ಬಳ್ಳಾರಿ: ಜನಾರ್ದನ ರೆಡ್ಡಿ ಪತ್ನಿ ಅರುಣಾ ಅವರ ಒಡೆತನದ ಜಿ ಸ್ಕ್ವೇರ್ ನ ಮಾದರಿ ಮನೆಗೆ ರೀಲ್ಸ್, ಫೋಟೊ ಶೂಟ್ ಮಾಡುವ ಹುಡುಗರು ಬೆಂಕಿ ಹಚ್ಚಿದ್ದರಿಂದ ಅಗ್ನಿ ಅವಘಡ ಸಂಭವಿಸಿದೆ ಬಳ್ಳಾರಿಯ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪೆನ್ನೇಕರ್ ಸ್ಪಷ್ಟಪಡಿಸಿದ್ದಾರೆ.
ಅವರು ಇಂದು ಬೆಂಕಿಗೆ ಸುಟ್ಟುಹೋದ ಮನೆಯನ್ನು ಪರಿಶೀಲನೆ ನಡಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.
ಜಿ ಸ್ಕ್ವೇರ್ ನ ಮಾದರಿ ಮನೆ ಕೆಲವು ವರ್ಷಗಳಿಂದ ಪಾಳು ಬಿದ್ದಿದ್ದು,ಯಾರೂ ವಾಸಿಸುತ್ತಿಲ್ಲ. ಇಡೀ ಮನೆಯಲ್ಲಿ ಕಸ ತುಂಬಿಕೊಂಡಿದೆ. ಸಿಸಿಟಿವಿ, ಭದ್ರತಾ ಸಿಬ್ಬಂದಿಯೂ ಇಲ್ಲ. ರೀಲ್ಸ್ ಮಾಡುವವರು ಬೆಂಕಿ ಹಚ್ಚಿರುವುದು ಖಚಿತವಾಗಿದೆ. ಆದರೂ ಪ್ರಕರಣದ ಕೂಲಂಕಷ ತನಿಖೆ ನಡೆಸಲಾಗುವುದು ಎಂದರು.
ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಎಂಟು ಮಂದಿಯನ್ನು ಬಂದಿಸಿದ್ದೇವೆ. ಇವರಲ್ಲಿ 6 ಮಂದಿ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರು, ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಶಾಲೆ ಬಿಟ್ಟವರು ಹಾಗೂ ವಿವಿಧ ಅಂಗಡಿಗಳಲ್ಲಿ ಕೆಲಸ ಮಾಡುವವರಿದ್ದಾರೆ. ಇವರು ದುರುದ್ದೇಶದಿಂದ ಈ ಕೆಲಸ ಮಾಡಿಲ್ಲ. ಆದರೂ ತನಿಖೆ ಮುಂದುವರೆಯಲಿದೆ ಎಂದು ತಿಳಿಸಿದರು.
ರೀಲ್ಸ್, ಫೋಟೊ ಶೂಟ್ ಮಾಡುವವರು ಈ ಮನೆಗೆ ಬಂದು ಹೋಗುತ್ತಿದ್ದರು. ಬಂಧಿತರ ಮೊಬೈಲ್ ಪರಿಶೀಲನೆಯಿಂದ ಇದು ತಿಳಿದು ಬಂದಿದೆ. ಮನೆಯಲ್ಲಿ ಸಿಗರೇಟ್ ತುಣುಕುಗಳು, ಬೆಂಕಿಪೊಟ್ಟಣಗಳು ಪತ್ತೆಯಾಗುವೆ. ರೀಲ್ಸ್ ಮಾಡುವ ಬಾಲಕನೊಬ್ಬ ಮನೆಯಲ್ಲಿದ್ದ ವಸ್ತುವೊಂದಕ್ಕೆ ಬೆಂಕಿ ಹೊತ್ತಿಸಿದ್ದಾನೆ. ಆದರೆ, ಬೆಂಕಿ ನಿಯಂತ್ರಣಕ್ಕೆ ಬಾರದೆ ಇಡೀ ಮನೆಗೆ ವ್ಯಾಪಿಸಿದೆ ಎಂದು ತಿಳಿಸಿದರು.
ಜನಾರ್ದನ ರೆಡ್ಡಿ ಅವರ ಲೇಔಟ್ ಗೆ ಯಾವುದೇ ಭದ್ರತೆ ಇಲ್ಲ. ಭದ್ರತಾ ವ್ಯವಸ್ಥೆ ಸಿಸಿಟಿವಿ ಹಾಕಿಕೊಳ್ಳುವುದು ಮಾಲೀಕರ ಜವಾಬ್ದಾರಿಯಾಗಿರುತ್ತದೆ ಎಂದು ಹೇಳೀದರು.

