ಬಾಲಕನ ಪುಡಾಂಟ ಮಾಡುತ್ತಾನೆಂದು ಕೂಲಿಕಾರ್ಮಿಕ ಪೋಷಕರು ಬಾಲಕನನ್ನು ಕಬ್ಬಿಣದ ಸರಪಳಿಯಿಂದ ಬಂಧಿಸಿ ಮನೆಯಲ್ಲಿ ಕೂಡಿಟ್ಟ ಘಟನೆ ಸಕಲೇಶಪುರದಲ್ಲಿ ನಡೆದಿದೆ.
ಸಕಲೇಶಪುರ ತಾಲೂಕಿನ ಕ್ಯಾನಹಳ್ಳಿ ಗ್ರಾಮದ ಹೊರವಲಯದ ಹಾಸನಮಲ್ಲೇಶ್ ಎಂಬುವವರ ಕಾಫಿತೋಟದಲ್ಲಿ ಕಾರ್ಮಿಕರಾಗಿರುವ ಹಸೀನಾಬಾನು ಹಾಗೂ ಅಮೀರ್ ಹುಸೇನ್ ದಂಪತಿಗೆ ಏಳು ಮಕ್ಕಳಿದ್ದು ಆರನೇ ಮಗನಾದ ಉಬೇದುಲ್ಲ (11) ಅತ್ಯಂತ ತುಂಟನಾಗಿದ್ದನೆ ಎನ್ನಲಾಗಿದೆ.
ಪೋಷಕರು ಕೆಲಸಕ್ಕೆ ತೆರಳಿದ ನಂತರ ಮನೆಬಿಟ್ಟು ಹೊರಹೋಗುತ್ತಿದ್ದ ಈತನನ್ನು ಎರಡು ಮೂರು ದಿನಗಳ ಕಾಲ ಹುಡುಕಿ ಕರೆತಂದಿದ್ದರು. ಬಾಲಕ ಪದೆಪದೇ ಮನೆಬಿಟ್ಟು ಹೋಗುತ್ತಿದ್ದರಿಂದ ಬೇಸತ್ತ ಪೋಷಕರು ಸಂತೆಯಿಂದ ಕಬ್ಬಿಣ ಸರಪಳಿ ತಂದು ಬಾಲಕನ ಸೊಂಟ ಮತ್ತು ಕಾಲಿಗೆ ಹಾಕಿ ತಾವು ವಾಸಿಸುತ್ತಿದ್ದ ಕಾಫಿತೋಟದ ಮನೆಯಲ್ಲಿ ಕಳೆದ 10 ದಿನಗಳಿಂದ ಕೂಡಿಹಾಕಿದ್ದರು.
ಬುಧವಾರ ಮನೆಯಿಂದ ಹೊರ ಬಂದ ಬಾಲಕ ಸಮೀಪದ ರಸ್ತೆಯಲ್ಲಿ ಕುಳಿತಿದ್ದ ಇದನ್ನು ಗಮನಿಸಿದ ದಾರಿಹೋಕರು ಗ್ರಾಮಾಂತರ ಠಾಣೆಗೆ ವಿಷಯ ತಿಳಿಸಿದ್ದರು. ಸ್ಥಳಕ್ಕೆ ತೆರಳಿದ ಪೋಲಿಸರು. ಬಾಲಕನ ಪೋಷಕರನ್ನು ಪತ್ತೆಮಾಡಿ ಕ್ರಾಫರ್ಡ್ ಆಸ್ಪತ್ರೆ ಗೆ ಕರೆತಂದು ಆರೋಗ್ಯ ತಪಾಸಣೆ ನಡೆಸಿದ ನಂತರ ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಧಿಕಾರಿಗಳ ಕೈಗೆ ಬಾಲಕನನ್ನು ಹಸ್ತಾಂತರಿಸಿದ್ದಾರೆ.