ನಾಲ್ಕೈದು ತಿಂಗಳಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ; ಸಿದ್ಧರಾಗಲು ಮುಖಂಡರು, ಕಾರ್ಯಕಕರ್ತರಿಗೆ ಡಿಕೆ ಶಿವಕುಮಾರ್‌ ಕರೆ

Most read

ಬೆಂಗಳೂರು: ಮುಂದಿನ ನಾಲ್ಕೈದು ತಿಂಗಳಲ್ಲಿ ಜಿಬಿಎ ಸೇರಿದಂತೆ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ತೀರ್ಮಾನಿಸಲಾಗಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ನಿಗದಿತ ಗಡುವಿನೊಳಗೆ ಬೆಂಗಳೂರು ಗ್ರೇಟರ್‌ ಪ್ರಾಧಿಕಾರದ (ಜಿಬಿಎ) ಐದು ಪಾಲಿಕೆಗಳಿಗೂ ಚುನಾವಣೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.

“ಮನರೇಗಾ ಬಚಾವ್ ಸಂಗ್ರಾಮ” ಹೋರಾಟದ ಪೂರ್ವಸಿದ್ಧತಾ ಸಭೆಯಲ್ಲಿ ಮತ್ತು ಸುದ್ದಿಗಾರರ ಜತೆ ಮಾತನಾಡಿದ ಅವರು ಕಾರಣಾಂತರಗಳಿಂದ ಕೋರ್ಟ್ ಆದೇಶಗಳಿಂದಾಗಿ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಲು ಆಗಿರಲಿಲ್ಲ. ನಿನ್ನೆ ಸುಪ್ರೀಂ ಕೋರ್ಟ್ ಕೂಡ ಪಾಲಿಕೆ ಚುನಾವಣೆ ಬಗ್ಗೆ ಆದೇಶ ನೀಡಿದೆ. ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿ ನಡೆಸಲು ನಮ್ಮ ಸರ್ಕಾರ ಬದ್ಧವಾಗಿದೆ. ಮೀಸಲಾತಿ ವಿಚಾರ ಹಾಗೂ ಇತರೆ ತೊಡಕು ನಿವಾರಿಸಿ ಚುನಾವಣೆ ನಡೆಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿದ್ದೇವೆ. ನೀವೆಲ್ಲರೂ ಅದಕ್ಕೆ ಸಿದ್ಧರಾಗಬೇಕು” ಎಂದು ಕರೆ ನೀಡಿದರು.

“ನಾವು ರಾಜ್ಯಕ್ಕೆ ನೀಡಿರುವ ಗ್ಯಾರಂಟಿ ಯೋಜನೆಗಳು, ಮಾಡಿರುವ ಕೆಲಸ ಜನರನ್ನು ತಲುಪಿದೆ. ನಾವು ಗ್ಯಾರಂಟಿ ಸಮಿತಿ, ಸ್ಥಳೀಯ ಮಟ್ಟದಲ್ಲಿ ನಾಮನಿರ್ದೇಶನ ಸೇರಿದಂತೆ ಕಾರ್ಯಕರ್ತರಿಗೆ ಈಗಾಗಲೇ ಅಧಿಕಾರ ನೀಡಿದ್ದೇವೆ. 600 ಜನ ರಾಜ್ಯ ಮಟ್ಟದ ನಾಮನಿರ್ದೇಶನ ಹೊರತುಪಡಿಸಿ ಉಳಿದ ಎಲ್ಲಾ ಅಧಿಕಾರಗಳನ್ನು ಹಂಚಿಕೆ ಮಾಡಲಾಗಿದೆ. ಈ ಪಟ್ಟಿಯೂ ಅಂತಿಮವಾಗಿದ್ದು, ಸಣ್ಣಪುಟ್ಟ ತಾಂತ್ರಿಕ ಬದಲಾವಣೆ ಮಾತ್ರ ಬಾಕಿ ಇದೆ. ಇದುವರೆಗೂ ನಾವು 20 ಡಿಸಿಸಿ ಅಧ್ಯಕ್ಷರು, 25 ಪದಾಧಿಕಾರಿಗಳಿಗೆ, 47 ಶಾಸಕರುಗಳಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿದ್ದೇವೆ. ಚುನಾವಣೆ ಸಮಯದಲ್ಲಿ ಟಿಕೆಟ್ ವಂಚಿತ ಕಾರ್ಯಕರ್ತರ ಪೈಕಿ 19 ಜನರಿಗೆ ಅಧ್ಯಕ್ಷ ಸ್ಥಾನ ನೀಡಿದ್ದೇವೆ” ಎಂದು ವಿವರಿಸಿದರು.

ತಾಂತ್ರಿಕ ಆಕ್ಷೇಪಣೆಗಳ ಬಗ್ಗೆ ಕೇಳಿದಾಗ ಅವರು, ‘ಕೆಲವರು ಆಕ್ಷೇಪಣೆ ಸಲ್ಲಿಸುತ್ತಾರೆ. ಅದತ ಪರಿಶೀಲನೆಗಾಗಿ ಸಮಿತಿ ರಚಿಸಲಾಗಿದೆ. ಮೀಸಲಾತಿ ವಿಚಾರವಾಗಿ ಮಹಿಳೆಯರಿಗೆ ಕಡಿಮೆಯಾಗಿದೆ ಎಂಬ ಮಾತು ಕೇಳಿಬಂದಿದ್ದು, ‌ತಪ್ಪಾಗಿದ್ದರೆ ಸರಿಪಡಿಸಲು ಸೂಚಿಸಲಾಗುವುದು. ನಾವು ಯಾವುದರಲ್ಲೂ ಹಸ್ತಕ್ಷೇಪ ಮಾಡುವುದಿಲ್ಲ’ ಎಂದು ಉತ್ತರಿಸಿದರು.

ಚುನಾವಣೆ ನಡೆಸಲು ಮತ್ತೆ ಯಾವುದೇ ಕಾಲಾವಕಾಶ ಕೇಳುವುದಿಲ್ಲ. ಚುನಾವಣೆ ನಡೆಸುವುದು ನಮ್ಮ ಕರ್ತವ್ಯ. ಕಾರ್ಯಕರ್ತರಿಗೆ ಅಧಿಕಾರ ಕೊಡಲು, ಹೊಸ ನಾಯಕರನ್ನು ತಯಾರು ಮಾಡುತ್ತಿದ್ದೇವೆ. ನಾವು ಮಾಡುತ್ತಿರುವ ಕೆಲಸಕ್ಕೆ ಜನ ಬೆಂಬಲ ನೀಡುವ ವಿಶ್ವಾಸವಿದೆ. ನಾವು ಐದೂ ಪಾಲಿಕೆಗಳಲ್ಲೂ ಗೆಲ್ಲುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

More articles

Latest article