ಬೆಂಗಳೂರು: ಸರ್ಕಾರಿ ಮತ್ತು ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ನೀಡಲಾಗುವ ಶೂ ಮತ್ತು ಸಾಕ್ಸ್ ಗೆ ಬದಲಾಗಿ ಈ ವರ್ಷದಿಂದ ಪಾದರಕ್ಷೆ ವಿತರಿಸಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ.
ಮಳೆಗಾಲ ಮತ್ತು ಬೇಸಿಗೆ ಕಾಲದಲ್ಲಿ ದೀರ್ಘ ಅವಧಿಗೆ ಶೂ ಧರಿಸುವುದರಿಂದ ವಿದ್ಯಾರ್ಥಿಗಳಿಗೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಬಗ್ಗೆ ಶಿಕ್ಷಣ ಇಲಾಖೆಗೆ ಹಲವು ದೂರು ಮತ್ತು ಮನವಿಗಳು ಸಲ್ಲಿಕೆಯಾಗಿದ್ದವು. ಹವಾಮಾನ ವೈಪರೀತ್ಯ ಹಾಗೂ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಕೆಲವು ಜಿಲ್ಲೆಗಳಲ್ಲಿ ಶೂ ಬದಲಿಗೆ ಪಾದರಕ್ಷೆಯನ್ನು ನೀಡಲು ಉದ್ದೇಶಿಸಲಾಗಿದೆ.
ದೀರ್ಘಕಾಲ ಶೂ ಧರಿಸುವುದರಿಂದ ಪಾದಗಳಲ್ಲಿ ಬೆವರು ಉತ್ಪತ್ತಿಯಾಗಿ ಚರ್ಮದ ಕಾಯಿಲೆಗಳು ಕಾಣಿಸಿಕೊಳ್ಳುತ್ತಿದ್ದವು. ಮಳೆಗಾಲದಲ್ಲಿ ಸಾಕ್ಸ್ ಮತ್ತು ಶೂ ಒದ್ದೆಯಾದರೆ ಒಣಗುವುದು ಕಷ್ಟವಾಗಿ ವಾಸನೆ ಕಾಣಿಸಿಕೊಳ್ಳುತ್ತಿತ್ತು. ಬೇಸಿಗೆ ಮತ್ತು ಬಿಸಿಲಿನಲ್ಲಿ ಶೂಗಳಿಗಿಂತ ಚಪ್ಪಲಿ ಆರಾಮದಾಯಕ ಎಂಬ ಅಭಿಪ್ರಾಯ ಕೇಳಿ ಬಂದಿತ್ತು. ಹೀಗಾಗಿ ಪಾದರಕ್ಷೆ ನೀಡಲು ಉದ್ದೇಶಿಸಲಾಗಿದೆ.
ಈ ಯೋಜನೆಯನ್ನು ರಾಜ್ಯವ್ಯಾಪಿ ಜಾರಿಗೊಳಿಸುವುದಿಲ್ಲ. ಬದಲಾಗಿ ಪಾದರಕ್ಷೆಗೆ ಬೇಡಿಕೆ ಇರುವ ಜಿಲ್ಲೆಗಳಲ್ಲಿ ಮಾತ್ರ ವಿತರಿಸಲಾಗುತ್ತದೆ. ಇಂತಹ ಜಿಲ್ಲೆಗಳನ್ನು ಗುರುತಿಸಲು ಉಪನಿರ್ದೇಶಕರಿಗೆ ಸೂಚನೆ ನೀಡಲಾಗಿದೆ. ಶೂ ಬದಲು ಚಪ್ಪಲಿ ನೀಡುವ ಪ್ರಸ್ತಾಪ ಹೊಸದೇನಲ್ಲ. 2015ರಲ್ಲಿಯೂ ಇಂತಹ ಆಲೋಚನೆ ಮೂಡಿತ್ತಾದರೂ ತಾಂತ್ರಿಕ ಮತ್ತು ಆಡಳಿತಾತ್ಮಕ ಕಾರಣಗಳಿಂದ ಜಾರಿಯಾಗಿರಲಿಲ್ಲ.
ಪ್ರಸ್ತುತ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಒಂದು ಜೊತೆ ಶೂ ಮತ್ತು ಎರಡು ಜೊತೆ ಸಾಕ್ಸ್ ವಿತರಿಸಲಾಗುತ್ತಿದೆ. 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ ರೂ.265, 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ ರೂ.295 ಮತ್ತು 9, 10ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ ರೂ.325 ನಿಗದಿಪಡಿಸಲಾಗಿದೆ.

