ಬೆಂಗಳೂರು: ರಾಜ್ಯ ಮತ್ತು ಬಿಬಿಎಂಪಿ (ಜಿಬಿಎ) ವ್ಯಾಪ್ತಿಯಲ್ಲಿರುವ ಕ್ಲಬ್ ಗಳ ಕಾನೂನುಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸುವ ಸಂಬಂಧ ನೀಡಲಾಗಿರುವ ಸದನ ಸಮಿತಿ ವರದಿಯನ್ನು ಅನುಷ್ಠಾನಗೊಳಿಸಬೇಕೆಂದು ಕಾಂಗ್ರೆಸ್ ವಕ್ತಾರ, ವಿಧಾನಪರಿಷತ್ ಸದಸ್ಯ ರಮೇಶ್ ಬಾಬು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಪತ್ರ ಬರೆದಿದ್ದಾರೆ.
ಕರ್ನಾಟಕ 14ನೇ ವಿಧಾನಸಭೆಯು 2012-13ನೇ ಸಾಲಿನಲ್ಲಿ ರಾಜ್ಯದ ಮತ್ತು ಬೃಹತ್ ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಬರುವ ಕ್ಲಬ್ ಗಳ ಕಾನೂನುಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸಲು ಸದನ ಸಮಿತಿಯನ್ನು ರಚಿಸಿತ್ತು. ಗೌರವಾನ್ವಿತ ಸಮಿತಿಯು 07-06-2013 ರಲ್ಲಿ ಮಧ್ಯಂತರ ವರದಿಯನ್ನು ಸದನದಲ್ಲಿ ಮಂಡಿಸಿರುತ್ತದೆ. ತದನಂತರ 07-02-2017 ರಲ್ಲಿ ಸುಮಾರು 180 ಪುಟಗಳ ಸಮಗ್ರ ವರದಿಯನ್ನು ಸದನ ಸಮಿತಿಯು ಸಭಾಧ್ಯಕ್ಷರಿಗೆ ಸಲ್ಲಿಸಿರುತ್ತದೆ.
ಸದನ ಸಮಿತಿಯು ಕ್ಲಬ್ ಗಳು ಸರ್ಕಾರದ ನಿಯಮಗಳನ್ನು ಮತ್ತು ಕಾನೂನುಗಳನ್ನು ಗಾಳಿಗೆ ತೂರಿ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುತ್ತಿರುವುದನ್ನು ತಮ್ಮ ವರದಿಯಲ್ಲಿ ಪ್ರಸ್ತಾಪಿಸಿರುತ್ತಾರೆ. ಇದರ ಜೊತೆಗೆ ಅನೇಕ ಕ್ಲಬ್ ಗಳಿಗೆ ಭೇಟಿ ನೀಡಿ ಕ್ಲಬ್ ಗಳ ಬೈಲಾ ಮತ್ತು ನಿಯಮಗಳನ್ನು ಪರಿಶೀಲನೆ ಮಾಡಿ ಅವರ ಆಕ್ಷೇಪಣೆಗಳಿಗೂ ಅವಕಾಶವನ್ನು ಕಲ್ಪಿಸಿ, ವರದಿಯನ್ನು ಸಿದ್ಧಪಡಿಸಿ ಮಂಡಿಸಿರುತ್ತಾರೆ. ಇದರ ಜೊತೆಗೆ ಒಂದು ಉದ್ದೇಶಿತ ಮಸೂದೆಯನ್ನು ನೀಡಿರುತ್ತಾರೆ. ಉದ್ದೇಶಿತ ಮಸೂದೆಯು ಜಾರಿಗೊಂಡಲ್ಲಿ, ರಾಜ್ಯದಲ್ಲಿರುವ ಕ್ಲಬ್ ಗಳನ್ನು ಕಾನೂನಿನ ವ್ಯಾಪ್ತಿಗೆ ತರಲು ಮತ್ತು ನಿಯಂತ್ರಣ ಮಾಡಲು ಅನುಕೂಲವಾಗುತ್ತದೆ. ವರದಿ ಮಂಡಿಸಿ ಸುಮಾರು ಎಂಟು ವರ್ಷಗಳು ಗತಿಸಿದ್ದರೂ, ಇಲ್ಲಿಯವರೆಗೂ ಅದು ಅನುಷ್ಠಾನಗೊಂಡಿರುವುದಿಲ್ಲ. ರಾಜ್ಯದ ಹಿತ ದೃಷ್ಟಿಯಿಂದ ಕ್ಲಬ್ ಗಳು ಪಾರದರ್ಶಕವಾಗಿ ನಡೆಯುವ ದೃಷ್ಟಿಯಿಂದ ರಾಜ್ಯ ಸರ್ಕಾರದ ಆದಾಯವನ್ನು ಹೆಚ್ಚು ಗೊಳಿಸುವ ದೃಷ್ಟಿಯಿಂದ ಸದನ ಸಮಿತಿಯ ವರದಿಯನ್ನು ಅನುಷ್ಠಾನಗೊಳಿಸುವುದು ಅನಿವಾರ್ಯವಾಗಿರುತ್ತದೆ. ಸಮಿತಿಯು ಅನೇಕ ಸಭೆಗಳನ್ನು ನಡೆಸಿ ಮಾಹಿತಿಯನ್ನು ಪಡೆದುಕೊಂಡು ತದನಂತರ ವರದಿಯನ್ನು ನೀಡಿರುತ್ತದೆ. ವರದಿ ನೀಡುವ ಮುನ್ನ ಇತರೆ ರಾಜ್ಯಗಳಿಗೂ ಭೇಟಿ ನೀಡಿ ಕ್ಲಬ್ ಗಳ ಸಂಬಂಧ ಮಾಹಿತಿಯನ್ನು ಪಡೆದುಕೊಂಡು ಸುದೀರ್ಘವಾದ ಅಧ್ಯಯನ ಮಾಡಿ ಉತ್ತಮ ವರದಿಯನ್ನು ನೀಡಿದ್ದು, ಅದನ್ನು ಜಾರಿಗೊಳಿಸಲು ಸಭಾಧ್ಯಕ್ಷರನ್ನು ಕೋರಿರುತ್ತದೆ. ರಾಜ್ಯದ ಹಿತ ದೃಷ್ಟಿಯಿಂದ ಸದನ ಸಮಿತಿ ನೀಡಿರುವ ವರದಿಯನ್ನು ಅನುಷ್ಠಾನಗೊಳಿಸುವುದು ಅವಶ್ಯಕವಾಗಿರುತ್ತದೆ. ಆದುದರಿಂದ ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷರು ಮತ್ತು ಸಭಾಪತಿಯವರು ಸದನ ಸಮಿತಿ ನೀಡಿರುವ ಕ್ಲಬ್ ಸಂಬಂಧ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಲು ಮತ್ತು ಸಮಿತಿಯು ನೀಡಿರುವ ಉದ್ದೇಶಿತ ಮಸೂದೆಯನ್ನು ಜಾರಿಗೊಳಿಸಲು ಮನವಿ ಮಾಡಿಕೊಂಡಿದ್ದಾರೆ.

