ಬೆಂಗಳೂರು: ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದು ನೀಡಿದ ಭಾಷಣವನ್ನು ವಿಧಾನಮಂಡಲ ಜಂಟಿ ಅಧಿವೇಶನದಲ್ಲಿ ಪೂರ್ಣವಾಗಿ ಓದದೆ ಸದನಕ್ಕೆ ಅಪಮಾನ ಮಾಡಿರುವ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ರಾಜ್ಯದ ಜನತೆಯ ಕ್ಷಮೆ ಕೇಳಬೇಕು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಆಗ್ರಹಪಡಿಸಿದ್ದಾರೆ.
ವಿಧಾನಸಭೆಯಲ್ಲಿ ರಾಜ್ಯಪಾಲರು ಭಾಷಣ ಮಾಡಿದ ನಂತರ ನಡೆದ ಘಟನೆಗಳನ್ನು ಕುರಿತು ನಡೆದ ಚರ್ಚೆಗೆ ಉತ್ತರ ನೀಡಿದ ಎಚ್.ಕೆ.ಪಾಟೀಲ್, ಈ ಹಿಂದೆ ಬಿಜೆಪಿ ಶಾಸಕರು ವಿಧಾನಸಭೆಯಲ್ಲಿ ಗದ್ದಲ ಮಾಡಿ ಕಾಗದಪತ್ರಗಳನ್ನು ಹರಿದು ಸ್ಪೀಕರ್ ಮುಖಕ್ಕೆ ತೂರಿ ಪೀಠದ ಬಳಿಗೆ ಹೋಗಿ ಭುಜಕ್ಕೆ ಭುಜಕೊಟ್ಟು ನಿಂತಿದ್ದರು. ಆ ಅಪರಾಧಕ್ಕಾಗಿ 18 ಸದಸ್ಯರನ್ನು ಅಮಾನತುಗೊಳಿಸಲಾಗಿತ್ತು. ಅಂದಿನ ಘಟನೆಗೂ ನಿನ್ನೆಯ ಘಟನೆಗೂ ಹೋಲಿಕೆ ಮಾಡುವುಸು ಸರಿಯಲ್ಲ. ಅಂದು ನಡೆದಿದ್ದು ಅಪರಾಧ. ನಿನ್ನೆ ನಡೆದಿದ್ದು ಸಂವಿಧಾನ ರಕ್ಷಣೆ ಎಂದು ಸಮರ್ಥಿಸಿಕೊಂಡರು.
ರಾಜ್ಯಪಾಲರು ವಿಧಾನಸಭೆಯ ವರ್ಷದ ಮೊದಲ ಅಧಿವೇಶನದಲ್ಲಿ ಭಾಷಣ ಮಾಡುವುದು ಕಡ್ಡಾಯ. ಆದರೆ ರಾಜ್ಯಪಾಲರು ಸಂವಿಧಾನದ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಅವರಿಗೆ ಯಾವ ಒತ್ತಡ ಇತ್ತು ಎಂಬುದು ಗೊತ್ತಿಲ್ಲ. ರಾಜಭವನಕ್ಕೆ ಕೇಂದ್ರ ಸರ್ಕಾರದಿಂದ ಯಾವ ರೀತಿಯ ಕರೆ ಬರುತ್ತವೆ ಎಂದು ನಾನು ವಿವರಣೆ ನೀಡಲು ಬಯಸುವುದಿಲ್ಲ ಎಂದು ತಿರುಗೇಟು ನೀಡಿದರು.
ಸತ್ಯ ಹೇಳಿದರೆ ನೋವಾಗಬಹುದು. ರಾಜ್ಯಪಾಲರ ಜವಾಬ್ದಾರಿ ಕುರಿತು ಸಂವಿಧಾನದಲ್ಲಿ ಸ್ಪಷ್ಟ ಉಲ್ಲೇಖವಿದೆ. ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ನಲ್ಲೂ ಸಾಕಷ್ಟು ತೀರ್ಪುಗಳು ಬಂದಿವೆ. ಸಂಸತ್ ಜಂಟಿ ಅಧಿವೇಶನದಲ್ಲಿ ರಾಷ್ಟ್ರಪತಿಯವರ ಭಾಷಣದ ಸಂಪ್ರದಾಯ ಎಲ್ಲವನ್ನೂ ಪರಿಗಣಿಸಿ ಹೇಳುವುದಾದರೆ, ನಿನ್ನೆಯ ಘಟನೆಯಲ್ಲಿ ರಾಜ್ಯಪಾಲರು ಸಂವಿಧಾನವನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗೊ ಗೋಚರಿಸುತ್ತದೆ ಎಂದರು.
ರಾಜ್ಯ ಸರ್ಕಾರ ತನ್ನ ನೀತಿ ನಿಲುವುಗಳನ್ನು ರಾಜ್ಯಪಾಲರ ಭಾಷಣದ ಮೂಲಕ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವುದು ಪ್ರಜಾಪ್ರಭುತ್ವದ ಹಾದಿಯಾಗಿದೆ. ರಾಜ್ಯಪಾಲರು ಖುಷಿಯಾಗಲಿ ಎಂದು ನಾವು ಭಾಷಣ ಸಿದ್ದಪಡಿಸುವುದಿಲ್ಲ. ಒಟ್ಟು 122 ಪ್ಯಾರಾಗಳ ಭಾಷಣದಲ್ಲಿ ಯಾರನ್ನೂ ವೈಯಕ್ತಿಕವಾಗಿ ನಿಂದಿಸಿರಲಿಲ್ಲ ಎಂದು ಸ್ಪಷ್ಟನೆ ನೀಡಿದರು. ರಾಜ್ಯಪಾಲರು ಅಧಿವೇಶನದಿಂದ ಓಡಿಹೋಗಿದ್ದಾರೆ ಎಂಬ ಮಾತಿಗೆ ನಾನು ಈಗಲೂ ಬದ್ಧನಾಗಿದ್ದೇನೆ. ಸಚಿವ ಎಚ್.ಕೆ.ಪಾಟೀಲ್ ಅವರು ರಾಜ್ಯಪಾಲರನ್ನು ಕರೆಯಲು ಹೋಗಿದ್ದರು ಎಂದು ಪ್ರತಿಪಕ್ಷ ನಾಯಕರು ಆಪಾದಿಸಿದ್ದಾರೆ. ರಾಜ್ಯಪಾಲರು ನಿರ್ಗಮಿಸುವಾಗ ಅವರನ್ನು ಹಿಂಬಾಲಿಸುವಂತೆ ಮುಖ್ಯಮಂತ್ರಿಯವರು ಸನ್ನೆ ಮಾಡಿದರು. ಅದರಂತೆ ನಾನು ಹೆಜ್ಜೆ ಹಾಕಿದ್ದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ನಾನು ಸೇರಿದಂತೆ ಸಂಪುಟದ ಸಚಿವರು ರಾಜ್ಯಪಾಲರಿಗೆ ಹಸ್ತಲಾಘವ ನೀಡಿ ಕಾರಿನಲ್ಲಿ ಕೂರಿಸಿ ಗೌರವಯುತವಾಗಿ ಬೀಳ್ಕೊಟ್ಟಿದ್ದೇವೆ. ಎಲ್ಲಿಯೂ ಅಪಮಾನ ಮಾಡಿಲ್ಲ ಎಂದು ಸಮರ್ಥಿಸಿಕೊಂಡರು.
ರಾಜ್ಯಪಾಲರು ತಮ ಭಾಷಣವನ್ನು ಚುಟುಕಾಗಿ ಮುಗಿಸಿ ಜೈಹಿಂದ್ ಎಂದು ಹೇಳಿ ಹೊರಟು. ರಾಷ್ಟ್ರಗೀತೆ ನುಡಿಸುವವರೆಗೂ ಕಾಯಲಿಲ್ಲ. ರಾಜ್ಯಪಾಲರನ್ನು ಸ್ವಾಗತಿಸುವ ಮತ್ತು ಬೀಳ್ಕೊಡುವ ಬಗ್ಗೆ ಸಭಾಧ್ಯಕ್ಷರ ಕಚೇರಿಯಿಂದ ನೀಡಲಾಗಿರುವ ಲಘು ಟಿಪ್ಪಣಿಯಲ್ಲಿ ಸ್ಪಷ್ಟ ಉಲ್ಲೇಖವಿದೆ. ಅದರಂತೆ ನಾವು ನಡೆದುಕೊಂಡಿದ್ದೇವೆ. ಆದರೆ ರಾಜ್ಯಪಾಲರು ಒತ್ತಡಕ್ಕೆ ಒಳಗಾಗಿ ನಿರ್ಗಮಿಸಿದ್ದಾರೆ. ಅವರ ನಡೆ ಸಂವಿಧಾನ ಉಲ್ಲಂಘನೆಯಾಗಿದೆ. ಹೀಗಾಗಿ ರಾಜ್ಯಪಾಲರು ಕನ್ನಡ ನಾಡಿನ ಮತ್ತು ಸದನದ ಕ್ಷಮೆ ಕೇಳಬೇಕು ಎಂದು ಪಾಟೀಲ್ ಪದೇ ಪದೇ ಪ್ರತಿಪಾದಿಸಿದರು.

