ಬೆಂಗಳೂರು, ಸೆ.25: ಧರ್ಮಸ್ಥಳ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗಾಗಿ ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡವನ್ನು (SIT) ಪುನರ್‌ರಚಿಸಬೇಕು ಎಂದು ‘ಕೊಂದವರು ಯಾರು?’ ಆಂದೋಲನ ಆಗ್ರಹಿಸಿದೆ.
ಈ ಸಂಬಂಧ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಬಹಿರಂಗ ಪತ್ರ ಬರೆದಿರುವ ಆಂದೋಲನ, ಸುಪ್ರೀಂ ಕೋರ್ಟ್‌ನ ಆದೇಶದ ಆಶಯಕ್ಕೆ ಪೂರಕವಾಗುವ ರೀತಿಯಲ್ಲಿ SIT ರಚನೆಯಾಗಿಲ್ಲ ಎಂದು ಆಕ್ಷೇಪಿಸಿದೆ. ಸುಪ್ರೀಂ ಕೋರ್ಟ್ ಉನ್ನತ ಮಟ್ಟದ ಅಧಿಕಾರಿಯ ನೇತೃತ್ವದಲ್ಲಿ ತನಿಖೆ ನಡೆಯಬೇಕೆಂದು ಸೂಚಿಸಿದ್ದರೂ, ಸರ್ಕಾರ IGP ದರ್ಜೆಯ ಅಧಿಕಾರಿಯ ನೇತೃತ್ವದಲ್ಲಿ ತಂಡ ರಚಿಸಿದೆ ಎಂದು ಪತ್ರದಲ್ಲಿ ಹೇಳಲಾಗಿದೆ. ಪ್ರಕರಣದ ಗಂಭೀರತೆ ಹಾಗೂ ಹಿಂದಿನ ತನಿಖೆಯಲ್ಲಿನ ಲೋಪಗಳನ್ನು ಪರಿಗಣಿಸಿದರೆ DG ಅಥವಾ ADGP ದರ್ಜೆಯ ಅತ್ಯುನ್ನತ ಅಧಿಕಾರಿಯ ನೇತೃತ್ವದಲ್ಲೇ ತನಿಖೆ ನಡೆಯಬೇಕು ಎಂದು ಒತ್ತಾಯಿಸಲಾಗಿದೆ.
ವಿವಾದಿತ ಅಧಿಕಾರಿಗಳ ಸೇರ್ಪಡೆಗೆ ಆಕ್ಷೇಪ
SITಗೆ ಸೇರ್ಪಡೆಗೊಳಿಸಿರುವ ಎಸಿಪಿ ವೆಂಕಟೇಶ್ ಪ್ರಸನ್ನ ಅವರ ವಿರುದ್ಧ ವಿವಿಧ ಗಂಭೀರ ಆರೋಪಗಳಿದ್ದು, ಈ ಬಗ್ಗೆ ಇಲಾಖಾ ತನಿಖೆಗಳು ನಡೆದಿವೆ ಎಂದು ಹಿರಿಯ ಪತ್ರಕರ್ತ ನವೀನ್ ಸೂರಿಂಜೆ ಅವರು ಮಾಧ್ಯಮಗಳ ಮೂಲಕ ಬಹಿರಂಗಪಡಿಸಿರುವುದಾಗಿ ಆಂದೋಲನ ತನ್ನ ಪತ್ರದಲ್ಲಿ ಉಲ್ಲೇಖಿಸಿದೆ. ಇಂತಹ ಆರೋಪಗಳನ್ನು ಎದುರಿಸುತ್ತಿರುವ ಅಧಿಕಾರಿಯನ್ನು ಸೌಜನ್ಯ ಪ್ರಕರಣದ ಮರುತನಿಖಾ ತಂಡದಲ್ಲಿ ಸೇರಿಸಿರುವುದು ಸುಪ್ರೀಂ ಕೋರ್ಟ್ ಆದೇಶದ ಮೂಲ ಆಶಯಕ್ಕೆ ವಿರುದ್ಧವಾಗಿದೆ ಎಂದು ಆರೋಪಿಸಲಾಗಿದೆ.
ವೆಂಕಟೇಶ್ ಪ್ರಸನ್ನ ಅವರು ಈ ಹಿಂದೆ ವಿವಿಧ ಪ್ರಕರಣಗಳ ತನಿಖೆಯಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ ಅವರ ವಿರುದ್ಧ ಹಲವು ಆರೋಪಗಳು ಕೇಳಿಬಂದಿವೆ. ಅವುಗಳಲ್ಲಿ ವಕೀಲ ನೌಶಾದ್ ಕಾಸಿಂಜಿ ಹತ್ಯೆ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳ ಪಾತ್ರದ ಆರೋಪ, ಅಂಬಿಡೆಂಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣ ಸ್ವೀಕಾರ ಮತ್ತು ತನಿಖೆಯ ವಿಚಾರದಲ್ಲಿ ವಿವಾದ, ಅಪರಾಧಿಗಳೊಂದಿಗೆ ಸಂಪರ್ಕ ಹಾಗೂ ತನಿಖಾ ಮಾಹಿತಿಯನ್ನು ಸೋರಿಕೆ ಮಾಡಿದ ಆರೋಪಗಳು ಸೇರಿವೆ ಎಂದು ಪತ್ರದಲ್ಲಿ ಹೇಳಲಾಗಿದೆ.
DG ಅಥವಾ ADGP ದರ್ಜೆಯ ಅಧಿಕಾರಿ ಮುಖ್ಯಸ್ಥರಾಗಲಿ
SITಯ ಹೊಸ ಮುಖ್ಯಸ್ಥರಾಗಿ DG ಅಥವಾ ADGP ದರ್ಜೆಯ ಅಧಿಕಾರಿಯನ್ನೇ ನೇಮಿಸಬೇಕು ಎಂದು ಆಂದೋಲನ ಆಗ್ರಹಿಸಿದೆ. ಅಲ್ಲದೆ, ಸುಪ್ರೀಂ ಕೋರ್ಟ್ ಸೂಚನೆಯಂತೆ ತಂಡದಲ್ಲಿ ತಾಂತ್ರಿಕ ಪರಿಣತಿ ಹೊಂದಿರುವ ಫೋರೆನ್ಸಿಕ್ ತಜ್ಞರೂ ಇರಬೇಕು ಎಂದು ಮನವಿ ಮಾಡಿದೆ.
ಭ್ರಷ್ಟಾಚಾರ, ಕರ್ತವ್ಯಲೋಪ, ಮಹಿಳೆಯರ ವಿಚಾರದಲ್ಲಿ ಅಸೂಕ್ಷ್ಮತೆ ಹಾಗೂ ಕೋಮುವಾದಿ ಶಕ್ತಿಗಳೊಂದಿಗೆ ನೇರ ಸಂಪರ್ಕದ ಆರೋಪಗಳನ್ನು ಹೊಂದಿರುವ ಯಾವುದೇ ಅಧಿಕಾರಿಯನ್ನು ತನಿಖಾ ತಂಡದಲ್ಲಿ ಸೇರಿಸಬಾರದು ಎಂದು ಆಂದೋಲನ ಒತ್ತಾಯಿಸಿದೆ.
ದಶಕಗಳ ಬಳಿಕ ಸೌಜನ್ಯ ಪ್ರಕರಣದ ಮರುತನಿಖೆಗೆ ಅವಕಾಶ ದೊರೆತಿರುವ ಹಿನ್ನೆಲೆಯಲ್ಲಿ, ಯಾವುದೇ ಸ್ಥಳೀಯ ಪ್ರಭಾವ ಅಥವಾ ಹಿಂದಿನ ತನಿಖೆಯ ಲೋಪಗಳಿಗೆ ಒಳಗಾಗದ, ನಿಷ್ಪಕ್ಷಪಾತ ಮತ್ತು ವಿಶ್ವಾಸಾರ್ಹ ಅಧಿಕಾರಿಗಳ ತಂಡವನ್ನು ರಚಿಸಿ ಪಾರದರ್ಶಕ ತನಿಖೆಗೆ ಅವಕಾಶ ಕಲ್ಪಿಸಬೇಕು ಎಂದು ಮುಖ್ಯಮಂತ್ರಿ ಹಾಗೂ ಗೃಹ ಸಚಿವರನ್ನು ಕೋರಲಾಗಿದೆ.

