ತಿರುವನಂತಪುರಂ: ಇಪ್ಪತ್ತು ವರ್ಷಗಳ ಹಿಂದೆ ಮಲೇಷಿಯಾದ ಯೋಜನಾ ಅಧಿಕಾರಿಯೊಬ್ಬರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡೆತ್‌ನೋಟ್‌ನಲ್ಲಿ ಜ್ಞಾನೇಶ್ ಕುಮಾರ್ ಅವರ ಹೆಸರು ಪ್ರಸ್ತಾಪವಾಗಿ, ಆ ಸಂದರ್ಭದಲ್ಲು ಕೇರಳದಲ್ಲಿ ತೀವ್ರ ವಿವಾದ ಹಾಗೂ ಜ್ಞಾನೇಶ್ ಕುಮಾರ್ ಕೇಂದ್ರ ಬಿಂದುವಾಗಿ ಚರ್ಚೆಗೆ ಗ್ರಾಸವಾಗಿದ್ದರು ಎಂಬ ವಿಚಾರ ಮತ್ತೆ ಬೆಳಕಿಗೆ ಬಂದಿದೆ.
ಮುಖ್ಯ ಚುನಾವಣಾ ಆಯುಕ್ತರ (CEC) ವಿರುದ್ಧ ಪ್ರತಿಭಟನೆಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ ಇದು ಮತ್ತೆ ಚರ್ಚೆಗೆ ಬಂದಿದೆ. ಕಳೆದ ಎರಡು ದಶಕಗಳ ಹಿಂದೆ ಜ್ಞಾನೇಶ್ ಕುಮಾರ್ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಆ ಸಂದರ್ಭದಲ್ಲಿ ನಡೆದ ಘಟನೆಯನ್ನು ಹಿರಿಯ ಸಿಪಿಎಂ ನಾಯಕ ಟಿ.ಎಂ. ಥಾಮಸ್ ಐಸಾಕ್ ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ಮತ್ತೆ ಮುನ್ನೆಲೆಗೆ ತಂದಿದ್ದಾರೆ.
2006-11ರ ಅವಧಿಯಲ್ಲಿ ಹಣಕಾಸು ಸಚಿವರಾಗಿದ್ದ ಐಸಾಕ್, ಮಲೇಷ್ಯಾದ ಅಧಿಕಾರಿ ಲೀ ಬೀನ್ ಸೀನ್ ಅವರ ಆತ್ಮಹತ್ಯೆ ಪತ್ರದಲ್ಲಿ ಹೆಸರಿಸಲಾದ ಅಧಿಕಾರಿಗಳಲ್ಲಿ ಅಂದಿನ ಲೋಕೋಪಯೋಗಿ ಇಲಾಖೆ (PWD) ಕಾರ್ಯದರ್ಶಿ ಜ್ಞಾನೇಶ್ ಕುಮಾರ್ ಕೂಡ ಒಬ್ಬರು ಎಂದು ನೆನಪಿಸಿಕೊಂಡರು.
ರಾಜ್ಯದಲ್ಲಿ ರಸ್ತೆ ಯೋಜನೆಗಾಗಿ ಮಲೇಷ್ಯಾದ ಸಂಸ್ಥೆ ‘PATI’ ಮತ್ತು ‘ಭಗೀರಥ ಕನ್ಸ್ಟ್ರಕ್ಷನ್ಸ್’ ನಡುವಿನ ಜಂಟಿ ಉದ್ಯಮವಾದ ‘PATI-BEL’ನ ಕೇರಳ ಕಾರ್ಯಾಚರಣೆಯ ಉಸ್ತುವಾರಿಯನ್ನು ಲೀ ವಹಿಸಿಕೊಂಡಿದ್ದರು. ನವೆಂಬರ್ 2006ರಲ್ಲಿ, ಕೇರಳದಿಂದ ಮರಳಿದ ನಂತರ ಲೀ ಅವರು ಕೌಲಾಲಂಪುರ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಐಸಾಕ್ ಅವರ ಪ್ರಕಾರ, ಲೀ ಅವರ ಆತ್ಮಹತ್ಯೆ ಪತ್ರದಲ್ಲಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಂದ ಭ್ರಷ್ಟಾಚಾರ, ದುರಾಡಳಿತ ಮತ್ತು ಕಿರುಕುಳದ ಆರೋಪಗಳನ್ನು ವಿವರಿಸಲಾಗಿತ್ತು ಮತ್ತು ಇದರಲ್ಲಿ ಜ್ಞಾನೇಶ್ ಕುಮಾರ್ ಅವರ ಹೆಸರನ್ನು ಪ್ರಮುಖವಾಗಿ ಉಲ್ಲೇಖಿಸಲಾಗಿತ್ತು. ಲಂಚಕ್ಕೆ ಬೇಡಿಕೆ ಇಡಲಾಗಿತ್ತು ಎಂಬ ಆರೋಪವೂ ಆ ಪತ್ರದಲ್ಲಿತ್ತು ಎಂದು ವರದಿಯಾಗಿದೆ. ಈ ಆರೋಪಗಳ ಹಿನ್ನೆಲೆಯಲ್ಲಿ ವಿಜಿಲೆನ್ಸ್ ತನಿಖೆ ನಡೆಯಿತು ಮತ್ತು 2006ರ ಅಂತ್ಯದ ವೇಳೆಗೆ ಜ್ಞಾನೇಶ್ ಕುಮಾರ್ ಅವರನ್ನು ಲೋಕೋಪಯೋಗಿ ಇಲಾಖೆಯಿಂದ ವರ್ಗಾಯಿಸಲಾಯಿತು. ನಂತರ ಅವರು ಕೇಂದ್ರ ರಕ್ಷಣಾ ಸಚಿವಾಲಯಕ್ಕೆ ತೆರಳಿದರು. ಐಸಾಕ್ ಅವರ ಪ್ರಕಾರ, ಅಲ್ಲಿನ ಅವರ ಕಾರ್ಯಕಾಲವು ಅವರಿಗೆ ಬಿಜೆಪಿ ಸರ್ಕಾರದ ವಿಶ್ವಾಸ ಗಳಿಸಲು ಸಹಾಯ ಮಾಡಿತು.
ಮೂಲತಃ 216 ಕೋಟಿ ರೂ. ಎಂದು ಅಂದಾಜಿಸಲಾಗಿದ್ದ ಯೋಜನೆಗೆ, ಅಂತಿಮವಾಗಿ ಪೂರ್ಣಗೊಳ್ಳಲು ಕನಿಷ್ಠ 330 ಕೋಟಿ ರೂ.ಗಳ ಅಗತ್ಯವಿತ್ತು ಎಂದು ಐಸಾಕ್ ಪ್ರತಿಪಾದಿಸಿದರು. ಪಾವತಿಯಲ್ಲಿನ ವಿಳಂಬ ಮತ್ತು ಗುತ್ತಿಗೆದಾರರಿಗೆ ನೀಡಲಾದ ಕಿರುಕುಳವನ್ನು ಅವರು ಲೀ ಅವರ ಆತ್ಮಹತ್ಯೆಯೊಂದಿಗೆ ಜೋಡಿಸಿದ್ದಾರೆ. ಸರ್ಕಾರಿ ಅಧಿಕಾರಿಗಳು ಕಂಪನಿಯೊಂದಿಗೆ ನಡೆದುಕೊಂಡ ರೀತಿಯ ಪರಿಣಾಮವೇ ಅವರ ಸಾವು ಎಂದು ಬಣ್ಣಿಸಿದ್ದಾರೆ. .
ಮುಖ್ಯವಾಗಿ ಭೂಸ್ವಾಧೀನದಲ್ಲಿನ ಸಮಸ್ಯೆಗಳಿಂದಾಗಿ ಯೋಜನೆ ವಿಳಂಬವಾಯಿತು ಮತ್ತು ನಿಧಾನಗತಿಯ ಪ್ರಗತಿಗೆ ಯಾರು ಹೊಣೆ ಎಂಬ ವಿಷಯದಲ್ಲಿ ಗುತ್ತಿಗೆದಾರ ಹಾಗೂ ಲೋಕೋಪಯೋಗಿ ಇಲಾಖೆಯ ನಡುವೆ ಪರಸ್ಪರ ಆರೋಪ-ಪ್ರತ್ಯಾರೋಪಗಳು ನಡೆದವು. ಇಲಾಖೆಯ ನಿರ್ಲಕ್ಷ್ಯದಿಂದಾಗಿ ಸಂಪೂರ್ಣ ಹೊಣೆಗಾರಿಕೆ ಕೇರಳ ಸರ್ಕಾರದ ಮೇಲೆ ಬಿತ್ತು. ಹಳೆಯ ಕಡತಗಳನ್ನು ಸಾಮಾನ್ಯವಾಗಿ ನಾಶಪಡಿಸಲಾಗುವುದರಿಂದ, ಆ ತನಿಖೆಗೆ ಸಂಬಂಧಿಸಿದ ದಾಖಲೆಗಳು ವಿಜಿಲೆನ್ಸ್ ಇಲಾಖೆಯ ಬಳಿ ಇನ್ನೂ ಇವೆಯೇ ಎಂಬುದು ನನಗೆ ಖಚಿತವಿಲ್ಲ. ಇದು 20 ವರ್ಷಗಳ ಹಿಂದಿನ ಘಟನೆ. ಬಹುಶಃ, ಮಲೇಷ್ಯಾದ ಕಂಪನಿಯೂ ಕೂಡ ಈ ಪ್ರಕರಣವನ್ನು ಮುಂದುವರಿಸಿರಲಿಲ್ಲ ಎಂದು ಐಸಾಕ್ ತಿಳಿಸಿದರು.
ನಾನು ವೈಯಕ್ತಿಕವಾಗಿ ಲೀ ಬೀನ್ ಸೀನ್ ಅವರ ಆತ್ಮಹತ್ಯಾ ಪತ್ರವನ್ನು ಓದಿಲ್ಲ, ಆದರೆ ಆ ಸಮಯದಲ್ಲಿ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟಿರುವ ಮತ್ತು ಹಣಕ್ಕಾಗಿ ಪೀಡಿಸುತ್ತಿರುವ ಬಗ್ಗೆ ಆರೋಪಗಳು ಕೇಳಿಬರುತ್ತಿದ್ದವು. ಈ ಆರೋಪಗಳಲ್ಲಿ ಹೆಸರಿಸಲಾದವರ ಪೈಕಿ ಜ್ಞಾನೇಶ್ ಕುಮಾರ್ ಕೂಡ ಒಬ್ಬರಾಗಿದ್ದರು.
ಅವರ ಸಾವಿನ ನಂತರ ರಾಜ್ಯ ವಿಜಿಲೆನ್ಸ್ ಇಲಾಖೆಯು ತನಿಖೆಯನ್ನು ನಡೆಸಿತಾದರೂ, ಅಧಿಕಾರ ವ್ಯಾಪ್ತಿಯ ಸಮಸ್ಯೆಗಳು ಮತ್ತು ಅಧಿಕಾರಿಗಳ ಅನಾಸಕ್ತಿಯಿಂದಾಗಿ ಅದು ಯಾವುದೇ ನಿರ್ಣಾಯಕ ಹಂತವನ್ನು ತಲುಪಲಿಲ್ಲ.
ಆ ಸಮಯದಲ್ಲಿ ಕರ್ತವ್ಯ ನಿರ್ವಹಿಸಿದ್ದ ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಕರಣದ ಫಲಿತಾಂಶದ ಬಗ್ಗೆ ತಮಗೆ ಏನೂ ತಿಳಿದಿಲ್ಲ ಎಂಬಂತೆ ವರ್ತಿಸಿದರು. ವಿಜಿಲೆನ್ಸ್ ಇಲಾಖೆ ತನಿಖೆ ನಡೆಸಿತು. ಆದರೆ, ಅದು ಯಾವುದೇ ಹಂತವನ್ನೂ ತಲುಪಲಿಲ್ಲ. ಸಾರ್ವಜನಿಕ ಆಕ್ರೋಶವಿದ್ದರೂ, ಆಗಿನ ಸರ್ಕಾರಿ ಯಂತ್ರವು ಈ ಪ್ರಕರಣವನ್ನು ಮುಂದುವರಿಸುವಲ್ಲಿ ಹೆಚ್ಚಿನ ಆಸಕ್ತಿ ತೋರಲಿಲ್ಲ ಎಂದು ನಿವೃತ್ತ ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಆ ಸಮಯದಲ್ಲಿ, ಈ ವಿವಾದವು ಕೇರಳದ ಮೂಲಸೌಕರ್ಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿತ್ತು. ಅಕ್ರಮಗಳ ಆರೋಪಗಳು ಮತ್ತು ಗುತ್ತಿಗೆದಾರರಿಗೆ ಹಣ ಪಾವತಿಸುವ ವಿಷಯದಲ್ಲಿ ಸರ್ಕಾರ ಅನುಸರಿಸಿದ ಕ್ರಮಗಳ ಕುರಿತಾದ ಆರೋಪಗಳು ಈ ಸಾವಿನೊಂದಿಗೆ ರಾಜಕೀಯ ಬಿರುಗಾಳಿಯನ್ನೇ ಎಬ್ಬಿಸಿದ್ದವು ಎಂದು ಮತ್ತೆ ನೆನಪಿಸಿದ್ದಾರೆ.

