ಬೆಂಗಳೂರು, ಆ.01: ಬಿಡಿಎ ಆಗಲಿ, ಕಾರ್ಪೊರೇಷನ್ ನಿವೇಶನವಾಗಲಿ ಅದರ ಮಾಲೀಕರು ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಹೀಗಾಗಿ ನಿವೇಶನ ಪಡೆದ 5 ವರ್ಷದೊಳಗೆ ಅಲ್ಲಿ ಮನೆ ನಿರ್ಮಾಣ ಮಾಡಬೇಕು. ಕಟ್ಟದಿದ್ದರೆ, ಅದಕ್ಕೆ ದುಪ್ಪಟ್ಟು ತೆರಿಗೆ ಅಥವಾ ನಿವೇಶನ ಹಿಂಪಡೆಯಲಾಗುವುದು. ಮನೆ ಕಟ್ಟದೇ ಖಾಲಿ ಇಟ್ಟುಕೊಂಡರೆ ಅಲ್ಲಿ ಕಸದ ಸಮಸ್ಯೆ ಎದುರಾಗುತ್ತದೆ. ಹೀಗಾಗಿ ಈ ತೀರ್ಮಾನ ಮಾಡಲಾಗಿದೆ ಎಂದು ಸಿಎಂ ಡಿ ಕೆ ಶಿವಕುಮಾರ್ತಿ ತಿಳಿಸಿದರು.
ಹೆಬ್ಬಾಳ ಜಂಕ್ಷನ್ ಬಳಿ “ತ್ಯಾಜ್ಯದಿಂದ ಸ್ವಾತಂತ್ರ್ಯ” ಅಭಿಯಾನಕ್ಕೆ ಚಾಲನೆ ನೀಡಿ ಶಿವಕುಮಾರ್ ಅವರು ಶನಿವಾರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು.
ಮನೆ ಕಟ್ಟದಿದ್ದರೆ ನಿವೇಶನ ವಾಪಸ್ ತೆಗೆದುಕೊಳ್ಳುತ್ತೀರಾ ಎಂದು ಕೇಳಿದಾಗ, “ಬೇರೆ ವಿಧಿಯಿಲ್ಲ, ನಾವು ಇದನ್ನು ಮಾಡಲೇಬೇಕಾಗುತ್ತದೆ. ನಾವು ನಿವೇಶನ ನೀಡುವುದು ಮನೆ ಕಟ್ಟಿಕೊಳ್ಳಲು. ಕೆಲವರು 20, 30, 40 ವರ್ಷವಾದರೂ ಮನೆ ಕಟ್ಟಿಲ್ಲ. ಅವರು ಕಟ್ಟಿರುವ ಹಣವನ್ನು ಬಡ್ಡಿ ಸಮೇತ ವಾಪಸ್ ನೀಡಿ ನಿವೇಶನ ಹಿಂಪಡೆಯಲಾಗುವುದು. ಸಿಐಟಿಬಿ, ಬಿಡಿಎ, ಸೊಸೈಟಿಗಳಿಂದ ನಿವೇಶನ ಪಡೆದ ಮೇಲೆ ಮನೆ ಕಟ್ಟಬೇಕಾಗಿರುವುದು ಅವರ ಕರ್ತವ್ಯ. ನಿವೇಶನಕ್ಕೆ ಕಾಪೌಂಡ್ ಕೂಡ ಹಾಕದೇ, ಕಸ ಹಾಕಲು ಅವಕಾಶ ಕೊಟ್ಟರೆ ಹೇಗೆ? ಅವರ ಜಾಗದಲ್ಲಿ ಅವರು ಕಸ ಹಾಕದೇ ಇದ್ದರೂ, ಅವರ ಜಾಗವನ್ನು ಅವರು ರಕ್ಷಣೆ ಮಾಡಿಕೊಳ್ಳಬೇಕು” ಎಂದು ತಿಳಿಸಿದರು.
“ಮಹಾತ್ಮಾ ಗಾಂಧೀಜಿ ಅವರು ಸ್ವಚ್ಛತೆಯೇ ದೇವರು ಎಂದು ನಮಗೆ ಮಾರ್ಗದರ್ಶನ ನೀಡಿದ್ದಾರೆ. ರಾಜೀವ್ ಗಾಂಧಿ ಅವರು ನಿಮ್ಮ ಮನೆ ಮುಂದೆ ಸ್ನಚ್ಛತೆ ಕಾಪಾಡಿದರೆ, ಬೀದಿ ಸ್ವಚ್ಛವಾಗುತ್ತದೆ. ಬೀದಿ ಸ್ವಚ್ಛವಾದರೆ ಊರು ಸ್ವಚ್ಛವಾಗುತ್ತದೆ, ಊರು ಸ್ವಚ್ಛವಾದರೆ ನಾಡು ಸ್ವಚ್ಛವಾಗುತ್ತದೆ ಎಂದು ಹೇಳಿದ್ದಾರೆ. ಬೆಂಗಳೂರಿನ ಸ್ವಚ್ಛತೆ ನಮ್ಮ ಕರ್ತವ್ಯ. ನಿಮ್ಮ ಬೆಂಗಳೂರನ್ನು ಕಾಪಾಡಿಕೊಳ್ಳುವುದು ನಿಮ್ಮ ಕರ್ತವ್ಯ” ಎಂದರು.
ಕಾವೇರಿಯ ಒಂದು ಅಣೆಕಟ್ಟು ತುಂಬುತ್ತಿದ್ದು, ನೀರು ಹಿಡಿದಿಡಲು ಸಾಧ್ಯವಿಲ್ಲ
ಕಾವೇರಿ ವಿಚಾರವಾಗಿ ಬಿಜೆಪಿ ನಾಯಕರ ಟೀಕೆ, ಆರೋಪದ ಬಗ್ಗೆ ಕೇಳಿದಾಗ, “ಬಿಜೆಪಿ ನಾಯಕರು ಆರೋಪ ಮಾಡುತ್ತಾರೆ. ನಾವು ಇನ್ನೂ ನೀರು ಹರಿಸಿಲ್ಲ, ಅವರೇ ಸರ್ವಪಕ್ಷ ಸಭೆ ಕರೆಯುವ ಸಲಹೆ ನೀಡಿದ್ದಾರೆ. ಆದರೆ ಇಂದು ಸಂಜೆ ವೇಳೆಗೆ ಒಂದು ಅಣೆಕಟ್ಟು ಭರ್ತಿಯಾಗಲಿದೆ. ಆ ಅಣೆಕಟ್ಟು ತುಂಬಿದ ಬಳಿಕವೂ ನೀರನ್ನು ಹಿಡಿದಿಡಲು ಆಗುವುದಿಲ್ಲ. ಅತ್ತ ತಮಿಳುನಾಡಿನವರು ಸುಪ್ರೀಂ ಕೋರ್ಟಿಗೆ ಹೋಗಲು ಸಿದ್ಥತೆ ಮಾಡಿಕೊಳ್ಳಲಾಗುತ್ತಿದೆ ಎಂದು ಎಂದು ಈಗಾಗಲೇ ಹೇಳಿಕೆಗಳು ಬಂದಿವೆ. 36-39 ಕ್ಯೂಸೆಕ್ ನೀರು ಒಳಹರಿವು ಇದ್ದು, ನಮಗೆ ನೀರು ಹರಿಸಲು ಹೇಳಿರುವುದು 3,500 ಕ್ಯೂಸೆಕ್ ನೀರು. ವಿರೋಧ ಪಕ್ಷದವರು ಹಾಗೂ ಕಾನೂನು ತಜ್ಞರೊಂದಿಗೆ ಚರ್ಚೆ ಮಾಡಿ ನಾವು ತೀರ್ಮಾನ ಮಾಡುತ್ತೇವೆ” ಎಂದು ತಿಳಿಸಿದರು.

