ್ರೇರಿತವಾಗಿ ವ್ಯಸನಮುಕ್ತ ಗ್ರಾಮಗಳನ್ನಾಗಿಸಲು ಪ್ರಯತ್ನಿಸುತ್ತಿರುವವರ ನೇತೃತ್ವವನ್ನು ಶ್ಲಾಘಿಸಿದರು.
ಗಾಂಧಿ ಸೇವಾ ಪ್ರಶಸ್ತಿ ಸ್ವೀಕರಿಸಿದ ಡಾ. ವೂಡೇ ಪಿ. ಕೃಷ್ಣ ಮಾತನಾಡಿ, ಮಹಾತ್ಮ ಗಾಂಧೀಜಿಯವರ ಹೆಸರಿನ ಪ್ರಶಸ್ತಿ ದೊರೆತಿರುವುದು ಜವಾಬ್ದಾರಿ ಹೆಚ್ಚಿಸಿದೆ.ಗಾಂಧೀಜಿಯವರ ವಿಚಾರಗಳನ್ನು ಯುವ ಜನಾಂಗಕ್ಕೆ ದಾಟಿಸಬೇಕು. ಮಹಾತ್ಮ ಗಾಂಧೀಜಿಯವರನ್ನು ತಪ್ಪಾಗಿ ಅರ್ಥೈಸುವ ವ್ಯವಸ್ಥಿತ ಪ್ರಯತ್ನಗಳು ನಡೆಯುತ್ತಿವೆ.ಗಾಂಧೀಜಿಯವರನ್ನು ಸಂಪೂರ್ಣವಾಗಿ ಓದದೇ,ಅರಿಯದೇ ಟೀಕಿಸಬಾರದು ಎಂದರು. ಪ್ರಶಸ್ತಿ ಮೊತ್ತ 5 ಲಕ್ಷ ರೂ.ಗಳನ್ನು ಕರ್ನಾಟಕ ಗಾಂಧಿ ಸ್ಮಾರಕ ನಿಧಿಗೆ ಅರ್ಪಿಸಿದರು.
ಸಚಿವರಾದ ರಿಜ್ವಾನ್ ಅರ್ಷದ್, ಎಚ್.ಸಿ. ಬಾಲಕೃಷ್ಣ, ಮಾಜಿ ಸಚಿವ ಹಾಗೂ ಗಾಂಧಿ ಭಾರತ ಶತಮಾನೋತ್ಸ ಸಮಿತಿ ಅಧ್ಯಕ್ಷ ಎಚ್.ಕೆ. ಪಾಟೀಲ್, ನಿವೃತ್ತ ನ್ಯಾಯಮೂರ್ತಿ ಟಿ.ಜಿ .ಶಿವಶಂಕರಗೌಡ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷ ಶರಣಪ್ಪ ಸಲಾದಪುರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿ ಜೆ. ಮಂಜುನಾಥ್ , ಆಯುಕ್ತ ಎಂ.ಎನ್. ಅನುಚೇತ್ ಮತ್ತಿತರರು ಉಪಸ್ಥಿತರಿದ್ದರು.
ದತ್ತಿ ಪ್ರಶಸ್ತಿ ಹಾಗೂ ಅತ್ಯತ್ತಮ ಎನ್ ಎಸ್ ಎಸ್ ಪುರಸ್ಕಾರ ಹಾಗೂ ಕೃತಿಗಳ ಲೋಕಾರ್ಪಣೆ
ಮಂಜುನಾಥ್ ಚಾಂದ್ ಅವರ ‘ಮಹಾತ್ಮನ ಮಗಳು’ ಹಾಗೂ ರಮೇಶ್ ಬಿಳಿಕೆರೆ ಅವರ ‘ಮರೆಯಲಾಗದ ಮಾಣಿಕ್ಯ ಟಿ.ಎಸ್.ಸುಬ್ಬಣ್ಣ’ ಕೃತಿಗೆ ಶ್ರೀಮತಿ ಜಯಲಕ್ಷ್ಮಿ ಹೊ ಶ್ರೀನಿವಾಸಯ್ಯ ದತ್ತಿ ಪ್ರಶಸ್ತಿ ನೀಡಲಾಯಿತು.
ಮೈಸೂರಿನ ಕಡಕೊಳದ ಶೇಷಾದ್ರಿಪುರಂ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎನ್ ಎಸ್ ಎಸ್ ಅಧಿಕಾರಿ ಆರ್. ರಾಘವೇಂದ್ರ ಹಾಗೂ ಬೆಳಗಾವಿ ಜಿಲ್ಲೆ ಕುಡಚಿಯ ಬಿ.ಶಂಕರಾನಂದ ಕಾಲೇಜಿನ ಎನ್.ಎಸ್.ಎಸ್. ಅಧಿಕಾರಿ ಸುರೇಖಾ ಅಶೋಕ ಬೆಳಗಲಿ ಅವರಿಗೆ ‘ಪ್ರೊ.ಜಿ.ಬಿ.ಶಿವರಾಜು ಅತ್ಯುತ್ತಮ ಎನ್ ಎಸ್ ಎಸ್ ಪ್ರಶಸ್ತಿ’ ನೀಡಲಾಯಿತು.
ರಾಜ್ಯ ಮಟ್ಟದ ಉತ್ತಮ ಎನ್ಎಸ್ ಎಸ್ ಸ್ವಯಂ ಸೇವಕ ಪುರಸ್ಕಾರವನ್ನು ತುಮಕೂರಿನ ಜಿ.ಎ.ಸಿದ್ದೇಶ್, ಮಸ್ಕಿಯ ಜೆ.ನಾಗರಾಜ, ಮಂಡ್ಯದ ಚೈತ್ರಾ ಸಿ, ಹಾಗೂ ರಾಯಚೂರಿನ ಜೆ.ಎಸ್.ಸುಷ್ಮಾ ಅವರಿಗೆ ನೀಡಲಾಯಿತು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಿಸಿದ ವಾರ್ತಾ ಜನಪದ ಹಾಗೂ ಮಾರ್ಚ್ ಆಫ್ ಕರ್ನಾಟಕ ಗಾಂಧಿ ದರ್ಶನ ವಿಶೇಷ ಸಂಚಿಕೆಗಳು,ಕೆ.ಎಸ್.ನರಸಿಂಹಸ್ವಾಮಿಯವರ ಅನುವಾದಿತ ಕೃತಿ ‘ನನ್ನ ಕನಸಿನ ಭಾರತ ಮತ್ತು ಮೋಹನ ಮಾಲೆ’, ಬಿಬಿಸಿ ಬಾನುಲಿ ಪ್ರಸಾರದ ನಾಲ್ಕು ಕಾರ್ಯಕ್ರಮಗಳ ಕುರಿತು ಫ್ರಾನ್ಸಿಸ್ ವ್ಯಾಟ್ಸನ್ ಮತ್ತು ಮೌರಿಸ್ ಬ್ರೌನ್ ಅವರ ಕೃತಿ ‘ಗಾಂಧಿ ಸಂಕಥನ: ಬಹುಮುಖ ನೋಟ’ (ಅನುವಾದ ಮಹಾಬಲೇಶ್ವರ ರಾವ್) ಹಾಗೂ ಅರವಿಂದ ಚೊಕ್ಕಾಡಿಯವರ ‘ಆಸುಪಾಸಿನಲ್ಲಿ ಗಾಂಧಿ’ ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು.

