ವಿಧಾನಸಭೆ ಬಜೆಟ್ ಅಧಿವೇಶನದ 3ನೇ ದಿನದಲ್ಲಿ ರೈತರಿಗೆ ಪರಿಹಾರ ಕೊಡುವ ವಿಚಾರದಲ್ಲಿ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಮತ್ತು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡರ ನಡುವೆ ಮಾತಿನ ಜಟಾಪಟಿ ನಡೆಯಿತು.
ಮಳೆಯಾಶ್ರಿತ ಪ್ರದೇಶಗಳಿಗೆ 6,800.ರೂ ಇದ್ದ ಪರಿಹಾರದ ಹಣವನ್ನು 13,600.ರೂ ಮತ್ತು ನೀರಾವರಿಗೆ 15,500 ರೂ ಇದ್ದಿದ್ದನ್ನು 25,000.ರೂ ಹೆಚ್ಚಳ ಮತ್ತು ರೈತರಿಗೆ ಅನುಕೂಲ ಆಗುವ ರೀತಿಯಲ್ಲಿ ಬಹುವಾರ್ಷಿಕ ಬೆಳೆಗೆ 18,000.ರೂ ಪರಿಹಾರ ಕೊಡುವ ಜಾಗದಲ್ಲಿ 28,000.ರೂ ವರೆಗೆ ನಮ್ಮ ಸರ್ಕಾರ (ಬಿಜೆಪಿ) ಇದ್ದಾಗ ಮಾಡಿದೆವು ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದರು.
ಮುಂದುವರೆದು, ರೈತರಿಗೆ ಬೆಳೆ ಪರಿಹಾರ ಕೊಡುವಾಗ ಕಾಂಗ್ರೆಸ್ ಸರ್ಕಾರ 2013-14 ರಲ್ಲಿ ಒಂಬತ್ತು ತಿಂಗಳು, 2014-15 ರಲ್ಲಿ ಎಂಟು ತಿಂಗಳು ನಂತರದಲ್ಲಿ ಕೊಟ್ಟಿದೆ. 2020-21 ಬಿಜೆಪಿ ಇದ್ದಾಗ ಎರಡೇ ತಿಂಗಳಿನಲ್ಲಿ ಪರಿಹಾರ ಕೊಟ್ಟಿದ್ದೇವೆ ಎಂದು ಹೇಳಿದರು.
ಅಕಾಲಿಕ ಮಳೆ, ಆಲಿಕಲ್ಲು, ಪ್ರವಾಹ ಆದ ಸಂಧರ್ಭದಲ್ಲಿ ಈ ಹಿಂದೆ ನಮ್ಮ ಸರ್ಕಾರ (ಕಾಂಗ್ರೆಸ್) ಇದ್ದಾಗ ಪರಿಹಾರವನ್ನು ಹೆಚ್ಚಳ ಮಾಡಿ ರೈತರಿಗೆ ಕೊಟ್ಟಿದ್ದೇವೆ ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡರು ಪ್ರತ್ಯುತ್ತರ ನೀಡಿದರು.
2013-14ರಲ್ಲಿ ಕೊಪ್ಪಳ, ರಾಯಚೂರು ಭಾಗದಲ್ಲಿ ಕಟಾವಿಗೆ ಬಂದ್ದಿದಂತಹ ಭತ್ತ ಮತ್ತು ಬಿಜಾಪುರ ಹಾಗು ಬಾಗಲಕೋಟೆ ಭಾಗದಲ್ಲಿ ದ್ರಾಕ್ಷಿ ಬೆಳೆಗೆ ಆಲಿಕಲ್ಲು ಬಿದ್ದು ಸಂಪೂರ್ಣ ನಾಶ ಆದ ಸಂದರ್ಭದಲ್ಲಿ ಮೊದಲ ಬಾರಿಗೆ ಪರಿಹಾರವನ್ನು ಎರಡುಪಟ್ಟು ಹೆಚ್ಚಳ ಮಾಡಿದ್ದು ಕಾಂಗ್ರೆಸ್ ಸರ್ಕಾರ ಎಂದು ಹೇಳಿದರು.
ಆದರೆ ಬರಗಾಲಕ್ಕೆ NDRF ಪ್ರಕಾರ ಯಾವ ಸರ್ಕಾರಗಳು ಪರಿಹಾರವನ್ನು ಹೆಚ್ಚಳ ಮಾಡಿಲ್ಲ. ಪ್ರವಾಹಗಳ ಸಂಧರ್ಭದಲ್ಲಿ ಆದ ಬೆಳವಣಿಗೆಗಳನ್ನು ಬರಗಾಲಕ್ಕೆ ಹೋಲಿಸಿ ವಿಪಕ್ಷ ನಾಯಕರು ಮಾತನಾಡುತ್ತಿದ್ದಾರೆ ಎಂದರು.