ಚಿಕ್ಕಮಗಳೂರು : ಮಾಣಿಕ್ಯಧಾರಾದಲ್ಲಿ ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ ಕೇರಳದ ಪಾಲಕ್ಕಾಡ್ ಮೂಲದ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ.
ಚಂದ್ರದ್ರೋಣ ಪರ್ವತ ಶ್ರೇಣಿಯ ಮಾಣಿಕ್ಯಧಾರಾ ಜಲಪಾತದ ಬಳಿ ಸುಮಾರು 2 ಸಾವಿರ ಅಡಿ ಆಳದ ಪ್ರಪಾತದಲ್ಲಿ ಬಾಲಕಿ ಶ್ರೀನಂದಾ ಶವ ಸಿಕ್ಕಿರುವುದು ದೃಢಪಟ್ಟಿದೆ.
ಕೇರಳದಿಂದ ಏಪ್ರಿಲ್ 7ರಂದು ಚಿಕ್ಕಮಗಳೂರು ನಗರಕ್ಕೆ ಆಗಮಿಸಿದ್ದ 40 ಜನರ ಪ್ರವಾಸಿ ತಂಡದಲ್ಲಿ ಶ್ರೀನಂದಾ ಕೂಡ ಇದ್ದರು. ಇನಾಮು ದತ್ತಾತ್ರೇಯ ಪೀಠ ಹಾಗೂ ಮಾಣಿಕ್ಯಧಾರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಬಾಲಕಿ ಹಠಾತ್ತಾಗಿ ನಾಪತ್ತೆಯಾಗಿದ್ದರು.
3 ದಿನಗಳ ಸತತ ಕಾರ್ಯಾಚರಣೆ : ಮೂರು ದಿನಗಳ ಕಾಲ ನಡೆಸಿದ ಕಾರ್ಯಾಚರಣೆ ನಂತರ, ಇಂದು ಮಾಣಿಕ್ಯಧಾರಾದ ಅತ್ಯಂತ ಆಳವಾದ ಪ್ರಪಾತದ ಕೆಳಗೆ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಪೊಲೀಸ್ ಇಲಾಖೆ, ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ದಳದ ಸುಮಾರು 100ಕ್ಕೂ ಹೆಚ್ಚು ಸಿಬ್ಬಂದಿ ಹಲವು ತಂಡಗಳನ್ನಾಗಿ ಮಾಡಿಕೊಂಡು ಶೋಧಕಾರ್ಯಕ್ಕೆ ಇಳಿದಿತ್ತು.
ಬಾಲಕಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿರುವುದೋ ಅಥವಾ ಇನ್ಯಾವುದೋ ಕಾರಣವಿದೆಯೇ ಎಂಬುದರ ಬಗ್ಗೆ ತನಿಖೆ ನಡೆಯಲಿದೆ.
ಕೇರಳದಿಂದ ಆಗಮಿಸಿದ್ದ ಪೋಷಕರು ಮತ್ತು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

