ಕೆಐಎಡಿಬಿ ಕೈಗಾರಿಕಾ ಪ್ರದೇಶಗಳಲ್ಲಿ ಕನ್ನಡ ಸ್ನೇಹಿ ವಾತಾವರಣ ನಿರ್ಮಿಸಲು ಡಾ. ಬಿಳಿಮಲೆ ಆಗ್ರಹ

Most read

ಬೆಂಗಳೂರು: ರಾಜ್ಯಾದ್ಯಂತ ವ್ಯಾಪಿಸಿರುವ ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ (ಕೆಐಎಡಿಬಿ)ಯ ಕೈಗಾರಿಕಾ ಪ್ರದೇಶಗಳಲ್ಲಿ ಕನ್ನಡ ಸ್ನೇಹಿ ವಾತಾವರಣವು ನಿರ್ಮಾಣವಾಗಬೇಕಾದ ತುರ್ತು ಅವಶ್ಯಕತೆ ಇದ್ದು, ಸರ್ಕಾರವು ಕೂಡಲೇ ಕ್ರಮಕ್ಕೆ ಮುಂದಾಗಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಆಗ್ರಹಿಸಿದ್ದಾರೆ.

ಈ ಕುರಿತಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಎಂ.ಬಿ.ಪಾಟೀಲ್ ಅವರಿಗೆ ಪತ್ರ ಬರೆದಿರುವ ಬಿಳಿಮಲೆ, ಈ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಹುಪಾಲು ಕೈಗಾರಿಕೆಗಳು ತಮ್ಮ ನಾಮಫಲಕಗಳಲ್ಲಿ ಕನ್ನಡಕ್ಕೆ ಪ್ರಾಧಾನ್ಯತೆಯನ್ನು ನೀಡದಿರುವುದು, ಆಡಳಿತ ವ್ಯವಸ್ಥೆಯಲ್ಲಿ ಕನ್ನಡವನ್ನು ಪೋಷಿಸದಿರುವುದು ರಾಜ್ಯಾದ್ಯಂತ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಅನೇಕ ಬಾರಿ ತಮ್ಮ ಗಮನಕ್ಕೆ ಬಂದಿದ್ದು, ಇದು ತುರ್ತಾಗಿ ಬದಲಾಗಬೇಕಾದ ಅವಶ್ಯಕತೆ ಇದೆ ಎಂದಿದ್ದಾರೆ.

ನಾಡಿನ ನೆಲ, ಜಲ, ವಿದ್ಯುತ್ ಸೇರಿದಂತೆ ಎಲ್ಲ ಆರ್ಥಿಕ ರಿಯಾಯಿತಿ, ಮೂಲ ಸೌಕರ್ಯಗಳನ್ನು ಪಡೆಯುವ ಕೈಗಾರಿಕೆಗಳು ಇಲ್ಲಿನ ಭಾಷೆ-ಸಂಸ್ಕೃತಿಗೆ ಗೌರವ ಕೊಡಬೇಕಾದುದು ಪ್ರಮುಖ ಜವಾಬ್ದಾರಿಯಾಗಿರುತ್ತದೆ ಎಂದಿರುವ ಬಿಳಿಮಲೆ, ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ ೨೦೨೨ರಲ್ಲಿ ಇರುವ ಅವಕಾಶಗಳನ್ನು ಸರ್ಕಾರವು ಬಳಸಿಕೊಂಡು ಕನ್ನಡದ ಕುರಿತಂತೆ ಉಪೇಕ್ಷೆಯನ್ನು ತೋರುವ ಸಂಸ್ಥೆಗಳಿಗೆ ದಂಡ ವಿಧಿಸಿ ಅವ್ಯವಸ್ಥೆಯನ್ನು ಸರಿಪಡಿಸಲು ಮುಂದಾಗಬೇಕೆಂದಿದ್ದಾರೆ.

ಕೈಗಾರಿಕಾ ಪ್ರದೇಶಗಳಲ್ಲಿ ಸರ್ಕಾರವು ನಿರ್ಮಿಸಿರುವ ರಸ್ತೆ, ನಿಲ್ದಾಣಗಳಿಗೆ ಸಾಧಕ ಕನ್ನಡಿಗರ ಹೆಸರುಗಳನ್ನು ಇಡುವುದು, ಈ ರಸ್ತೆ, ನಿಲ್ದಾಣಗಳಲ್ಲಿನ ನಾಮಫಲಕಗಳಲ್ಲಿ ಕನ್ನಡಕ್ಕೆ ಪ್ರಾಶಸ್ತ್ಯವನ್ನು ಕಲ್ಪಿಸುವುದನ್ನು ಕೂಡ ಸರ್ಕಾರವು ತುರ್ತಾಗಿ ಮಾಡಬೇಕಿದೆ ಎಂದಿರುವ ಬಿಳಿಮಲೆ, ಈ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುವ ಕನ್ನಡಿಗರಿಗೆ ತಾವು ಪರಕೀಯರೆನ್ನುವ ಭಾವನೆ ಮೂಡದಿರುವಂತೆ ಮಾಡುವ ಬೃಹತ್ ಸವಾಲು ಸರ್ಕಾರದ ಮುಂದಿದೆ ಎಂದಿದ್ದಾರೆ.

More articles

Latest article