ಮುಂಬೈ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ನಡೆದ ಪ್ರತಿಭಟನೆ ವೇಳೆ ಪ್ರತಿಭಟನಾಕಾರರನ್ನು ಕರೆದೊಯ್ಯುತ್ತಿದ್ದ ಪೊಲೀಸ್ ವಾಹನದ ಮುಂದೆ ನಿಂತು ಪ್ರತಿಭಟನೆ ನಡೆಸಿದ ವಿಡಿಯೋದ ಮೂಲಕ ದೇಶಾದ್ಯಂತ ಗಮನ ಸೆಳೆದ ಮಾಡೆಲ್ ರಿಯಾ ಯಾದವ್ ಇದೀಗ ತಮಗೆ ಸಾಮಾಜಿಕ ಜಾಲತಾಣಗಳಲ್ಲಿ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಮಹಾರಾಷ್ಟ್ರ ಪೊಲೀಸ್ ಸೈಬರ್ ಸೆಲ್‌ಗೆ ದೂರು ಸಲ್ಲಿಸಿದ್ದಾರೆ.
ರಿಯಾ ಯಾದವ್ ಅವರ ಪ್ರತಿಭಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು. ಅನೇಕರು ಅವರ ಧೈರ್ಯವನ್ನು ಶ್ಲಾಘಿಸಿ ಬೆಂಬಲ ವ್ಯಕ್ತಪಡಿಸಿದ್ದರೆ, ಮತ್ತೊಂದೆಡೆ ಕೆಲವರು ವೈಯಕ್ತಿಕವಾಗಿ ನಿಂದಿಸಿ, ಅವಹೇಳನಕಾರಿ ಮತ್ತು ಬೆದರಿಕೆ ಸ್ವರೂಪದ ಸಂದೇಶಗಳನ್ನು ಹರಿಬಿಟ್ಟಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ರಿಯಾ ಯಾದವ್, ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕು ಇದೆ ಎಂದು ಹೇಳಿದರೂ, ಅದರ ಹೆಸರಿನಲ್ಲಿ ಯಾರನ್ನಾದರೂ ಅವಮಾನಿಸುವುದು, ಅವರ ಘನತೆಗೆ ಧಕ್ಕೆ ತರುವುದು ಅಥವಾ ಬದುಕುವ ಹಕ್ಕನ್ನೇ ಪ್ರಶ್ನಿಸುವ ರೀತಿಯ ಹೇಳಿಕೆಗಳನ್ನು ನೀಡುವುದು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ.
“ಹಲವರು ನಿಮ್ಮನ್ನು ಮೆಚ್ಚುತ್ತಾರೆ, ಬೆಂಬಲಿಸುತ್ತಾರೆ. ಆದರೆ ಕೆಲವರು ನಿಮ್ಮ ವಿರುದ್ಧ ಮಾತನಾಡುತ್ತಾರೆ. ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯ ಹೇಳುವ ಹಕ್ಕಿದೆ. ಆದರೆ ಯಾರನ್ನಾದರೂ ಕೀಳಾಗಿ ಕಾಣಿಸುವುದು, ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವುದು, ಸಾರ್ವಜನಿಕವಾಗಿ ಘನತೆಗೆ ಧಕ್ಕೆ ಉಂಟುಮಾಡುವುದು ಅಥವಾ ಅವರಿಗೆ ಬದುಕುವ ಹಕ್ಕೇ ಇಲ್ಲ ಎಂಬ ರೀತಿಯ ಹೇಳಿಕೆಗಳನ್ನು ನೀಡುವ ಹಕ್ಕು ಯಾರಿಗೂ ಇಲ್ಲ. ನಮ್ಮ ಹೋರಾಟ ಯಾವುದೇ ರಾಜಕೀಯ ಪಕ್ಷ ಅಥವಾ ಧರ್ಮಕ್ಕಾಗಿ ಅಲ್ಲ” ಎಂದು ಅವರು ಹೇಳಿದ್ದಾರೆ.
ತಮ್ಮ ವಿರುದ್ಧ ಕೆಲವು ವಲಯಗಳಲ್ಲಿ ರಾಜಕೀಯ ಉದ್ದೇಶದ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ರಿಯಾ ಯಾದವ್ ಸ್ಪಷ್ಟನೆ ನೀಡಿದ್ದು, ಈ ಹೋರಾಟ ಯಾವುದೇ ರಾಜಕೀಯ ಪಕ್ಷ, ಧರ್ಮ ಅಥವಾ ವ್ಯಕ್ತಿಯ ಪರವಾಗಿರಲಿಲ್ಲ ಎಂದು ಹೇಳಿದ್ದಾರೆ.
“ನಾವು ಆರಂಭಿಸಿದ ಈ ಚಳವಳಿ ಯಾವುದೇ ರಾಜಕೀಯ ಪಕ್ಷ, ಯಾವುದೇ ಧರ್ಮ ಅಥವಾ ಯಾವುದೇ ವ್ಯಕ್ತಿಗಾಗಿ ಅಲ್ಲ. ಇದು ನಮ್ಮೆಲ್ಲರ ಭವಿಷ್ಯಕ್ಕಾಗಿ ಮತ್ತು ನ್ಯಾಯಕ್ಕಾಗಿ ನಡೆದ ಹೋರಾಟವಾಗಿದೆ. ಇಂತಹ ಕಿರುಕುಳ ಎದುರಿಸುವ ಮಹಿಳೆಯರು ಒಬ್ಬರಲ್ಲ ಎಂದು ಅವರು ತಿಳಿಸಿದ್ದಾರೆ.
ತಮ್ಮ ವಿರುದ್ಧದ ಆನ್‌ಲೈನ್ ಕಿರುಕುಳದ ವಿರುದ್ಧ ಕಾನೂನು ಹೋರಾಟ ನಡೆಸುತ್ತಿರುವುದರ ಉದ್ದೇಶವನ್ನು ವಿವರಿಸಿದ ರಿಯಾ, ಇದೇ ರೀತಿಯ ಪರಿಸ್ಥಿತಿಯನ್ನು ಎದುರಿಸುತ್ತಿರುವ ಮಹಿಳೆಯರಿಗೆ ಧೈರ್ಯ ತುಂಬುವ ಸಂದೇಶವನ್ನೂ ನೀಡಿದ್ದಾರೆ.
“ಒಬ್ಬ ಮಹಿಳೆಯಾಗಿ, ಇಂತಹ ಪರಿಸ್ಥಿತಿಯನ್ನು ಎದುರಿಸುತ್ತಿರುವ ಇತರ ಮಹಿಳೆಯರಿಗೆ ಅವರು ಒಂಟಿಯಲ್ಲ ಎಂಬುದನ್ನು ಹೇಳಲು ಬಯಸುತ್ತೇನೆ. ನಾನು ಈ ಹೆಜ್ಜೆ ಇಟ್ಟಿರುವುದು, ಸರಿ ಎಂದು ನಂಬಿದ ವಿಷಯಕ್ಕಾಗಿ ಮುಂದೆಯೂ ಧ್ವನಿ ಎತ್ತುತ್ತೇನೆ ಎಂಬ ಸಂದೇಶವನ್ನು ನೀಡುವುದಕ್ಕಾಗಿ.” ಎಂದು ಅವರು ಹೇಳಿದ್ದಾರೆ.
ರಿಯಾ ಯಾದವ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ಹರಿದಾಡುತ್ತಿರುವ ಅವಹೇಳನಕಾರಿ ಪೋಸ್ಟ್‌ಗಳು, ಬೆದರಿಕೆ ಸಂದೇಶಗಳು ಹಾಗೂ ವ್ಯಕ್ತಿತ್ವ ಹರಣ ಮಾಡುವ ವಿಷಯಗಳ ಬಗ್ಗೆ ಮಹಾರಾಷ್ಟ್ರ ಪೊಲೀಸ್ ಸೈಬರ್ ಸೆಲ್‌ಗೆ ಅಧಿಕೃತ ದೂರು ನೀಡಿದ್ದಾರೆ ಎಂದು ವರದಿಯಾಗಿದೆ. ದೂರಿನ ಆಧಾರದ ಮೇಲೆ ಸೈಬರ್ ಪೊಲೀಸರು ಸಂಬಂಧಿತ ಸಾಮಾಜಿಕ ಜಾಲತಾಣ ಖಾತೆಗಳು ಹಾಗೂ ಪೋಸ್ಟ್‌ಗಳ ಪರಿಶೀಲನೆ ನಡೆಸುವ ಸಾಧ್ಯತೆ ಇದೆ.
ಜುಲೈ 20ರಂದು ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ವಿರುದ್ಧ ನಡೆದ ಪ್ರತಿಭಟನೆ ವೇಳೆ ಪೊಲೀಸ್ ವಾಹನದ ಮುಂದೆ ನಿಂತು ಪ್ರತಿಭಟನಾಕಾರರ ಪರವಾಗಿ ರಿಯಾ ಯಾದವ್ ಪ್ರತಿಭಟನೆ ನಡೆಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದವು. ಆ ಘಟನೆಯ ನಂತರ ಅವರು ಕೆಲವರಿಂದ ಪ್ರಶಂಸೆ ಪಡೆದರೆ, ಮತ್ತೊಂದೆಡೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಮತ್ತು ಕಿರುಕುಳಕ್ಕೂ ಗುರಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.

