ಹವಾಮಾನ ವೈಪರೀತ್ಯ ಎಂಬುದು ರಾತ್ರೋರಾತ್ರಿ ಘಟಿಸುವುದಿಲ್ಲ. ಹವಾಮಾನ ವೈಪರೀತ್ಯದಿಂದಾಗುವ ದೊಡ್ಡಅವಘಡವೊಂದು ಒಂದೆರಡು ದಿನಗಳ ಮಟ್ಟಿಗೆ ಬ್ರೇಕಿಂಗ್ ನ್ಯೂಸ್ ಆದರೂ ಹವಾಮಾನ ವೈಪರೀತ್ಯವು ತಾನಾಗಿಯೇ ಯಾವ ಕಾಲಕ್ಕೂ ಬ್ರೇಕಿಂಗ್ ನ್ಯೂಸ್ ಆಗಲಾರದು.ಹೀಗಾಗಿ ಇಂದಲ್ಲದಿದ್ದರೆ ನಾಳೆ ನೋಡೋಣವೆಂಬ ಉಡಾಫೆ ಇದ್ದೇಇರುತ್ತದೆ. ಆದರೆ ಈ ನಾಳೆ ನಿಜಕ್ಕೂ ಯಾವಾಗ ಬರಲಿದೆ ಎಂಬುದು ಉತ್ತರವಿಲ್ಲದ ಯಕ್ಷ ಪ್ರಶ್ನೆ–ಪ್ರಸಾದ್ ನಾಯ್ಕ್, ದೆಹಲಿ.
ಅಂದಾಜು ಇಪ್ಪತ್ತೈದು ವರ್ಷಗಳ ಹಿಂದಿನ ಕತೆ.
ಆಗೆಲ್ಲಾ ನಮ್ಮ ಶಾಲಾದಿನಗಳಲ್ಲಿ ಪ್ರಬಂಧ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿತ್ತು. ಅವುಗಳಲ್ಲಿ ವಿದ್ಯಾರ್ಥಿಗಳು ಪ್ರಬಂಧಗಳನ್ನು ಬರೆಯಲೆಂದು ನೀಡಲಾಗುತ್ತಿದ್ದ ವಿಷಯಗಳು ಬಹುತೇಕ ಒಂದೇ ಮಾದರಿಯದ್ದಾಗಿರುತ್ತಿದ್ದವು. ಜನಸಂಖ್ಯಾ ಸ್ಫೋಟ, ಪ್ರತಿಭಾ ಪಲಾಯನ, ಜಾಗತಿಕ ತಾಪಮಾನ ಹೆಚ್ಚಳ… ಹೀಗೆ ಪ್ರಬಂಧಗಳ ವಿಷಯಗಳು ಇವೇ ಸಂಗತಿಗಳ ಸುತ್ತಮುತ್ತ ಗಿರಕಿ ಹೊಡೆಯುತ್ತಿದ್ದವು. ಕೆಲ ವರ್ಷಗಳ ನಂತರ ನನಗೆ ತಿಳಿದುಬಂದ ಮತ್ತೊಂದು ಅಚ್ಚರಿಯೆಂದರೆ ಈ ವಿಷಯಗಳು ಪ್ರಬಂಧಗಳ ವಿಚಾರದಲ್ಲಿ ಮುಂದೆಯೂ ಸಾಕಷ್ಟು ಕಾಲ ಚಾಲ್ತಿಯಲ್ಲಿದ್ದವು ಎಂಬುದು. ಇದರ ಹಿಂದಿನ ಕಾರಣವನ್ನು ಮಾತ್ರ ಬಲ್ಲವರೇ ಹೇಳಬೇಕು.
ಅಂದಹಾಗೆ ಈ ಸಂಗತಿ ನೆನಪಾಗುವುದಕ್ಕೂ ಕಾರಣವೊಂದಿದೆ. ಅದೇನೆಂದರೆ ಈ ಬಾರಿ ಉತ್ತರಭಾರತದಲ್ಲಿ ಚಳಿಗಾಲ ಶುರುವಾಗುತ್ತಿರುವಂತೆಯೇ ಪ್ರತೀವರ್ಷದಂತೆ ಈ ವರ್ಷವೂ ಹವಾಮಾನ ವೈಪರೀತ್ಯದ ಬಗ್ಗೆ ದಂಡಿಯಾಗಿ ಲೇಖನಗಳು ಬಂದುಹೋದವು. ಅವುಗಳಲ್ಲಿ ದಿಲ್ಲಿಯಲ್ಲಿದ್ದು ವರದಿ ಮಾಡುತ್ತಿರುವ ಪತ್ರಕರ್ತರನ್ನು ಸೇರಿದಂತೆ, ದೇಶದ ಹಲವೆಡೆಗಳಿಂದ ಬರೆಯುತ್ತಿದ್ದ ಆಯಾ ವಿಷಯತಜ್ಞರು ಈ ಬಗ್ಗೆ ವಿವರವಾಗಿ ದಾಖಲಿಸಿದರು. ಅಲ್ಲಲ್ಲಿ ಕೆಲವರು ಟಿವಿ ಪ್ಯಾನೆಲ್ಲುಗಳಲ್ಲೂ ಕಾಣಿಸಿಕೊಂಡರು. ಈ ನಡುವೆ ಹಿರಿಯ ರಾಜಕಾರಣಿಯೊಬ್ಬರು ದಿಲ್ಲಿಯ ಹವಾಮಾನದ ಬಗ್ಗೆ ತಮಗಿದ್ದ ಅಸಮಾಧಾನವನ್ನು ಮುಕ್ತವಾಗಿಯೇ ಹೇಳಿಕೊಂಡಿದ್ದು ದೊಡ್ಡ ಸುದ್ದಿಯಾಯಿತು. ಹೀಗೆ ಬೆರಳೆಣಿಕೆಯ ಕೆಲ ಸುದ್ದಿಗಳನ್ನು ಬಿಟ್ಟು ಚಳಿಗಾಲ ಮತ್ತು ವಾಯುಮಾಲಿನ್ಯದ ಬಗೆಗಿನ ಚರ್ಚೆಗಳು ಒಂದು ಬಗೆಯ ಸೀಸನಲ್ ಟ್ರೆಂಡ್ ಎಂಬಂತೆಯೂ, ಹೀಗೆ ಬಂದು ಹಾಗೆ ಹೋಗುವ ಸಾಮಾನ್ಯ ಸಂಗತಿಯಾಗಿಯೂ ಮತ್ತೊಮ್ಮೆ ಉಳಿದುಬಿಟ್ಟವು. ಇವುಗಳ ಆಯಸ್ಸು ಮತ್ತು ಆಕರ್ಷಣೆಗಳು ಮಾತ್ರ ರಿಯಾಯಿತಿ ಮಾರಾಟ ಮೇಳದ ಜಾಹೀರಾತಿನಷ್ಟೇ!

ದಿಲ್ಲಿಯಲ್ಲಾಗಿದ್ದ ನಿರ್ಭಯಾ ಅತ್ಯಾಚಾರ ಪ್ರಕರಣದ ನಂತರ ದಿಲ್ಲಿಯು “ರೇಪ್ ಕ್ಯಾಪಿಟಲ್” ಎಂಬಂತೆ ಎಲ್ಲೆಡೆ ವ್ಯಾಖ್ಯಾನಿಸಲ್ಪಟ್ಟಿದ್ದು ಬಹುತೇಕರಿಗೆ ನೆನಪಿರಬಹುದು. ಇದೇ ಶೈಲಿಯಲ್ಲಿ ನಂತರದ ವರ್ಷಗಳಲ್ಲಿ ದಿಲ್ಲಿಯು ವಾಯುಮಾಲಿನ್ಯದ ಟ್ಯಾಗಿನೊಂದಿಗೂ ಬಹಳ ಕಾಲ ಗುರುತಿಸಿಕೊಂಡುಬಿಟ್ಟಿತು. ವಿಪರ್ಯಾಸವೆಂದರೆ ದಿಲ್ಲಿಗಂಟಿಕೊಂಡಿರುವ ಈ ಹಣೆಪಟ್ಟಿಯು ವರ್ಷಗಳು ಕಳೆದಂತೆ ಮತ್ತಷ್ಟು ಗಟ್ಟಿಯಾಯಿತೇ ಹೊರತು ಕಳಚಿಕೊಳ್ಳುವ ಯಾವ ಸನ್ನಿವೇಶಗಳೂ ಕಾಣಲಿಲ್ಲ. ಸದ್ಯದ ಮಟ್ಟಿಗೆ ಅಂತಹ ಲಕ್ಷಣಗಳೂ ಕಾಣುತ್ತಿಲ್ಲ. ನಾನು ದಿಲ್ಲಿ ನಿವಾಸಿ ಎಂದಾಗಲೆಲ್ಲ ಬಹುತೇಕರು ನನಗೆ ಕೇಳುವುದು ಅಲ್ಲಿನ ಈ ವಾಯುಮಾಲಿನ್ಯದ ಕತೆಯೇನು ಎಂಬುದು. ಅಷ್ಟರಮಟ್ಟಿಗೆ ಈಗ ದಿಲ್ಲಿಗೂ ಮಾಲಿನ್ಯಕ್ಕೂ ಬಿಡಿಸಲಾಗದ ನಂಟು.
ಹಾಗಂತ ಜಲ ಮತ್ತು ವಾಯುಮಾಲಿನ್ಯವು ದೈತ್ಯರೂಪವನ್ನು ಪಡೆದಿರುವುದು ದಿಲ್ಲಿಯಲ್ಲಿ ಮಾತ್ರವೇ? ಖಂಡಿತ ಇಲ್ಲ! ಆದರೆ ದಿಲ್ಲಿ ಶಹರಕ್ಕಿರುವ ಜಾಗತಿಕ ಪ್ರಾಮುಖ್ಯತೆಯು ಅದಕ್ಕೆ ಎಲ್ಲಿಲ್ಲದ ಸುದ್ದಿಮೌಲ್ಯವನ್ನು (ನ್ಯೂಸ್ ವ್ಯಾಲ್ಯೂ) ತಂದುಕೊಡುತ್ತದೆ. ಒಟ್ಟಾರೆಯಾಗಿ ಭಾರತದಲ್ಲಿ ಕಾಣಬರುತ್ತಿರುವ ಹವಾಮಾನ ವೈಪರೀತ್ಯಗಳ ಬಗ್ಗೆ ಪ್ರಸ್ತಾಪಿಸಿದಾಗಲೂ ದಿಲ್ಲಿಯು ಮುಖ್ಯ ಕೇಂದ್ರವಾಗಿ ಹೆಸರಿಸಲ್ಪಡುವುದು ಬಹುತೇಕ ಎಲ್ಲ ವರದಿಗಳಲ್ಲೂ, ಸಾಕ್ಷ್ಯಚಿತ್ರಗಳಲ್ಲೂ, ಲೇಖನಗಳಲ್ಲೂ ನಮಗೆ ಸ್ಪಷ್ಟವಾಗಿ ಕಾಣುತ್ತದೆ. ಇದನ್ನು ಇನ್ನಷ್ಟು ವಿಸ್ತರಿಸುವುದಾದರೆ ಭಾರತದ ಹಲವು ಮಹಾನಗರಗಳು ಈ ರಾಡಾರಿನಲ್ಲಿ ಈಗಾಗಲೇ ಬಂದುಹೋಗಿವೆ. ಇದು ಸಾಲದು ಎಂಬಂತೆ ಬಹಳಷ್ಟು ನಗರಗಳು ಕೂಡ ಇಂದೋ ನಾಳೆಯೋ ಈ ಅಧ್ಯಯನ ವ್ಯಾಪ್ತಿಯಲ್ಲಿ ಬರುವ ಲಕ್ಷಣಗಳೂ ದಟ್ಟವಾಗಿವೆ.
ಪರಿಸ್ಥಿತಿಯು ಇಷ್ಟು ಗಂಭೀರವಾಗಿರುವ ಹೊರತಾಗಿಯೂ “ಹವಾಮಾನ ವೈಪರೀತ್ಯ”ದ ಸಂಗತಿಯು ಶಾಲಾಮಕ್ಕಳ ಪ್ರಬಂಧ ಸ್ಪರ್ಧೆಗಳಿಗೆ ಮತ್ತು ಹವಾನಿಯಂತ್ರಿತ ಕೊಠಡಿಗಳಲ್ಲಿ ನಡೆಯುವ ವಿಚಾರ ಸಂಕಿರಣಗಳಿಗೆ ಮಾತ್ರ ಸೀಮಿತವಾಗಿದ್ದು ಹೇಗೆ ಎಂಬುದು ನಮ್ಮ ಮುಂದಿರುವ ದೊಡ್ಡ ಪ್ರಶ್ನೆ. ಸುದ್ದಿ ಮೌಲ್ಯವಿರುವ ಹೊರತಾಗಿಯೂ ಈಗಿನ ಕಾಲಮಾನವು ಹಪಹಪಿಸುವ ರೋಚಕತೆಗೆ ಈ ಸಂಗತಿಯು ಹೊಂದಿಕೆಯಾಗದಿರುವುದು ಇಲ್ಲೊಂದು ಗಮನಿಸಬೇಕಾದ ಅಂಶ. ಏಕೆಂದರೆ ಹವಾಮಾನ ವೈಪರೀತ್ಯ ಎಂಬುದು ರಾತ್ರೋರಾತ್ರಿ ಘಟಿಸುವುದಿಲ್ಲ. ಹವಾಮಾನ ವೈಪರೀತ್ಯದಿಂದಾಗುವ ದೊಡ್ಡ ಅವಘಡವೊಂದು ಒಂದೆರಡು ದಿನಗಳ ಮಟ್ಟಿಗೆ ಬ್ರೇಕಿಂಗ್ ನ್ಯೂಸ್ ಆದರೂ ಹವಾಮಾನ ವೈಪರೀತ್ಯವು ತಾನಾಗಿಯೇ ಯಾವ ಕಾಲಕ್ಕೂ ಬ್ರೇಕಿಂಗ್ ನ್ಯೂಸ್ ಆಗಲಾರದು. ಹೀಗಾಗಿ ಇಂದಲ್ಲದಿದ್ದರೆ ನಾಳೆ ನೋಡೋಣವೆಂಬ ಉಡಾಫೆ ಇದ್ದೇ ಇರುತ್ತದೆ. ಆದರೆ ಈ ನಾಳೆ ನಿಜಕ್ಕೂ ಯಾವಾಗ ಬರಲಿದೆ ಎಂಬುದು ಉತ್ತರವಿಲ್ಲದ ಯಕ್ಷಪ್ರಶ್ನೆ.
ಅಂದಹಾಗೆ ಹವಾಮಾನ ವೈಪರೀತ್ಯದ ಬಗ್ಗೆ ಪ್ರಬಂಧಗಳನ್ನು ಬರೆಯುತ್ತಿದ್ದ ಕಾಲದಲ್ಲೂ ನಾವೆಲ್ಲ ಹೀಗೆಯೇ ಯೋಚಿಸುತ್ತಿದ್ದೆವು ಎಂಬುದನ್ನು ಹೇಳಲೇಬೇಕು. ಮುಂದೊಂದು ದಿನ, ಮುಂದಿನ ಪೀಳಿಗೆ… ಇತ್ಯಾದಿ ಸವಕಲು ಪದಗಳೊಂದಿಗೆ ಬರಹಗಳನ್ನು ಮುಗಿಸುತ್ತಿದ್ದ ನಮ್ಮ ಮಕ್ಕಳಾಟಕ್ಕೆ “ಆ ಮುಂದೊಂದು ದಿನ”ವು ನಮ್ಮ ಜೀವಿತಾವಧಿಯಲ್ಲೇ ಬರಲಿದೆ ಎಂಬ ಕನಿಷ್ಠ ಕಲ್ಪನೆಗಳೂ ಇರಲಿಲ್ಲ. ಲಕ್ಷಗಟ್ಟಲೆ ವರ್ಷಗಳ ಕಾಲ ಸಾಗುವ ಈ ಗ್ರಹದ ಮತ್ತು ಇಲ್ಲಿರುವ ಜೀವಿಗಳ ವಿಕಾಸವಾದದ ಕತೆಗಳನ್ನು ಕೇಳುತ್ತಾ ಬರುತ್ತಿದ್ದ ನಮಗೆ, ಹವಾಮಾನ ವೈಪರೀತ್ಯದ ದುಷ್ಪರಿಣಾಮಗಳು ಯಾವತ್ತೋ ಒಂದೆರಡು ಲಕ್ಷ ವರ್ಷಗಳ ನಂತರ ಘಟಿಸಲಿರುವ ಒಂದು ಬಗೆಯ ಫ್ಯಾಂಟಸಿ ಪ್ರಳಯಗಳಂತೆ ಮಾತ್ರ ಕಾಣುತ್ತಿದ್ದವು ಎಂದು ಈಗ ಅನ್ನಿಸುತ್ತದೆ.
ದುರಾದೃಷ್ಟವಶಾತ್ ಈ ಸುಖವು ನಮ್ಮ ಪಾಲಿಗೆ ಹೆಚ್ಚು ಕಾಲ ಉಳಿಯಲಿಲ್ಲ. ಚಳಿಯನ್ನು ಯಾವತ್ತೂ ಕಾಣದಿದ್ದ ನಮ್ಮ ದೇಶದ ಕೆಲ ಪ್ರದೇಶಗಳು ಕಳೆದ ಕೆಲವು ವರ್ಷಗಳಿಂದ ಚಳಿಗೆ ತತ್ತರಿಸಿ ಹೋದವು. ಸೆಖೆಯು ಸಾಮಾನ್ಯವಾಗಿ ತಕ್ಕಮಟ್ಟಿಗಿರುತ್ತದೆ ಎನ್ನುವ ಭೂಭಾಗಗಳು ಕೂಡ ಕ್ರಮೇಣ ಅಗ್ನಿಕುಂಡಗಳಂತೆ ಬೆಂದುಹೋದವು. ಅಕಾಲದಲ್ಲಿ ಎಲ್ಲೋ ಮಳೆ ಬಂತು. ಮತ್ತೆಲ್ಲೋ ಚಂಡಮಾರುತಗಳು ಬಂದು ಎಲ್ಲವನ್ನು ಧ್ವಂಸ ಮಾಡಿಹೋದವು. ರೈತರು ಹಲವೆಡೆ ಬೆನ್ನುಬೆನ್ನಿಗೆ ಕೊಳವೆಬಾವಿಗಳನ್ನು ಕೊರೆದು ಕೈಸುಟ್ಟುಕೊಂಡರೇ ಹೊರತು ಒಂದೇ ಒಂದು ಹನಿ ನೀರು ಗಿಟ್ಟಲಿಲ್ಲ. ಆಕಾಶವನ್ನು ನೋಡುತ್ತಾ, “ಘನನ್ ಘನನ್” ಎಂದು ಗುನುಗುನಿಸುತ್ತಾ ಲಗಾನ್ ಚಲನಚಿತ್ರದಲ್ಲಿ ಕಾಣುವ ದಿಕ್ಕೆಟ್ಟ ರೈತರಂತೆ ನಮ್ಮಲ್ಲೂ ಸಾಕಷ್ಟು ಘಟನೆಗಳು ನಡೆದುಹೋದವು.
ಇಷ್ಟೆಲ್ಲಾ ಆದರೂ ಹವಾಮಾನ ವೈಪರೀತ್ಯದ ಸಂಗತಿಯು ದೊಡ್ಡ ಮಟ್ಟಿನಲ್ಲೇನೂ ಮುನ್ನೆಲೆಗೆ ಬರುವಂತೆ ಕಾಣುತ್ತಿಲ್ಲ. ರಾಜ್ಯಗಳ ವಿಧಾನಸಭೆಗಳಲ್ಲೂ, ಕೇಂದ್ರದ ಸಂಸತ್ ಚರ್ಚೆಗಳಲ್ಲೂ ಇದಕ್ಕೊಂದು ತಾಸು ನಸೀಬಾಗುವುದಿಲ್ಲ. ನಟ ಮುಖೇಶ್ ಖನ್ನಾ ನಿಮಗೆ ನೆನಪಿರಬಹುದು. ತೊಂಭತ್ತರ ದಶಕದಲ್ಲಿ “ಶಕ್ತಿಮಾನ್” ಎಂಬ ಸೂಪರ್-ಹೀರೋ ಧಾರಾವಾಹಿಯೊಂದರಲ್ಲಿ ನಟಿಸಿ ಬಹಳ ಖ್ಯಾತಿಯನ್ನು ಗಳಿಸಿದವರು. ಮುಕೇಶರ ಇತ್ತೀಚೆಗಿನ ಅರ್ಥವಿಲ್ಲದ ಹಲುಬುವಿಕೆಯನ್ನು ಹಿನ್ನೆಲೆಯನ್ನಾಗಿಟ್ಟುಕೊಂಡು ತಮಾಷೆಯಾದ ಮೀಮ್ಸ್ ಒಂದು ಎಲ್ಲೆಡೆ ಓಡಾಡುತ್ತಿರುವುದನ್ನು ನಾನು ನೋಡಿದ್ದೆ. “ನಮ್ಮ ಬಾಲ್ಯದಲ್ಲಿ ಶಕ್ತಿಮಾನ್ ಹೆಸರಿನ ಸೂಪರ್-ಹೀರೋ ಸತ್ಯವೆಂದು ನಾವು ನಂಬಿದ್ದೆವು. ಆದರೆ ಈಗ ಮುಕೇಶ್ ಖನ್ನಾ ಹಾಗೆಂದು ತಿಳಿದುಕೊಂಡಿದ್ದಾರೆ”, ಎನ್ನುತ್ತದೆ ಆ ಮೀಮ್. ಮಾಲಿನ್ಯದ ಕುರಿತಾಗಿ ಆಡಳಿತ ವರ್ಗಕ್ಕಿರುವ ಭಾವನೆಯೂ ಇದುವೇ ಎಂದು ನನಗೆ ಕೆಲವೊಮ್ಮೆ ಅನಿಸುವುದುಂಟು. ಬಹುಷಃ ಈ ಸಂಗತಿಯು ಅವರ ಮನದಲ್ಲೂ ಪ್ರಬಂಧ ಸ್ಪರ್ಧೆಗಳು ಮತ್ತು ಭಾಷಣ ಸ್ಪರ್ಧೆಗಳಾಚೆಗೆ ಹೋಗಲೇ ಇಲ್ಲ. ಹೀಗಾಗಿ ಇದು ಯಾರೊಬ್ಬರಿಗೂ ಆದ್ಯತೆಯ ವಿಷಯವಾಗಿ ಉಳಿದಿಲ್ಲ.

ಹಾಗೆ ನೋಡಿದರೆ ಈ ಬಗ್ಗೆ ಮಾಡಲಾಗುವ ಅಥವಾ ಮಾಡಬಹುದಾದ ಆಗ್ರಹವೊಂದು ವ್ಯವಸ್ಥೆಗೆ ದೊಡ್ಡದೇನೂ ಅಲ್ಲ. ಏಕೆಂದರೆ ಇದು ನೇರವಾಗಿ ಜೀವಿತದ ಹಕ್ಕಿಗೆ ಸಂಬಂಧಪಟ್ಟಿದ್ದು. ಎಲ್ಲದಕ್ಕಿಂತ ಹೆಚ್ಚಾಗಿ ಸಮಷ್ಟಿಯ ಒಳಿತನ್ನೇ ಉದ್ದೇಶವಾಗಿಟ್ಟುಕೊಂಡು ಬರುವಂಥದ್ದು. ಎಂತಹ ಶತಕೋಟ್ಯಾಧಿಪತಿಯಾದರೂ ಏರ್ ಪ್ಯೂರಿಫೈರ್ ಅನ್ನು ಅನುದಿನವೂ ಕತ್ತಿಗೆ ನೇತಾಡಿಸಿಕೊಂಡು ಓಡಾಡಲಾಗುವುದಿಲ್ಲ. ನಾಗರಿಕನೊಬ್ಬ ಬಡವನಾಗಿರುವ ಮಾತ್ರಕ್ಕೆ ಇದು ನಿನ್ನ ಹಣೆಬರಹ ಎಂದು ಹೇಳಿ ಸುಮ್ಮನಾಗಿಸುವುದಲ್ಲ. ಹೀಗಿರುವಾಗ ಸಮಸ್ಯೆಯ ಸಮಾಧಾನವನ್ನು ತರುವ ನಿಟ್ಟಿನಲ್ಲಿ ಯಾರು ಮೊದಲ ಹೆಜ್ಜೆಯಿಟ್ಟರೂ ಆ ನಡೆಗೆ ಸಂಪೂರ್ಣ ಬೆಂಬಲವನ್ನು ನೀಡುವಷ್ಟಿನ ನೈತಿಕತೆ ಮತ್ತು ಪ್ರಜ್ಞೆಯನ್ನು ಜನತೆಯೂ, ಆಡಳಿತ ವ್ಯವಸ್ಥೆಯೂ ತಮ್ಮಲ್ಲಿ ಉಳಿಸಿಕೊಂಡಿರಬೇಕಾಗುತ್ತದೆ.
ದೂರದ ದೇಶವೊಂದರ ಸರಕಾರವು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನೇ ಹೆಚ್ಚು ಬಳಸಿ ಎಂದು ತನ್ನ ನಾಗರಿಕರಿಗೆ ಕರೆ ನೀಡುತ್ತದೆ. ಸಾಧ್ಯವಾದಷ್ಟು ಸೈಕ್ಲಿಂಗ್ ಮಾಡಿ ಎಂದು ಪ್ರೋತ್ಸಾಹಿಸುತ್ತದೆ. ವಿಚಿತ್ರವೆಂದರೆ ಈ ಸುದ್ದಿಗಳೆಲ್ಲ ನಮಗೆ ರಮ್ಯ ಕಲ್ಪನೆಯಂತಷ್ಟೇ ಕಾಣುತ್ತವೆ. ಇವೆಲ್ಲ ನಮ್ಮಲ್ಲಿ ಆಗುವಂಥದ್ದಲ್ಲ ಎಂದು ನಮಗೆ ನಾವೇ ಸುಳ್ಳಾಡಿಕೊಂಡು ಸುಮ್ಮನಿದ್ದುಬಿಡುತ್ತೇವೆ. ಈ ಬಗ್ಗೆ ಮಾತಾಡುವವರನ್ನೆಲ್ಲ ಆಕ್ಟಿವಿಸ್ಟ್ ಎಂದು ಬ್ರಾಂಡ್ ಮಾಡಿಬಿಡುತ್ತೇವೆ. ಇವೆಲ್ಲದರ ನಡುವೆ ಮಹಾದುಬಾರಿ ಯುಗದಲ್ಲೂ ಸಾಲಸೋಲ ಮಾಡಿ ಕಾರು ಖರೀದಿಸುತ್ತೇವೆ. ನಂತರ ಶಹರದ ಟ್ರಾಫಿಕ್ಕಿನಲ್ಲಿ ಗುದ್ದಾಡಿಕೊಂಡು, ಹೊಗೆಯ ಹವೆಯಲ್ಲಿ ಕೆಮ್ಮಿಕೊಂಡು ಇನ್ಯಾರಿಗೋ ಶಾಪ ಹಾಕುತ್ತೇವೆ. ಒಟ್ಟಿನಲ್ಲಿ ಹವಾಮಾನ ವೈಪರೀತ್ಯದ ನೇರ ಬಲಿಪಶುಗಳಾಗಿಯೂ ಅದನ್ನೊಂದು ಕೆಲಸಕ್ಕೆ ಬಾರದ, ಯಾವತ್ತೋ ಒಂದು ದಿನ ಬಂದು ವಕ್ಕರಿಸಲಿರುವ ಕಾಲ್ಪನಿಕ ಭೂತದಂತೆ ಸುಮ್ಮನೆ ಬದಿಗಿಟ್ಟುಬಿಡುತ್ತೇವೆ.
ಇಂದು ನಮ್ಮ ಶಹರಗಳಿಗೂ ಶಾಪಿಂಗ್ ಮಾಲ್ ಗಳಿಗೂ ಹೆಚ್ಚಿನ ವ್ಯತ್ಯಾಸ ಉಳಿದಿಲ್ಲ. ಜಗತ್ತಿನೆಲ್ಲೆಡೆ ಕಾಣಸಿಗುವ ಶಾಪಿಂಗ್ ಮಾಲ್ ಗಳಂತೆ ನಮ್ಮ ಎಲ್ಲಾ ಶಹರಗಳೂ ಬಹುತೇಕ ಒಂದೇ ರೀತಿ ಕಾಣುತ್ತವೆ. ಈ ಶಹರಗಳಲ್ಲಿ ಕಾಣಸಿಗುವ ಗುಣಲಕ್ಷಣಗಳು, ಸವಾಲುಗಳು, ಸಮಸ್ಯೆಗಳಲ್ಲಿ ಕೂಡ ಸಾಕಷ್ಟು ಸಾಮ್ಯತೆಯಿರುತ್ತದೆ. ಇಷ್ಟಾಗಿಯೂ ನಮ್ಮ ಪುಟ್ಟ ಪಟ್ಟಣಗಳಿಗೆ ಶಹರಗಳಾಗುವ ಕನಸುಗಳನ್ನು ಬಿತ್ತಲಾಗುತ್ತಿದೆಯೇ ಹೊರತು, ಈಗಿರುವ ಶಹರಗಳಿಗಿಂತ ಉತ್ತಮ ಜೀವನವ್ಯವಸ್ಥೆಯನ್ನು ಸೃಷ್ಟಿಸಿಕೊಡಬಲ್ಲ ಸಾಧ್ಯತೆಗಳತ್ತ ನಾವು ಗಮನ ಹರಿಸುತ್ತಿಲ್ಲ. ಇನ್ನು “ಮುಂದೊಂದು ದಿನ” ಎಂದು ಬರೆಯಲಾಗುತ್ತಿದ್ದ ಕತೆಗಳು ಈಗಾಗಲೇ ನಮ್ಮ ನಡುವೆ ನೈಜರೂಪದಲ್ಲಿ ಬರುತ್ತಿರುವುದರಿಂದ ಆ ಅವಕಾಶವೂ ಈಗ ಉಳಿದಿರುವಂತೆ ಕಾಣುತ್ತಿಲ್ಲ.
ಹೀಗೆಲ್ಲ ಉಪಸಂಹಾರ, ಟಿಪ್ಪಣಿಗಳನ್ನು ಬರೆದಿಟ್ಟು ಬರಹವೊಂದನ್ನು ಥಟ್ಟನೆ ಮುಗಿಸಿಬಿಡಬಹುದು. ಆದರೆ ಹವಾಮಾನ ವೈಪರೀತ್ಯ ಅಷ್ಟು ಸರಳ ಅಲ್ಲವಲ್ಲ!
ಪ್ರಸಾದ್ ನಾಯ್ಕ್, ದೆಹಲಿ
ಸರಕಾರಿ ಸ್ವಾಮ್ಯದ ಸಂಸ್ಥೆಯೊಂದರಲ್ಲಿ ಅಡಿಷನಲ್ ಚೀಫ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಪ್ರಸಾದ್ ನಾಯ್ಕ್ ಪ್ರಸ್ತುತ ದೆಹಲಿ ಮಹಾನಗರದ ನಿವಾಸಿ. “ಹಾಯ್ ಅಂಗೋಲಾ”, “ಸಫಾ”, “ಸ್ನೇಹಗ್ರಾಮದ ಸಂಸತ್ತು”, “ಮರ ಏರಲಾರದ ಗುಮ್ಮ”, “ಜಿಪ್ಸಿ ಜೀತು” ಮತ್ತು “ಮುಸ್ಸಂಜೆ ಮಾತು” ಇವರ ಪ್ರಕಟಿತ ಕೃತಿಗಳು. ಇವರ ಚೊಚ್ಚಲ ಕೃತಿಯಾದ “ಹಾಯ್ ಅಂಗೋಲಾ!” 2018 ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವಕ್ಕೆ ಪಾತ್ರವಾಗಿದೆ. ಕನ್ನಡದ ಓದುಗರಿಗೆ ಕತೆಗಾರರಾಗಿ, ಅಂಕಣಕಾರರಾಗಿ ಮತ್ತು ಅನುವಾದಕರಾಗಿ ಪರಿಚಿತರು.
ಇದನ್ನೂ ಓದಿ- http://ಸ್ವಹತ್ಯೆಯ ಸುತ್ತಮುತ್ತ…..https://kannadaplanet.com/around-suicide


