ಬೆಂಗಳೂರು : ಸಾರ್ವಜನಿಕರ ಕುಂದುಕೊರತೆಗಳು, ಸಾರ್ವಜನಿಕ ಹೋರಾಟಗಳ ಅಹವಾಲುಗಳನ್ನು ಆಲಿಸಲು “ಪ್ರಜಾಸೇವೆ ಇಲಾಖೆ” ಯನ್ನು ಹೊಸದಾಗಿ ಪ್ರಾರಂಭ ಮಾಡಲಾಗುತ್ತಿದೆ. ಪ್ರತ್ಯೇಕ ಸಚಿವರಿಗೆ ಇದರ ಜವಾಬ್ದಾರಿವಹಿಸಲಾಗುವುದು ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ವಿಧಾನಸೌಧದಲ್ಲಿ ಶನಿವಾರ ನಡೆದ ಸಚಿವ ಸಂಪುಟ ಸಭೆಯ ನಂತರ ಶಿವಕುಮಾರ್ ಅವರು ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದರು. “ಜನರ ಕಷ್ಟ ಭಾವನೆಗಳನ್ನು ಅರಿತು, ಕಾನೂನು ಚೌಕಟ್ಟಿನಲ್ಲಿ ಸ್ಪಂದಿಸುವುದು ನಮ್ಮ ಸರ್ಕಾರದ ಗುರಿ. ಹೀಗಾಗಿ ಈ ಇಲಾಖೆಗೆ ಹಿರಿಯ ಐಎಎಸ್ ಅಧಿಕಾರಿಯನ್ನು ನೇಮಿಸಲಾಗುವುದು. ಅವರು ಎಲ್ಲಾ ಸಮಸ್ಯೆಗಳನ್ನು ಪರಿಶೀಲನೆ ಮಾಡಿ ಮಾಹಿತಿ ನೀಡುವ ಕೆಲಸ ಮಾಡಲಾಗುವುದು. ಈ ಮೂಲಕ ಜನರಿಗೆ ನ್ಯಾಯ ಒದಗಿಸಲು ಸರ್ಕಾರ ಮುಂದಾಗಿದೆ. ನನಗೆ ಹಾಗೂ ಇತರೇ ಸಚಿವರಿಗೆ ನೀಡಿದ ಮನವಿಗಳನ್ನು ಈ ಇಲಾಖೆ ಅಡಿಯಲ್ಲಿ ತರಲು ಆಲೋಚಿಸಲಾಗಿದೆ” ಎಂದರು.
ವಿದ್ಯುತ್ ಸಂಪರ್ಕ ಪಡೆಯಲು 15 ದಿನಗಳ ಕಾಲಾವಕಾಶ
31.05.2026 ರ ಒಳಗೆ ಪೂರ್ಣಗೊಂಡಿರುವ ಎಲ್ಲಾ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ವಿನಾಯಿತಿ ನೀಡಲಾಗಿದ್ದು, ಈ ವಿಚಾರವಾಗಿ ಸರ್ಕಾರಿ ಆದೇಶ ಬಂದ ದಿನದಿಂದ 15 ದಿನಗಳ ಕಾಲಾವಕಾಶ ನೀಡಲಾಗುವುದು. ಕಟ್ಟಡ ಮಾಲೀಕರು ಕಟ್ಟಡದ ಜೊತೆಗಿನ ಫೋಟೋ ಹಾಗೂ ಜಿಪಿಎಸ್ ದಾಖಲೆ ಕಡ್ಡಾಯವಾಗಿ ಸಲ್ಲಿಕೆ ಮಾಡಬೇಕ” ಎಂದರು.
ಗ್ರಾಮೀಣ ಭಾಗದ, ರೇಷ್ಮೆ ಸಾಕಾಣಿಕೆ ಮನೆ, ಕೊಟ್ಟಿಗೆಗಳಿಗೆ ವಿನಾಯಿತಿ ನೀಡಲಾಗಿದೆ. ಹೊಸದಾಗಿ ನಿರ್ಮಾಣ ಮಾಡಿದರೆ ಅವಕಾಶವಿಲ್ಲ. ಇಂಧನ ಸಚಿವರು, ಗ್ರಾಮೀಣಾಭಿವೃದ್ದಿ, ನಗರಾಭಿವೃದ್ದಿ ಸಚಿವರ ಬಳಿ ಇದರ ಬಗ್ಗೆ ವಿವರವಾಗಿ ಚರ್ಚಿಸಲಾಗಿದೆ ಎಂದು ಮಾಹಿತಿ ನೀಡಿದರು.
620 ಬಸ್ ಖರೀದಿಗೆ ಅನುಮೋದನೆ
“620 ನೂತನ ಬಸ್ ಗಳ ಖರೀದಿಗೆ 235 ಕೋಟಿ ರೂ. ವೆಚ್ಚ ಸೇರಿದಂತೆ ಎಲ್ಲಾ ಸಾರಿಗೆ ನಿಗಮಗಳ ಅಡಿಯಲ್ಲಿ 11 ಕಡೆ ಎಲೆಕ್ಟ್ರಿಕ್ ಬಸ್ ಗಳ ಡಿಪೋಗಳನ್ನು ತೆರೆಯಲು 112 ಕೋಟಿ ವೆಚ್ಚ ಮಾಡಲಾಗುವುದು. 30 ಕೋಟಿ ರೂ. ವೆಚ್ಚದಲ್ಲಿ ಸಂಡೂರು ತಾಲ್ಲೂಕು ಕೇಂದ್ರದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣ. 620 ಬಸ್ ಗಳ ಪೈಕಿ ಗ್ರಾಮೀಣ ಪ್ರದೇಶಗಳಿಗೆ 400 ಬಸ್ ಗಳು ಹಾಗೂ ವಾಯುವ್ಯ ಸಾರಿಗೆ ನಿಗಮಕ್ಕೆ 220 ಬಸ್ ಗಳ ಖರೀದಿಗೆ ಅನುಮತಿ ನೀಡಲಾಗಿದೆ” ಎಂದರು.
ಕರ್ನಾಟಕದ ವಿದ್ಯಾರ್ಥಿಗಳಿಗೆ ದೆಹಲಿಯಲ್ಲಿ ಕರ್ನಾಟಕ ಭವನ
ಯುಪಿಎಸ್ ಸೇರಿದಂತೆ ಇತರೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ಒಂದೇ ಸೂರಿನಡಿ ಎಲ್ಲಾ ಅನುಕೂಲ ದೊರೆಯಬೇಕು ಎನ್ನುವ ಕಾರಣಕ್ಕೆ ಕೆಐಡಬ್ಲ್ಯೂಬಿ ವತಿಯಿಂದ ನವ ದೆಹಲಿಯಲ್ಲಿ ಕರ್ನಾಟಕ ಭವನ 4 ಅನ್ನು ನಿರ್ಮಾಣ ಮಾಡಲು 80 ಕೋಟಿಗೆ ಅನುಮೋದನೆ ನೀಡಲಾಗಿದೆ. ಪರಿಶಿಷ್ಟ ಜಾತಿ ಹಾಗೂ ಪಂಗಡ ಹಾಗೂ ಶೇ 50, ಇತರೇ ಸಮುದಾಯದ ವಿದ್ಯಾರ್ಥಿಗಳಿಗೆ ಶೇ 50 ರಷ್ಟು ಮೀಸಲು ಇಡಲಾಗಿದೆ” ಎಂದರು.
ಬಸ್ ಟಿಕೆಟ್ ದರ ಏರಿಕೆ; ಜನರ ಹಿತದೃಷ್ಟಿಯಲ್ಲಿಟ್ಟುಕೊಂಡು ತೀರ್ಮಾನ
ಬಸ್ ಟಿಕೆಟ್ ದರ ಏರಿಕೆ ವಿಚಾರವಾಗಿ ಕೇಳಿದಾಗ, “ಖಾಸಗಿ ಹಾಗೂ ನಿಗಮದ ಡಿಪೋಗಳಲ್ಲಿನ ಡೀಸೆಲ್ ಬೆಲೆ ವ್ಯತ್ಯಾಸ ದರ ಸುಮಾರು 40 ರೂಪಾಯಿಯಷ್ಟಿದೆ. ಇದು ಗಾಬರಿಯಾಗುವ ಸಂಖ್ಯೆ. ಡೀಸೆಲ್ ಬೆಲೆ ಹೆಚ್ಚಾದರೆ ಟಿಕೆಟ್ ಬೆಲೆ ಹೆಚ್ಚಳ ಆಗಬೇಕು ಎಂದು ಈ ಹಿಂದೆ ತೀರ್ಮಾನ ಮಾಡಲಾಗಿತ್ತು. ಇದರ ಬಗ್ಗೆ ಮತ್ತೊಮ್ಮೆ ಪರಿಶೀಲನೆ ಮಾಡಬೇಕು. ಕೆಎಸ್ ಆರ್ ಟಿಸಿಯೂ ಉಳಿಬೇಕು. ಜನರಿಗೂ ಅನುಕೂವಾಗಬೇಕು. ಏಕೆಂದರೆ ಪ್ರಧಾನ ಮಂತ್ರಿಗಳೇ ಸಾರ್ವಜನಿಕ ಸಾರಿಗೆಗಳನ್ನು ಬಳಸಿ ಇಂಧನ ಉಳಿಸಿ ಎಂದು ಮಾರ್ಗದರ್ಶನ ನೀಡಿದ್ದಾರೆ. ಇದರ ಬಗ್ಗೆ ಜನರ ಹಿತ ದೃಷ್ಟಿಯಲ್ಲಿಟ್ಟುಕೊಂಡು ತೀರ್ಮಾನ ಮಾಡಲಾಗವುದು. ಖಾಸಗಿಯವರು ಡಿಪೋಗಳ ಬದಲಾಗಿ ಸಾರ್ವಜನಿಕರಿಗೆ ಇರುವ ಬಂಕ್ ಗಳಲ್ಲಿ ಡಿಸೇಲ್ ಖರೀದಿ ಮಾಡುತ್ತಿದ್ದಾರೆ. ಇದರ ಬಗ್ಗೆ ವರದಿ ಕೇಳಿದ್ದೇನೆ” ಎಂದರು.

