ಬೆಂಗಳೂರು : 2026-27ನೇ ವರ್ಷದಲ್ಲಿ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಆದಾಯವು ಪ್ರಾರಂಭಿಕ ಶಿಲ್ಕು ಸೇರಿ ಒಟ್ಟು ಸ್ವೀಕೃತಿ 3,427 ಕೋಟಿ ರೂ.ಗಳಷ್ಟು ಇದ್ದು, ಅಂದಾಜು ವೆಚ್ಚ 3,426.61 ಕೋಟಿ ರೂ. ಇರಲಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದಡಿ ನಗರ ಪಾಲಿಕೆಯಾಗಿ ರಚನೆಯಾದ ಬಳಿಕ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಆಡಳಿತಗಾರ ಮಹೇಶ್ವರ್ ರಾವ್ ಅಧ್ಯಕ್ಷತೆಯಲ್ಲಿ ನಗರದ ಸರ್. ಪುಟ್ಟಣ್ಣ ಚೆಟ್ಟಿ ಪುರಭವನ ನಲ್ಲಿ 2026-27ನೇ ಸಾಲಿನ ಚೊಚ್ಚಲ ಆಯವ್ಯಯವನ್ನು ಹಣಕಾಸು ವಿಭಾಗದ ಉಪ ನಿಯಂತ್ರಕರಾದ ವಿಜಯಲಕ್ಷ್ಮಿ ಪ್ರಸ್ತುತಿ ಪಡಿಸಿದರು.
2026-27 ನೇ ಸಾಲಿನಲ್ಲಿ ರೂ. 64.60 ಲಕ್ಷಗಳ ಪ್ರಾರಂಭಿಕ ಶಿಲ್ಕು ಲಭ್ಯವಿದ್ದು, ಪಾಲಿಕೆಯ ಸ್ವಂತ ಸಂಪನ್ಮೂಲಗಳ ಮೂಲಕ ರೂ. 2342.20 ಕೋಟಿಗಳಷ್ಟು ಆದಾಯವನ್ನು ಕ್ರೋಢೀಕರಿಸಲು ಗುರಿ ಹೊಂದಲಾಗಿದೆ. ನಗರದ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅತ್ಯಂತ ಪೂರಕವಾಗಿ ಸ್ಪಂದಿಸಿದ್ದು, ರೂ. 884.50 ಕೋಟಿಗಳಷ್ಟು ಬೃಹತ್ ಅನುದಾನವನ್ನು ಒದಗಿಸಿವೆ ಹಾಗೂ ಮುನಿಸಿಪಲ್ ಬಾಂಡ್ ವಿತರಣೆ ಮೂಲಕ ರೂ.200.00 ಕೋಟಿಗಳನ್ನು ಸಂಗ್ರಹಿಸಲು ಯೋಜಿಸಲಾಗಿದ್ದು, ಈ ಎಲ್ಲಾ ಮೂಲಗಳಿಂದ ಒಟ್ಟಾರೆ ಸ್ವೀಕೃತಿಯು ರೂ. 3427.34 ಕೋಟಿಗಳಿಗೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಮೊತ್ತವನ್ನು ನಗರದ ಸರ್ವತೋಮುಖ ಅಭಿವೃದ್ಧಿಗಾಗಿ ವೆಚ್ಚ ಮಾಡಲು ನಿರ್ಧರಿಸಲಾಗಿದ್ದು, ಒಟ್ಟು ರೂ. 3426.60 ಕೋಟಿಗಳ ಅಂದಾಜು ವೆಚ್ಚದ ನಂತರವೂ ರೂ. 78.65 ಲಕ್ಷಗಳ ಮಿಗತೆ ಆಯವ್ಯಯವನ್ನು ಮಂಡಿಸಿದ್ದಾರೆ.

