ಬೆಂಗಳೂರು ಸೆ. 22: ಧರ್ಮಸ್ಥಳದಲ್ಲಿ ನಡೆದಿರುವ ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಹೊಸದಾಗಿ ಪತ್ತೆಯಾಗಿರುವ ಸಂಗತಿಗಳು ಈಗಾಗಲೇ ರಚಿಸಲಾಗಿರುವ ವಿಶೇಷ ತನಿಖಾ ತಂಡದ (SIT) ತನಿಖಾ ವ್ಯಾಪ್ತಿಗೆ ಸ್ವಯಂಚಾಲಿತವಾಗಿ ಒಳಪಡುವುದಿಲ್ಲ. ಹೀಗಾಗಿ ಈ ಪ್ರಕರಣಗಳ ತನಿಖೆಯನ್ನು ಕಾನೂನುಬದ್ಧವಾಗಿ ಎಸ್‌ಐಟಿ ವ್ಯಾಪ್ತಿಗೆ ತರಲು ಸರ್ಕಾರ ಸೂಕ್ತ ಆದೇಶ ಹೊರಡಿಸಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗ ಶಿಫಾರಸು ಮಾಡಿದೆ.
ಆಯೋಗವು ಸರ್ಕಾರಕ್ಕೆ ನೀಡಿರುವ ಶಿಫಾರಸಿನಲ್ಲಿ, ಉಲ್ಲೇಖಿತ 30 ಯು.ಡಿ.ಆರ್. ಪ್ರಕರಣಗಳ ವ್ಯತ್ಯಾಸ ಹಾಗೂ ಬೆಳ್ತಂಗಡಿ ಯು.ಡಿ.ಆರ್. ಸಂಖ್ಯೆ 69/2003ರ ದಾಖಲೆಗಳನ್ನು ಪರಿಶೀಲಿಸಿ ನಿಖರ ತನಿಖೆ ನಡೆಸುವಂತೆ ಸೂಚಿಸಬೇಕು ಎಂದು ತಿಳಿಸಿದೆ.
ಅಲ್ಲದೆ, ಪತ್ತೆಯಾಗಿರುವ ಏಳು ಮಾನವ ಅಸ್ಥಿಪಂಜರಗಳ ಡಿಎನ್‌ಎ ಹಾಗೂ ವಿಧಿವಿಜ್ಞಾನ ವರದಿಗಳನ್ನು ಶೀಘ್ರವಾಗಿ ಪಡೆದು, ಅವು ಮೃತರದ್ದೇ ಎಂಬುದನ್ನು ಹಾಗೂ ಮೃತರ ಗುರುತನ್ನು ಪತ್ತೆಹಚ್ಚುವಂತೆ ಕ್ರಮ ಕೈಗೊಳ್ಳಬೇಕು ಎಂದು ಮಹಿಳಾ ಆಯೋಗ ಶಿಫಾರಸು ಮಾಡಿದೆ.
ಎಸ್‌ಐಟಿ ವ್ಯಾಪ್ತಿಗೆ ತರಲು ಸರ್ಕಾರದ ಆದೇಶ ಅಗತ್ಯ
ಈ ಎಲ್ಲಾ ಪ್ರಕರಣಗಳು ಮತ್ತು ವಿಷಯಗಳನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕರ ಮುಖಾಂತರ ಈಗಾಗಲೇ ರಚಿಸಲಾಗಿರುವ ವಿಶೇಷ ತನಿಖಾ ತಂಡಕ್ಕೆ ವಹಿಸಬೇಕು. ಅಗತ್ಯವಿದ್ದಲ್ಲಿ ಎಸ್‌ಐಟಿ ತನಿಖೆಯ ವ್ಯಾಪ್ತಿಯನ್ನು (Terms of Reference) ವಿಸ್ತರಿಸಿ ಸೂಕ್ತ ಸರ್ಕಾರಿ ಆದೇಶ ಹೊರಡಿಸಬೇಕು ಎಂದು ಆಯೋಗ ಹೇಳಿದೆ.
ಮೂಲ ದಾಖಲೆಗಳನ್ನು ಸುರಕ್ಷಿತವಾಗಿಡಲು ಸೂಚನೆ
ತನಿಖೆಗೆ ಸಂಬಂಧಿಸಿದ ಎಲ್ಲಾ ಮೂಲ ದಾಖಲೆಗಳು, ರಿಜಿಸ್ಟರ್‌ಗಳು ಹಾಗೂ ಪ್ರಮುಖ ವರದಿಗಳು ಸುರಕ್ಷಿತವಾಗಿರುವಂತೆ ಆಡಳಿತಾತ್ಮಕ ನಿರ್ದೇಶನ ನೀಡಬೇಕು ಎಂದು ಕೂಡ ಮಹಿಳಾ ಆಯೋಗ ಶಿಫಾರಸು ಮಾಡಿದೆ.
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಪ್ರಕರಣಗಳನ್ನು ಎಸ್‌ಐಟಿಗೆ ವರ್ಗಾಯಿಸುವುದು ಹಾಗೂ ತನಿಖೆಯ ವ್ಯಾಪ್ತಿಯನ್ನು ವಿಸ್ತರಿಸುವ ಕುರಿತು ಕಾಲಮಿತಿಯೊಳಗೆ ಸೂಕ್ತ ಸರ್ಕಾರಿ ಆದೇಶ ಹೊರಡಿಸುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಆಯೋಗ ಮನವಿ ಮಾಡಿದೆ.

