ಕಲಬುರಗಿ ಜಿಲ್ಲೆಯಲ್ಲಿ ಕಾಲುಬಾಯಿ ಲಸಿಕೆ; ಶೇ. 96ರಷ್ಟು ಪ್ರಗತಿ: ಇದು ನಮ್ಮ ನೈಜ ಗೋರಕ್ಷಣೆ ಎಂದ ಸಚಿವ ಪ್ರಿಯಾಂಕ್‌ ಖರ್ಗೆ

Most read

ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಕಾಲುಬಾಯಿ ರೋಗದ ಲಸಿಕೆ ಹಾಕುವಲ್ಲಿ ಶೇ. 96ರಷ್ಟು ಪ್ರಗತಿ ಸಾಧಿಸುವ ಮೂಲಕ ಜಾನುವಾರುಗಳ ರಕ್ಷಣೆಯಲ್ಲಿ ಮಹತ್ವದ ಹೆಜ್ಜೆಯನ್ನು ಇಡಲಾಗಿದೆ. ಇದು ನಮ್ಮ ನೈಜ ಗೋರಕ್ಷಣೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಅವರು ಕಾಲುಬಾಯಿ ರೋಗದ ಲಸಿಕೆ ಹಾಕುವಲ್ಲಿ ಜಿಲ್ಲೆಯ ಪ್ರಗತಿ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ಜಿಲ್ಲೆಯಲ್ಲಿನ ಒಟ್ಟು 3,55, 653 ಜಾನುವಾರುಗಳ ಪೈಕಿ 3,41,136 ಜಾನುವಾರುಗಳಿಗೆ ಕಾಲುಬಾಯಿ ರೋಗದ ಲಸಿಕೆ ನೀಡಲಾಗಿದೆ. ಗರ್ಭ ಕಟ್ಟಿದ ಮತ್ತು ಇತರ ರೋಗಗಳಿರುವ ಜಾನುವಾರುಗಳಿಗೆ ಲಸಿಕೆ ಹಾಕುವಂತಿಲ್ಲ, ಈ ಕಾರಣಕ್ಕಾಗಿ 14,500 ಜಾನುವಾರುಗಳು ಲಸಿಕಾಕರಣದಿಂದ ಹೊರಗುಳಿದಿವೆ.

ಪಶುವೈದ್ಯಕೀಯ ಸಿಬ್ಬಂದಿ ಪ್ರತಿ ಹಳ್ಳಿಗಳಿಗೂ ತೆರಳಿ, ರೈತರಲ್ಲಿ ಜಾಗೃತಿ ಮೂಡಿಸಿದ್ದರ ಪರಿಣಾಮ ಈ ಪ್ರಮಾಣದ ಯಶಸ್ಸು ಸಾಧ್ಯವಾಗಿದೆ.

ರೈತಾಪಿ ವರ್ಗದ ಜೀವನಾಡಿಯಾಗಿರುವ ಜಾನುವಾರುಗಳನ್ನು ರಕ್ಷಿಸಿದರೆ ರೈತರನ್ನು ರಕ್ಷಿಸಿದಂತೆ, ಈ ಪ್ರಜ್ಞೆಯೊಂದಿಗೆ ನಮ್ಮ ಸರ್ಕಾರ ಕೆಲಸ ಮಾಡುತ್ತದೆಯೇ ಹೊರತು ರಾಜಕೀಯ ಹಿತರಕ್ಷಣೆಗಾಗಿ ಬೂಟಾಟಿಕೆಯ ಗೋರಕ್ಷಣೆ ನಮ್ಮದಲ್ಲ.

2022ಕ್ಕೂ ಮೊದಲು ರಾಜ್ಯದಲ್ಲಿ ಕಾಲುಬಾಯಿ ರೋಗದ ಲಸಿಕೆಯ ತೀವ್ರ ಕೊರತೆ ದಾಖಲಾಗಿತ್ತು, ಕಾಲುಬಾಯಿ ರೋಗಕ್ಕೆ ರಾಜ್ಯದ ಜಾನುವಾರುಗಳ ಸಾವು ತೀವ್ರ ಏರಿಕೆ ಕಂಡಿತ್ತು ಎಂಬ ಸಂಗತಿ ಈಗ ಇತಿಹಾಸ ಎಂದು ತಿಳಿಸಿದ್ದಾರೆ.

More articles

Latest article