ಶಿಡ್ಲಘಟ್ಟ ಪೌರಾಯುಕ್ತೆಗೆ ನಿಂದನೆ ಪ್ರಕರಣ: ರಾಜೀವ್‌ ಗೌಡಗೆ ಹೈಕೋರ್ಟ್‌ ತರಾಟೆ

ಬೆಂಗಳೂರು: ಕೋಲಾರ ಜಿಲ್ಲೆಯ ಶಿಡ್ಲಘಟ್ಟ ಪೌರಾಯುಕ್ತೆ ಜಿ.ಅಮೃತಾ ಗೌಡ ಅವರನ್ನು ಅಶ್ಲೀಲ, ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಒಡ್ಡಿದ ಆರೋಪ ಎದುರಿಸುತ್ತಿರುವ ಕಾಂಗ್ರೆಸ್‌ ಮುಖಂಡ ಬಿ.ವಿ.ರಾಜೀವ್‌ ಗೌಡ ಅವರನ್ನು ಹೈಕೋರ್ಟ್‌ ಕಟುವಾಗಿ  ತರಾಟೆಗೆ ತೆಗೆದುಕೊಂಡಿದೆ.

ಅಮೃತಾ ಗೌಡ ಅವರು ಶಿಡ್ಲಘಟ್ಟ ಟೌನ್ ಪೊಲೀಸ್ ಠಾಣೆಯಲ್ಲಿ ನನ್ನ ವಿರುದ್ಧ ದಾಖಲಿಸಿರುವ ಎಫ್‌ ಐಆರ್ ರದ್ದುಪಡಿಸಬೇಕು ಎಂದು ಕೋರಿ ರಾಜೀವ್‌ ಗೌಡ ಸಲ್ಲಿಸಿರುವ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು. ನ್ಯಾ.ಎಂ.ನಾಗಪ್ರಸನ್ನ ಅವರು, ಮಾತನಾಡುವಾಗ ನಾಲಗೆ ಹಿಡಿತದಲ್ಲಿರಬೇಕು. ಒಮ್ಮೆ ಆಡಿದ ಮಾತುಗಳನ್ನು ಹಿಂಪಡೆಯಲು ಅಸಾಧ್ಯ. ನಾಲಗೆಯೇ ಎಲ್ಲವನ್ನೂ ನಾಶ ಮಾಡುತ್ತದೆ ಎಂದು ಕಿಡ ಕಾರಿದ್ದಾರೆ.

ರಾಜೀವ್‌ ಗೌಡ ಪರ ವಾದ ಮಂಡಿಸಿದ ಹಿರಿಯ ವಕೀಲ ವಿವೇಕ್‌ ರೆಡ್ಡಿ ಅವರು, ಶಿಡ್ಲಘಟ್ಟ ಮೂಲದ ವ್ಯಕ್ತಿಯೊಬ್ಬರು ‘ಕಲ್ಟ್‌’ ಸಿನಿಮಾದಲ್ಲಿ ನಟಿಸಿದ್ದು, ಆ ಕಲಾವಿದನನ್ನು ಬೆಂಬಲಿಸಿ  ಬ್ಯಾನರ್‌ ಮತ್ತು ಕಟೌಟ್‌ ಗಳನ್ನು ಅಳವಡಿಸಲಾಗಿತ್ತು. ಇದಕ್ಕೆ ಪೌರಾಯುಕ್ತರು ಅನುಮತಿಯನ್ನೂ ನೀಡಿದ್ದರು. ಬ್ಯಾನರ್ ಅಳವಡಿಕೆಗೆ ಶುಲ್ಕವನ್ನೂ ಪಾವತಿಸಲಾಗಿತ್ತು. ಆದರೆ ಪೌರಾಯುಕ್ತರು ಏಕಾಏಕಿ ಬ್ಯಾನರ್‌ಗಳನ್ನು ತೆರವು ಮಾಡಿಸಿದ್ದರು. ಅಲ್ಲಿಯೇ ಇದ್ದ  ಜೆಡಿಎಸ್‌ ಪಕ್ಷದ ಬ್ಯಾನರ್‌ ಗಳನ್ನು ಮಾತ್ರ ತೆರವುಗೊಳಿಸಿರಲಿಲ್ಲ. ಹಾಗಾಗಿ ರಾಜೀವ್‌ ಗೌಡ ಅವರು, ಪೌರಾಯುಕ್ತರ ವಿರುದ್ಧ ಕೆಲವು ಪದಗಳನ್ನು ಬಳಸಿದ್ದಾರೆ. ಈ ವರ್ತನೆಗೆ ರಾಜೀವ್‌ ಗೌಡ ಈಗಾಗಲೇ ಕ್ಷಮೆ ಕೋರಿದ್ದಾರೆ. ನ್ಯಾಯಾಲಯ ರಕ್ಷಣೆ ಒದಗಿಸಿದರೆ ಬಹಿರಂಗವಾಗಿ ಕ್ಷಮೆ ಕೋರಲು ಸಿದ್ಧ ಎಂದು ನ್ಯಾಯಮೂರ್ತಿಗಳ ಗಮನಕ್ಕೆ ತಂದರು.

ಈ ವಾದಕ್ಕೆ ಕೆಂಡಾಮಂಡಲರಾದ ನ್ಯಾಯಮೂರ್ತಿಗಳು, ಮಹಿಳಾ ಅಧಿಕಾರಿಗೆ ಗೌರವ ಕೊಡಬೇಕು ಎನ್ನುವುದೂ ತಿಳಿದಿಲ್ಲವೇ? ಬಾಯಿಗೆ ಬಂದ ಹಾಗೆ ಮಾತನಾಡಬಹುದೇ? ಎಂದು ಪ್ರಶ್ನಿಸಿದರು. ಅರ್ಜಿದಾರರ ಪಕ್ಷವೇ ಆಡಳಿತ ನಡೆಸುತ್ತಿದ್ದರೂ ರಾಜೀವ್‌ ಗೌಡ ಎಲ್ಲಿ ಅಡಗಿ ಕುಳಿತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.

ಇದಕ್ಕೆ ಉತ್ತರಿಸಿದ ವಿವೇಕ್‌ ರೆಡ್ಡಿ, ರಾಜೀವ್‌ ಗೌಡ ಈಗಾಗಲೇ ನಿರೀಕ್ಷಣಾ ಜಾಮೀನು ಕೋರಿರುವ ಅರ್ಜಿ ವಿಚಾರಣಾ ನ್ಯಾಯಾಲಯದಲ್ಲಿ ಬಾಕಿ ಇದೆ. ಪೊಲೀಸರು ಬಂಧಿಸಲು ಸಜ್ಜಾಗಿದ್ದಾರೆ. ನ್ಯಾಯಾಲಯ ರಕ್ಷಣೆ ಒದಗಿಸಿದರೆ ತನಿಖೆಗೆ ಸಹಕರಿಸುತ್ತಾರೆ ಎಂದರು. ನ್ಯಾಯಪೀಠ ಇಂದು (ಬುಧವಾರ) ತೀರ್ಪು ಪ್ರಕಟಿಸುವುದಾಗಿ ತಿಳಿಸಿ ಆದೇಶವನ್ನು ಕಾಯ್ದಿರಿಸಿತು.

More articles

Latest article

Most read