ಬೆಂಗಳೂರು: ಟೆರೆಸ್ ಮೇಲೆ ಒಣಗಿ ಹಾಕಿದ್ದ ಬಟ್ಟೆ ತರಲು ಹೋಗಿದ್ದ ಸಂದರ್ಭದಲ್ಲಿ ಮನೆಯಲ್ಲಿ ಆಡವಾಡುತ್ತಿದ್ದ ಮಗು ಬಕೆಟ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವುದನ್ನು ಕಂಡು ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
11 ತಿಂಗಳ ಮಗು ಅಗಸ್ತ್ಯ ಮೃತಪಟ್ಟಿದ್ದು , ತಾಯಿ ಪ್ರತಿಭಾ (29) ಆತ್ಮಹತ್ಯೆ ಮಾಡಿಕೊಂಡ ತಾಯಿ. ಪ್ರತಿಭಾ ಮನೆಯಿಂದಲೇ ಕೆಲಸ ಮಾಡುತ್ತಿದ್ದರು. ಪತಿ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದಾರೆ. ಪತಿ ಮಹಾಂತೇಶ್ ಕೆಲಸ ಮುಗಿಸಿ ಮನೆಗೆ ಬಂದಾಗ ಬಾಗಿಲು ತೆಗೆದಿಲ್ಲ. ಬಳಿಕ ತಮ್ಮ ಬಳಿ ಇದ್ದ ಕೀ ಮೂಲಕ ಮನೆಗೆ ಒಳಗೆ ಹೋಗಿ ನೋಡಿದಾಗ ಪ್ರತಿಭಾ ನೇಣಿಗೆ ಶರಣಾಗಿದ್ದರು. ಮಗು ಹಾಸಿಗೆ ಮೇಲೆ ಮಲಗಿದ ಸ್ಥಿತಿಯಲ್ಲಿತ್ತು. ಮಗುವನ್ನು ನೋಡಿದಾಗ ಮಗು ಕೂಡ ಮೃತ ಪಟ್ಟಿರೋದು ದೃಢಪಟ್ಟಿದೆ. ಪಕ್ಕದಲ್ಲಿ ಪತ್ನಿ ಬರೆದಿಟ್ಟ ಡೆತ್ ನೋಟ್ ಕೂಡ ಪತ್ತೆಯಾಗಿದೆ. ಡೆತ್ ನೋಟ್ ಪಕ್ಕದಲ್ಲಿ ಖಾಲಿಯಾಗಿದ್ದ 15 ಮಾತ್ರೆ ಶೀಟ್ ಪತ್ತೆಯಾಗಿದೆ. ಡೆತ್ನೋಟ್ನಲ್ಲಿ ಪತ್ನಿ ಬಿಚ್ಚಿಟ್ಟ ಸತ್ಯ ಓದಿ ಪತಿ ದಿಗಿಲಾಗಿದ್ದಾರೆ.
ನಾನು ಬಟ್ಟೆ ಒಣಹಾಕಿದ್ದು, ಅದನ್ನ ತರಲು ಟೆರೆಸ್ಗೆ ಹೋಗಿದ್ದೆ. ಈ ವೇಳೆ ಮಗು ಆಟ ಆಡಿಕೊಂಡು ಬಚ್ಚಲು ಮನೆಗೆ ಹೋಗಿದೆ. ಆ ವೇಳೆ ಬಕೆಟ್ನಲ್ಲಿ ಮುಳುಗಿ ಸತ್ತಿದೆ. ನನ್ನ ಮಗುವನ್ನ ಉಳಿಸಿಕೊಳ್ಳಲು ಆಗಿಲ್ಲ. ನನ್ನ ಮಗುವಿನ ಸಾವಿಗೆ ನಾನೇ ಕಾರಣ. ಹೀಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರೋದಾಗಿ ಪ್ರತಿಭಾ ಡೆತ್ ನೋಟ್ನಲ್ಲಿ ಬರೆದಿದ್ದಾರೆ.
ಮೊದಲಿಗೆ ಪ್ರತಿಭಾ ಮಾತ್ರೆ ನುಂಗಿ ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆದರೆ ರಕ್ತ ಬಾರದ ಹಿನ್ನೆಲೆ ನೇಣಿಗೆ ಶರಣಾಗಿದ್ದಾರೆ. ಘಟನೆ ಸಂಬಂಧ ಚಂದ್ರಾಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

