ಬೆಂಗಳೂರು : ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡ ಭಾರತ್ ಜೋಡೋ ಯುವ ಸಂಘಗಳನ್ನು ಸ್ಥಾಪಿಸಿ ಅನುಷ್ಠಾನಗೊಳಿಸಲು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಡಿ.ಕೆ. ಶಿವಕುಮಾರ್ ಅವರು ಸಿಎಂ ಆದ ಬಳಿಕ ನಡೆದ ಮೊದಲ ಸಚಿವ ಸಂಪುಟದಲ್ಲಿ ಗ್ರಾಮ ಪಂಚಾಯಿತಿ ಹಾಗೂ ನಗರ ವಾರ್ಡ್‌ಗಳ ವ್ಯಾಪ್ತಿಯಲ್ಲಿ 10 ಸಾವಿರ ಭಾರತ್ ಜೋಡೋ ಯುವ ಸಂಘ ಸ್ಥಾಪಸಿ ಪ್ರತಿ ಸಂಘಕ್ಕೆ ತಲಾ 10 ಲಕ್ಷ ರೂ, ಅನುದಾನ ಒದಗಿಸುವುದಾಗಿ ನಿರ್ಣಯ ಕೈಗೊಂಡಿತ್ತು. ನಿರ್ಣಯವನ್ನು ಅನುಷ್ಠಾನಗೊಳಿಸಲು ಸರ್ಕಾರ ಅನುಮೋದನೆ ನೀಡಿ ಆದೇಶ ಹೊರಡಿಸಿದೆ.
ಪ್ರತಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಒಂದು ಸಂಘ ಹಾಗೂ ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ಸರಾಸರಿ 4 ಸಾವಿರ ಜನಸಂಖ್ಯೆಗೆ ಒಂದು ಸಂಘ. ಪ್ರತಿ ಪುರ ಸಭೆಯಲ್ಲಿ ಸರಾಸರಿ 6 ಸಾವಿರ ಜನ ಸಂಖ್ಯೆಗೆ ಒಂದು ಸಂಘ. ಪ್ರತಿ ನಗರ ಸಭೆಯಲ್ಲಿ ಸರಾಸರಿ 8 ಸಾವಿರ ಜನಸಂಖ್ಯೆಗೆ ಒಂದು ಸಂಘ ಹಾಗೂ ಮಹಾನಗರ ಪಾಲಿಕೆ ಮತ್ತು ಜಿಬಿಎ ವ್ಯಾಪ್ತಿಯಲ್ಲಿ 10 ಸಾವಿರ ಜನಸಂಖ್ಯೆಗೆ ಒಂದು ಸಂಘ ಸ್ಥಾಪಿಸಬೇಕು. ಈ ಯೋಜನೆಯ ಅನುಷ್ಠಾನಕ್ಕಾಗಿ ಅಡಳಿತ ಮತ್ತು ಪಿಎಂಯು ವೆಚ್ಚಕ್ಕಾಗಿ ಪ್ರತಿ ವರ್ಷ ಅಂದಾಜು 10 ಕೋಟಿ ರೂ.ಗಳನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಒದಗಿಸಲಾಗುವುದು. ಈ ಯೋಜನೆಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ನಗರಾಭಿವೃದ್ಧಿ, ಕಂದಾಯ ಹಾಗೂ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಅನುಷ್ಠಾನಗೊಳಿಸುವುದು.
ಪ್ರತಿಯೊಂದ ಸಂಘಕ್ಕೆ ಒಬ್ಬ ತರಬೇತುದಾರರನ್ನು ನೇಮಕ ಮಾಡಿಕೊಂಡು ಅವರಿಗೆ ವಾರ್ಷಿಕ ತಲಾ 24 ಸಾವಿರ ರೂ.ಗಳಂತೆ ಒಟ್ಟು 24 ಕೋಟಿ ರೂ.ಗಳ ವೆಚ್ಚವನ್ನು ಸಂಘಗಳಿಗೆ ಒದಗಿಸಲಾಗುತ್ತದೆ.

