ಬೆಂಗಳೂರು : ಸಚಿವ ಡಿ. ಸುಧಾಕರ್ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಸೋಮವಾರ ಸಂಜೆ ಚಳ್ಳಕರೆಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.
ನಿನ್ನೆ ಸುಧಾಕರ್ ಅವರ ಮೃತದೇಹವನ್ನು ಆಸ್ಪತ್ರೆಯಿಂದ ಸದಾಶಿವನಗರದ ಅವರ ನಿವಾಸಕ್ಕೆ ತಂದು ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿತ್ತು. ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಅನೇಕ ಸಚಿವರು, ಶಾಸಕರುಗಳು ಅಂತಿಮ ದರ್ಶನ ಪಡೆದು, ಕುಟುಂಬದವನ್ನು ಸಂತೈಸಿದರು.
ಮಧ್ಯಾಹ್ನದ ಬಳಿಕ ಅವರ ಮೃತದೇಹವನ್ನು ಅವರ ಕ್ಷೇತ್ರವಾದ ಹಿರಿಯೂರಿಗೆ ಕರೆದೊಯ್ದು ಅಲ್ಲಿ ಅಲ್ಲಿ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ಎನ್.ಎಸ್. ಭೋಸರಾಜು ಸೇರಿ ಅನೇಕರು ಹಿರಿಯೂರಿನಲ್ಲಿ ಅಂತಿಮ ದರ್ಶನ ಪಡೆದರು.
ಸೋಮವಾರ ಸಂಜೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಹುಟ್ಟೂರು ಚಳ್ಳಕರೆಯಲ್ಲಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜೈನ ಸಂಪ್ರದಾಯದಂತೆ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬವರ್ಗದವರು ಹೇಳಿದ್ದಾರೆ. ಸುಧಾಕರ್ ಅವರು ಪತ್ನಿ, ಓರ್ವ ಪುತ್ರಿ ಮತ್ತು ಓರ್ವ ಪುತ್ರ ಸೇರಿ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಚಿತ್ರದುರ್ಗಕ್ಕೆ ರಜೆ, ರಾಜ್ಯದಲ್ಲಿ 3 ದಿನ ಸಂತಾಪ:
ಸಚಿವ ಡಿ ಸುಧಾಕರ್ ನಿಧನಕ್ಕೆ ರಾಜ್ಯ ಸರ್ಕಾರ ತೀವ್ರ ಸಂತಾಪ ಸೂಚಿಸಿದ್ದು, ಚಿತ್ರದುರ್ಗಕ್ಕೆ ಅನ್ವಯವಾಗುವಂತೆ ಸೋಮವಾರ (ಮೇ 11) ಸರ್ಕಾರಿ ರಜೆ ಘೋಷಣೆ ಮಾಡಿದೆ. ಜೊತೆಗೆ 3 ದಿನ ರಾಜ್ಯಾದ್ಯಂತ ಶೋಕಾಚರಣೆಯನ್ನೂ ಘೋಷಿಸಿದೆ.
ಮೇ 10 ರಿಂದ 12 ರವರೆಗೆ ಮೂರು ದಿನಗಳು ರಾಜ್ಯಾದ್ಯಂತ ಶೋಕವನ್ನು ಆಚರಿಸಲಾಗುತ್ತಿದ್ದು, ಈ ಅವಧಿಯಲ್ಲಿ ಯಾವುದೇ ಸಾರ್ವಜನಿಕ ಮನರಂಜನಾ ಕಾರ್ಯಕ್ರಮಗಳು ಇರುವುದಿಲ್ಲ. ನಿಯಮಿತವಾಗಿ ಹಾರಿಸಲ್ಪಡುವ ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ಅರ್ಧ ಮಟ್ಟದಲ್ಲಿ ಹಾರಿಸಲಾಗುತ್ತದೆ.
ಸುಧಾಕರ್ ಅವರ ರಾಜಕೀಯ ಹಾದಿ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಹಾಲಿ ಸಾಂಖ್ಯಿಕ ಹಾಗೂ ಯೋಜನೆಯ ಇಲಾಖೆಯ ಸಚಿವರು ಹಾಗೂ ಚಿತ್ರದುರ್ಗ ಉಸ್ತುವಾರಿ ಸಚಿವರೂ ಆಗಿದ್ದ ಡಿ. ಸುಧಾಕರ್ ಅವರು ಚಿಕ್ಕ ಸಮುದಾಯ ಜೈನ ಸಮುದಾಯದಿಂದ ಬಂದಿದ್ದರೂ ಎಲ್ಲಾ ವರ್ಗದವರ ಅಪಾರ ಅಭಿಮಾನ ಹೊಂದಿದ್ದರು.
ಚಳ್ಳಕೆರೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪಡೆದಿದ್ದ ಸುಧಾಕರ್ ಅವರು, ಚಿತ್ರದುರ್ಗದಲ್ಲಿ ಪಿಯುಸಿ ಮುಗಿಸಿ, ಶಿವಮೊಗ್ಗದ ನ್ಯಾಷನಲ್ ಕಾಲೇಜಲ್ಲಿ ಬಿಕಾಂ ಪದವಿ ಪಡೆದಿದ್ದರು. ಕುಟುಂಬದಲ್ಲಿ ಅವರ ಚಿಕ್ಕಪ್ಪ ಎನ್. ಜಯಣ್ಣ ಅವರು 1978-89ರ ಅವಧಿಯಲ್ಲಿ ಚಳ್ಳಕೆರೆಯ ಶಾಸಕರಾಗಿದ್ದರು. ಅವರ ರಾಜಕೀಯ ಒಡನಾಟದಿಂದ ಡಿ ಸುಧಾಕರ್ ರಾಜಕೀಯ ಪ್ರವೇಶ ಮಾಡಿದರು.
2004-2008 ಕಾಂಗ್ರೆಸ್ ನಿಂದ ಶಾಸಕರಾಗಿ ಮೊದಲು ಆಯ್ಕೆಯಾಗಿದ್ದರು. ನಂತರ ಚಳ್ಳಕೆರೆ ಎಸ್ ಟಿ ಮೀಸಲು ಕ್ಷೇತ್ರವಾದ ಬಳಿಕ 2008 ರಲ್ಲಿ ಹಿರಿಯೂರು ಕ್ಷೇತ್ರದ ಪಕ್ಷೇತರ ಶಾಸಕರಾಗಿ ಆಯ್ಕೆಯಾದರು. ಬಿಎಸ್ ಯಡಿಯೂರಪ್ಪ ಸಂಪುಟದಲ್ಲಿ ಸಮಾಜ ಕಲ್ಯಾಣ, ಮುಜರಾಯಿ ಇಲಾಖೆಯ ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ಬಂಧಿಖಾನೆ, ಯುವಜನಸೇವೆಯ ಸಚಿವರಾಗಿದ್ದರು. ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. 2013ರಲ್ಲಿ ಮತ್ತೆ ಕಾಂಗ್ರೆಸ್‌ನಿಂದ ಶಾಸಕರಾಗಿ ಆಯ್ಕೆಯಾದರು.
2018ರಲ್ಲಿ ಬಿಜೆಪಿ ಅಭ್ಯರ್ಥಿ ಪೂರ್ಣಿಮಾ ಶ್ರೀನಿವಾಸ್ ವಿರುದ್ಧ ಮೊದಲ ಸೋಲು ಅನುಭವಿಸಿದ ಸುಧಾಕರ್ ಅವರು 2023ರಲ್ಲಿ ಮತ್ತೆ ಹಿರಿಯೂರಲ್ಲಿ ಶಾಸಕರಾಗಿ ಈಗ ಸಚಿವರಾಗಿ ಚಿತ್ರದುರ್ಗ ಉಸ್ತುವಾರಿಯಾಗಿದ್ದರು.
ಸುಧಾಕರ್ ಅವರ ನಿಧನಕ್ಕೆ ಸಂಪುಟದ ಎಲ್ಲಾ ಸಹೋದ್ಯೋಗಿಗಳು ಕಂಬನಿ ಮಿಡಿದಿದ್ದಾರೆ.

