ಬೆಂಗಳೂರು ಆ.12: ನೆರೆ ರಾಜ್ಯ ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ಆದೇಶವನ್ನು ವಿರೋಧಿಸಿ ವಾಟಾಳ್ ನಾಗರಾಜ್ ಆ.13ರ ಬುಧವಾರದಂದು ಕರೆ ಕೊಟ್ಟಿದ್ದ ಬಂದ್‌ಗೆ ಬಹುತೇಕ ಸಂಘಟನೆಗಳು ಬೆಂಬಲ ನೀಡಿಲ್ಲ.
ಹೀಗಾಗಿ ಬುಧವಾರ ಬಂದ್ ನಡೆಯುವುದು ಅನುಮಾನವಾಗಿದೆ. ವಾಟಾಳ್ ನಾಗರಾಜ್ ಅವರು ಕರೆಕೊಟ್ಟಿದ್ದ ಬಂದ್‌ಗೆ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ, ವಿವಿಧ ಕನ್ನಡ ಪರ ಸಂಘಟನೆಗಳು ಹಾಗೂ ವರ್ತಕರು ಬೆಂಬಲ ನೀಡಿಲ್ಲ. ಆದರೆ ಇದೇ ವೇಳೆ ಎಲ್ಲ ಸಂಘಟನೆಗಳು ನೀರು ಹರಿಸುವುದರ ವಿರುದ್ಧ ಹೋರಾಟ ನಡೆಸಲು ಮುಂದಾಗಿವೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಸದ್ಯ ಬಂದ್ ಅವಶ್ಯಕತೆ ಇಲ್ಲ. ಕಬಿನಿ ಜಲಾಶಯ ಭರ್ತಿಯಾಗಿ ತಮಿಳುನಾಡಿಗೆ ನೀರು ಹರಿಯುತ್ತಿದೆ. ಪ್ರಕೃತಿ ನಮ್ಮ ಪರವಾಗಿ ನಿಂತಿದೆ. ಹೀಗಾಗಿ ಸದ್ಯಕ್ಕೆ ಬಂದ್ ಬೇಡ. ಆದರೆ ತಮಿಳುನಾಡಿಗೆ ನೀರು ಹರಿಸಿದರೆ ಹೋರಾಟ ನಡೆಸಲಾಗುವುದು ಎಂದು ರೈತ ಸಂಘಟನೆಗಳು, ವಿವಿಧ ಕನ್ನಡ ಪರ ಸಂಘಟನೆ ಹಾಗೂ ವರ್ತಕರ ಸಂಘಗಳು ಹೇಳಿವೆ.
ಶಾಲೆ-ಕಾಲೇಜಿಗೆ ರಜೆ ಇಲ್ಲ: ಬಂದ್‌ಗೆ ವ್ಯಾಪಕ ಬೆಂಬಲ ದೊರೆಯದ ಹಿನ್ನೆಲೆಯಲ್ಲಿ ಯಾವುದೇ ಜಿಲ್ಲಾಧಿಕಾರಿಗಳು ಶಾಲೆ ಹಾಗೂ ಕಾಲೇಜುಗಳಿಗೆ ರಜೆ ಘೋಷಿಸಿಲ್ಲ. ಎಂದಿನಂತೆ ಶಾಲೆ ಹಾಗೂ ಕಾಲೇಜುಗಳು ನಡೆಯಲಿವೆ. ಆಸ್ಪತ್ರೆ, ಆಂಬುಲೆನ್ಸ್, ಮೆಡಿಕಲ್ ಶಾಪ್‌ಗಳು ತೆರೆದಿರುತ್ತವೆ. ಸಾರಿಗೆ ಸಂಸ್ಥೆಗಳು ಕೂಡ ಎಂದಿನಂತೆ ಬಸ್ ಸಂಚಾರ ಇರುತ್ತವೆ ಎಂದು ಹೇಳಿವೆ. ಹೀಗಾಗಿ ಬಂದ್ ನಡೆಯುವುದು ಅನುಮಾನವಾಗಿದೆ.
ಅಗತ್ಯ ಸರಕುಗಳಾದ ದಿನಸಿ ಅಂಗಡಿಗಳು, ಹಾಲು, ತರಕಾರಿ, ಮಾರುಕಟ್ಟೆಗಳು, ಬೇಕರಿ, ಜ್ಯೂಸ್ ಅಂಗಡಿಗಳು ಹಾಗೂ ಬೀದಿ ಬದಿ ವ್ಯಾಪಾರ ವಹಿವಾಟು ನಡೆಯಲಿದೆ. ವಾಣಿಜ್ಯ ವಲಯಗಳಾದ ಮಾಲ್‌ಗಳು, ಚಿತ್ರಮಂದಿರಗಳು, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಕೈಗಾರಿಕಾ ಕ್ಷೇತ್ರಗಳು ಹಾಗೂ ಸರ್ಕಾರಿ ಆಫೀಸ್‌ಗಳು ಎಂದಿನಂತೆ ತೆರೆದಿರುತ್ತವೆ.
ವಾಟಾಳ್ ನಾಗರಾಜ್ ಬೇಸರ:
ನಾಳಿನ ಬಂದ್ಗೆ ಕೆಲ ಸಂಘಟನೆಗಳು ಬೆಂಬಲ ವಾಪಸ್ ಪಡೆದಿದ್ದಕ್ಕೆ ವಾಟಾಳ್ ನಾಗರಾಜ್ ಬೇಸರ ವ್ಯಕ್ತಪಡಿಸಿದ್ದಾರೆ. ಮಂಡ್ಯದಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ವಾಟಾಳ್, ಬಂದ್ ಆಗಬೇಕು ಎಂದು ಮೊದಲು ಹೇಳಿದವರೇ ಅವರು. ವಾಟಾಳ್ ನೇತೃತ್ವದಲ್ಲಿ ಬಂದ್ ಆಗಬೇಕೆಂದು ಹೇಳಿದ್ದರು. ಆದರೆ ಕೊನೇ ಕ್ಷಣದಲ್ಲಿ ಹಿಂದೆ ಸರಿದು ಕೈಕೊಟ್ಟಿದ್ದಾರೆ. 9 ತಿಂಗಳ ಗರ್ಭಿಣಿ ಕೊನೇ ಕ್ಷಣದಲ್ಲಿ ಹೆರಿಗೆ ಬೇಡ ಅನ್ನುವಂತಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ಬಂದ್‌ಗೆ ಬೆಂಬಲ ನೀಡಿರುವವರು:
ವಾಟಾಳ್ ನಾಗರಾಜ್ ನೇತೃತ್ವದ ‘ಕನ್ನಡ ಸಂಘಟನೆಗಳ ಒಕ್ಕೂಟ’
ನ್ನಡ ಸೇನೆ, ಕನ್ನಡ ಜಾಗೃತಿ ವೇದಿಕೆ ಹಾಗೂ ಕೆಲವು ಸಣ್ಣಪುಟ್ಟ ಸಂಘಟನೆಗಳು ಮಾತ್ರ ಬಂದ್‌ಗೆ ಬೆಂಬಲ ನೀಡಿವೆ.
ಖಾಸಗಿ ಬಸ್ ಒಕ್ಕೂಟಗಳಿಂದ ಬಂದ್ಗೆ ನೈತಿಕ ಬೆಂಬಲ ನೀಡಿದೆ. ಅಲ್ಲದೆ ಕ್ಯಾಮ್ಸ್ ಹಾಗೂ ರುಪ್ಸಾ,
ಹೋಟೆಲ್ ಮಾಲೀಕರ ಸಂಘ, ಖಾಸಗಿ ಬಸ್ ಒಕ್ಕೂಟ, ಖಾಸಗಿ ಆಸ್ಪತ್ರೆಗಳು ನೈತಿಕ ಬೆಂಬಲ ಮಾತ್ರ ನೀಡಿವೆ.
ಬಂದ್‌ಗೆ ಬೆಂಬಲ ನೀಡದವರು:
ಕರವೇ ಪ್ರವೀಣ್ ಶೆಟ್ಟಿ ಬಣ, ಶಿವರಾಮೇಗೌಡ ಬಣ, ನಾರಾಯಣಗೌಡ ಬಣ, ಬಿಎಂಟಿಸಿ, ಕೆಎಸ್‌ಆರ್‌ಟಿಸಿ
ಆಟೋ, ಕ್ಯಾಬ್ ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿಲ್ಲ

