ಕುಟುಂಬ ಮೌಲ್ಯಗಳು, ಸಂಬಂಧಗಳ ಸೂಕ್ಷ್ಮ ತಂತುಗಳನ್ನು ಬಿಂಬಿಸುವ “ಬಯಕೆಗಳು ಬೇರೂರಿದಾಗ” ಫೆ.6 ರಂದು ತೆರೆಗೆ

Most read

ಬೆಂಗಳೂರು: ಸ್ವರ್ಗ ಬಂಧನಕ್ಕೆ ಮುದ್ರೆ ಹಾಕಬಹುದು, ಆದರೆ ಆ ಬಂಧನವನ್ನು ಪೋಷಿಸುವುದು ನಮ್ಮ ಕೈಯಲ್ಲಿಯೇ ಇರುತ್ತದೆ. ಸಾಮಾಜಿಕ ಒತ್ತಡಗಳ ನಡುವೆ ಸಂವಾದ, ತಾಳ್ಮೆ, ಹೊಂದಾಣಿಕೆಯ ಮೌಲ್ಯಗಳು ಹಿಂದೆ ಸರಿಯುತ್ತಿವೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ, ಆಕರ್ಷ್ ಆದಿತ್ಯ ಅವರ ‘ಬಯಕೆಗಳು ಬೇರೂರಿದಾಗ’ ಚಲನಚಿತ್ರವಾಗುತ್ತಿದ್ದು ಎನ್. ಜ್ಯೋತಿಲಕ್ಷ್ಮಿ ಅವರು ಆಕ್ಷನ್‌ ಕಟ್‌ ಹೇಳಿದ್ದಾರೆ. ಈ ಚಿತ್ರ ಇದುವರೆಗೂ 25 ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ.

ಕುಟುಂಬ ಮೌಲ್ಯಗಳು ಮತ್ತು ಸಂಬಂಧಗಳ ಸೂಕ್ಷ್ಮ ತಂತುಗಳನ್ನು ಚಿತ್ರಿಸುವ ಈ ಕಥೆ, ಸಮಸ್ಯೆಗಳಿಗೆ ದಾರಿ ಹುಡುಕುವಾಗ ಮಹತ್ವದ ಸಂದೇಶ ನೀಡುವಲ್ಲಿ ಯಶಸ್ವಿಯಾಗಿದೆ. ಕರ್ನಾಟಕದಲ್ಲಿ ಕಳೆದ 5 ವರ್ಷದಲ್ಲಿ ದಾಖಲಾದ 1.7 ಲಕ್ಷ ವಿಚ್ಛೇದನ ಪ್ರಕರಣಗಳು ವಿಚಾರಣೆಗೆ ಬಾಕಿ ಉಳಿದಿರುವಾಗ ಈ ಚಿತ್ರ ಗಮನ ಸೆಳೆಯುತ್ತಿದೆ.

ಫೆಬ್ರವರಿ 6ರಂದು ಬಿಡುಗಡೆಯಾಗಲಿರುವ ಈ ಚಿತ್ರವನ್ನು ನೋಡುವುದು ಅಥವಾ ನಿಮ್ಮ ಸುತ್ತಮುತ್ತಲಿನವರಿಗೆ ತಿಳಿಸುವುದು, ಸಂಬಂಧಗಳ ಬಗೆಗೆ ಆಳವಾಗಿ ಯೋಚಿಸುವ ಪ್ರೇರಣೆಯಾಗಬಹುದು. ಸ್ವರ್ಗೀಯ ‘ನಿಶ್ಚಯ’ವನ್ನು ಭೂಮಿಯ ‘ನಿಭಾವಣೆ’ಯಿಂದ ಪೂರ್ಣಗೊಳಿಸಲು, ಇಂತಹ ಕಲಾತ್ಮಕ ಪ್ರಯತ್ನಗಳು ದೀಪಸ್ತಂಭಗಳಾಗಬಲ್ಲವು.

ಸಮಾಜದಲ್ಲಿ ವಿವಾಹೇತರ ಸಂಬಂಧಗಳು ಹೆಚ್ಚುತ್ತಿರುವುದು ಗಂಭೀರವಾದ ವಿಷಯ. ಇದರ ಹಿಂದೆ ಅನೇಕ ಸಾಮಾಜಿಕ-ಆರ್ಥಿಕ ಕಾರಣಗಳಿದ್ದರೂ ಕೆಲಸದ ಒತ್ತಡದ ನಡುವೆ ಪತಿ-ಪತ್ನಿಯರು ಒಬ್ಬರಿಗೊಬ್ಬರು ಸಮಯ ನೀಡಲು ಸಾಧ್ಯವಾಗುತ್ತಿಲ್ಲ. ಸಂವಾದರಹಿತ ಬದುಕು ಅನ್ನಿಸದೇ ಇರದು. ದೀರ್ಘಕಾಲೀನ ವಿವಾಹ ಸಂಬಂಧದಲ್ಲಿ ಭಾವನಾತ್ಮಕ ಅಂತರ ಬೆಳೆಯುವುದು …ಹೀಗೆ ಅನೇಕ ಕಾರಣಗಳು ವಿವಾಹೇತರ ಸಂಬಂಧಗಳಿಗೆ ಅವಕಾಶ ಕಲ್ಪಿಸುತ್ತಿವೆ. ನಿಜ! ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳೊಂದಿಗೆ ಕಳೆಯುವ ಸಮಯ ಕುಟುಂಬದೊಂದಿಗೆ ಕಳೆಯುವ ಸಮಯಕ್ಕಿಂತ ಹೆಚ್ಚು ಅನ್ನುವುದು ಉತ್ಪ್ರೇಕ್ಷೆಯೇನಲ್ಲ. ಆದರೆ, ಮೂಲ ಸಮಸ್ಯೆ ಸಮಯದ ಕೊರತೆ ಮಾತ್ರವಲ್ಲ, ಗುಣಮಟ್ಟದ ಸಮಯ ಮತ್ತು ಆತ್ಮೀಯ ಸಂವಾದದ ಕೊರತೆಯೂ ಹೌದು.

ಒಂದು ಆರೋಗ್ಯಕರ ಸಂಬಂಧಕ್ಕೆ ಪ್ರೇಮ, ನಂಬಿಕೆ, ಜವಾಬ್ದಾರಿ, ಸಂವಾದ ಮತ್ತು ಶಿಸ್ತು ಅಗತ್ಯ. ಆಧುನಿಕ ಜೀವನಶೈಲಿಯಲ್ಲಿ ಈ ಮೌಲ್ಯಗಳು ಕ್ಷೀಣಿಸುತ್ತಿರುವುದು ಎರಡು ಹೃದಯಗಳ ನಡುವೆ ಕಂದಕವನ್ನು ಸೃಷ್ಟಿಸುತ್ತಿವೆ.

ಇಂತಹ ಸಂದರ್ಭದಲ್ಲಿ, ಸಂಬಂಧಗಳ ಗಾಂಭೀರ್ಯ ಮತ್ತು ಕುಟುಂಬದ ಮೌಲ್ಯಗಳನ್ನು ಸೂಕ್ಷ್ಮವಾಗಿ ಚಿತ್ರಿಸಿರುವ ‘ಬಯಕೆಗಳು ಬೇರೂರಿದಾಗ’ ಚಲನಚಿತ್ರವು ಒಂದು ಪ್ರಕಾಶಪುಂಜವಾಗಿದೆ. ಇದು ಸಂಬಂಧಗಳನ್ನು ಬಲಪಡಿಸಲು ಪೂರಕವಾದ ಅಂಶಗಳನ್ನು ಹೊಂದಿದೆ. ಬಿಡುಗಡೆಗೆ ಮುನ್ನವೇ 25 ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದ ಈ ಚಿತ್ರ ಫೆಬ್ರವರಿ 6 ರಂದು ಬಿಡುಗಡೆಯಾಗುತ್ತಿದ್ದು, ಚಿತ್ರಮಂದಿರಗಳಲ್ಲಿ ನೋಡಲು ಮರೆಯಬೇಡಿ. ಈ ಪ್ರತಿಭಾವಂತ ತಂಡದ ಪ್ರಯತ್ನಕ್ಕೆ ನಿಮ್ಮ ಬೆಂಬಲ ಅತ್ಯಾವಶ್ಯಕವಾಗಿರುತ್ತದೆ.

ಆರಂಭದಲ್ಲೇ ಹೇಳಿದಂತೆ ‘ಬಯಕೆಗಳು ಬೇರೂರಿದಾಗ’ ಚಿತ್ರಕ್ಕೆ ಎನ್. ಜ್ಯೋತಿ ಲಕ್ಷ್ಮೀ ಅವರು ಆಕ್ಷನ್ ಕಟ್ ಹೇಳಿದ್ದಾರೆ. ಸಂಬಂಧಗಳಲ್ಲಿ ಪ್ರೀತಿ ಎಂಬುದು ಎಷ್ಟು ಮುಖ್ಯ ಎಂಬ ಅಂಶವನ್ನು ತುಂಬಾ ನಾಜೂಕಾಗಿ ಮನ ಮುಟ್ಟುವಂತೆ ಹೇಳುವಲ್ಲಿ ನಿರ್ದೇಶಕರು ದಡ ಮುಟ್ಟಿದ್ದಾರೆ.

ಈ ಚಿತ್ರಕ್ಕೆ ಎನ್. ಸುದರ್ಶನ್ ಬಂಡವಾಳ ಹೂಡಿದ್ದಾರೆ. ರಿಲೀಸ್ ಗೂ ಮುನ್ನವೇ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸಿನಿಮಾ ಪ್ರದರ್ಶನಗೊಂಡಿದ್ದು, Penzance  international film festival  Cornwall UK- 2024, Hohe international film festival Germany -2024 ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ

ಈ ಚಿತ್ರದಲ್ಲಿ ಆಕರ್ಷ್ ಆದಿತ್ಯ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆಕರ್ಷ್ ಈಗಾಗಲೇ ಹತ್ತಕ್ಕೂ ಹೆಚ್ಚು ಧಾರವಾಹಿಗಳಲ್ಲಿ ನಾಯಕ ನಟನ ಪಾತ್ರವನ್ನು ನಿರ್ವಹಿಸಿ ಗಮನ ಸೆಳೆದಿರುವ ಉದಯೋನ್ಮುಖ ನಟ. ಇವರಿಗೆ ನಾಯಕಿಯಾಗಿ ಶರಣ್ಯ ಬಣ್ಣ ಹಚ್ಚಿದ್ದಾರೆ. ನಾತಿಚರಾಮಿ ಚಿತ್ರದಲ್ಲಿ ಉತ್ತಮ ನಟಿ ಎಂಬ ಬಿರುದನ್ನು ಶರಣ್ಯ ತಮ್ಮದಾಗಿಸಿಕೊಂಡಿದ್ದಾರೆ. ಉಳಿದಂತೆ ಶೈಲಜಾ ಜೋಶಿ, ಮಾನಸ ಜೋಶಿ, ಅಜಯ್ ಸತ್ಯನಾರಾಯಣ, ಕಾರ್ತಿಕ್ ಸುಂದರಂ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ವೈ ಜೆ ಕೆ ಹಾಗೂ ಅರೋನ್ ಕಾರ್ತಿಕ್ ವೆಂಕಟೇಶ್ ಸಂಗೀತ ನೀಡಿದ್ದರೆ, ಶರತ್ ಕುಮಾರ್  ಸಂಕಲನ ನೀಡಿದ್ದಾರೆ. ಆಕರ್ಷ್ ಆದಿತ್ಯ, ವಿ ಎಂ ಏನ್ ಆರ್, ಪ್ರಶಾಂತ್ ತಮ್ಮಯ್ಯ ಹಾಗೂ ಪೂರ್ಣಿಮಾ ದಿಲೀಪ್ ಚಿತ್ರಸಾಹಿತ್ಯ ಬರೆದಿದ್ದಾರೆ. ಹೊಯ್ಸಳ ಹೇಮಂತ್ ಚಿತ್ರಕಥೆ ಬರೆದಿದ್ದಾರೆ. ಅಜಯ್ ವಾರಿಯರ್, ಮೆಹಬೂಬ ಸಾಬ್, ಎಂ.ಡಿ.ಪಲ್ಲವಿ ಹಾಡುಗಳಿಗೆ ಧ್ವನಿ ನೀಡಿದ್ದಾರೆ.

ಪ್ರೀತಿ ಕುರುಡು ನಿಜ!, ಆದರೆ ಪ್ರೀತಿ ಮಾಡುವವರು ಕುರುಡಾಗಿರಬಾರದು ಅಲ್ಲವೇ? ನಿಮ್ಮ ಆಯ್ಕೆಗಳ ಬಗ್ಗೆ ಸ್ಪಷ್ಟವಾಗಿರಿ, ನಿಮ್ಮ ಸಂಬಂಧದಲ್ಲಿ ಪ್ರಾಮಾಣಿಕರಾಗಿರಿ. ಇದೇ ಮಂತ್ರವನ್ನು ‘ಬಯಕೆಗಳು ಬೇರೂರಿದಾಗ’ ಚಿತ್ರ ನೀಡಲು ಹೊರಟಿದೆ. ಫೆಬ್ರವರಿ 6ರಂದು ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರವನ್ನು ಒಮ್ಮೆ ನೋಡಿ. ನಿಮಗೆ ಇಷ್ಟವಾದರೆ, ಇತರರಿಗೂ ತಿಳಿಸಿ!

More articles

Latest article