ಶಿವಮೊಗ್ಗ : ಆಗುಂಬೆಯ “ಕಾಳಿಂಗ ಸೆಂಟರ್ ಫಾರ್ ರೈನ್ ಫಾರೆಸ್ಟ್ ಇಕಾಲಜಿ” ಸಂಸ್ಥೆಯಿಂದ ಸರಣಿ ಕಾನೂನು ಉಲ್ಲಂಘನೆಯಾಗಿರುವುದು ಶಿವಮೊಗ್ಗ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹನುಮಂತಪ್ಪ ಕೆ.ಟಿ ಅವರು ‘ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ), ಬೆಂಗಳೂರು’ ಅವರಿಗೆ ಸಲ್ಲಿಸಿರುವ ತನಿಖಾ ವರದಿಯಲ್ಲಿ ಬಹಿರಂಗಗೊಂಡಿದೆ.
ಕಾಳಿಂಗ ಫೌಂಡೇಶನ್, ಕಾಳಿಂಗ ಸೆಂಟರ್ ಫಾರ್ ರೈನ್ ಫಾರೆಸ್ಟ್ ಇಕಾಲಜಿ, ಕಾಳಿಂಗ ಮನೆ ಸಮೂಹ ಸಂಸ್ಥೆಗಳ ನಿರ್ದೇಶಕ ‘ಪಿ. ಗೌರಿಶಂಕರ್’ ಮೇಲೆ ವನ್ಯಜೀವಿ, ಅರಣ್ಯ ಕಾನೂನುಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಆಗುಂಬೆ ವಲಯ ಅರಣ್ಯಾಧಿಕಾರಿಗಳ ತಂಡ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದೆ.
ಕಾಳಿಂಗ ಸರ್ಪವನ್ನು ಅನಧಿಕೃತವಾಗಿ ಹಿಡಿದು, ಶೋಷಣೆ ಮಾಡಿರುವ ವಿಡಿಯೋದ ಆಧಾರದ ಮೇಲೆ ವನ್ಯಜೀವಿ ಸಂರಕ್ಷಣಾ ಕಾಯ್ದೆ-1972 ರ ಅಡಿಯಲ್ಲಿ “ಬೇಟೆ”ಯ ಒಂದು ಪ್ರಕರಣ, ಅಕ್ರಮವಾಗಿ ಹೊಸೂರು ಮೀಸಲು ಅರಣ್ಯ ಪ್ರವೇಶಿಸಿರುವುದಕ್ಕೆ ಕರ್ನಾಟಕ ಅರಣ್ಯ ಕಾಯ್ದೆ- 1963, ಕರ್ನಾಟಕ ಅರಣ್ಯ ನಿಯಮಗಳು- 1969ರ ಆಧಾರದ ಮೇಲೆ ಇನ್ನೊಂದು ಪ್ರಕರಣವನ್ನು ದಾಖಲಿಸಿ ಅರಣ್ಯ ಇಲಾಖೆ ತನಿಖೆ ಚುರುಕುಗೊಳಿಸಿದೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆ-1972 ರ ಕಲಂ 2(1) (16), 9, 50, 51, 55 ಮತ್ತು 57 ರ ಅಡಿಯಲ್ಲಿ ತೀರ್ಥಹಳ್ಳಿ ನ್ಯಾಯಾಲಯದಲ್ಲಿ “ವನ್ಯಜೀವಿ ಅಪರಾಧ ವರದಿ” ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯಾದ ಗೌರಿಶಂಕರ್, ಅವರಿಂದ ಹಾವು ಹಿಡಿಯುವ ಸ್ಟಿಕ್ ಮತ್ತು ಬ್ಯಾಗ್ ಅನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದು, ‘ಬೇಟೆ’ ಯ ಕೇಸ್ ದಾಖಲಿಸಿದ್ದಾರೆ.
‘ಕಾಳಿಂಗ ಮನೆ’ಯು ಅನಧಿಕೃತವಾಗಿ ಕಾಳಿಂಗ ಸರ್ಪ ಸೆರೆಹಿಡಿಯುವುದು, ಫೋಟೋಶೂಟ್, ವಿಡಿಯೋ ಚಿತ್ರೀಕರಣ, ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಅನಧಿಕೃತ ಕಾಟೇಜ್ ನಿರ್ಮಾಣ, ಜನರನ್ನು ಉಳಿಸಿ ಶಿಬಿರ, ಕಾರ್ಯಾಗಾರ ಮೊದಲಾದ ವಾಣಿಜ್ಯಿಕ ಚಟುವಟಿಕೆಗಳನ್ನು ನಡೆಸುತ್ತಿರುವ ಸಂಬಂಧ ಅರಣ್ಯ ಮಂತ್ರಿಗಳಿಗೆ ಹಲವು ದೂರುಗಳು ಸಲ್ಲಿಕೆಯಾಗಿತ್ತು. ಪ್ರಕರಣದ ಗಂಭೀರತೆಯನ್ನು ಮನಗಂಡ ಸಚಿವರು ಕಳೆದ ಸೆಪ್ಟೆಂಬರ್ ನಲ್ಲಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದರು.
ಈ ಸಂಬಂಧ ಶಿವಮೊಗ್ಗ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹನುಮಂತಪ್ಪ ಕೆ.ಟಿ ಅವರು ‘ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ), ಬೆಂಗಳೂರು’ ಅವರಿಗೆ ಸಲ್ಲಿಸಿರುವ ತನಿಖಾ ವರದಿಯಲ್ಲಿ ಗೌರಿಶಂಕರ್ ನೇತೃತ್ವದ “ಕಾಳಿಂಗ ಸೆಂಟರ್ ಫಾರ್ ರೈನ್ ಫಾರೆಸ್ಟ್ ಇಕಾಲಜಿ” ಸಂಸ್ಥೆಯ ಕಾನೂನು ಉಲ್ಲಂಘನೆಯ ಪಟ್ಟಿಗಳು ಪರಿಸರಾಸಕ್ತರನ್ನು ಬೆಚ್ಚಿ ಬೀಳಿಸುವಂತಿದೆ.
“ಕಾಳಿಂಗ ಸೆಂಟರ್ ಫಾರ್ ರೈನ್ ಫಾರೆಸ್ಟ್ ಇಕಾಲಜಿ”ಯು 2 ಎಕರೆ 23 ಗುಂಟೆ ಪ್ರದೇಶದಲ್ಲಿ ವ್ಯಾಪಿಸಿದ್ದು, ಸೋಮೇಶ್ವರ ವನ್ಯಜೀವಿ ಧಾಮದ ಗಡಿಯಿಂದ 340 ಮೀಟರ್ ದೂರದಲ್ಲಿದ್ದು, ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ಸೇರುತ್ತಿದೆ. ಅಲ್ಲದೇ ಹೊಸೂರು ಮೀಸಲು ಅರಣ್ಯದಿಂದ ಕೇವಲ 160 ಮೀಟರ್ ದೂರದಲ್ಲಿದೆ.
2024 ರಲ್ಲಿ ಶಿವಮೊಗ್ಗ ಜಿಲ್ಲಾಧಿಕಾರಿಗಳಿಂದ ಗೌರಿಶಂಕರ್ 26 ಗುಂಟೆ ಜಾಗವನ್ನು ‘ವೈಯಕ್ತಿಕ ವಸತಿ ಉದ್ದೇಶ’ಕ್ಕೆ ಪರಿವರ್ತಿಸಿಕೊಂಡಿದ್ದಾರೆ. ಆದರೆ ಸದರಿ ಪ್ರದೇಶದಲ್ಲಿ 3 ಕಾಟೇಜ್ ಗಳು, ಗೌರಿಶಂಕರ್ ಅವರಿಗೆ ಪ್ರತ್ಯೇಕ ಮರದ ಕಾಟೇಜ್, ಒಂದು ಅಡುಗೆ ಮನೆ, ಒಂದು ಸಂಗ್ರಹಣಾ ಕೊಠಡಿ, ಒಂದು ತರಬೇತಿ ಶಿಬಿರದ ಕೊಠಡಿ, ಟೆಂಟ್ ಅಳವಡಿಸಲು ಬಳಸುವ ಎರಡು ಸಿಮೆಂಟ್ ನೆಲಹಾಸು ಮತ್ತಿತರ ಸೌಲಭ್ಯಗಳಿವೆ.
ಈ ಪ್ರದೇಶದಲ್ಲಿ ಪ್ರತಿ ವ್ಯಕ್ತಿಗೆ ₹16,000/- ದಿಂದ ₹ 31,000/ ದವರೆಗೆ ಶುಲ್ಕ ವಿಧಿಸುವ 2-3 ದಿನಗಳ ವರೆಗಿನ ಕಾರ್ಯಾಗಾರಗಳನ್ನು ನಡೆಸುವ ಬಗ್ಗೆ ಜಾಹಿರಾತುಗಳು ಕಂಡುಬರುತ್ತಿವೆ. ಹಾಗೆಯೇ ಎರಡು ಕಾಟೇಜಿನ ಹಾಸಿಗೆಗೆ ಪ್ರತಿದಿನಕ್ಕೆ ₹6,500/- ದಿಂದ ₹7,865/- , ಟೆಂಟ್ ಗಳಲ್ಲಿ ಉಳಿಯಲು ಪ್ರತಿರಾತ್ರಿ ಒಬ್ಬರಿಗೆ ₹1,513/-, ಸ್ವಂತ ಟೆಂಟ್ ಬಳಸಿ ಉಳಿಯಲು ₹1,283/- ಹೀಗೆ ದರಗಳನ್ನು ನಿಗದಿಪಡಿಸಿ ವೆಬ್ ಸೈಟ್ ನಲ್ಲಿ ಪ್ರಕಟಿಸಿರುವುದು ಕಂಡುಬಂದಿರುತ್ತದೆ” ಎಂದು ವರದಿ ಹೇಳಿದೆ.
ಕಾಳಿಂಗ ಸೆಂಟರ್ ಫಾರ್ ರೈನ್ ಫಾರೆಸ್ಟ್ ಇಕಾಲಜಿಯು ಭಾರತ ಸರ್ಕಾರದ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ವಲಯದ ಉದ್ದಿಮೆ ಅಡಿಯಲ್ಲಿ ‘ಅತೀ ಸಣ್ಣ’ ಉದ್ದಿಮೆ ಎಂದು ನೋಂದಾಯಿಸಿಕೊಂಡಿದ್ದು, ಹಾಲಿಡೇ ಹೋಮ್, ಖಾಸಗಿ ಗೆಸ್ಟ್ ಹೌಸ್ ಸೇವೆಗಳನ್ನು ಒದಗಿಸುವುದಾಗಿ ಹೇಳಿಕೊಂಡಿದೆ. ಆದರೆ ಇಲ್ಲಿನ ಸೌಲಭ್ಯ ಮತ್ತು ಚಟುವಟಿಕೆಗಳನ್ನು ಗಮನಿಸಿದಾಗ, ಸ್ಥಳ ಹಾಗೂ ಕಟ್ಟಡಗಳನ್ನು ವಾಣಿಜ್ಯ ಉದ್ದೇಶಗಳಿಗೆ ಅಭಿವೃದ್ಧಿ ಪಡಿಸುವ ಹಾಗೂ ಬಳಸಿಕೊಳ್ಳುವ ಯೋಜನೆ ಹೊಂದಲಾಗಿರುತ್ತದೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತದೆ” ಎಂದು ವರದಿಯು ಅಭಿಪ್ರಾಯಪಟ್ಟಿದೆ.
ಗೌರಿಶಂಕರ್ ಅವರಿಗೆ ಸೇರಿದ ಈ ಜಾಗವು ಸುತ್ತಲೂ ಸ್ವಾಭಾವಿಕವಾಗಿ ಬೆಳೆದು ನಿಂತ ದಟ್ಟವಾದ ಗಿಡ ಮರಗಳಿಂದ ಕೂಡಿದೆ. ಇಲ್ಲಿ ಕಾಳಿಂಗ ಸೆಂಟರ್ ಫಾರ್ ರೈನ್ ಫಾರೆಸ್ಟ್ ಇಕಾಲಜಿಯ ಚಟುವಟಿಕೆಗಳು ರಾತ್ರಿ ವೇಳೆ ಟಾರ್ಚ್ ಲೈಟ್ ಬಳಸಿ ನಡೆಸುವಂತಹದು, ವನ್ಯಜೀವಿ ಕೇಂದ್ರಿತ ಆಕರ್ಷಣೆಯೊಂದಿಗೆ ನಡೆಯುವಂತಹ ಚಟುವಟಿಕೆಗಳು ಇವಾಗಿವೆ” ಎಂದು ವರದಿ ಆತಂಕ ವ್ಯಕ್ತಪಡಿಸಿದೆ.
ಸೋಮೇಶ್ವರ ವನ್ಯಜೀವಿ ಧಾಮದ ಪರಿಸರ ಸೂಕ್ಷ್ಮ ಪ್ರದೇಶದ ಅಧಿಸೂಚನೆಯ ನಿಯಮಾವಳಿಗಳ ಕ್ರಮ ಸಂಖ್ಯೆ 12 ರ ಪ್ರಕಾರ, ಗೌರಿಶಂಕರ್ ರವರ ಕಟ್ಟಡ ಮತ್ತು ಚಟುವಟಿಕೆಗಳು ನಿಯಂತ್ರಿತ ಚಟುವಟಿಕೆಗಳಿಗಾಗಿವೆ. ಅವು ಪರಿಸರ ಸೂಕ್ಷ್ಮ ವಲಯ ಮೇಲ್ವಿಚಾರಣಾ ಸಮಿತಿಯಿಂದ ಅನುಮತಿ ಪಡೆದುಕೊಳ್ಳಬೇಕಾಗಿರುತ್ತದೆ. ಆದರೆ ಇಲ್ಲಿ ಯಾವುದೇ ಅನುಮತಿ, ಪರವಾನಗಿ ಪಡೆದುಕೊಂಡಿರುವುದಿಲ್ಲ, ಕಾನೂನು ಪಾಲನೆ ಮಾಡಿರುವುದಿಲ್ಲ ಎಂಬ ವಿವರಗಳು ವರದಿಯಲ್ಲಿವೆ.
“ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯೊಳಗೆ, ವನ್ಯಧಾಮದ ತೀರಾ ಹತ್ತಿರದಲ್ಲಿ ಹಾಗೂ ಸುತ್ತಲೂ ಮತ್ತು ವನ್ಯಧಾಮದ ಗಡಿಯವರೆಗೂ ದಟ್ಟ ಮರಗಿಡಗಳು ಹೊಂದಿಕೊಂಡಿರುವಂತಹ ಪ್ರದೇಶದಲ್ಲಿ ಸಂಚಾರಗಳು ಮತ್ತು ಚಲನವಲನಗಳಿಗೆ ನಿಯಂತ್ರಣವಿಲ್ಲದೆ ನಡೆಯುತ್ತಿರುವ ಈ ಎಲ್ಲಾ ಚಟುವಟಿಕೆಗಳು ‘ಪರಿಸರ ಜಾಗೃತಿ’ ವ್ಯಾಖ್ಯಾನದ ಅಡಿಯಲ್ಲಿ ಹೇಗೆ ಬರುತ್ತದೆ?” ಎಂದು ಗೌರಿಶಂಕರ್ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಅಧಿಕಾರಿಗಳು, “ಇವು ಯಾವುದೇ ಅಧಿಕೃತ ಯೋಜನೆ, ಅನುಮತಿ, ಮೇಲ್ವಿಚಾರಣೆ, ನಿಯಂತ್ರಣಗಳಿಲ್ಲದೆ ಯಾರು? ಎಷ್ಟು ಜನ? ಎಲ್ಲಿಗೆ ಬಂದರು? ಮುಂತಾದವುಗಳ ದಾಖಲಾತಿ ನಿರ್ವಹಣೆ, ಅಗತ್ಯ ಬಂದಾಗ ಅವುಗಳ ತಪಾಸಣೆ ಯಾವುದು ಇಲ್ಲದೇ ನಡೆಯುತ್ತಿರುವ ಚಟುವಟಿಕೆಗಳಾಗಿವೆ” ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
“ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯಲ್ಲಿ ನಿರ್ದಿಷ್ಟ ಚಟುವಟಿಕೆಗಳನ್ನು ನಿಷೇಧಿಸುವುದು, ನಿಯಂತ್ರಿಸುವುದು ಅಥವಾ ಪ್ರೋತ್ಸಾಹಿಸುವುದು ಸಂಬಂಧಪಟ್ಟ ಮೇಲ್ವಿಚಾರಣಾ ಸಮಿತಿಯು ಕೈಗೊಳ್ಳಬೇಕಾಗಿರುತ್ತದೆ” ಎಂದಿರುವ ವರದಿಯು, “ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ಮುಂದಿನ ಕ್ರಮ ಕೈಗೊಳ್ಳಲು ಪತ್ರ ಬರೆಯಲಾಗಿದೆ” ಎಂದು ಉಲ್ಲೇಖಿಸಿದೆ.
ಕನ್ನಡ ಪ್ಲಾನೆಟ್

