ಮೈಸೂರು : ಮಳೆ ಇಲ್ಲದೇ ರಾಜ್ಯದ ಹಲವೆಡೆ ಬರದ ಛಾಯೆ ಕಾಣಿಸಿಕೊಳ್ಳುತ್ತಿರುವ ನಡುವೆ ಕೊಡಗು ಜಿಲ್ಲೆಯ ಹಾರಂಗಿ ಜಲಾಶಯ ಭರ್ತಿಯಾಗಿದ್ದು, ರಾಜ್ಯದ ಜಲಾಶಯಗಳ ಪೈಕಿ ಪ್ರಥಮವಾಗಿ ಒಡಲನ್ನು ತುಂಬಿಕೊಂಡ ಜಲಾಶಯವಾಗಿದೆ. ಇದು ಕೊಂಚ ನೆಮ್ಮದಿ ತರುವ ಸಂಗತಿಯಾಗಿದೆ.
ಹಾರಂಗಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಆಗುತ್ತಿರುವ ಹಿನ್ನೆಲೆ ಹಾರಂಗಿ ಜಲಾಶಯದ ಎಲ್ಲಾ ನಾಲ್ಕು ಕ್ರಸ್ಟ್ ಗೇಟ್ಗಳಿಂದ ಶನಿವಾರ ನದಿಗೆ ಹರಿಯ ಬಿಡಲಾಗಿದೆ. ಈಗ ಜಲಾಶಯಕ್ಕೆ ಒಳಹರಿವು 4 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಅಷ್ಟೇ ಪ್ರಮಾಣದ ನೀರನ್ನು ಬಿಡುಗಡೆ ಮಾಡಲಾಗಿದೆ.
ಹಾರಂಗಿ ಜಲಾಶಯದ ಕಾರ್ಯಪಾಲಕ ಎಂಜಿನಿಯರ್ ಮಹೇಶ್, ಎಇಇ ಪುಟ್ಟಸ್ವಾಮಿ, ಎಇ ಕಿರಣ್ ದೇವಯ್ಯ ಮತ್ತಿತರರು ವಿಶೇಷ ಪೂಜೆ ಸಲ್ಲಿಸಿ ಕ್ರಸ್ ಗೇಟ್ಗಳನ್ನು ತೆರೆದು ನೀರನ್ನು ಬಿಡುಗಡೆ ಮಾಡಿದರು.
ಕೊಡಗು ಜಿಲ್ಲೆಯ ಜನರ ಆರಾಧ್ಯ ದೇವತೆ ಕಾವೇರಿಯ ಉಪನದಿ ಹಾರಂಗಿ ಮಾತ್ರ ಮಳೆಯ ಕೊರತೆಯ ನಡುವೆಯೂ ಮೈದುಂಬಿ ನಿಂತಿದ್ದಾಳೆ. ರಾಜ್ಯದಲ್ಲಿಯೇ ಈ ವರ್ಷ ಮೊಟ್ಟ ಮೊದಲ ಬಾರಿಗೆ ಭರ್ತಿಯಾದ ಜಲಾಶಯ ಎಂಬ ಹೆಗ್ಗಳಿಕೆಗೆ ಹಾರಂಗಿ ಪಾತ್ರವಾಗಿದ್ದು, ಈ ನದಿಯನ್ನೇ ನಂಬಿ ಬದುಕು ಕಟ್ಟಿಕೊಂಡಿರುವ ಸಾವಿರಾರು ರೈತರಲ್ಲಿ ಈಗ ಹೊಸ ಭರವಸೆ ಚಿಗುರೊಡೆದಿದೆ.
ಜಲಾಶಯದ ಗರಿಷ್ಠ ಮಟ್ಟ 2859 ಅಡಿಗಳು. ಸದ್ಯ ಜಲಾಶಯವು ತನ್ನ ಗರಿಷ್ಠ ಮಟ್ಟವನ್ನು ತಲುಪಿದೆ. ಈ ಸಂಭ್ರಮದ ಸಂದರ್ಭದಲ್ಲಿ ಹಾರಂಗಿ ಜಲಾಶಯದ ಅಧಿಕಾರಿಗಳು ಗಂಗೆಗೆ ವಿಶೇಷ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿ ನದಿಗೆ ನೀರನ್ನು ಹರಿಸಿದ್ದಾರೆ. ಪ್ರಸ್ತುತ ಜಲಾಶಯಕ್ಕೆ 4500 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಅಷ್ಟೇ ಪ್ರಮಾಣದ ನೀರನ್ನು ನದಿಗೆ ಬಿಡಲಾಗುತ್ತಿದೆ.
ನಾಲ್ಕು ಕ್ರೆಸ್ಟ್ ಗೇಟ್ಗಳು ಓಪನ್
ಜಲಾಶಯದ ನಾಲ್ಕು ಕ್ರೆಸ್ಟ್ ಗೇಟ್ಗಳನ್ನು ತೆರೆಯಲಾಗಿದ್ದು, ಸುಮಾರು 4 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಬಿಳಿ ನೊರೆಯಂತೆ ಹರಿಯುತ್ತಿರುವ ನೀರನ್ನು ನೋಡಲು ಪ್ರವಾಸಿಗರು ಕೂಡ ಆಸಕ್ತಿ ತೋರಿಸುತ್ತಿದ್ದಾರೆ. ಜಲಾಶಯದ ಒಳಹರಿವು ಹೆಚ್ಚಾದಂತೆ ನದಿಗೆ ಬಿಡುವ ನೀರಿನ ಪ್ರಮಾಣವನ್ನು ಕೂಡ ಹೆಚ್ಚಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನದಿ ತಟದ ಜನರಿಗೆ ಎಚ್ಚರಿಕೆ
ನದಿಗೆ ನೀರು ಬಿಡುವ ಮುನ್ನ ಸುರಕ್ಷತಾ ದೃಷ್ಟಿಯಿಂದ ಅಧಿಕಾರಿಗಳು ಮೂರು ಬಾರಿ ಸೈರನ್ ಮೊಳಗಿಸಿದ್ದಾರೆ. ನದಿ ತಟದ ಗ್ರಾಮಗಳ ಜನರಿಗೆ ಮತ್ತು ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಮುನ್ನೆಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ನದಿಗೆ ಇಳಿಯದಂತೆ ಮತ್ತು ಜಾನುವಾರುಗಳನ್ನು ನದಿ ತಟಕ್ಕೆ ಬಿಡದಂತೆ ಅಧಿಕಾರಿಗಳು ಡಂಗುರ ಸಾರಿದ್ದಾರೆ.
ರೈತರ ಮುಖದಲ್ಲಿ ಮಂದಹಾಸ
ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿದ್ದರೂ, ಜಲಾಶಯ ಭರ್ತಿಯಾಗಿರುವುದು ರೈತರಲ್ಲಿ ಹರ್ಷ ತಂದಿದೆ. ಕೃಷಿ ಚಟುವಟಿಕೆಗಳಿಗೆ ನೀರಿನ ಕೊರತೆಯಾಗುವುದಿಲ್ಲ ಎಂಬ ನಂಬಿಕೆ ಈಗ ಅವರಲ್ಲಿ ಮೂಡಿದೆ. ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಯ ರೈತರು ಈಗ ಬಿತ್ತನೆ ಕಾರ್ಯದಲ್ಲಿ ಉತ್ಸಾಹದಿಂದ ತೊಡಗಿಸಿಕೊಳ್ಳಲು ಸಿದ್ಧರಾಗುತ್ತಿದ್ದಾರೆ. ಕೊಡಗಿನ ಪ್ರಕೃತಿ ಸೌಂದರ್ಯಕ್ಕೆ ಈ ಹಾರಂಗಿ ಜಲಾಶಯದ ವೈಭವ ಮತ್ತಷ್ಟು ಮೆರುಗು ನೀಡಿದೆ.

