ಬೆಂಗಳೂರು : ನಗರದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ ಮತ್ತು ಅವ್ಯವಸ್ಥಿತ ಪಾರ್ಕಿಂಗ್‌ಗೆ ಕಡಿವಾಣ ಹಾಕಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಗೆ ಸಮಗ್ರ ಪಾರ್ಕಿಂಗ್ ನಿಯಮಗಳನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಸಂಬಂಧ ಕರಡು ಪಾರ್ಕಿಂಗ್ ನಿಯಮಗಳನ್ನು ಸಾರ್ವಜನಿಕ ಸಲಹೆಗಾಗಿ ಪ್ರಕಟಿಸಲಾಗಿದ್ದು, ಸೆಪ್ಟೆಂಬರ್ 10ರೊಳಗೆ ಸಾರ್ವಜನಿಕರು ತಮ್ಮ ಸಲಹೆ ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ.
ಬೆಂಗಳೂರಿನಲ್ಲಿ ಪ್ರಸ್ತುತ 1.28 ಕೋಟಿಗೂ ಹೆಚ್ಚು ನೋಂದಾಯಿತ ವಾಹನಗಳಿದ್ದು, ಹೊರ ರಾಜ್ಯಗಳಲ್ಲಿ ನೋಂದಣಿಯಾಗಿ ನಗರದಲ್ಲಿ ಸಂಚರಿಸುವ ಅಂದಾಜು 15–20 ಲಕ್ಷ ವಾಹನಗಳೂ ಇವೆ. ಹೀಗಾಗಿ ನಗರದಲ್ಲಿ ಸುಮಾರು 1.5 ಕೋಟಿ ವಾಹನಗಳಿದ್ದು, ಇವುಗಳಲ್ಲಿ ಶೇ.95ರಷ್ಟು ಸಮಯ ಮನೆ, ಕಚೇರಿ ಅಥವಾ ಇತರ ಸ್ಥಳಗಳಲ್ಲಿ ನಿಲುಗಡೆಯಾಗಿರುತ್ತವೆ ಎಂದು ಕರಡು ದಾಖಲೆಯಲ್ಲಿ ಹೇಳಲಾಗಿದೆ. ಅವ್ಯವಸ್ಥಿತ ಪಾರ್ಕಿಂಗ್‌ನಿಂದ ರಸ್ತೆಗಳ ಸಂಚಾರ ಸಾಮರ್ಥ್ಯ ಕುಸಿಯುತ್ತಿದ್ದು, ಸಂಚಾರ ದಟ್ಟಣೆ ಹೆಚ್ಚುವುದರ ಜತೆಗೆ ಪಾದಚಾರಿಗಳಿಗೂ ತೊಂದರೆ ಉಂಟಾಗುತ್ತಿದೆ.
ಖಾಲಿ ನಿವೇಶನಗಳನ್ನು ಪಾರ್ಕಿಂಗ್‌ಗೆ ಬಳಸಲು ತೆರಿಗೆ ವಿನಾಯಿತಿ
ಹೊಸ ನಿಯಮಗಳ ಪ್ರಮುಖ ಅಂಶವೆಂದರೆ ಖಾಲಿ ನಿವೇಶನಗಳನ್ನು ಪಾರ್ಕಿಂಗ್ ಸೌಲಭ್ಯಗಳಾಗಿ ಪರಿವರ್ತಿಸಲು ಪ್ರೋತ್ಸಾಹ ನೀಡುವುದು. ಬಹುಹಂತದ ಕಾರ್ ಪಾರ್ಕಿಂಗ್ (MLCP) ಅಥವಾ ಯಾಂತ್ರೀಕೃತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ ಖಾಲಿ ನಿವೇಶನಗಳಿಗೆ ಶೇ.100ರಷ್ಟು ಆಸ್ತಿ ತೆರಿಗೆ ವಿನಾಯಿತಿ ನೀಡುವ ಪ್ರಸ್ತಾವವಿದೆ. ನೆಲಮಟ್ಟದ ಪಾರ್ಕಿಂಗ್‌ಗೆ ಬಳಸುವ ಖಾಲಿ ನಿವೇಶನಗಳಿಗೆ ಶೇ.50ರಷ್ಟು ಆಸ್ತಿ ತೆರಿಗೆ ವಿನಾಯಿತಿ ನೀಡಲು ಉದ್ದೇಶಿಸಲಾಗಿದೆ.
ಪಾರ್ಕಿಂಗ್‌ಗೆ ಶುಲ್ಕ: ರಸ್ತೆಯ ವರ್ಗೀಕರಣ ಆಧಾರ
ಮುಂದಿನ ದಿನಗಳಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಶುಲ್ಕ ಆಧಾರಿತವಾಗಿ ವೈಜ್ಞಾನಿಕವಾಗಿ ನಿರ್ವಹಿಸುವ ಉದ್ದೇಶವಿದೆ. ರಸ್ತೆಯ ವರ್ಗೀಕರಣ ಹಾಗೂ ಪಾರ್ಕಿಂಗ್ ಸ್ಥಳದ ವಿವಿಧ ಅಂಶಗಳನ್ನು ಪರಿಗಣಿಸಿ ಶುಲ್ಕ ನಿಗದಿಪಡಿಸಲಾಗುತ್ತದೆ.
ಸಾರ್ವಜನಿಕ ರಸ್ತೆಯ ಹೊರಗಿನ ಪಾರ್ಕಿಂಗ್ ಸೌಲಭ್ಯಗಳನ್ನು ಪ್ರತಿದಿನ ಬಳಸುವವರಿಗೆ ಮಾಸಿಕ ಪಾರ್ಕಿಂಗ್ ಪಾಸ್ ವ್ಯವಸ್ಥೆಯನ್ನೂ ಕಲ್ಪಿಸುವ ಪ್ರಸ್ತಾವವಿದೆ. ಖಾಸಗಿ ವಾಹನಗಳಿಗಿಂತ ಸಾರ್ವಜನಿಕ ಸಾರಿಗೆ ಹೆಚ್ಚು ಆಕರ್ಷಕವಾಗುವಂತೆ ಪಾರ್ಕಿಂಗ್ ಶುಲ್ಕವನ್ನು ನಿಗದಿಪಡಿಸುವ ಉದ್ದೇಶವನ್ನು ಕರಡು ನಿಯಮಗಳು ಹೊಂದಿವೆ.
ಪ್ರಮುಖ ರಸ್ತೆಗಳಲ್ಲಿ ನೋ ಪಾರ್ಕಿಂಗ್
ಹೆಚ್ಚಿನ ಸಂಚಾರವಿರುವ ಪ್ರಮುಖ ರಸ್ತೆಗಳಲ್ಲಿ ಪಾರ್ಕಿಂಗ್ ನಿಷೇಧಿಸುವ ಪ್ರಸ್ತಾವವಿದೆ. ಸಂಚಾರ ದಟ್ಟಣೆಯ ಗರಿಷ್ಠ ಅವಧಿಯಲ್ಲಿ ಪ್ರಮುಖ ರಸ್ತೆಗಳಲ್ಲಿ ಪಾರ್ಕಿಂಗ್‌ಗೆ ನಿರ್ಬಂಧ ವಿಧಿಸುವ ಮೂಲಕ ಟ್ರಾಫಿಕ್ ಸುಧಾರಿಸಲು ಉದ್ದೇಶಿಸಲಾಗಿದೆ.
ಬಹುಹಂತದ ಕಾರ್ ಪಾರ್ಕಿಂಗ್ ಸೌಲಭ್ಯಗಳ ಬಳಕೆಯನ್ನು ಉತ್ತೇಜಿಸಲು ಅವುಗಳ ಸುತ್ತಮುತ್ತಲಿನ ರಸ್ತೆಗಳಲ್ಲಿ ಪಾರ್ಕಿಂಗ್ ಮಾಡುವುದನ್ನೂ ನಿರ್ಬಂಧಿಸುವ ಪ್ರಸ್ತಾವವಿದೆ.
ರಸ್ತೆಯ ಜಾಗವನ್ನು ದೀರ್ಘಕಾಲ ಆಕ್ರಮಿಸಿಕೊಂಡು ವಾಹನ ನಿಲ್ಲಿಸುವುದನ್ನು ತಡೆಯಲು ದೀರ್ಘಾವಧಿಯ ಪಾರ್ಕಿಂಗ್‌ಗೆ ಹೆಚ್ಚಿನ ಶುಲ್ಕ ವಿಧಿಸುವ ಉದ್ದೇಶವೂ ಕರಡು ನಿಯಮಗಳಲ್ಲಿದೆ.
ಪಾರ್ಕಿಂಗ್ ನಿಯಮ ಉಲ್ಲಂಘಿಸಿದ ಕಟ್ಟಡ ಮಾಲೀಕರ ವಿರುದ್ಧ ಕ್ರಮ
ಕಟ್ಟಡ ನಿರ್ಮಾಣದ ವೇಳೆ ಕಡ್ಡಾಯವಾಗಿ ಒದಗಿಸಬೇಕಾದ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸದಿದ್ದರೆ ಅಥವಾ ನಿಗದಿತ ಪಾರ್ಕಿಂಗ್ ಪ್ರದೇಶವನ್ನು ಬೇರೆ ವಾಣಿಜ್ಯ ಉದ್ದೇಶಕ್ಕೆ ಬಳಸಿದರೆ ಕಟ್ಟಡ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲು ಪ್ರಸ್ತಾವಿಸಲಾಗಿದೆ.
ನಗರದ ಹಲವು ಕಟ್ಟಡಗಳಲ್ಲಿ ಕಡ್ಡಾಯ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸದೆ ನಿರ್ಮಾಣ ಮಾಡಿರುವುದು ಮತ್ತು ನಿಗದಿತ ಪಾರ್ಕಿಂಗ್ ಸ್ಥಳಗಳನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸುತ್ತಿರುವುದು ಸಮಸ್ಯೆಯಾಗಿ ಗುರುತಿಸಲಾಗಿದೆ.
ಪೊಲೀಸ್, ಪಾಲಿಕೆಗಳಿಗೆ ಜಾರಿ ಅಧಿಕಾರ
ಗ್ರೇಟರ್ ಬೆಂಗಳೂರು ಪ್ರದೇಶದ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಪಾರ್ಕಿಂಗ್ ನಿಯಮಗಳನ್ನು ಜಾರಿಗೊಳಿಸಲು ಪೊಲೀಸ್ ಮತ್ತು ನಗರಪಾಲಿಕೆಗಳಂತಹ ಸಕ್ಷಮ ಪ್ರಾಧಿಕಾರಗಳಿಗೆ ಅಧಿಕಾರ ನೀಡುವ ಪ್ರಸ್ತಾವವಿದೆ. ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಕಟ್ಟಡ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಪಾರ್ಕಿಂಗ್ ಆದಾಯವನ್ನು ರಸ್ತೆ ಅಭಿವೃದ್ಧಿಗೆ ಬಳಸಲು ಪ್ರಸ್ತಾವ
ಪಾರ್ಕಿಂಗ್ ಮೂಲಕ ಸಂಗ್ರಹವಾಗುವ ಆದಾಯದ ವಿವರಗಳನ್ನು ನಿಯತಕಾಲಿಕವಾಗಿ ಪ್ರಕಟಿಸುವ ಮೂಲಕ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಖಚಿತಪಡಿಸುವ ಉದ್ದೇಶವಿದೆ. ಸಂಗ್ರಹವಾಗುವ ಆದಾಯವನ್ನು ಸಂಚಾರ ಸುಧಾರಣೆ, ಜಂಕ್ಷನ್ ಅಭಿವೃದ್ಧಿ, ರಸ್ತೆಗಳು ಮತ್ತು ಪಾದಚಾರಿ ಮಾರ್ಗಗಳ ದುರಸ್ತಿ ಕಾರ್ಯಗಳಿಗೆ ಬಳಸಲು ಉದ್ದೇಶಿಸಲಾಗಿದೆ.
ಸೆಪ್ಟೆಂಬರ್ 10ರೊಳಗೆ ಸಾರ್ವಜನಿಕರಿಂದ ಸಲಹೆ
ಕರಡು ಪಾರ್ಕಿಂಗ್ ನಿಯಮಗಳನ್ನು ಆಗಸ್ಟ್ 10ರಂದು ಸಾರ್ವಜನಿಕ ಸಲಹೆಗಾಗಿ ಪ್ರಕಟಿಸಲಾಗಿದೆ. ಸೆಪ್ಟೆಂಬರ್ 10 ಅಥವಾ ಅದಕ್ಕೂ ಮೊದಲು ಸಾರ್ವಜನಿಕರು ತಮ್ಮ ಸಲಹೆ, ಅಭಿಪ್ರಾಯ ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಬಹುದು. ಸಾರ್ವಜನಿಕರಿಂದ ಸ್ವೀಕರಿಸುವ ಪ್ರತಿಕ್ರಿಯೆಗಳನ್ನು ಪರಿಗಣಿಸಿದ ಬಳಿಕವೇ ನಿಯಮಗಳನ್ನು ಅಂತಿಮಗೊಳಿಸಲಾಗುವುದು ಎಂದು ನಗರಾಭಿವೃದ್ಧಿ ಇಲಾಖೆ ತಿಳಿಸಿದೆ.
ಬೆಂಗಳೂರಿನ ರಸ್ತೆ ಬದಿಯ ಅವ್ಯವಸ್ಥಿತ ಪಾರ್ಕಿಂಗ್‌ಗೆ ಕಡಿವಾಣ ಹಾಕುವುದು, ಖಾಸಗಿ ವಾಹನಗಳ ರಸ್ತೆ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು, ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸುವುದು ಮತ್ತು ಪಾರ್ಕಿಂಗ್ ಸೌಲಭ್ಯಗಳನ್ನು ಹೆಚ್ಚಿಸುವುದು ಕರಡು ನಿಯಮಗಳ ಪ್ರಮುಖ ಉದ್ದೇಶಗಳಾಗಿವೆ.

