ಬೆಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನಡೆದಿವೆ ಎನ್ನಲಾದ ಸಾಮೂಹಿಕ ಶವ ಹೂತಿರುವ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (ಎಸ್ ಐಟಿ) ಭಾಗವಾಗಿರುವ ಐಪಿಎಸ್ ಅಧಿಕಾರಿ ಎಂ ಎನ್ ಅನುಚೇತ್ ಅವರು ಎಸ್ ಐಟಿಯಿಂದ ಹೊರಬಂದಿದ್ದಾರೆ ಎಂದು ಬಿಜೆಪಿ ಮುಖಂಡ, ಶಾಸಕ ಎಸ್ ಸುರೇಶ್ ಕುಮಾರ್ ವಿಧಾನಸಭೆಯಲ್ಲಿ ಹೇಳಿದ್ದಾರೆ. ಆದರೆ ಅನುಚೇತ್ ಅವರು ಅಂತಹ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಬಲ್ಲ ಮೂಲಗಳು ಖಚಿತಪಡಿಸಿವೆ. ನಿಖರ ಸುದ್ದಿಗೆ ಹೆಸರಾದ ಬಿಎಲ್ ಆರ್ ಪೋಸ್ಟ್ ಸಹ ಅನುಚೇತ್ ಅವರು ಎಸ್ ಐಟಿ ಭಾಗವಾಗಿ ಮುಂದುವರೆಯಲಿದ್ದಾರೆ ಎಂದು ವರದಿ ಮಾಡಿದೆ.
ರಾಜಾಜಿನಗರ ಕ್ಷೇತ್ರವನ್ನು ಪ್ರತಿನಿಧಿಸುವ ಸುರೇಶ್ ಕುಮಾರ್ ಅವರು, ಜನವರಿ 30 ರಂದು ಸದನದಲ್ಲಿ ಎಸ್ ಐಟಿಯ ಭಾಗವಾಗಿರುವ ಮುಖ್ಯಸ್ಥರಾದ ಸದನದಲ್ಲಿ ಐಪಿಎಸ್ ಅಧಿಕಾರಿಗಳಾದ ಅನುಚೇತ್ ಮತ್ತು ಸೌಮ್ಯಲತಾ ಅವರು ಎಸ್ ಐಟಿಯಿಂದ ಹೊರಬಂದಿದ್ದಾರೆ. ಹಾಗೆಯೇ ಸರ್ಕಾರಕ್ಕೆ ಎಸ್ ಐಟಿ ಯಾವುದೇ ವರದಿಯನ್ನೂ ಸಲ್ಲಿಸಿಲ್ಲ ಎಂದು ಹೇಳಿದ್ದರು.
ಗೃಹ ಇಲಾಖೆಯ ಮೂಲಗಳ ಪ್ರಕಾರ ಸುರೇಶ್ ಕುಮಾರ್ ಅವರು ಸುಳ್ಳು ಹೇಳಿದ್ದಾರೆ. ಅನುಚೇತ್ ಅವರು ತನಿಖೆಯ ಭಾಗವಾಗಿ ಮುಂದುವರೆದಿದ್ದಾರೆ ಮತ್ತು ತನಿಖೆಗೆ ಸಂಬಂಧಪಟ್ಟ ದಾಖಲೆಗಳಿಗೆ ಅವರು ಸಹಿ ಹಾಕಿದ್ದಾರೆ ಎಂದು ತಿಳಿಸಿವೆ. ಸೌಮ್ಯಲತಾ ಅವರ ವಿಷಯದಲ್ಲೂ ಸುರೇಶ್ ಕುಮಾರ್ ಸುಳ್ಳು ಹೇಳಿದ್ದಾರೆ. ಸೌಮ್ಯಲತಾ ಅವರು ತನಿಖೆಯಲ್ಲಿ ಭಾಗಿಯಾಗುತ್ತಿಲ್ಲವಾದರೂ ಅವರು ಎಸ್ ಐಟಿಯಿಂದ ಹೊರಹೋಗಿಲ್ಲ. ಈ ಇಬ್ಬರೂ ಅಧಿಕಾರಿಗಳು ಎಸ್ ಐಟಿಯಿಂದ ಹೊರಹೋಗಿದ್ದಾರೆ ಎನ್ನಲು ಯಾವುದೇ ಆದೇಶ ಹೊರಬಿದ್ದಿಲ್ಲ ಎಂದೂ ಗೃಹ ಇಲಾಖೆ ಮೂಲಗಳು ಖಚಿತಪಡಿಸಿವೆ.
2025ರ ಜುಲೈ ಮತ್ತು ಆಗಸ್ಟ್ ನಲ್ಲಿ ಧರ್ಮಸ್ಥಳದಲ್ಲಿ ನಡೆದ ಉತ್ಖನನದಲ್ಲಿ ಅನುಚೇತ್ ಅವರು ಕಾಣಿಸಿಕೊಂಡಿದ್ದರು. ಬೆಳ್ತಂಗಡಿಯಲ್ಲಿರುವ ಎಸ್ ಐಟಿ ಕಚೇರಿಗೂ ಅವರು ಹಾಜರಾಗಿದ್ದರು. ಆದರೆ ಬಿಜೆಪಿ ಶಾಸಕರು ಸದನದಲ್ಲಿ ಸಾರ್ವಜನಿಕವಾಗಿ ಹೇಳಿಕೆ ನೀಡುವ ಮುನ್ನ ಸತ್ಯಾಸತ್ಯತೆಯನ್ನು ಪರಾಮರ್ಶಿಸಿಲ್ಲ ಎನ್ನುವುದು ಕಂಡುಬರುತ್ತದೆ.
ಇನ್ನು ಎಸ್ ಐಟಿ ಸರ್ಕಾರಕ್ಕೆ ಯಾವುದೇ ವರದಿ ಸಲ್ಲಿಸಿಲ್ಲ ಎನ್ನುವುದು ಸುರೇಶ್ ಕುಮಾರ್ ಅವರ ಮತ್ತೊಂದು ಆಪಾದನೆ. ಆದರೆ ಬೆಳ್ತಂಗಡಿ ನ್ಯಾಯಾಲಯಕ್ಕೆ ಎಸ್ ಐಟಿಯು ಈಗಾಗಲೇ ತನಿಖಾ ವರದಿಯನ್ನು ನೀಡಿದೆ. ಆದರೆ ಸರ್ಕಾರಕ್ಕೆ ಯಾವುದೇ ವರದಿಯನ್ನು ಸಲ್ಲಿಸಿಲ್ಲ. ಏಕೆಂದರೆ ಯಾವುದೇ ತನಿಖೆಯಲ್ಲಿ ತನಿಖಾ ತಂಡವು ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತದೆಯೇ ಹೊರತು ಸರ್ಕಾರಕ್ಕೆ ಅಲ್ಲ ಎನ್ನುವುದು ಗಮನಾರ್ಹ ಅಂಶ.
ಧರ್ಮಸ್ಥಳದ ಬಂಗ್ಲೆಗುಡ್ಡ ಅರಣ್ಯ ಪ್ರದೇಶದಲ್ಲಿ ಪತ್ತೆಯಾದ ಏಳು ತಲೆಬುರುಡೆಗಳು ಮತ್ತು 1,000ಕ್ಕೂ ಹೆಚ್ಚು ಮೂಳೆಗಳನ್ನು ಕುರಿತು ಎಸ್ ಐಟಿ ತನಿಖೆ ಮುಂದುವರೆಸಿದೆ. ಇದು ಎಸ್ ಐಟಿ ನಡೆಸುತ್ತಿರುವ ತನಿಖೆ ಮುಂದುವರೆಯುತ್ತಿರುವುದಕ್ಕೆ ನಿದರ್ಶನ ಎಂದೂ ಗೃಹ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನ್ಯಾಯಾಲಯಕ್ಕೆ ಸಲ್ಲಿಸಿರುವ ತನಿಖಾ ವರದಿಯು ಕೇವಲ ಚಿನ್ನಯ್ಯನ ದೂರು ಮತ್ತು ಸೌಜನ್ಯ ಪರ ಹೋರಾಟಗಾರರ ಪಾತ್ರವನ್ನು ಕುರಿತಾಗಿದೆ.
ಎಸ್ ಐಟಿಯು ನ್ಯಾಯಾಲಯಕ್ಕೆ ನವಂಬರ್ 20ರಂದು ಬಿಎನ್ ಎಸ್ ಎಸ್- 215ರ ಅಡಿಯಲ್ಲಿ ಸುಳ್ಳು ಸಾಕ್ಷ್ಯ ಕುರಿತ ಪ್ರಕರಣದ ತನಿಖಾ ವರದಿಯನ್ನು ಸಲ್ಲಿಸಿದೆ. ಈ ಮೂಲಕ ಸಾಕ್ಷಿ ದೂರುದಾರ ಚಿನ್ನಯ್ಯ ಬಿಎನ್ ಎಸ್ ಎಸ್ ಸೆ. 183 ಅಡಿಯಲ್ಲಿ ನೀಡಿರುವ ಎರಡು ರೀತಿಯ ಹೇಳಿಕೆಗಳು, ಸೌಜನ್ಯ ಪರ ಹೋರಾಟಗಾರರ ಪಾತ್ರ ಮತ್ತು ಸುಜಾತಾ ಭಟ್ ನೀಡಿದ್ದ ದೂರು ಕುರಿತ ತನಿಖೆಯನ್ನು ಪೂರ್ಣಗೊಳಿಸಿದಂತಾಗಿದೆ.
ಧರ್ಮಸ್ಥಳದಲ್ಲಿ ಸೆ.39/202 ಅಡಿಯಲ್ಲಿ ದಾಖಲಾದ ಪ್ರಕರಣ ಕುರಿತು ಎಸ್ ಐಟಿ ತನಿಖೆ ಆರಂಭಿಸಿತ್ತು. ತನಿಖೆ ಸಂದರ್ಭದಲ್ಲಿ ಕಂಡು ಬಂದ ಇತರ ಬೆಳವಣಿಗೆಗಳನ್ನು ಕುರಿತು ತನಿಖೆ ನಡೆಸಲು ಎಸ್ ಐಟಿ ಉದ್ದೇಶಿಸಿದೆ ಎಂದು ಗೃಹ ಇಲಾಖೆ ಮೂಲಗಳು ತಿಳಿಸಿವೆ.
2025 ರ ಜುಲೈ 3 ರಂದು ಧರ್ಮಸ್ಥಳದ ಮಾಜಿ ಸ್ವಚ್ಚತಾ ಕಾರ್ಮಿಕ ಚಿನ್ನಯ್ಯ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ. ತಾನು ಕೆಲಸ ಮಾಡುತ್ತಿದ್ದ 1995 ರಿಂದ 2014ರವರೆಗೆ ಲೈಂಗಿಕ ಕೃತ್ಯಗಳನ್ನುಎಸಗಿ ನಂತರತನ್ನಿಂದ ನೂರಾರು ಶವಗಳನ್ನು ಹೂತುಹಾಕಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದು, ಕನಿಷ್ಠ 13 ಸ್ಥಳಗಳನ್ನು ಗುರುತಿಸುವುದಾಗಿ ಪ್ರತಿಪಾದಿಸಿದ್ದ.
2025ರ ಜುಲೈ11 ರಂದು ಬೆಳ್ತಂಗಡಿ ಮ್ಯಾಜಿಸ್ಟ್ರೇಟ್ ಎದುರು ಬಿಎನ್ ಎಸ್ ಎಸ್ ಸೆ. 183 ಅಡಿಯಲ್ಲಿ ಸಾಕ್ಷಿ ದೂರುದಾರ ಚಿನ್ನಯ್ಯ ಸ್ವಯಂಹೇಳಿಕೆಯನ್ನು ದಾಖಲಿಸಿ ಆಗಲೇ ಆತ ತಲೆಬುರುಡೆ ಮತ್ತು ಕೆಲವು ಮೂಳೆಗಳನ್ನು ಹಾಜರುಪಡಿಸಿದ್ದ. ಸರ್ಕಾರ ಪ್ರಕರಣದ ಸಮಗ್ರ ತನಿಖೆಯನ್ನು ಕೈಗೊಳ್ಳಲು ವಿಶೇಷ ತನಿಖಾ ತಂಡವನ್ನು ಜುಲೈ19 ರಂದು ರಚಿಸಿತ್ತು. ಧರ್ಮಸ್ಥಳ ಪೊಲೀಸರು (39/2025) ಅಡಿಯಲ್ಲಿ ಎಫ್ ಐಆರ್ ದಾಖಲಿಸಿಕೊಂಡಿದ್ದರು.

