ದಾವಣಗೆರೆ: ಕೆರೆಯಲ್ಲಿ ಮಣ್ಣು ತುಂಬಿಕೊಳ್ಳುವ ಕ್ಷುಲ್ಲಕ ವಿಷಯಕ್ಕೆ ಜಾತಿನಿಂದನೆ ಮಾಡಿದ್ದಾರೆ ಎಂಬ ಆರೋಪದಡಿಯಲ್ಲಿ ಹರಿಹರದ ಬಿಜೆಪಿ ಶಾಸಕ ಬಿ.ಪಿ.ಹರೀಶ್ ವಿರುದ್ಧ ದಾವಣಗೆರೆಯ ಡಿಸಿಆರ್ಇ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ.
ದಾವಣಗೆರೆ ತಾಲ್ಲೂಕಿನ ಕಾಡಜ್ಜಿ ಕೆರೆಯಲ್ಲಿ ಕೃಷಿ ಕೆಲಸಕ್ಕೆ ಟ್ರ್ಯಾಕ್ಟರ್ ಗೆ ಮಣ್ಣನ್ನು ತುಂಬಿಕೊಳ್ಳುತ್ತಿದ್ದಾಗ ಸ್ಥಳಕ್ಕೆ ಧಾವಿಸಿದ ಶಾಸಕ ಬಿ.ಪಿ.ಹರೀಶ್, ಅವರ ಪುತ್ರ ಹಾಗೂ ಆಪ್ತ ಸಹಾಯಕ ಜಾತಿ ನಿಂದನೆ ಮಾಡಿದ್ದಾರೆ ಎಂದು ಕಾಡಜ್ಜಿ ಗ್ರಾಮದ ಭೋವಿ ಸಮುದಾಯದ ಕಾಂತರಾಜ್ ಎಚ್. ಎಂಬುವರು ದೂರು ನೀಡಿದ್ದರು. ಈ ಮೂವರ ವಿರುದ್ಧ ಎಸ್ ಸಿ, ಎಸ್ ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಣ್ಣು ತುಂಬಿಸಿಕೊಂಡು ಹೋಗುತ್ತಿದ್ದಾಗ ಟ್ರ್ಯಾಕ್ಟರ್ ಅನ್ನು ಅಡ್ಡಗಟ್ಟಿದ್ದರು. ನನ್ನ ಟ್ರ್ಯಾಕ್ಟರ್ ಅನ್ನು ಏಕೆ ತಡೆದಿದ್ದೀರಿ ಎಂದು ಪ್ರಶ್ನಿಸಿದಾಗ ಅವರ ಮಗ ಮತ್ತು ಸಹಾಯಕ ಕಾರಿನಿಂದ ಇಳಿದು ಆಕ್ಷೇಪ ವ್ಯಕ್ತಪಡಿಸಿದರು. ನಂತರ ನನ್ನನ್ನು ಅಸಭ್ಯವಾಗಿ ನಿಂದಿಸಿದರು ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಇತ್ತೀಚೆಗಷ್ಟೇ ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್ ಅವರನ್ನು ಅವಮಾನಿಸಿ ನಿಂದಿಸಿದ ಆರೋಪದ ಮೇಲೆ ಹರೀಶ್ ವಿರುದ್ಧ ಪ್ರಕರಣ ದಾಖಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

