ಬೆಂಗಳೂರು ಸೆ.9: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಯಶವಂತಪುರದ APMC ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿ ರೈತರು, ಈರುಳ್ಳಿ–ಬೆಳ್ಳುಳ್ಳಿ ವರ್ತಕರು ಹಾಗೂ ಹಮಾಲಿ ಕಾರ್ಮಿಕರ ಸಮಸ್ಯೆಗಳನ್ನು ನೇರವಾಗಿ ಆಲಿಸಿರುವ ಕ್ರಮಕ್ಕೆ ರಾಜ್ಯ ಉಚ್ಚ ನ್ಯಾಯಾಲಯದಿಂದಲೇ ಮೆಚ್ಚುಗೆ ವ್ಯಕ್ತವಾಗಿದೆ.
ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಶ್ರೀಶಾನಂದ ಅವರು ಸಿಎಂ ಅವರ APMC ಭೇಟಿಯನ್ನು ಶ್ಲಾಘಿಸಿ, ‘ನಿಶ್ಚಿತವಾಗಿ ಇದೊಂದು ಗ್ರೇಟ್ ಜಾಬ್’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಾರ್ಮಿಕರ ವಿಷಯಕ್ಕೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆ ನಡೆಸುತ್ತಿದ್ದ ಅವರು, ಮುಖ್ಯಮಂತ್ರಿಗಳು ಸ್ವತಃ ತಾವೇ ಎಪಿಎಂಸಿಗೆ ತೆರಳಿ ಕಾರ್ಮಿಕರ ಕಷ್ಟ ಆಲಿಸಿದ್ದಾರೆ. ಈರುಳ್ಳಿ, ಬೆಳ್ಳುಳ್ಳಿ ವರ್ತಕರು, ಕಾರ್ಮಿಕರ ಕಷ್ಟ ಆಲಿಸಿದ್ದಾರೆ. ಕಾರ್ಮಿಕ ಮಹಿಳೆಯರ ಜೊತೆ ಕುಳಿತು ಕಷ್ಟ ಕೇಳಿದ್ದಾರೆ. ಇದೊಂದು ಒಳ್ಳೆಯ ಕೆಲಸ ಎಂದು ಮುಕ್ತ ಕಂಠದಿಂದ ಶ್ಲಾಘಿಸಿದರು.
ಮಂಗಳವಾರ ಬೆಳಗ್ಗೆ ಯಶವಂತಪುರ APMCಗೆ ದಿಢೀರ್ ಭೇಟಿ ನೀಡಿದ್ದ ಸಿಎಂ, ಮಾರುಕಟ್ಟೆಯ ವಿವಿಧ ವಿಭಾಗಗಳಿಗೆ ತೆರಳಿ ರೈತರು, ವರ್ತಕರು, ಮಧ್ಯವರ್ತಿಗಳು ಹಾಗೂ ಕಾರ್ಮಿಕರೊಂದಿಗೆ ನೇರವಾಗಿ ಮಾತುಕತೆ ನಡೆಸಿದ್ದರು. ಈರುಳ್ಳಿ, ಬೆಳ್ಳುಳ್ಳಿ, ಆಲೂಗಡ್ಡೆ ಹಾಗೂ ಶುಂಠಿ ಮಂಡಿಗಳಲ್ಲಿ ವಹಿವಾಟು, ಬೆಲೆ, ಕಮಿಷನ್, ಸಾಗಣೆ, ತೂಕ ಹಾಗೂ ಮಾರುಕಟ್ಟೆಯ ಮೂಲಸೌಕರ್ಯಗಳ ಕುರಿತು ಮಾಹಿತಿ ಪಡೆದಿದ್ದರು.
ವಿಶೇಷವಾಗಿ ಮಹಿಳಾ ಕೂಲಿ ಕಾರ್ಮಿಕರೊಂದಿಗೆ ಕುಳಿತು ಅವರ ದಿನನಿತ್ಯದ ಸಂಕಷ್ಟಗಳನ್ನು ಸಿಎಂ ಆಲಿಸಿದ್ದಲ್ಲದೆ, ಮನೆ, ಬಾಡಿಗೆ, ವಿದ್ಯುತ್ ಬಿಲ್, ಸರ್ಕಾರದ ಸೌಲಭ್ಯಗಳು ಸೇರಿದಂತೆ ಹಲವು ವಿಚಾರಗಳ ಕುರಿತು ಅವರಿಂದ ಮಾಹಿತಿ ಪಡೆದರು. ಬಳಿಕ ಕಾರ್ಮಿಕರೊಂದಿಗೆ ರಸ್ತೆಬದಿಯ ಸಣ್ಣ ಹೋಟೆಲ್‌ನಲ್ಲಿ ಕುಳಿತು ಉಪಾಹಾರ ಸೇವಿಸಿದ್ದು ಕೂಡ ಗಮನ ಸೆಳೆದಿತ್ತು
ರೈತರು ಮತ್ತು ಕಾರ್ಮಿಕರಿಂದ ಬಂದ ದೂರುಗಳ ಹಿನ್ನೆಲೆಯಲ್ಲಿ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮಾರುಕಟ್ಟೆಯ ಮೂಲಸೌಕರ್ಯಗಳ ಬಗ್ಗೆಯೂ ಸಿಎಂ ಪರಿಶೀಲನೆ ನಡೆಸಿದ್ದರು. ರೈತರಿಗೆ ಹಾಗೂ ವರ್ತಕರಿಗೆ ನ್ಯಾಯ ದೊರಕಬೇಕು, ಮಧ್ಯವರ್ತಿಗಳ ಹಾವಳಿ ನಿಯಂತ್ರಣವಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದರು.
ಇಷ್ಟೇ ಅಲ್ಲದೆ, ಮಾರುಕಟ್ಟೆಯಲ್ಲಿ ಬಾಲಕಾರ್ಮಿಕರು ಕೆಲಸ ಮಾಡುತ್ತಿರುವ ಬಗ್ಗೆ ದೂರು ಬಂದ ತಕ್ಷಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಸಿಎಂ ಭೇಟಿಯ ಬಳಿಕ ನಡೆದ ಕಾರ್ಯಾಚರಣೆಯಲ್ಲಿ ಯಶವಂತಪುರ APMCಯಲ್ಲಿ ಕೆಲಸ ಮಾಡುತ್ತಿದ್ದ 19 ಅಪ್ರಾಪ್ತರನ್ನು ರಕ್ಷಿಸಲಾಗಿದ್ದು, ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

