ಗ್ರಾಮೀಣ ಅಭಿವೃದ್ಧಿಗೆ ನೆರವಾಗಿದ್ದ ಮನರೇಗಾ ಯೋಜನೆಯನ್ನು ಬಿಜೆಪಿ ಸರ್ಕಾರ ಕೊಂದಿದೆ: ಡಿಸಿಎಂ ಡಿ.ಕೆ. ಶಿವಕುಮಾರ್ ಆಕ್ರೋಶ

Most read

ಬೆಂಗಳೂರು: “ಗ್ರಾಮೀಣ ಭಾಗದ ಅಭಿವೃದ್ಧಿಗೆ ನೆರವಾಗಿದ್ದ ಮನರೇಗಾ ಯೋಜನೆಯನ್ನು ಕೇಂದ್ರ ಬಿಜೆಪಿ ಸರ್ಕಾರ ಕೊಂದಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಆಕ್ರೋಶ ವ್ಯಕ್ತಪಡಿಸಿದರು. ಅರಮನೆ ಮೈದಾನದಲ್ಲಿ ಮಂಗಳವಾರ ನಡೆದ “ಮನರೇಗಾ ಬಚಾವ್ ಸಂಗ್ರಾಮ” ಹೋರಾಟದ ಪೂರ್ವಸಿದ್ಧತಾ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಶಿವಕುಮಾರ್ ಅವರು ಮಾತನಾಡಿದರು.

“ಸೋನಿಯಾ ಗಾಂಧಿ ಅವರು ಮನಮೋಹನ್ ಸಿಂಗ್ ಅವರ ಸರ್ಕಾರದಲ್ಲಿ ಸಂವಿಧಾನದ ಮೂಲಕ ಬಡವರಿಗೆ ಉದ್ಯೋಗ ಖಾತರಿ ಹಕ್ಕನ್ನು ನೀಡಿದ್ದರು. ಇದರಿಂದ ನಮ್ಮ ರಾಜ್ಯದ ಪಂಚಾಯಿತಿ ಹಾಗೂ ಗ್ರಾಮಗಳ ಮಟ್ಟದಲ್ಲಿ ಪ್ರತಿ ವರ್ಷ 6 ಸಾವಿರ ಕೋಟಿ ಮೊತ್ತದ ಕಾಮಗಾರಿಗಳು ನಡೆಯುತ್ತಿದ್ದವು. ಈ ಕೆಲಸಗಳನ್ನು ಸ್ಥಳೀಯ ಪಂಚಾಯಿತಿ ಸದಸ್ಯರು ತೀರ್ಮಾನ ಮಾಡುತ್ತಿದ್ದರು. ನರೇಗಾ ಉದ್ಯೋಗ ಕಾರ್ಡ್ ಹೊಂದಿರುವವರಿಗೆ ಉದ್ಯೋಗ ನೀಡಬೇಕಿತ್ತು, ಉದ್ಯೋಗ ಸಿಗದಿದ್ದರೆ ಕೂಲಿ ನೀಡಲಾಗುತ್ತಿತ್ತು. ಇದರಲ್ಲಿ ದುರ್ಬಳಕೆ ತಡೆಗಟ್ಟಲು ಹೆಬ್ಬೆರಳಚ್ಚು ಸಂಗ್ರಹ ವಿಧಾನ ಅಳವಡಿಸಿಕೊಳ್ಳಲಾಗಿತ್ತು” ಎಂದು ತಿಳಿಸಿದರು.

“ಈ ಯೋಜನೆಯಲ್ಲಿ ಕಾರ್ಮಿಕರಿಗೆ ಕನಿಷ್ಠ ವೇತನ ನಿಗದಿಯಾಗಿತ್ತು. ನಾವು ಬಳ್ಳಾರಿ ಪಾದಯಾತ್ರೆ ಮಾಡುವ ಸಂದರ್ಭದಲ್ಲಿ ಕೆಲವು ಮಹಿಳೆಯರನ್ನು ವಿಚಾರಿಸಿದೆವು. ಕೆಲವು ಮಹಿಳೆಯರು ಬೇರೆಯವರ ಜಮೀನಿನಲ್ಲಿ ಹೋಗಿ ಕೆಲಸ ಮಾಡಲು ಇಚ್ಛಿಸುವುದಿಲ್ಲ ಎಂದು ಹೇಳಿದ್ದರು. ಆಗ ಕೆಪಿಸಿಸಿ ಕಾರ್ಯಾಧ್ಯಕ್ಷನಾಗಿದ್ದ ನಾನು ದೆಹಲಿಗೆ ಹೋಗಿ, ಈ ಪರಿಸ್ಥಿತಿಯನ್ನು ಸೋನಿಯಾ ಗಾಂಧಿ ಅವರಿಗೆ ತಿಳಿಸಿದೆ. ಅವರು ಸಿ.ಪಿ ಜೋಷಿ ಅವರನ್ನು ಕರೆಸಿ ಈ ವಿಚಾರದ ಬಗ್ಗೆ ಗಮನಹರಿಸಿ ಎಂದು ಸೂಚಿಸಿದರು. ನಂತರ ರೈತರು ತಮ್ಮ ಸ್ವಂತ ಜಮೀನುಗಳಲ್ಲಿ ತಾವೇ ಕೂಲಿ ಮಾಡಿದರೆ, ಜಮೀನು ಮಟ್ಟ, ದನ, ಕುರಿ ಕೊಟ್ಟಿಗೆ, ಇಂಗು ಗುಂಡಿ, ಕೃಷಿ ಹೊಂಡ ನಿರ್ಮಾಣಕ್ಕೆ ಕೂಲಿ ನೀಡುವ ವ್ಯವಸ್ಥೆ ತಂದರು. ಇನ್ನು ರೈತರು ತಮ್ಮ ಜಮೀನಿನಲ್ಲಿ ತೋಟಗಾರಿಕಾ ಬೆಳೆ ಬೆಳೆಯಲು ಅವಕಾಶ ಕಲ್ಪಿಸಿಕೊಟ್ಟರು” ಎಂದು ವಿವರಿಸಿದರು.

ಹೊಸ ಕಾಯ್ದೆ ಜಾರಿ ಅಸಾಧ್ಯ:

“ಈ ಯೋಜನೆಯಿಂದ ರಾಜ್ಯದ ಪ್ರತಿ ಪಂಚಾಯಿತಿಗಳಿಗೆ ಪ್ರತಿ ವರ್ಷ ಕನಿಷ್ಠ 1-2 ಕೋಟಿ ರೂ. ಸರಾಸರಿ ಅನುದಾನ ಸಿಗುತ್ತಿತ್ತು. ಆದರೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಬಿ ಜಿ ರಾಮ್ ಜಿ ಕಾಯ್ದೆಯಿಂದ ಇದೆಲ್ಲದಕ್ಕೂ ಕುತ್ತು ಬಂದಿದೆ. ಈ ಹೊಸ ಕಾಯ್ದೆಯಲ್ಲಿ ಗ್ರಾಮಗಳಲ್ಲಿ ಯಾವ ಕಾಮಗಾರಿ ನಡೆಯಬೇಕು ಎಂಬುದನ್ನು ಪಂಚಾಯಿತಿಗಳು ತೀರ್ಮಾನಿಸಲು ಆಗುವುದಿಲ್ಲ. ದೆಹಲಿಯಲ್ಲಿ ಕೂತಿರುವ ಕೇಂದ್ರ ಸರ್ಕಾರ ತೀರ್ಮಾನ ಮಾಡಲಿದೆ. ಇನ್ನು ಈ ಯೋಜನೆಯಲ್ಲಿದ್ದ 90:10 ಅನುಪಾತದ ಅನುದಾನವನ್ನು, 60:40 ಅನುಪಾತಕ್ಕೆ ಬದಲಿಸಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುದಾನ ಹಂಚಿಕೊಳ್ಳಬೇಕಾಗಿದೆ. ಇದರಿಂದ ರಾಜ್ಯ ಸರ್ಕಾರಗಳ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಬೀಳಲಿದೆ. ಕೇಂದ್ರ ಸರ್ಕಾರ ಎಷ್ಟೇ ಪ್ರಯೋಗ ಮಾಡಿದರೂ ಈ ನೂತನ ಕಾಯ್ದೆಯನ್ನು ಬಿಜೆಪಿ ಆಡಳಿತ ರಾಜ್ಯಗಳಲ್ಲಿ ಜಾರಿಗೆ ತರಲು ಸಾಧ್ಯವಿಲ್ಲ” ಎಂದು ಹೇಳಿದರು.

“ಈ ಕಾಯ್ದೆ ಜಾರಿ ಅಸಾಧ್ಯ ಎಂದು ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ಹೇಳಿದ್ದಾರೆ ಎಂಬ ವರದಿಯನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಮನರೇಗಾ ಯೋಜನೆಯಲ್ಲಿ ಬರಗಾಲ ಪೀಡಿತ ಪ್ರದೇಶಗಳಲ್ಲಿ 150 ದಿನಗಳ ಕಾಲ ಉದ್ಯೋಗ ನೀಡುವ ಅವಕಾಶ ಕಲ್ಪಿಸಲಾಗಿತ್ತು. ಕೋವಿಡ್ ನಲ್ಲಿ ಹೆಚ್ಚುವರಿಯಾಗಿ 50 ದಿನ ಕೂಲಿ ನೀಡುವ ಅವಕಾಶವಿತ್ತು. ಆದರೆ ಕೇಂದ್ರ ಸರ್ಕಾರ ಇದ್ಯಾವುದನ್ನೂ ನೀಡಲಿಲ್ಲ. ಇನ್ನು ಈ ಯೋಜನೆಗೆ ಇಡಲಾಗಿದ್ದ ಮಹಾತ್ಮ ಗಾಂಧೀಜಿ ಅವರ ಹೆಸರನ್ನು ಬದಲಿಸಿದ್ದಾರೆ. ಪಂಚಾಯಿತಿಗಳಿಗೆ ಬರುತ್ತಿದ್ದ ಅನುದಾನಕ್ಕೆ ಕತ್ತರಿ ಬಿದ್ದ ಮೇಲೆ ಪಂಚಾಯಿತಿ ಸದಸ್ಯರಿಗೆ ಏನು ಅಧಿಕಾರ, ಕೆಲಸ ಉಳಿಯುತ್ತದೆ? ಈ ಬಗ್ಗೆ ನೀವೆಲ್ಲರೂ ಆಲೋಚನೆ ಮಾಡಬೇಕು. ಬಿಜೆಪಿಯವರು ಈ ಹಿಂದೆ ಗಾಂಧೀಜಿ ಅವರನ್ನು ಕೊಂದರು. ಈಗ ಅವರ ಹೆಸರನ್ನು ಕೊಂದಿದ್ದಾರೆ. ಇದರೊಂದಿಗೆ ಬಿಜೆಪಿಯವರು ಗಾಂಧೀಜಿ ಅವರ ಪ್ರತಿಮೆ ಮುಂದೆ ಧರಣಿ ಮಾಡುವ ಹಕ್ಕನ್ನು ಕಳೆದುಕೊಂಡಿದ್ದಾರೆ. ಗಾಂಧೀಜಿ ಅವರ ಹೆಸರು ಹೇಳುವ ಯೋಗ್ಯತೆಯನ್ನು ಅವರು ಕಳೆದುಕೊಂಡಿದ್ದಾರೆ” ಎಂದು ಕಿಡಿಕಾರಿದರು.

ಸರಿಯಾಗಿ ಬಳಸಿಕೊಂಡರೆ ಮನರೇಗಾಕ್ಕಿಂತ ದೊಡ್ಡ ಯೋಜನೆ ಬೇರೊಂದಿಲ್ಲ:

“ನನ್ನ ಕ್ಷೇತ್ರದಲ್ಲಿ ಮನರೇಗಾ ಯೋಜನೆ ಮೂಲಕ ಒಂದೇ ವರ್ಷದಲ್ಲಿ 200 ಕೋಟಿ ರೂ.ಗೂ ಹೆಚ್ಚಿನ ಕೆಲಸವನ್ನು ಮಾಡಲಾಗಿದೆ. 56 ಸಾವಿರ ಮನೆಗಳಿಗೆ ದನದ ಕೊಟ್ಟಿಗೆ, ಇಂಗು ಗುಂಡಿ ನಿರ್ಮಾಣ, ಅರ್ಕಾವತಿ ನದಿಗೆ ಹತ್ತು ಚೆಕ್ ಡ್ಯಾಂ, ಹಾಸ್ಟೆಲ್, ಆಟದ ಮೈದಾನ, ಶಾಲಾ ಕೊಠಡಿ, ಪಂಚಾಯಿತಿ ಕಟ್ಟಡ, ಪಾರ್ಕ್, ರಸ್ತೆ, ಚರಂಡಿ ನಿರ್ಮಿಸಿದ್ದೇವೆ. ಇಷ್ಟು ದೊಡ್ಡ ಮೊತ್ತದ ಕಾಮಗಾರಿ ನೋಡಿ, ನಾನು ಈ ಯೋಜನೆಯಲ್ಲಿ ಅಕ್ರಮ ಮಾಡಿದ್ದೇನೆ ಎಂಬ ಅನುಮಾನ ಇಟ್ಟುಕೊಂಡು ಕೇಂದ್ರ ಬಿಜೆಪಿ ಸರ್ಕಾರ ಸುಮಾರು ಹತ್ತು ತಂಡಗಳನ್ನು ಕಳುಹಿಸಿ ತನಿಖೆ ಮಾಡಿಸಿತ್ತು. ಕೇಂದ್ರ ಸಚಿವರು ಹೇಳದೇ ಕೇಳದೆ ಬಂದು, ಖುದ್ದಾಗಿ ಪರಿಶೀಲನೆ ಮಾಡಿ ಹೋಗಿದ್ದರು. ಈ ತಂಡ ಪರಿಶೀಲನೆ ನಡೆಸಿ, ನಮ್ಮ ಕೆಲಸ ನೋಡಿದ ಬಳಿಕ ಇಡೀ ದೇಶದಲ್ಲಿ ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದ ನಂಬರ್ 1 ತಾಲ್ಲೂಕು ಎಂದು ಕೇಂದ್ರ ಸರ್ಕಾರ ಪ್ರಶಸ್ತಿ ನೀಡಿದೆ. ಈ ಯೋಜನೆಯನ್ನು ಬೇರೆ ರಾಜ್ಯಗಳಲ್ಲಿ ದುರ್ಬಳಕೆ ಮಾಡಿಕೊಂಡಿರಬಹುದು. ಆದರೆ ಈ ಯೋಜನೆಯನ್ನು ಸರಿಯಾಗಿ ಬಳಸಿಕೊಂಡರೆ, ಇದಕ್ಕಿಂತ ದೊಡ್ಡ ಯೋಜನೆ ಬೇರೆ ಇರುವುದಿಲ್ಲ” ಎಂದು ವಿವರಿಸಿದರು.

ಹೋರಾಟಕ್ಕೆ ಆಸಕ್ತಿ ತೋರದ ಪದಾಧಿಕಾರಿಗಳಿಗೆ ಗೇಟ್‌ ಪಾಸ್:

“ಎಐಸಿಸಿಯವರು ಕಾರ್ಯಕಾರಿ ಸಮಿತಿ ಸಭೆ ಮಾಡಿ, ಯಾವ ರೀತಿ ಹೋರಾಟ ಮಾಡಬೇಕು ಎಂದು ನಿರ್ದೇಶನ ನೀಡಿದ್ದಾರೆ. ಮೊದಲ ಹಂತದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಉಸ್ತುವಾರಿ ಸಚಿವರುಗಳು ಬಂದು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಲಿದ್ದಾರೆ. ತಾಲ್ಲೂಕು ಮಟ್ಟಗಳಲ್ಲಿ ನೀವುಗಳು ಮಾಧ್ಯಮಗೋಷ್ಠಿ ಮಾಡಬೇಕು. ಪರಿಷತ್ ಸದಸ್ಯರು, ಸಂಸದರುಗಳನ್ನು ಶಾಸಕರಿಲ್ಲದ ಕ್ಷೇತ್ರಗಳಿಗೆ ವೀಕ್ಷಕರಾಗಿ ನೇಮಕ ಮಾಡಿದ್ದು, ಎಲ್ಲರೂ ಮಾಧ್ಯಮಗೋಷ್ಠಿ ಮಾಡಬೇಕು. ಎಐಸಿಸಿ ನಿರ್ದೇಶನ ನೀಡಿರುವ ಎಲ್ಲಾ ಕಾರ್ಯಕ್ರಮಗಳನ್ನು ಕಡ್ಡಾಯವಾಗಿ ಮಾಡಲೇಬೇಕು. ಇದನ್ನು ಪಾಲಿಸದ ವೀಕ್ಷಕರು, ಪದಾಧಿಕಾರಿಗಳ ಬಗ್ಗೆ ವರದಿ ನೀಡಿ ಎಂದು ಎಐಸಿಸಿ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಲಾಗಿದ್ದು, ಇದರಲ್ಲಿ ಆಸಕ್ತಿ ತೋರದವರನ್ನು ಕಿತ್ತುಹಾಕಲಾಗುವುದು. ನೂತನ ಜಿಲ್ಲಾಧ್ಯಕ್ಷರ ನೇಮಕಕ್ಕೆ ಹೊರ ರಾಜ್ಯದಿಂದ ತಂಡ ಆಗಮಿಸುತ್ತಿದೆ. ಈ ಪ್ರಕ್ರಿಯೆಯನ್ನು ನಾವು ಆರಂಭಿಸಿದ್ದೆವು, ಕೆಲವು ದೂರಿನ ಹಿನ್ನೆಲೆಯಲ್ಲಿ ಎಐಸಿಸಿಯೇ ತಂಡವನ್ನು ರವಾನಿಸುತ್ತಿದೆ. ಈ ಸಮಿತಿ ಅನೇಕ ಜಿಲ್ಲಾಧ್ಯಕ್ಷರ ಬದಲಾವಣೆ ಮಾಡಲಿದೆ. ನಿಮಗೆ ಬೇರೆ ಸ್ಥಾನಮಾನ ಸಿಗಬೇಕು ಎಂದರೆ, ನೀವು ಈ ಅಭಿಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಬೇಕು. ಎಐಸಿಸಿ ಕಾರ್ಯಕ್ರಮಗಳ ವಿವರವನ್ನು ನಿಮಗೆ ರವಾನಿಸಲಾಗುವುದು” ಎಂದು ಸಂದೇಶ ನೀಡಿದರು.

ಶಿಕಾರಿಪುರ ಸೇರಿ ನಾಲ್ಕೈದು ಕಡೆ ಪಾದಯಾತ್ರೆಯಲ್ಲಿ ಭಾಗವಹಿಸುವೆ:

“ನಾಳೆ ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರವಾಗಿ 2 ದಿನಗಳ ವಿಶೇಷ ಅಧಿವೇಶನ ಕರೆಯುವ ಬಗ್ಗೆ ತೀರ್ಮಾನ ಮಾಡಲಾಗುವುದು. ಈ ಅಧಿವೇಶನದಲ್ಲಿ ಮನರೇಗಾ ಯೋಜನೆ ಮರುಜಾರಿಯ ಮಹತ್ವ ಹಾಗೂ ಕೇಂದ್ರ ಸರ್ಕಾರದ ನೂತನ ಕಾಯ್ದೆಯ ಅನಾನುಕೂಲಗಳ ಬಗ್ಗೆ ವಿಸ್ತೃತವಾಗಿ ಚರ್ಚೆ ಮಾಡಲಾಗುವುದು. ನಂತರ ಸರ್ಕಾರ ನಿರ್ಣಯ ಕೈಗೊಳ್ಳಲಿದೆ. ಇನ್ನು ಈ ಎಐಸಿಸಿ ಕಾರ್ಯಕ್ರಮಗಳನ್ನು ನಿಮ್ಮ ಸ್ಥಳೀಯ ಮಟ್ಟದಲ್ಲಿ ನಡೆಸುವಾಗ ಎಲ್ಇಡಿ ಪರದೆ ಹಾಕಿಸಿ ಸೋನಿಯಾ ಗಾಂಧಿ ಅವರ ಸಂದೇಶವನ್ನು ಕಡ್ಡಾಯವಾಗಿ ಪ್ರಸಾರ ಮಾಡಬೇಕು. ಬಳಿಕ ಜ.26ರಿಂದ ಫೆ.7ರವರೆಗೆ ಎಲ್ಲಾ ವಿಧಾನಸಭೆ ಕ್ಷೇತ್ರ ಮಟ್ಟದಲ್ಲಿ 5-10 ಕಿ.ಮೀ ಪಾದಯಾತ್ರೆ ಮಾಡಬೇಕು. ಇದರಲ್ಲಿ ಎಲ್ಲಾ ಗ್ರಾಮ ಪಂಚಾಯಿತಿ ಸದಸ್ಯರು, ನಮ್ಮ ನಾಯಕರು ಶಾಸಕರು ಹಾಗೂ ಸಚಿವರ ನೇತೃತ್ವದಲ್ಲಿ ಪಾದಯಾತ್ರೆ ಮಾಡಬೇಕು. ನಂತರ ಮನರೇಗಾ ಮರುಜಾರಿಗೆ ತಾಲ್ಲೂಕು ಕಚೇರಿಯಲ್ಲಿ ಮನವಿ ಸಲ್ಲಿಸಬೇಕು. ಸುಮಾರು ಐದಾರು ಕಡೆ ಪಾದಯಾತ್ರೆ ಮಾಡಲು ನಾನೇ ಖುದ್ದಾಗಿ ಬರುತ್ತೇನೆ. ವಿಶೇಷವಾಗಿ ಶಿಕಾರಿಪುರದಲ್ಲಿ ನಡೆಯುವ ಪಾದಯಾತ್ರೆಗೆ ನಾನು ಬಂದೇ ಬರುತ್ತೇನೆ. ಈ ವಿಚಾರವಾಗಿ ನಾಗರಾಜ ಗೌಡ ಅವರಿಗೆ ತಿಳಿಸಿದ್ದೇನೆ. ಎಲ್ಲಿ ಶಾಸಕರಿಲ್ಲವೋ ಆ ಕ್ಷೇತ್ರಗಳಲ್ಲಿ ನಾನು ಪಾದಯಾತ್ರೆ ಮಾಡುತ್ತೇನೆ. ಪಕ್ಷ ಸಂಘಟನೆ ಮಾಡುವ ನಿಟ್ಟಿನಲ್ಲಿ ಇದು ಬಹಳ ಪ್ರಮುಖವಾದ ವಿಚಾರ” ಎಂದು ಮಾರ್ಗದರ್ಶನ ನೀಡಿದರು.

ನಮ್ಮ ಭವಿಷ್ಯ ತೀರ್ಮಾನಿಸುವ ಎಸ್ಐಆರ್ ಬಗ್ಗೆ ಎಚ್ಚರವಾಗಿರಿ:

“ಇನ್ನು ನಮ್ಮ ರಾಜ್ಯಕ್ಕೆ ಎಸ್ಐಆರ್ ಬರುತ್ತಿದೆ. ಅಧಿಕಾರಿಗಳು ಈಗಾಗಲೇ ಕೆಲಸ ಮಾಡುತ್ತಿದ್ದಾರೆ. ಬಿಎಲ್ಎ ವಿಚಾರದಲ್ಲಿ ಯಾವುದೇ ಮುಲಾಜಿರುವುದಿಲ್ಲ. ನಮ್ಮ ಭವಿಷ್ಯ ತೀರ್ಮಾನವಾಗುವುದೇ ಎಸ್ಐಆರ್ ನಲ್ಲಿ. ಮತದಾರರ ರಕ್ಷಣೆ ಮಾಡುವ ಕೆಲಸ ಮಾಡಬೇಕು. ಬಿಎಲ್ಎಗಳು ಎಚ್ಚರಿಕೆಯಿಂದ ಇರಬೇಕು. ನೀವು ಹಕ್ಕನ್ನು ಕಾಪಾಡಿಕೊಳ್ಳಬೇಕು. ನಮ್ಮ ರಾಜ್ಯದಿಂದ ವೋಟ್ ಚೋರಿ ಅಭಿಯಾನ ಆರಂಭವಾಗಿದ್ದು, ಬಹಳ ಎಚ್ಚರಿಕೆಯಿಂದ ಇರಬೇಕು. ಬೇರೆ ಬೇರೆ ರಾಜ್ಯಗಳಲ್ಲಿ ಏನಾಗುತ್ತಿದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ಇನ್ನು ವೋಟ್ ಚೋರಿ ವಿರುದ್ಧದ ಸಹಿ ಸಂಗ್ರಹ ಅಭಿಯಾನದಲ್ಲಿ 1.41 ಕೋಟಿ ಸಹಿ ಸಂಗ್ರಹಿಸಿದ ಎಲ್ಲಾ ಜಿಲ್ಲಾಧ್ಯಕ್ಷರು, ಶಾಸಕರು, ಪದಾಧಿಕಾರಿಗಳಿಗೆ ಅಭಿನಂದನೆಗಳು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ನಿಮ್ಮ ಕಾರ್ಯವನ್ನು ಮೆಚ್ಚಿ ಅಭಿನಂದಿಸಿದ್ದಾರೆ. ನಿಮಗೆ ಧನ್ಯವಾದ ಅರ್ಪಿಸುತ್ತೇನೆ. ಪಕ್ಷ ಉಳಿದರೆ ನಾವು ನೀವುಗಳು, ಪಕ್ಷವಿಲ್ಲವೆಂದರೆ ನಾವುಗಳು ಇರುವುದಿಲ್ಲ” ಎಂದು ಎಚ್ಚರಿಸಿದರು.

“ನಮ್ಮ ಸರ್ಕಾರ ಆರನೇ ಗ್ಯಾರಂಟಿಯಾಗಿ ಭೂ ಗ್ಯಾರಂಟಿ ನೀಡಿದೆ, ಏಳನೇ ಗ್ಯಾರಂಟಿಯಾಗಿ ಕೆರೆಗಳಿಗೆ ನೀರು ತುಂಬಿಸುವುದು ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಂಡಿದ್ದೇವೆ. ಗೃಹಲಕ್ಷ್ಮಿ ಹಣ ಒಂದೆರಡು ತಿಂಗಳು ತಡವಾಗಿರಬಹುದು. ಹಣ ಸಂಗ್ರಹವಾದ ಬಳಿಕ ಎಲ್ಲವನ್ನು ಜಮೆ ಮಾಡಲಾಗುವುದು. ನಾವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಫೆ.13ರಂದು ದೊಡ್ಡ ಕಾರ್ಯಕ್ರಮ ಮಾಡಲು ಚರ್ಚೆ ಮಾಡುತ್ತಿದ್ದು, ವಿಶೇಷ ಕಾರ್ಯಕ್ರಮ ರೂಪಿಸಲಾಗುವುದು. ಪ್ರತಿ ತಾಲ್ಲೂಕು, ಪಂಚಾಯಿತಿಯಲ್ಲಿ ಗ್ಯಾರಂಟಿ ಫಲಾನುಭವಿಗಳ ಸಮಾವೇಶ ಮಾಡಬೇಕು” ಎಂದು ಕರೆಕೊಟ್ಟರು.

More articles

Latest article