ರಾಜ್ಯಸಭೆ ಚುನಾವಣೆ ಮತ ಎಣಿಕೆ ಮುಕ್ತಾಯಗೊಂಡಿದೆ. ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಮೂರು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಬಿಜೆಪಿಯಿಂದ ಅಖಾಡಕ್ಕೆ ಇಳಿದಿದ್ದ ಓರ್ವ ಅಭ್ಯರ್ಥಿಗೆ ಗೆಲುವಾಗಿದೆ.
ಇನ್ನು ಚುನಾವಣೆಯಲ್ಲಿ ಬಿಜೆಪಿ ಶಾಸಕರಾದ ಎಸ್ ಟಿ ಸೋಮಶೇಖರ್ ಅಡ್ಡ ಮತದಾನ ಮಾಡಿದರೆ ಮತ್ತೋರ್ವ ಶಾಸಕ ಶಿವರಾಂ ಹೆಬ್ಬಾರ್ ಗೈರಾಗಿದ್ದಾರೆ. ಈ ಮೂಲಕ ನಿರೀಕ್ಷೆಯಂತೆ ಮೈತ್ರಿ ಅಭ್ಯರ್ಥಿ ಕುಪೇಂದ್ರ ರೆಡ್ಡಿಗೆ ಸೋಲಾಗಿದೆ. ರಾಜ್ಯಸಭೆ ಚುನಾವಣೆಯಲ್ಲಿ ಫಲಿತಾಂಶಕ್ಕೂ ಮುನ್ನವೇ ಪರೋಕ್ಷವಾಗಿ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಸೋಲನ್ನು ಒಪ್ಪಿಕೊಂಡಿದ್ದರು.
ಬೆಳಗ್ಗೆ 9 ಗಂಟೆಗೆ ಮತದಾನ ಆರಂಭಗೊಂಡಿತ್ತು. ಕಾಂಗ್ರೆಸ್ 134 ಸದಸ್ಯರು ಬಂದು ಮತದಾನ ಮಾಡಿದರು. ಜೊತೆಗೆ ನಾಲ್ವರು ಪಕ್ಷೇತರ ಶಾಸಕರು ಕೂಡಾ ಕಾಂಗ್ರೆಸ್ ಗೆ ಮತ ಚಲಾಯಿಸಿದ್ದಾರೆ. ಇನ್ನು ಬಿಜೆಪಿ ಅಸಮಾಧಾನಿತ ಶಾಸಕ ಎಸ್ ಟಿ ಸೋಮಶೇಖರ್ ಅಡ್ಡ ಮತದಾನ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಮತ್ತೋರ್ವ ಶಾಸಕ ಶಿವರಾಂ ಹೆಬ್ಬಾರ್ ಮತದಾನ ಮಾಡಲು ಆಗಮಿಸಲಿಲ್ಲ. ಇಬ್ಬರು ಶಾಸಕರ ನಡೆ ಬಿಜೆಪಿಗೆ ಮುಜುಗರ ಉಂಟು ಮಾಡಿದ್ದು, ಈ ಇಬ್ಬರು ನಾಯಕರ ವಿರುದ್ಧ ಕ್ರಮಕ್ಕೆ ಮುಂದಾದ ರಾಜ್ಯ ಬಿಜೆಪಿ ನಾಯಕರು ನಾಳೆ ವಿಧಾನಸಭೆ ಸ್ಪೀಕರ್ ಯುಟಿ ಖಾದರ್ಗೆ ದೂರು ನೀಡಲು ಮುಂದಾಗಿದ್ದಾರೆ.
ಕೆಆರ್ಪಿಪಿ ಶಾಸಕರಾದ ಗಾಲಿ ಜನಾರ್ದನ ರೆಡ್ಡಿ, ದರ್ಶನ್ ಪುಟ್ಟಣ್ಣಯ್ಯ, ಪುಟ್ಟ ಸಿದ್ದೇಗೌಡ, ಲತಾ ಮಲ್ಲಿಕಾರ್ಜುನ ಅವರು ಕಾಂಗ್ರೆಸ್ ಅನ್ನು ಬೆಂಬಲಿಸಿದ್ದು, ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತ ಚಲಾಯಿಸಿದ್ದಾರೆ. ಅಲ್ಲದೆ, ಕಾಂಗ್ರೆಸ್ನ ಯಾವೊಬ್ಬ ಶಾಸಕರೂ ಅಡ್ಡ ಮತದಾನ ಮಾಡದೇ ಇದ್ದಿದ್ದರಿಂದ ನಿರಾಯಾಸವಾಗಿ ಗೆಲುವನ್ನು ಪಡೆದುಕೊಂಡಿದೆ.
ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿಗಳ ಪೈಕಿ ಅಜಯ್ ಮಕನ್ ಗೆ 47, ಸೈಯದ್ ನಾಸೆರ್ ಹುಸೇನ್ ಗೆ 47 ಹಾಗೂ ಜಿ.ಸಿ ಚಂದ್ರಶೇಖರ್ ಗೆ 45 ಮತಗಳು ಬಿದ್ದಿವೆ. ಇನ್ನು ಬಿಜೆಪಿ ಅಭ್ಯರ್ಥಿ ನಾರಾಯಣ ಸಾ ಭಾಂಡಗೆಗೆ 48 ಮತಗಳು ಬಿದ್ದಿದ್ದು ಮೈತ್ರಿ ಅಭ್ಯರ್ಥಿ ಕುಪೇಂದ್ರ ರೆಡ್ಡಿಗೆ 35 ಮತಗಳು ಸಿಕ್ಕಿವೆ ಎಂದು ಚುನಾವಣಾಧಿಕಾರಿಗಳು ಘೋಷಣೆ ಮಾಡಿದ್ದಾರೆ.
ಇನ್ನು ಬಿಜೆಪಿ-ಜೆಡಿಎಸ್ ಮೈತ್ರಿ ಇದು ಎರಡನೇ ಸೋಲಾಗಿದೆ. ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲೂ ಸಹ ಮೈತ್ರಿ ಅಭ್ಯರ್ಥಿ ರಂಗನಾಥ್ , ಕಾಂಗ್ರೆಸ್ನ ಪುಟ್ಟಣ್ಣ ವಿರುದ್ಧ ಸೋಲುಕಂಡಿದ್ದರು.