ನಮ್ಮ ದೇಶದಲ್ಲಿ ಎಂಥಹ ನಾಯಕನಿದ್ದಾನೆ. ಆತ ದೇಶವನ್ನು ಹೇಗೆ ಮಂಗ ಮಾಡುತ್ತಿದ್ದಾನೆ ಅಂದರೆ 2019ರಲ್ಲಿ ಗುಹೆ ಸೇರಿಕೊಂಡ. ಈಗ ಕ್ಯಾಮರಾ ಹಿಡಿದುಕೊಂಡು ನೀರೊಳಗೆ ಸೇರಿದ್ದಾನೆ. ಮುಂದಿನ ಚುನಾವಣೆಗೆ ಚಂದ್ರನ ಮೇಲೆ ನಿಂತುಕೊಳ್ಳುತ್ತಾನೆ ಎಂದು ಹೆಸರೆತ್ತದೆ ಪರೋಕ್ಷವಾಗಿ ಪ್ರಧಾನಿ ಮೋದಿ ವಿರುದ್ಧ ಪ್ರಕಾಶ್ ರೈ ವಾಗ್ದಾಳಿ ನಡೆಸಿದ್ದಾರೆ.
ಮಂಗಳೂರು ನಗರದ ತೊಕ್ಕೊಟ್ಟಿನ ಯುನಿಟಿ ಮೈದಾನದಲ್ಲಿ ನಡೆದ ಡಿವೈಎಫ್ಐ 12ನೇ ರಾಜ್ಯ ಸಮ್ಮೇಳನದಲ್ಲಿ ಭಾಗವಹಿಸಿದ ಬಹುಭಾಷಾ ನಟ ಪ್ರಕಾಶ್ ರಾಜ್, ಹಿಂದೆ ಸ್ವಾತಂತ್ರ್ಯಕ್ಕಾಗಿ ಉಪವಾಸ ಮಾಡುವ ನಾಯಕರಿದ್ದರು. ಆದರೆ ಈಗ ದೇವಸ್ಥಾನದ ಉದ್ಘಾಟನೆಗೆ ಉಪವಾಸ ಮಾಡುವ ನಾಯಕನಿದ್ದಾನೆ. ನಮ್ಮ ದೇಶದಲ್ಲಿ ಎಂಥಹ ನಾಯಕನಿದ್ದಾನೆ. ಆತ ದೇಶವನ್ನು ಹೇಗೆ ಮಂಗ ಮಾಡುತ್ತಿದ್ದಾನೆ ಅಂದರೆ 2019ರಲ್ಲಿ ಗುಹೆ ಸೇರಿಕೊಂಡ. ಈಗ ಕ್ಯಾಮರಾ ಹಿಡಿದುಕೊಂಡು ನೀರೊಳಗೆ ಸೇರಿದ್ದಾನೆ. ಮುಂದಿನ ಚುನಾವಣೆಗೆ ಚಂದ್ರನ ಮೇಲೆ ನಿಂತುಕೊಳ್ಳುತ್ತಾನೆ. ದಿನಕ್ಕೆ ಐದು ಕಾಸ್ಟ್ಯೂಮ್ ಚೇಂಜ್ ಮಾಡುತ್ತಾನೆ. ಕರ್ಕಶವಾದ ಲೌಡ್ ಸ್ಪೀಕರ್ ಅವನು. ಈತ ವಂದೇ ಭಾರತ್‌ಗೆ ಬಾವುಟ ತೋರಿಸಿದಷ್ಟು ಬಾವುಟವನ್ನು ಸ್ಟೇಷನ್ ಮಾಸ್ಟರ್ ಸಹ ತೋರಿಸಿರಲಿಕ್ಕಿಲ್ಲ ಎಂದು ಏಕವಚನದಲ್ಲಿಯೇ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಕಲಾವಿದನಾಗಿ ಮಾತನಾಡಬೇಕಾಗುವುದು ನನ್ನ ಜವಾಬ್ದಾರಿ. ಸಮಸ್ಯೆಗಳಾದಾಗ ಬಂದು ನಾನು ನಿಲ್ಲಬೇಕಿದೆ. ದೇಹಕ್ಕಾದ ಗಾಯಗಳು ಸುಮ್ಮನಿದ್ದರೂ ಶಮನವಾಗುತ್ತದೆ. ಆದರೆ ದೇಶಕ್ಕಾದ ಗಾಯ ನಾವು ಸುಮ್ಮನಿದ್ದಷ್ಟು ಹೆಚ್ಚಾಗುತ್ತದೆ. ಒಬ್ಬ ಕಲಾವಿದ ಮೌನವಾದರೆ ಇಡೀ ಸಮಾಜ ಮೌನವಾದಂತೆ. ಪ್ರಜಾಪ್ರಭುತ್ವದಲ್ಲಿ ಅಧಿಕಾರ ಕೊಟ್ಟವರಲ್ಲಿ ಅಧಿಕಾರದ ಶಕ್ತಿ ಇದೆ. ಪ್ರಜಾಪ್ರಭುತ್ವದಲ್ಲಿ ಸೂಕ್ಷ್ಮತೆ ಇರಬೇಕು ಎಂದು ನಟ ಪ್ರಕಾಶ್ ರೈ ಹೇಳಿದರು.
ಆರೆಸ್ಸೆಸ್ ಅಜೆಂಡಾದಂತೆ ಹಿಂದೂ ರಾಷ್ಟ್ರದ ಉದ್ದೇಶಕ್ಕಾಗಿ ಹಿಂದಿ ಹೇರಿಕೆ ಮಾಡಲಾಗುತ್ತಿದೆ. ಹಾಗೆಂದು ಈ ದೇಶ ಹಿಂದೂ ರಾಷ್ಟ್ರವಾಗಿ ಉಳಿಯದೆ ಬ್ರಾಹ್ಮಣ, ಕ್ಷತ್ರಿಯರು, ಶೂದ್ರರು ಎಂಬ ತಾರತಮ್ಯ ಶುರು ಆಗಲಿದೆ. ಇವರಿಗೆ ನಮ್ಮ ಮುಂದಿನ ಭವಿಷ್ಯದ ಬಡತನ, ಹಸಿವು, ನಿರುದ್ಯೋಗ ಅರ್ಥ ಆಗದು. ನಾವು ಪ್ರಶ್ನೆ ಮಾಡಬೇಕಾಗಿರುವುದು ಇದನ್ನು ಎಂದವರು ಹೇಳಿದರು.